ಬೆಂಗಳೂರು
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಳೆ ಭಾರೀ ಅವಾಂತರ ಸೃಷ್ಟಿಸಿದೆ. ಹಲವು ಏರಿಯಾಗಳು ಜಲಾವೃತಗೊಂಡಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಅಲ್ಲದೇ ಇನ್ನೂ ಬೆಂಗಳೂರಿನಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ ಇಂದು (ಅಕ್ಟೋಬರ್ 23) ಬೆಂಗಳೂರು ನಗರ ಜಿಲ್ಲೆಯಾದ್ಯಂತ ಎಲ್ಲಾ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಬೆಂಗಳೂರು ನಗರ ಜಿಲ್ಲೆಯಾದ್ಯಂತ ನಿರಂತರವಾಗಿ ಹೆಚ್ಚಿನ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ತುರ್ತಾಗಿ ದಿನಾಂಕ 23-10-2024 ರಂದು ಅಂದರೆ ಇಂದು ಮುಂಜಾಗೃತ ಕ್ರಮವಾಗಿ ಹಾಗೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬೆಂಗಳೂರು ನಗರ ಜಿಲ್ಲೆಯ ಎಲ್ಲಾ ತಾಲೂಕಿನ ಅಂಗನವಾಡಿ ಕೇಂದ್ರಗಳಿಗೆ ಹಾಗೂ ಖಾಸಗಿ / ಅನುದಾನಿತ ಪ್ರಾಥಮಿಕ/ ಪ್ರೌಢಶಾಲೆಗಳಿಗೆ ರಜೆಯನ್ನು ಘೋಷಿಸಿ ಬೆಂಗಳೂರು ನಗರ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಜಗದೀಶ ಜಿ ಅವರು ಆದೇಶ ಹೊರಡಿಸಿದ್ದಾರೆ.
ಬೆಂಗಳೂರಿನ ಎಲ್ಲಾ ತಾಲೂಕಿನ ಅಂಗನವಾಡಿ ಕೇಂದ್ರಗಳಿಗೆ ಹಾಗೂ ಖಾಸಗೀ ಅನುದಾನಿತ ಪ್ರಾಥಮಿಕ, ಪ್ರೌಢಶಾಲೆಗಳಿಗೆ ರಜೆ ನೀಡಲಾಗಿದ್ದು, ಉಳಿದಂತೆ ಎಲ್ಲಾ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೋಮ, ಇಂಜಿನಿಯರಿಂಗ್ , ಐ.ಟಿ.ಐ ಗಳಿಗೆ ರಜೆ ಇರಲ್ಲ. ಇನ್ನು ರಜೆ ನೀಡಲಾಗಿರುವ ಶಾಲೆಗಳಿಗೆ ಕಲಿಕಾ ಸಮಯ ಕೊರತೆಯನ್ನು ಶನಿವಾರ ಮಧ್ಯಾಹ್ನ ಅಥವಾ ಭಾನುವಾರ ಹೆಚ್ಚುವರಿ ತರಗತಿ ನಡೆಸಲು ಸೂಚನೆ ನೀಡಿದ್ದಾರೆ.
ಈಗಾಗಲೇ ಬೆಂಗಳೂರಿನಲ್ಲಿ ಮಳೆ ಭಾರೀ ಅವಾಂತರಗಳನ್ನೇ ಸೃಷ್ಟಿಸಿದೆ. ರಸ್ತೆ, ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತ ಮಾಡಿದೆ. ನಿರಂತರ ಮಳೆಯಿಂದ ಸಿಲಿಕಾನ್ ಸಿಟಿ ಜನರಿಗೆ ಸಂಕಷ್ಟಕ್ಕೆ ದೂಡಿದ್ದು, ಮಳೆ ಸಾಕಪ್ಪ ಸಾಕು ಎನ್ನುವಂತಾಗಿದೆ.
ಇಷ್ಟಿದ್ದರೂ ಸಹ ಮುಂದಿನ 5 ದಿನಗಳಲ್ಲಿ ಬೆಂಗಳೂರಿನಲ್ಲಿ ಸಾಧಾರಣ ಮಳೆ ಆಗುವ ಸಾಧ್ಯತೆ ಇದೆ. ಹಾಗಾಗಿ ಹೈಅಲರ್ಟ್ ಘೋಷಿಸಲಾಗಿದ್ದು, ಶಾಲೆಗಳಿಗೆ ರಜೆ ನೀಡಲಾಗಿದೆ. ಆದ್ರೆ, ಕಾಲೇಜುಗಳು ಎಂದಿನಂತೆ ಇರಲಿವೆ.