ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಸಿಎಂ….!

 ಹಾವೇರಿ:

    ಕಾಂಗ್ರೆಸ್‌ ಅಬಕಾರಿ ಇಲಾಖೆಯಿಂದ 700 ಕೋಟಿ ರೂ. ಹಣವನ್ನು ಅಕ್ರಮವಾಗಿ ಸಂಗ್ರಹಿಸಿ ಮಹಾರಾಷ್ಟ್ರ ಚುನಾವಣೆ ಮಾಡುತ್ತಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಸಿಎಂ ಸಿದ್ದರಾಮಯ್ಯ, ಪ್ರಧಾನಿ ಇಷ್ಟೊಂದು ಸುಳ್ಳು ಹೇಳುವ ಮೂಲಕ ತಮ್ಮ ಹುದ್ದೆಗೆ ಅಗೌರವ ತೋರಿದ್ದಾರೆ. ಸುಳ್ಳು ಹೇಳಲು ಇತಿಮಿತಿ ಬೇಕಲ್ಲವೇ ಎಂದು ಲೇವಡಿ ಮಾಡಿದ್ದಾರೆ.

   ಶಿಗ್ಗಾಂವಿಯಲ್ಲಿ ಭಾನುವಾರ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್ ಪರ ಮತಯಾಚಿಸಿ ಮಾತನಾಡಿದ ಅವರು, ಸ್ವತಂತ್ರ ಭಾರತದ ಇತಿಹಾಸದಲ್ಲಿ ಇಷ್ಟೊಂದು ಸುಳ್ಳು ಹೇಳೋ ಪ್ರಧಾನಿಯನ್ನು ನಾನು ನೋಡಿಲ್ಲ.ಕಾಂಗ್ರೆಸ್​ ಅಬಕಾರಿ ಇಲಾಖೆಯಲ್ಲಿ 700 ಕೋಟಿ ರೂಪಾಯಿ ಸಂಗ್ರಹಿಸಿ ಅದನ್ನು ಮಹಾರಾಷ್ಟ್ರ, ಜಾರ್ಖಂಡ್ ಚುನಾವಣೆಗೆ ಬಳಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ. ಇದನ್ನು ಸಾಬೀತು ಮಾಡಿದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ, ಇಲ್ಲದಿದ್ದರೆ ನೀವು ನಿವೃತ್ತಿ ತಗೋತೀರಾ? ಎಂದು ಸಿಎಂ ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿಗೆ ಸವಾಲು ಹಾಕಿದ್ದಾರೆ. ಸಿಎಂ ಆಗೋಕೆ ಬಿಜೆಪಿಯಲ್ಲಿ 2 ಸಾವಿರ ಕೊಟಿ ಕೊಡಬೇಕು ಅಂತ ಯತ್ನಾಳ್ ಹೇಳಿದ್ದಾರೆ. ಯಡಿಯೂರಪ್ಪ, ಬೊಮ್ಮಾಯಿ ಎರಡು ಸಾವಿರ ಕೊಟ್ಟು ಸಿಎಂ ಆಗಿದ್ದಾರೆ. ವಿಜಯೇಂದ್ರ ಅಧ್ಯಕ್ಷ ಆಗಿದ್ದು ಸಹ ಹಣ ಕೊಟ್ಟು ಎಂದು ದೂರಿದರು.

   ಬಿಜೆಪಿ ಅಧಿಕಾರದಲ್ಲಿ ಕೊರೊನಾ ಚಿಕಿತ್ಸೆಗಾಗಿ ಬೇಕಾದ ವಸ್ತುಗಳ ಖರೀದಿಯಲ್ಲಿನ ಅವ್ಯವಹಾರ ಕುರಿತು ಜಸ್ಟೀಸ್‌ ಮೈಕಲ್‌ ಕುನ್ಹಾ ಆಯೋಗ ಸಲಿಸಿರುವ ಮಧ್ಯಂತರ ವರದಿಯನ್ನು ಸಂಪುಟ ಉಪಸಮಿತಿ ಪರಿಶೀಲಿಸುತ್ತಿದೆ. ವರದಿ ಬಗ್ಗೆ ಸಂಪುಟದಲ್ಲಿ ಚರ್ಚಿಸಿ ತನಿಖೆ ಸ್ವರೂಪ ನಿರ್ಧರಿಸಲಾಗುವುದು ಎಂದು ಸಿಎಂ ಸ್ಪಷ್ಟಪಡಿಸಿದರು. ವರದಿಯಲ್ಲಿರುವ ಖಾಲಿ ಬೆದರಿಕೆಗಳಿಗೆ ಬಿಜೆಪಿ ಬೆದರುವುದಿಲ್ಲ ಎಂಬ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಆಯೋಗದ ವರದಿಯನ್ನು ಖಾಲಿ ಬೆದರಿಕೆ ಎಂದು ಹೇಗೆ ಪರಿಗಣಿಸಬಹುದು? ಸಾರ್ವಜನಿಕ ಹಣವನ್ನು ಲೂಟಿ ಮಾಡಿ ನಂತರ ಅದನ್ನು ಖಾಲಿ ಬೆದರಿಕೆ ಎಂದು ಕರೆಯುವುದು ಹೇಗೆ ಸಾಧ್ಯ? ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ತಮ್ಮ ಮೇಲೆ ಕೊಲೆ ಯತ್ನ ನಡೆದಿತ್ತು ಎಂಬ ಯಡಿಯೂರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಯಡಿಯೂರಪ್ಪ ಏಕೆ ದೂರು ದಾಖಲಿಸಲಿಲ್ಲ ಅಥವಾ ಪ್ರಕರಣ ದಾಖಲಿಸಲಿಲ್ಲ ಎಂದು ಪ್ರಶ್ನಿಸಿದರು.

   ಏತನ್ಮಧ್ಯೆ, ಪಿಪಿಇ ಕಿಟ್‌ಗಳ ಖರೀದಿಯ ತನಿಖೆ ನಡೆಸುತ್ತಿರುವ ನ್ಯಾಯಮೂರ್ತಿ ಜಾನ್ ಮೈಕೆಲ್ ಡಿ’ಕುನ್ಹಾ ಅವರ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ. “ನೀವು ನ್ಯಾಯಾಧೀಶರು, ಏಜೆಂಟ್ ಅಲ್ಲ” ಎಂದು ಹೇಳಿದ್ದಾರೆ. ಶಿಗ್ಗಾಂವಿಯಲ್ಲಿ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಜೋಶಿ, ನ್ಯಾಯಮೂರ್ತಿ ಜಾನ್ ಮೈಕಲ್ ಡಿ’ಕುನ್ಹಾ ಯಾವಾಗಲೂ ನಮ್ಮ ವಿರುದ್ಧವಾಗಿದ್ದಾರೆ. ಚುನಾವಣಾ ಸಮಯದಲ್ಲಿ ಮಧ್ಯಂತರ ವರದಿ ಏಕೆ ನೀಡಬೇಕು? ಒಂದೂವರೆ ವರ್ಷದಿಂದ ಈ ಸರ್ಕಾರ ಏನು ಮಾಡುತ್ತಿದೆ? ಇದು ಕೇವಲ ಸಾರ್ವಜನಿಕರ ಗಮನವನ್ನು ಬೇರೆಡೆ ಸೆಳೆಯುವ ತಂತ್ರವಾಗಿದೆ.

   ಇಲ್ಲಿ ಯಾವುದೇ ವಿಷಯವಿಲ್ಲ. ವಾಲ್ಮೀಕಿ ನಿಗಮದ ಹಗರಣದಲ್ಲಿ 90 ಕೋಟಿ ತಿಂದಿದ್ದೀರಿ ಹೇಳಿದ್ದೀರಿ, ಆದರೆ ನೀವು 190 ಕೋಟಿ ರು ನುಂಗಿ ನೀರು ಕುಡಿದಿದ್ದೀರಿ ಎಂದು ಸಿದ್ದರಾಮಯ್ಯ ವಿರುದ್ಧ ಜೋಶಿ ಹರಿಹಾಯ್ದಿದ್ದಾರೆ. ನಿಮ್ಮ ಮೇಲಿನ ಆರೋಪಗಳನ್ನು ಮುಚ್ಚಿಹಾಕಲು ಇಂತಹ ತಂತ್ರಗಳು ಕೆಲಸ ಮಾಡುವುದಿಲ್ಲ ಎಂದಿದ್ದಾರೆ. ಶಿಗ್ಗಾಂವಿಯಲ್ಲಿ ಬಸವರಾಜ ಬೊಮ್ಮಾಯಿ ಅವರಿಗೆ ಒಂದೇ ಒಂದು ಮನೆ ನೀಡಿಲ್ಲ ಎಂದು ಟೀಕಿಸುತ್ತೀರಿ, ಆದರೂ ಶಿಗ್ಗಾಂವ ಮತ್ತು ಸವಣೂರಿನಾದ್ಯಂತ ನಾವು ಹೊಸ ಮನೆಗಳನ್ನು ನಿರ್ಮಿಸಿದ್ದೇವೆ. ನೀವು ಒಂದಾದರೂ ನೀಡಿದ್ದೀರಾ ಎಂದು ಪ್ರಶ್ನಿಸಿದ್ದಾರೆ.

Recent Articles

spot_img

Related Stories

Share via
Copy link