ದುಬೈ:
ಮ್ಯಾಚ್ ರೆಫ್ರಿಯನ್ನು ವಜಾಗೊಳಿಸದಿದ್ದರೆ ಏಷ್ಯಾಕಪ್ ಟಿ20 ಟೂರ್ನಿಯಿಂದಲೇ ಹೊರನಡೆಯುವುದಾಗಿ ಬೆದರಿಕೆ ಹಾಕಿದ್ದ ಪಾಕಿಸ್ತಾನ, ಇದೀಗ ಯೂ ಟರ್ನ್ ಹೊಡೆದಿದೆ. ಬುಧವಾರ ನಡೆಯುವ ಯುಎಇ ವಿರುದ್ಧದ ಪಂದ್ಯದಲ್ಲಿ ಪಾಕ್ ತಂಡ ಆಡಲು ನಿರ್ಧರಿಸಿದೆ. ಸತತ ಚರ್ಚೆಗಳ ಬಳಿಕ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಈ ನಿರ್ಧಾರವನ್ನು ತೆಗೆದುಕೊಂಡಿದೆ. ಆದರೆ ಯುಎಇ ವಿರುದ್ಧದ ಪಂದ್ಯಕ್ಕೂ ಮುನ್ನ ನಿಗದಿಯಾಗಿದ್ದ ಸುದ್ದಿಗೋಷ್ಠಿಯನ್ನು ಪಾಕಿಸ್ತಾನ ತಂಡ ರದ್ದುಗೊಳಿಸಿತ್ತು.
ಇದೇ ವೇಳೆ ಪಾಕಿಸ್ತಾನವನ್ನು ಒಳಗೊಂಡ ಪಂದ್ಯಗಳಿಗೆ ವಿವಾದಿತ ಮ್ಯಾಚ್ ರೆಫ್ರಿ ಆ್ಯಂಡಿ ಪೈಕ್ರಾಫ್ಟ್ ಅವರು ಕರ್ತವ್ಯ ನಿಭಾಯಿಸುವುದಿಲ್ಲ ಎಂದೂ ವರದಿಯಾಗಿದೆ. ಆ್ಯಂಡಿ ಪೈಕ್ರಾಫ್ಟ್ ಅವರ ಬದಲು ರಿಚಿ ರಿಚರ್ಡ್ಸನ್ ಅವರಿಗೆ ಹೊಣೆ ವಹಿಸಲು ಸೂಚಿಸಲಾಗಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಕಳೆದ ಭಾನುವಾರ ದುಬೈನಲ್ಲಿ ನಡೆದಿದ್ ಪಂದ್ಯದಲ್ಲಿ ಪಾಕಿಸ್ತಾನ ಆಟಗಾರರೊಂದಿಗೆ ಹಸ್ತಲಾಘವ ಮಾಡಲು ಭಾರತೀಯ ಆಟಗಾರರು ನಿರಾಕರಿಸಿದ್ದರು. ಇದರ ವಿರುದ್ಧ ತೀವ್ರ ಪ್ರತಿಭಟನೆ ದಾಖಲಿಸಿದ್ದ ಪಿಸಿಬಿ, ಮ್ಯಾಚ್ ರೆಫ್ರಿ ಆ್ಯಂಡಿ ಪೈಕ್ರಾಫ್ಟ್ ಅವರನ್ನು ವಜಾಗೊಳಿಸುವಂತೆ ಐಸಿಸಿಗೆ ದೂರು ದಾಖಲಿಸಿತ್ತು. ಆದರೆ ಪಾಕಿಸ್ತಾನದ ಬೇಡಿಕೆಯನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ತಳ್ಳಿ ಹಾಕಿತ್ತು.
ಒಂದು ವೇಳೆ ಪಾಕಿಸ್ತಾನ ಟೂರ್ನಿಯಿಂದ ಹಿಂದೆ ಸರಿದರೆ ಆರ್ಥಿಕವಾಗಿ ಭಾರಿ ನಷ್ಟ ಅನುಭವಿಸುತ್ತಿತ್ತು. ಇಂದು ನಡೆಯುವ ಪಂದ್ಯದಲ್ಲಿ ಪಾಕಿಸ್ತಾನ ಸೋತರೆ ಟೂರ್ನಿಯಿಂದಲೇ ಹೊರಬೀಳಲಿದೆ. ಗೆದ್ದರೆ ಸೂಪರ್-4 ಪ್ರವೇಶ ಪಡೆದು ಮತ್ತೊಮ್ಮೆ ಭಾತರ ತಂಡದ ವಿರುದ್ಧ ಸೆಣಸಾಟ ನಡೆಸಿದೆ.








