ಮೈಸೂರು:
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಕೊನೆ ಘಟ್ಟವಾದ ನಾಡಿನ ಅಧಿದೇವತೆ ತಾಯಿ ಚಾಮುಂಡೇಶ್ವರಿ ದೇವಿಯ ಮಹಾರಥೋತ್ಸವ ಇಂದು ವಿಜೃಂಭಣೆಯಿಂದ ನೆರವೇರಿತು.
ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ 9.40 ರಿಂದ 10.05ರೊಳಗಿನ ಧನುರ್ ಲಗ್ನದಲ್ಲಿ ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ರಥವನ್ನು ಎಳೆಯುವ ಮೂಲಕ ರಥೋತ್ಸವಕ್ಕೆ ವಿದ್ಯುಕ್ತ ಚಾಲನೆ ನೀಡಿದರು.
ದಸರಾ ಮುಗಿದ ನಂತರ ಜಾತ್ರೆ ಆಯೋಜನೆ ಮಾಡುತ್ತಿದ್ದ ಅಂದಿನ ಮಹಾರಾಜರು, ರಥೋತ್ಸವದ ಮೂಲಕ ಭಕ್ತರಿಗೆ ದೇವಿಯ ದರ್ಶನಕ್ಕೆ ವ್ಯವಸ್ಥೆ ಮಾಡುತ್ತಿದ್ದರು. ಆದರೆ ಇತಿಹಾಸದಲ್ಲಿ ಇದೇ ಮೊದಲ ಬಾರಿ ರಥೋತ್ಸವದ ಅದ್ಧೂರಿತನ ಮತ್ತು ವಿಜೃಂಭಣೆಯನ್ನು ಕೊರೊನಾ ವೈರಸ್ ಕಸಿದುಕೊಂಡಿದೆ.
ಆದ್ದರಿಂದ ಈ ಬಾರಿಯ ರಥೋತ್ಸವ ಅತ್ಯಂತ ಸರಳವಾಗಿ ರಥೋತ್ಸವ ನಡೆಸಲಾಯಿತು. ದೊಡ್ಡ ರಥದ ಬದಲು ಚಿಕ್ಕ ತೇರಿನಲ್ಲಿ ದೇವಿ ಚಾಮುಂಡೇಶ್ವರಿ ಮೆರವಣಿಗೆ ನಡೆಸಲಾಯಿತು. ರಥೋತ್ಸವದಲ್ಲಿ ಭಾಗವಹಿಸುವವರ ಸಂಖ್ಯೆ 200ಕ್ಕೆ ಸೀಮಿತಗೊಳಿಸಲಾಗಿತ್ತು.
ಕೋವಿಡ್ ಹರಡುವಿಕೆ ತಡೆಯುವ ಮುಂಜಾಗ್ರತಾ ಕ್ರಮಗಳಾಗಿ, ಭಕ್ತರ ಪ್ರವೇಶವನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆದೇಶ ಹೊರಡಿಸಿದ್ದರು.
ಸಾರ್ವಜನಿಕರ, ಭಕ್ತರ ಪ್ರವೇಶವನ್ನು ನಿರ್ಬಂಧಿಸಿದ್ದು ಬಿಟ್ಟರೆ ರಥೋತ್ಸವದ ಎಲ್ಲಾ ಸಂಪ್ರದಾಯಗಳು ಹಿಂದಿನಂತೆಯೇ ನಡೆಯಿತು. ಶಾಸಕರುಗಳಾದ ಜಿ.ಟಿ.ದೇವೇಗೌಡ, ಎಸ್.ಎ.ರಾಮದಾಸ್, ಎಲ್.ನಾಗೇಂದ್ರ ರಥೋತ್ಸವದಲ್ಲಿ ಭಾಗಿಯಾಗಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