ಶ್ರೀನಗರ
ಜಮ್ಮು ಮತ್ತು ಕಾಶ್ಮೀರದಲ್ಲಿ ಗುರುವಾರ ಭದ್ರತಾ ಪಡೆಗಳು ಪೂಂಛ್ ವಲಯಕ್ಕೆ ಡ್ರೋನ್ ಬಳಸಿಕೊಂಡು ಸುಧಾರಿತ ಸ್ಫೋಟಕ ಸಾಧನ ಮತ್ತು ಮದ್ದುಗುಂಡುಗಳನ್ನು ಕಳ್ಳಸಾಗಣೆ ಮಾಡುವ ಪಾಕಿಸ್ತಾನದ ಕುತಂತ್ರದ ಸಂಚನ್ನು ವಿಫಲಗೊಳಿಸಿವೆ. ನಿಯಂತ್ರಣ ರೇಖೆಯ ಖಾರಿ ಕರ್ಮಾರ ಪ್ರದೇಶದಲ್ಲಿ ಪಾಕ್ ಡ್ರೋನ್ ಕಂಡುಬಂದಿದ್ದು, ಶೋಧ ಕಾರ್ಯಾಚರಣೆಗೆ ಚಾಲನೆ ನೀಡಲಾಗಿದೆ.
ಪಾಕ್ ಡ್ರೋನ್‍ನಿಂದ ಬೀಳಿಸಲಾದ ಸ್ಫೋಟಕಗಳು, ಮದ್ದುಗುಂಡುಗಳು ನಿಯಂತ್ರಣ ರೇಖೆಯ ಬಳಿ ಪತ್ತೆಯಾಗಿವೆ. ಭದ್ರತಾ ಪಡೆಯು ಆ ಪ್ರದೇಶವನ್ನು ಸಂಪೂರ್ಣವಾಗಿ ಸುತ್ತುವರಿದರು. ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಕಾರ್ಯಾಚರಣೆ ಆರಂಭಿಸಲಾಯಿತು. ಈ ಪ್ರದೇಶವನ್ನು ಅಸ್ಥಿರಗೊಳಿಸಲು ಪಾಕಿಸ್ತಾನದ ಪ್ರಯತ್ನವನ್ನು ವಿಫಲಗೊಳಿಸಲಾಗಿದೆ. ಈ ಮೂಲಕ ಭಾರತದ ಭದ್ರತಾ ಪಡೆಗಳು ಎಚ್ಚರಿಕೆ ವಹಿಸಿವೆ ಎಂದು ಅದಿಕಾರಿಗಳು ತಿಳಿಸಿದ್ದಾರೆ.
ಪೂಂಛ್‍ನ ಹಿಮದಿಂದ ಆವೃತವಾದ ಪೀರ್ ಪಂಜಾಲ್‌ನಲ್ಲಿ ಸೇನೆಯ ರೋಮಿಯೋ ಪಡೆಯು ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆಯಲ್ಲಿ ತೊಡಗಿರುವಾಗ ಬೆಳವಣಿಗೆ ಸಂಭವಿಸಿದೆ. ಚಳಿಗಾಲದ ತಿಂಗಳಲ್ಲಿ ಮಂಜು ಆವೃತವಾಗಿರುವ ಹಿನ್ನೆಲೆಯಲ್ಲಿ ಗಲಭೆ ಸೃಷ್ಟಿಸಲು ಭಯೋತ್ಪಾದಕರು ಭಾರತದ ಭೂ ಪ್ರದೇಶಕ್ಕೆ ನುಸುಳಲು ಸಜ್ಜಾಗುತ್ತಿದ್ದಾರೆ ಎಂದು ಗುಪ್ತಚರ ಮಾಹಿತಿ ಎಚ್ಚರಿಸಿದೆ. ಹೀಗಾಗಿ ಭದ್ರತಾ ಪಡೆಗಳನ್ನು ಹೈಅಲರ್ಟ್‌ನಲ್ಲಿ ಇರಿಸಲಾಗಿದ್ದು, ಉಗ್ರರ ಯೋಜನೆಗಳನ್ನು ವಿಫಲಗೊಳಿಸಲು ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿಯನ್ನು ಕಾಪಾಡಲು ಸಿದ್ಧವಾಗಿದೆ.
