PSI ಪರೀಕ್ಷೆ ಮುಂದೂಡಿಕೆ : ಕೆಇಎ ಜೊತೆ ಚರ್ಚಿಸಿ ನಿರ್ಧಾರ : ಗೃಹ ಸಚಿವ

ಬೆಂಗಳೂರು:

  ಪಿಎಸ್ಐ ನೇಮಕಾತಿ ಪರೀಕ್ಷೆ ಮುಂದೂಡುವ ಕುರಿತು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಮತ್ತು ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ‌ ನಿರ್ಧಾರ ಕೈಗೊಳ್ಳುವುದಾಗಿ ಗೃಹ ಸಚಿವ ಪರಮೇಶ್ವರ್ ಅವರು ಮಂಗಳವಾರ ಹೇಳಿದರು.

  ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ್, ಬಿಜೆಪಿ ಯುವ ಅಧ್ಯಕ್ಷ ಧೀರಜ್ ಮುನಿರಾಜು ನೇತೃತ್ವದ ಬಿಜೆಪಿ ನಿಯೋಗ ಮಂಗಳವಾರ ಪರಮೇಶ್ವರ್ ಅವರನ್ನು ಭೇಟಿ ಮಾಡಿ, ಯುಪಿಎಸ್‌ಸಿ ಪರೀಕ್ಷೆ ನಿಗದಿಯಾಗಿರುವ ಸೆ.22ರಂದು ಪಿಎಸ್‌ಐ ನೇಮಕಾತಿ ಪರೀಕ್ಷೆಯನ್ನೂ ನಿಗದಿ ಮಾಡಲಾಗಿದ್ದು, ಹೀಗಾಗಿ ಪರೀಕ್ಷೆ ಮುಂದೂಡುವಂತೆ ಮನವಿ ಮಾಡಿದರು.

  ಬಿಜೆಪಿ ನಿಯೋಗದಿಂದ ಮನವಿ ಪತ್ರ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ್ ಅವರು, 402 ಪಿಎಸ್ಐ ಹುದ್ದೆಗಳ ನೇಮಕಾತಿ ಪರೀಕ್ಷೆಯ ಹೊಣೆಯನ್ನು ಕೆಇಎಗೆ ವಹಿಸಲಾಗಿದೆ. ಸೆ.22ರಂದು ಪರೀಕ್ಷೆ ನಡೆಸಲು ನಿಗದಿ ಮಾಡಿದ್ದಾರೆ. ಪಿಎಸ್‌ಐ ಪರೀಕ್ಷೆ ಬರೆಯಬೇಕಾದ 100ಕ್ಕೂ ಹೆಚ್ಚು ಆಕಾಂಕ್ಷಿಗಳು, ಯುಪಿಎಸ್‌ಸಿ ಮುಖ್ಯಪರೀಕ್ಷೆಯನ್ನು ಬರೆಯುತ್ತಿದ್ದಾರೆ. ಹೀಗಾಗಿ ಪರೀಕ್ಷಾ ದಿನ ಮುಂದೂಡುವಂತೆ ಮನವಿ ಸಲ್ಲಿಸಿದ್ದಾರೆ. ಪರೀಕ್ಷೆ‌ ಮುಂದೂಡುವ ಕುರಿತ ಸಾಧಕ-ಬಾಧಕಗಳನ್ನು ಇಲಾಖೆಯ ಅಧಿಕಾರಿಗಳು ಹಾಗೂ ಕೆಇಎ ಅವರೊಂದಿಗೆ ಮತ್ತೊಮ್ಮೆ ಚರ್ಚಿಸಿ, ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

   ನಮಗೆ ಯುಪಿಎಸ್‌ಸಿ ಮುಖ್ಯವಲ್ಲ. ಇಲಾಖೆಯಲ್ಲಿ ಸಾವಿರ ಪಿಎಸ್ಐ ಹುದ್ದೆಗಳು ಖಾಲಿ ಇವೆ. ಈ ಹಿನ್ನೆಲೆಯಲ್ಲಿ ನಿಯಮ 32 ಅಡಿ ಎಎಸ್‌ಐಗಳಿಗೆ ಪಿಎಸ್ಐ ಹುದ್ದೆಗೆ ಬಡ್ತಿ ನೀಡಲಾಗಿದೆ. ಬೀದಿಯಲ್ಲಿ ನಿಂತು ಕರ್ತವ್ಯ ನಿರ್ವಹಿಸಬೇಕಾದ ಪಿಎಸ್ಐ ಇಲ್ಲವಾದರೆ, ಇಲಾಖೆ ಮುನ್ನಡೆಸುವುದು‌ ಹೇಗೆ ಎಂದು ಪ್ರಶ್ನಿಸಿದರು.

