ಪಾಕಿಸ್ಥಾನ :
ಪಾಕಿಸ್ತಾನದಲ್ಲಿ ಸ್ವಾತಂತ್ರ್ಯ ದಿನವನ್ನ ಆಚರಿಸಲಾಗುತ್ತಿದೆ. ಹೀಗಿರುವಾಗ ಪಾಕ್ ಸೇನಾ ಮುಖ್ಯಸ್ಥ ಜನರಲ್ ಅಸೀಮ್ ಮುನೀರ್ ಹೇಳಿಕೆ ವೈರಲ್ ಆಗುತ್ತಿದೆ. ವಾಸ್ತವವಾಗಿ, ತನ್ನ ದೇಶದ ಮೇಲೆ ಯಾವುದೇ ರೀತಿಯ ದಾಳಿ ನಡೆದ್ರೆ, ಪಾಕಿಸ್ತಾನ ಪ್ರತೀಕಾರದ ಕ್ರಮ ತೆಗೆದುಕೊಳ್ಳುತ್ತದೆ ಎಂದು ಅವರು ಬೆದರಿಕೆ ಹಾಕಿದ್ದಾರೆ.
ಈ ಬೆದರಿಕೆಯನ್ನ ಭಾರತ, ಅಫ್ಘಾನಿಸ್ತಾನ ಮತ್ತು ಇರಾನ್’ಗೆ ನೇರವಾಗಿ ಪರಿಗಣಿಸಲಾಗಿದೆ. ಯಾಕಂದ್ರೆ, ಪಾಕಿಸ್ತಾನವು ಈ ದೇಶಗಳೊಂದಿಗೆ ನಡೆಯುತ್ತಿರುವ ವಿವಾದವನ್ನ ಹೊಂದಿದೆ. ನಮ್ಮ ವಿರುದ್ಧ ಯಾರೇ ಯುದ್ಧಕ್ಕೆ ಸಂಚು ಹೂಡಿದರೂ ನಮ್ಮ ಪ್ರತೀಕಾರ ತೀರಾ ನೋವಿನಿಂದ ಕೂಡಿರುತ್ತದೆ ಎಂದು ಸೇನಾ ಮುಖ್ಯಸ್ಥರು ಹೇಳಿದ್ದಾರೆ. ಮುನೀರ್ ಅವರು ಸ್ವಾತಂತ್ರ್ಯೋತ್ಸವ ಪಥಸಂಚಲನದಲ್ಲಿ ಮಾತನಾಡುತ್ತಾ ಈ ಹೇಳಿಕೆ ನೀಡಿದ್ದಾರೆ. ಪಾಕಿಸ್ತಾನದ ಜನರು ಮತ್ತು ಅದರ ಭದ್ರತಾ ಪಡೆಗಳು ಎಂದಿಗೂ ಹಿಂದೆ ಸರಿಯುವುದಿಲ್ಲ ಮತ್ತು ದೇಶದ ಮೇಲೆ ಕೆಟ್ಟ ಕಣ್ಣು ಹಾಕಲು ಯಾರಿಗೂ ಬಿಡುವುದಿಲ್ಲ ಎಂದು ಮುನೀರ್ ಹೇಳಿದರು.
ಪ್ರಸ್ತುತ ಪಾಕಿಸ್ತಾನವು ಟಿಟಿಪಿ ಭಯೋತ್ಪಾದಕರಿಂದ ತೊಂದರೆಗೊಳಗಾಗಿದೆ. ಟಿಟಿಪಿಗೆ ತಾಲಿಬಾನ್ ಬೆಂಬಲವಿದೆ. ಅದಕ್ಕಾಗಿಯೇ ಪಾಕಿಸ್ತಾನವು ಅಫ್ಘಾನಿಸ್ತಾನದ ಬಗ್ಗೆ ಸಿಟ್ಟಿಗೆದ್ದಿದೆ. ಯಾಕಂದ್ರೆ, ಪದೇ ಪದೇ ವಿನಂತಿಸಿದರೂ, ತಾಲಿಬಾನ್ ಪಾಕಿಸ್ತಾನಕ್ಕೆ ಸಹಾಯ ಮಾಡುತ್ತಿಲ್ಲ. ಅದೇ ಸಮಯದಲ್ಲಿ, ಪಾಕಿಸ್ತಾನವು ಚೀನಾ, ಸೌದಿ ಅರೇಬಿಯಾ, ಯುಎಇ, ಕತಾರ್ ಮತ್ತು ತುರ್ಕಿಯೆಯನ್ನ ಹೊಗಳಿತು. ಅಫ್ಘಾನಿಸ್ತಾನದೊಂದಿಗೆ ನಾವು ಉತ್ತಮ ಸಂಬಂಧವನ್ನ ಬಯಸುತ್ತೇವೆ ಎಂದು ಸೇನಾ ಮುಖ್ಯಸ್ಥರು ಹೇಳಿದ್ದಾರೆ. ಟಿಟಿಪಿ ಭಯೋತ್ಪಾದಕರಿಗೆ ಆಶ್ರಯ ನೀಡುವ ಬಗ್ಗೆಯೂ ಪಾಕಿಸ್ತಾನ ಪ್ರಸ್ತಾಪಿಸಿದೆ.
ಕಾಶ್ಮೀರ ವಿಚಾರದಲ್ಲಿ ಪಾಕಿಸ್ತಾನ ಭಾರತದ ಮೇಲೂ ತನ್ನ ಕಣ್ಣು ತೋರಿಸಿದೆ . ಮುನೀರ್ ಕಾಶ್ಮೀರ ಮತ್ತು ಪ್ಯಾಲೆಸ್ತೀನ್ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಭಾರತದ ಕಾಶ್ಮೀರವನ್ನ ಉಲ್ಲೇಖಿಸಿದ ಅವರು, ವಿಶ್ವಸಂಸ್ಥೆಯ ನಿರ್ಣಯಗಳಲ್ಲಿ ಅವರ ಹಕ್ಕುಗಳಿಗಾಗಿ ನಾವು ಅವರೊಂದಿಗೆ ದೃಢವಾಗಿ ನಿಲ್ಲುತ್ತೇವೆ ಮತ್ತು ಕಾಶ್ಮೀರದ ಧೈರ್ಯಶಾಲಿ ಜನರಿಗೆ ನಮ್ಮ ನೈತಿಕ ಬೆಂಬಲವನ್ನ ಭರವಸೆ ನೀಡುತ್ತೇವೆ ಎಂದು ಹೇಳಿದರು. ಗಾಜಾದ ಜನರ ವಿರುದ್ಧ ಇಸ್ರೇಲ್’ನ ದೌರ್ಜನ್ಯದ ಗಂಭೀರತೆಯನ್ನ ಅರ್ಥಮಾಡಿಕೊಳ್ಳಲು ಸಹ ಕರೆ ನೀಡಿದರು. ಈ ಬಗ್ಗೆ ಪ್ರಶ್ನೆಗಳನ್ನೂ ಎತ್ತಿದರು.