ಈ ಕಾರ್ಯಾಚರಣೆಯನ್ನು ಕಳೆದ ಒಂಬತ್ತು ದಿನಗಳಿಂದ ಕಿಷ್ತ್ವಾರ್ ಮತ್ತು ದೋಡಾದ ಎತ್ತರ ಪ್ರದೇಶಗಳಲ್ಲಿ ಸೇನೆಯಿಂದ ಆರಂಭಿಸಲಾಗಿದ್ದು, ಪಾಕಿಸ್ತಾನ ಮೂಲದ ಜೈಶ್ ಆಜಾದ್ ಕಮಾಂಡರ್ ಸೈಫುಲ್ಲಾ ಮತ್ತು ಅದರ ಉಪಾಧ್ಯಕ್ಷ ಅಡಿಲ್‍ನನ್ನು ಶೋಧಿಸಲಾಗುತ್ತಿದೆ. ಈ ಇಬ್ಬರು ಭಯೋತ್ಪಾದಕರ ಬಗ್ಗೆ ಮಾಹಿತಿ ನೀಡಿದವರಿಗೆ 5 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿದೆ.
ಹೊಸ ವರ್ಷಕ್ಕೂ ಮುನ್ನ ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿತ್ತು. ಡಿಸೆಂಬರ್ 30ರಂದು ಜಮ್ಮು ಬಸ್ ನಿಲ್ದಾಣದಲ್ಲಿ ಅನುಮಾನಾಸ್ಪದ ಚೀಲವೊಂದು ಪತ್ತೆಯಾಗಿತ್ತು. ಚೀಲದ ಬಗ್ಗೆ ಮಾಹಿತಿ ಪಡೆದ ಸ್ಥಳೀಯ ಪೊಲೀಸರು ಮತ್ತು ಭದ್ರತಾ ಪಡೆಗಳು ಆ ಪ್ರದೇಶವನ್ನು ಸುತ್ತುವರೆದು ಪ್ರಯಾಣಿಕರಿಗೆ ಸುರಕ್ಷಿತ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಿದ್ದರು.
ತನಿಖೆಯ ನಂತರ, ಅಧಿಕಾರಿಗಳು ಬ್ಯಾಗ್‌ನಲ್ಲಿ ಯಾವುದೇ ಅನುಮಾನಾಸ್ಪದ ಅಥವಾ ಸ್ಫೋಟಕ ವಸ್ತುಗಳು ಇಲ್ಲ ಎಂದು ದೃಢಪಡಿಸಿದ್ದರು. ಪೊಲೀಸರು ಬ್ಯಾಗ್ ವಶಪಡಿಸಿಕೊಂಡು ಹತ್ತಿರದ ಪೊಲೀಸ್ ಠಾಣೆಗೆ ಕೊಂಡೊಯ್ದರು. ಬ್ಯಾಗ್ ಅನ್ನು ಅಲ್ಲಿ ಯಾರು ಬಿಟ್ಟಿದ್ದಾರೆ ಅಥವಾ ಅದು ಆಕಸ್ಮಿಕವಾಗಿ ಬಿಟ್ಟು ಹೋಗಿರುವ ಪ್ರಯಾಣಿಕರ ವಸ್ತುವೇ ಎಂಬುದನ್ನು ನಿರ್ಧರಿಸಲು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದರು. ತನಿಖೆ ಪೂರ್ಣಗೊಂಡ ನಂತರ, ಬಸ್ ನಿಲ್ದಾಣದಲ್ಲಿ ಸಂಚಾರ ಮತ್ತು ಇತರ ಚಟುವಟಿಕೆಗಳು ಪುನರಾರಂಭಗೊಂಡಿತು. ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಪೊಲೀಸರು ಹೇಳಿದರು.








