ನವದೆಹಲಿ
ಶುಕ್ರವಾರವೂ ರಾಷ್ಟ್ರ ರಾಜಧಾನಿ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ದಟ್ಟವಾದ ಮಂಜು ಆವರಿಸಿದ್ದು , ಹಲವು ವಿಮಾನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. 79 ನಿರ್ಗಮನ ಮತ್ತು 73 ಆಗಮನ ಸೇರಿದಂತೆ 152 ಯೋಜಿತ ವಿಮಾನಗಳ ಸಂಚಾರ ರದ್ದಾಗಲಿದೆ ಎಂದು ತಿಳಿದು ಬಂದಿದೆ.
ಪ್ರಯಾಣಿಕರಿಗೆ ದೆಹಲಿ ವಿಮಾನ ನಿಲ್ದಾಣ ಈಗಾಗಲೇ ಸೂಚನೆ ನೀಡಿದ್ದು, ಸಾಮಾಜಿಕ ಮಧ್ಯಮದ ಮೂಲಕ ಮಾಹಿತಿ ನೀಡಲಾಗಿದೆ. ಹೆಚ್ಚುವರಿಯಾಗಿ, ಇಂಡಿಗೋ ಮತ್ತು ಏರ್ ಇಂಡಿಯಾ ಸೇರಿದಂತೆ ಹಲವಾರು ವಿಮಾನಯಾನ ಸಂಸ್ಥೆಗಳು ಸಲಹೆಗಳನ್ನು ನೀಡಿದ್ದು, ಕೆಟ್ಟ ಹವಾಮಾನದಿಂದಾಗಿ ವಿಮಾನ ಕಾರ್ಯಾಚರಣೆಗಳ ಮೇಲೆ ಪರಿಣಾಮ ಬೀರಬಹುದು ಎಂದು ಎಚ್ಚರಿಸಿವೆ.
ನೋಯ್ಡಾ ಮತ್ತು ಗಾಜಿಯಾಬಾದ್ ಸೇರಿದಂತೆ ದೆಹಲಿ-ಎನ್ಸಿಆರ್ನಲ್ಲಿ ಮಂಜು ಗೋಚರತೆಯನ್ನು 100 ಮೀಟರ್ಗಿಂತ ಕಡಿಮೆ ಮಾಡಿದೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಇಂದು ಎಲ್ಲೋ ಅಲರ್ಟ್ ನೀಡಿದ್ದು, ಬೆಳಗಿನ ಜಾವ ದಟ್ಟವಾದ ಮಂಜಿನ ಮುನ್ಸೂಚನೆ ನೀಡಿದೆ.
ಗುರುವಾರ, ದೆಹಲಿಯಲ್ಲಿ ಅತ್ಯಂತ ಕಡಿಮೆ ತಾಪಮಾನವನ್ನು ದಾಖಲಾಗಿದ್ದು, ಗರಿಷ್ಠ ತಾಪಮಾನವು 20.1 ಡಿಗ್ರಿ ಸೆಲ್ಸಿಯಸ್ ಇದ್ದು , ಸಾಮಾನ್ಯಕ್ಕಿಂತ 2.1 ಡಿಗ್ರಿ ಕಡಿಮೆಯಾಗಿದೆ.ಏತನ್ಮಧ್ಯೆ ವಾಯುಗುಣ ಕಳಪೆಗಿಳಿದಿದ್ದು, ಪ್ರತಿ ಚಳಿಗಾಲದಂತೆ ಈ ಬಾರಿಯೂ ವಿಷಗಾಳಿ ದೆಹಲಿಯನ್ನ ಆವರಿಸಿದೆ. ದೆಹಲಿಯ AQI 400ರ ಗಡಿ ದಾಟಿ ಅಪಾಯಕಾರಿ ಮಟ್ಟ ತಲುಪಿದ್ದು 50% ಜನರಿಗೆ ವರ್ಕ್ ಫ್ರಂ ಹೋಮ್ ಮಾಡಲು ಸರ್ಕಾರ ಸೂಚಿಸಿದೆ. ಕಠಿಣ ಮಾಲಿನ್ಯ ನಿಯಂತ್ರಣ ಕ್ರಮಗಳ ಭಾಗವಾಗಿ ಬಿಎಸ್-VI ಎಂಜಿನ್ ಹೊಂದಿರದ ಹಳೆಯ ಕಾರುಗಳಿಗೆ ದೆಹಲಿ ಪ್ರವೇಶವನ್ನ ನಿಷೇಧಿಸಲಾಗಿದೆ. ಇದರೊಂದಿಗೆ ಪಿಯುಸಿ ಪ್ರಮಾಣ ಪತ್ರ ಹಾಗೂ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರವಿಲ್ಲದ ವಾಹನಗಳಿಗೆ ಇಂಧನ ನಿಷೇಧಿಸಲಾಗಿದೆ.
ದೆಹಲಿ ಪ್ರವೇಶಿಸುವ ವಾಹನಗಳ ತಪಾಸಣೆಗಾಗಿ 580 ಪೊಲೀಸ್ ಸಿಬ್ಬಂದಿಯನ್ನ ನಿಯೋಜನೆ ಮಾಡಲಾಗಿದೆ. 126 ಚೆಕ್ಪೋಸ್ಟ್ಗಳಲ್ಲಿ ಸುಮಾರು 37 ಸ್ಪೀಡ್ ಚೆಕ್ ವಾಹನಗಳನ್ನೂ ನಿಯೋಜಿಸಲಾಗಿದೆ. ಸಾರಿಗೆ ಇಲಾಖೆ, ಮುನ್ಸಿಪಲ್ ಕಾರ್ಪೊರೇಷನ್ ಮತ್ತು ಆಹಾರ ಇಲಾಖೆಯ ಸಿಬ್ಬಂದಿಗಳನ್ನ ಪೆಟ್ರೋಲ್ ಪಂಪ್ಗಳಲ್ಲಿ ನಿಯೋಜಿಸಲಾಗಿದೆ.








