ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಆರೋಗ್ಯ ಸ್ಥಿರ!

ನವದೆಹಲಿ:

      ಎದೆನೋವಿನ ಕಾರಣಕ್ಕೆ ಭಾನುವಾರ ರಾತ್ರಿ  ದೆಹಲಿಯ ಏಮ್ಸ್ (ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ)ದಾಖಲಾಗಿದ್ದ ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆಯ ಮೂಲಗಳು ಇಂದು ಬೆಳಗ್ಗೆ ತಿಳಿಸಿವೆ.

      ಕಾಂಗ್ರೆಸ್‌ನ ಹಿರಿಯ ನಾಯಕನನ್ನು ರವಿವಾರ ರಾತ್ರಿ 8:45ರ ಸುಮಾರಿಗೆ ವೈದ್ಯಕೀಯ ಸಂಸ್ಥೆಯ ಕಾರ್ಡಿಯೋ ಥೊರಾಸಿಕ್ ವಾರ್ಡ್‌ನೊಳಗೆ ಕರೆದೊಯ್ಯಲಾಗಿತ್ತು. ತಪಾಸಣೆಯ ಬಳಿಕ ಅವರು ಹೊಸ ಔಷಧಿಗೆ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ ಎಂದು ಏಮ್ಸ್ ಮೂಲಗಳು ತಿಳಿಸಿವೆ.

      ಔಷಧಿ ನೀಡಿದ ಬಳಿಕ ಮನಮೋಹನ್ ಸಿಂಗ್ ಅವರಿಗೆ ಜ್ವರ ಕಾಣಿಸಿಕೊಂಡಿದೆ. ಜ್ವರ ಬರಲು ಬೇರೇನಾದರೂ ಕಾರಣಗಳಿವೆಯೇ ಎಂಬ ಕುರಿತು ತಪಾಸಣೆ ನಡೆಸಲಾಗುತ್ತಿದೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ. ಹೃದ್ರೋಗ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಏಮ್ಸ್ ಮೂಲಗಳು ತಿಳಿಸಿವೆ.

     ಸಿಂಗ್ ಅವರು ಈ ಹಿಂದೆ 2009ರಲ್ಲಿ ಹೃದಯದ ಬೈಪಾಸ್‌ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