ಪಾಟ್ನಾ:
ಬಿಹಾರದಲ್ಲಿ ಮತ್ತೊಂದು ನಿರ್ಮಾಣ ಹಂತದ ಸೇತುವೆ ಕುಸಿದಿದ್ದು, ಒಂದೇ ಸೇತುವೆ ಮೂರನೇ ಬಾರಿ ಕುಸಿದಿದ್ದು ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.ಬಿಹಾರದ ಸುಲ್ತಾನ್ ಗಂಜ್ ಮತ್ತು ಅಗುವಾನಿ ಘಾಟ್ ನಡುವೆ ಸಂಪರ್ಕ ಕಲ್ಪಿಸುವ ಸೇತುವೆಯ ಮೇಲ್ವಿನ್ಯಾಸದ ಒಂದು ಭಾಗ ಕುಸಿದು ಗಂಗಾ ನದಿಗೆ ಬಿದ್ದಿದೆ.
ಈ ಸೇತುವೆಯನ್ನು ಕಳೆದ 9 ವರ್ಷಗಳಿಂದ ನಿರ್ಮಾಣ ಮಾಡಲಾಗುತ್ತಿದ್ದು, ಇದೀಗ ಸೇತುವೆಯ ಒಂದು ಭಾಗದ ಮೇಲ್ಛಾವಣಿ ಕುಸಿದುಬಿದ್ದಿದೆ. ಅದೃಷ್ಟವಶಾತ್ ಈ ದುರ್ಘಟನೆಯಲ್ಲಿ ಯಾವುದೇ ಸಾವು-ನೋವುಗಳಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಈ ಸೇತುವೆ ಕುಸಿಯುತ್ತಿರುವುದು ಇದೇ ಮೊದಲೇನಲ್ಲ. ಕಳೆದ 9 ವರ್ಷಗಳಿಂದ ಈ ಸೇತುವೆ ಕಾಮಗಾರಿ ನಡೆಯುತ್ತಿದ್ದು, ಒಂದಲ್ಲ ಒಂದು ಭಾಗದಲ್ಲಿ ವಿವಿಧ ಕಾರಣಗಳಿಂದ ಈ ವರೆಗೂ ಮೂರು ಬಾರಿ ಸೇತುವೆ ವಿವಿಧ ಭಾಗಗಳು ಕುಸಿದಿವೆ. ಈ ಹಿಂದೆ ಜೂನ್ 4, 2023 ರಂದು ಇದೇ ಸೇತುವೆಯ ಒಂದು ಭಾಗ ಕುಸಿದಿತ್ತು. ಖಗಾರಿಯಾ ಭಾಗದಲ್ಲಿ ಪಿಲ್ಲರ್ ಸಂಖ್ಯೆ 10 ಮತ್ತು 12 ರ ನಡುವಿನ ಭಾಗ ಕುಸಿದು ವ್ಯಾಪಕ ಸುದ್ದಿಗೆ ಗ್ರಾಸವಾಗಿತ್ತು.
ಭಾಗಲ್ಪುರ್ ಬದಿಯಲ್ಲಿರುವ ಸೇತುವೆಯ ಮತ್ತೊಂದು ಭಾಗವು ಜೂನ್ 30, 2022 ರಂದು ಕುಸಿದು ಬಿದ್ದಿತು, ಪಿಲ್ಲರ್ ಸಂಖ್ಯೆ 5 ಮತ್ತು 6 ರ ನಡುವಿನ ಸೂಪರ್ ಸ್ಟ್ರಕ್ಚರ್ ಗಂಗಾ ನದಿಗೆ ಬಿದ್ದಿತು. ಇದನ್ನು ಗಂಭೀರವಾಗಿ ಪರಿಗಣಿಸಿದ ಬಿಹಾರ ಸರ್ಕಾರ SK ಸಿಂಗ್ಲಾ ಕನ್ಸ್ಟ್ರಕ್ಷನ್ ಪ್ರೈ.ಲಿ. ಲಿಮಿಟೆಡ್, ಮತ್ತು ಸೇತುವೆಯನ್ನು ಕಂಪನಿಯ ವೆಚ್ಚದಲ್ಲಿ ಮರುನಿರ್ಮಾಣ ಮಾಡಬೇಕೆಂದು ಆದೇಶಿಸಿತ್ತು.
