ಲಖನೌ:
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭ ಮೇಳ ನಡೆಯುತ್ತಿದ್ದು, ಕೋಟ್ಯಾಂತರ ಭಕ್ತರು ಆಗಮಿಸುತ್ತಿದ್ದಾರೆ. ದೇಶ ವಿದೇಶದಿಂದ ಆಗಮಿಸುತ್ತಿರುವ ಭಕ್ತರು ಪುಣ್ಯ ಸ್ನಾನ ಮಾಡಿ ಪಾವನರಾಗುತ್ತಿದ್ದಾರೆ. ಪಾಕಿಸ್ತಾನದ ಸಿಂಧ್ ಪ್ರಾಂತ್ಯದ 68 ಹಿಂದೂ ಭಕ್ತರ ಗುಂಪು ಗುರುವಾರ ಪ್ರಯಾಗ್‌ರಾಜ್‌ಗೆ ಆಗಮಿಸಿ ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮದ ಪವಿತ್ರ ನೀರಿನಲ್ಲಿ ಸ್ನಾನ ಮಾಡಿದರು. ನಂತರ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿ ತಮ್ಮ ಪೂರ್ವಜರ ಆತ್ಮಗಳಿಗೆ ಶಾಂತಿ ಕೋರಿದ್ದಾರೆ. ಫೆ. 26 ರವರೆಗೆ ನಡೆಯುವ ಮಹಾಕುಂಭ ಮೇಳದಲ್ಲಿ ಸುಮಾರು 45 ಕೋಟಿ ಜನ ಬರುವ ನಿರೀಕ್ಷೆ ಇದೆ ಎಂದು ಉತ್ತರ ಪ್ರದೇಶ ಸರ್ಕಾರ ಅಂದಾಜಿಸಿದೆ.
ಉತ್ತರ ಪ್ರದೇಶದ ವಾರ್ತಾ ಇಲಾಖೆಯ ಪ್ರಕಾರ, ಮಹಾಂತ್ ರಾಮನಾಥ್ ನೇತೃತ್ವದ ಗುಂಪು ಸಂಗಮದಲ್ಲಿ ಪ್ರಾರ್ಥನೆ ಸಲ್ಲಿಸಿ ತಮ್ಮ ಪೂರ್ವಜರಿಗೆ ಆಶೀರ್ವಾದ ಸಲ್ಲಿಸಿತು. ಮಹಾ ಕುಂಭಕ್ಕೆ ಆಗಮಿಸುವ ಮೊದಲು, ಅವರು ಹರಿದ್ವಾರಕ್ಕೆ ಭೇಟಿ ನೀಡಿದ್ದರು, ಅಲ್ಲಿ ಅವರು ಸುಮಾರು 480 ಪೂರ್ವಜರ ಚಿತಾಭಸ್ಮವನ್ನು ವಿಸರ್ಜಿಸಿದ್ದಾರೆ. ಸಿಂಧ್‌ನ ಗುಂಪಿನ ಸದಸ್ಯರಾದ ಗೋವಿಂದ್ ರಾಮ್ ಮಖೇಜಾ ಅವರು ಮಹಾಕುಂಭ ಮೇಳದ ಬಗ್ಗೆ ಮಾತನಾಡಿ ಕಳೆದ ಕೆಲವು ತಿಂಗಳುಗಳ ಹಿಂದೆ ಮಹಾಕುಂಭ ಮೇಳದ ಬಗ್ಗೆ ಕೇಳಿದಾಗ ಬರಬೇಕೆಂಬ ಬಲವಾದ ಹಂಬಲವಿತ್ತು. ಇದೀಗ ನಾವು ಇಲ್ಲಿಗೆ ಬಂದಿದ್ದೇವೆ ಎಂದು ಅವರು ಹೇಳಿದ್ದಾರೆ.
ಸಿಂಧ್‌ನ ಆರು ಜಿಲ್ಲೆಗಳಾದ ಘೋಟ್ಕಿ, ಸುಕ್ಕೂರ್, ಖೈರ್‌ಪುರ್, ಶಿಕಾರ್‌ಪುರ್, ಕಾರ್ಕೋಟ್ ಮತ್ತು ಜಟಾಬಲ್‌ನಿಂದ ಒಟ್ಟು 68 ಜನ ಆಗಮಿಸಿದ್ದಾರೆ. ಇವರ ಜೊತೆಯಲ್ಲಿ ವಿದ್ಯಾರ್ಥಿಯೊಬ್ಬ ಆಗಮಿಸಿದ್ದು, ಇದು ಸಂತೋಷದಾಯಕ ಭಾವನೆಯಾಗಿದೆ. ಪದಗಳಲ್ಲಿ ಹೇಳಲು ನನಗೆ ಸಾಧ್ಯವಾಗುತ್ತಿಲ್ಲ. ಮೊದಲ ಬಾರಿಗೆ ನಾನು ನನ್ನ ಧರ್ಮವನ್ನು ಆಳವಾಗಿ ಅರ್ಥಮಾಡಿಕೊಂಡಿದ್ದೇನೆ. ಇದು ಒಂದು ಅದ್ಭುತ ಕ್ಷಣವೆನಿಸುತ್ತಿದೆ ಎಂದು ಹೇಳಿದ್ದಾರೆ.
ಮತ್ತೊಬ್ಬ ಯಾತ್ರಾರ್ಥಿ ಪ್ರಿಯಾಂಕಾ ಕೂಡ ಇದೇ ರೀತಿಯ ಭಾವನೆಗಳನ್ನು ವ್ಯಕ್ತಪಡಿಸುತ್ತಾ ನಾನು ಭಾರತಕ್ಕೆ ಆಗಮಿಸುತ್ತಿರುವುದು ಇದೇ ಮೊದಲ ಬಾರಿಗೆ. ಈ ಕ್ಷಣವನ್ನು ಯಾವಾಗಲೂ ಮರೆಯಲು ಸಾಧ್ಯವಿಲ್ಲ. ನಮ್ಮ ಸಂಸ್ಕೃತಿಯನ್ನು ನೋಡುವುದು ಒಂದು ದೈವಿಕ ಅನುಭವ ಎಂದರು. ಸುಕ್ಕೂರ್‌ನ ನಿರಂಜನ್ ಚಾವ್ಲಾ ಮಾತನಾಡಿ ವೀಸಾ ಪ್ರಕ್ರಿಯೆಯನ್ನು ಸರಳಗೊಳಿಸುವಂತೆ ಭಾರತ ಸರ್ಕಾರವನ್ನು ಒತ್ತಾಯಿಸಿದರು. ಈ ಗುಂಪು ಫೆಬ್ರವರಿ 8 ರಂದು ರಾಯ್‌ಪುರಕ್ಕೆ ಭೇಟಿ ನೀಡುವ ಯೋಜನೆ ಹೊಂದಿದ್ದು, ನಂತರ ಮತ್ತೆ ಹರಿದ್ವಾರಕ್ಕೆ ತೆರಳಲಿದೆ.
![](https://prajapragathi.com/wp-content/uploads/2025/02/pak.gif)