  ಬಿಜೆಪಿ ಆಡಳಿತದ ಅವಧಿಯಲ್ಲಿ 545 ಪಿಎಸ್ಐ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ನಡೆದ ಅಕ್ರಮವಾದ ಬಳಿಕ ನೇಮಕಾತಿ ನಡೆದಿಲ್ಲ. ಎಲ್ಲಾ ಗೊಂದಲದ ನಡುವೆಯೂ ಕೋರ್ಟ್‌ನಿಂದ ಅನುಮತಿ ಪಡೆದು ಮರುಪರೀಕ್ಷೆ ನಡೆಸಲಾಗಿದೆ‌. ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸುವ ಹಂತದಲ್ಲಿದೆ. ಈ ನಡುವೆಯೇ ಮತ್ತೆ ಕೆಲವರು ಕೋರ್ಟ್‌ಗೆ ಹೋಗಿದ್ದು, ಅಂತಿಮ‌ಪಟ್ಟಿ ಪ್ರಕಟಿಸಲು ವಿಳಂಬವಾಗುತ್ತಿದೆ. ಕಳೆದ ನಾಲ್ಕು ವರ್ಷಗಳಿಂದ ಪಿಎಸ್ಐ ನೇಮಕಾತಿ ನಡೆದಿಲ್ಲ. ಸಿಂಧುತ್ವ, ದಾಖಲಾತಿ ಪರಿಶೀಲನೆ, ತರಬೇತಿ ಪಡೆದು ಇಲಾಖೆಗೆ ಸೇರಲು‌ ಒಂದು ವರ್ಷ ಬೇಕಾಗುತ್ತದೆ. ಎರಡು ವರ್ಷ ಪ್ರೊಬೆಷನರಿ ಅವಧಿಯಲ್ಲಿ ಕಾರ್ಯನಿರ್ವಹಿಸುತ್ತಾರೆ. ಈ ಪರಿಸ್ಥಿತಿಯ ಹಿನ್ನೆಲೆಯಲ್ಲಿ, 402 ಪಿಎಸ್‌ಐ ಹುದ್ದೆಗಳಿಗೆ ಆದಷ್ಟು ಬೇಗ ಪರೀಕ್ಷೆ ನಡೆಸಲು ಮುಂದಾಗಿದ್ದೇವೆ. ಇದಾದ ನಂತರ 600 ಪಿಎಸ್ಐ ಹುದ್ದೆಗಳಿಗೆ ನೇಮಕಾತಿಗೂ ಸಿದ್ಧತೆ ಮಾಡಿಕೊಳ್ಳಬೇಕಿದೆ ಎಂದು ತಿಳಿಸಿದರು.

  ಕೆಲ ಆಕಾಂಕ್ಷಿಗಳು ಮನವಿ ಸಲ್ಲಿಸಿದ್ದು, ಕೆಇಎ ಮತ್ತು ಇಲಾಖೆಯ ಅಧಿಕಾರಿಗಳ ಜೊತೆ ಚರ್ಚಿಸಿದ್ದೇನೆ. ಈಗ ಪರೀಕ್ಷೆ ಮುಂದೂಡಿದರೆ, ಮುಂದಿನ ಆರು ತಿಂಗಳವರೆಗೆ ಪರೀಕ್ಷೆ ನಡೆಸಲು ದಿನ ಖಾಲಿ ಇಲ್ಲ ಎಂದು ಕೆಇಎ ಅವರು ತಿಳಿಸಿದ್ದಾರೆ. ಪಿಎಸ್ಐ ಪರೀಕ್ಷೆ ಮುಂದೂಡುವಂತೆ ತಿಳಿಸಿದರೆ‌ ಮುಂದೂಡುತ್ತಾರೆ. ಆದರೆ, ಪರೀಕ್ಷೆ ನಡೆಸಲು 6 ತಿಂಗಳು ಬೇಕಾಗುತ್ತದೆ ಎಂದರು.

Recent Articles

spot_img

Related Stories

Share via
Copy link
Powered by Social Snap