ತುರುವೇಕೆರೆ ಕ್ಷೇತ್ರ : ಬಿರುಸುಗೊಂಡ ಪಕ್ಷಾಂತರ ಪರ್ವ

ನಿರ್ಣಾಯಕ ಮತದಾರರತ್ತ ಎಲ್ಲರ ಚಿತ್ತ : ಮುಂದುವರಿದ ಓಲೈಕೆ ರಾಜಕಾರಣ

ತುರುವೇಕೆರೆ

-ಮಲ್ಲಿಕಾರ್ಜುನ ದುಂಡ

      ವಿಧಾನಸಭಾ ಕ್ಷೇತ್ರದ ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಚುನಾವಣಾ ಕಾವು ಹೆಚ್ಚುತ್ತಿದ್ದು, ಪಕ್ಷದ ಅಭ್ಯರ್ಥಿಗಳ ಮಧ್ಯೆ ಈಗಾಗಲೇ ಹಗ್ಗಜಗ್ಗಾಟ ಬಿರುಸುಗೊಂಡಿವೆ. ಬಿಜೆಪಿಯಿಂದ ಹಾಲಿ ಶಾಸಕ ಮಸಾಲ ಜಯರಾಮ್, ಜೆಡಿಎಸ್‌ನಿಂದ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಹಾಗೂ ಕಾಂಗ್ರೆಸ್‌ನಿಂದ ಗುರುತಿಸಿಕೊಂಡಿರುವ ಬೆಮೆಲ್ ಕಾಂತರಾಜು ಅವರುಗಳು ಕ್ಷೇತ್ರದ ಮತದಾರರ ಓಲೈಕೆಗೆ ಮುಂದಾಗಿದ್ದಾರೆ. ತಾಲ್ಲೂಕಿನಾದ್ಯಂತ ಸಭೆ, ಸಮಾರಂಭಗಳಲ್ಲಿ ಸಕ್ರಿಯರಾಗಿದ್ದಾರೆ.

     ಬಿಜೆಪಿಯಿಂದ ಹಾಲಿ ಶಾಸಕರು ಹಾಗೂ ಜೆಡಿಎಸ್‌ನಿಂದ ಮಾಜಿ ಶಾಸಕರು ತಮ್ಮ ಅವಧಿಯಲ್ಲಿ ಕೈಗೊಂಡಿರುವ ಕಾಮಗಾರಿಗಳ ಬಗ್ಗೆ ಹೇಳಿಕೊಳ್ಳುತ್ತಾ ಸಭೆ, ಸಮಾರಂಭಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಪಕ್ಷಾಂತರ ಪರ್ವ :

    ಚುನಾವಣೆ ಬಂತೆAದರೆ ಸಾಕು ಮತದಾರರು ಬೇರೆ ಪಕ್ಷಗಳತ್ತ ವಾಲುವುದು ಸರ್ವೆ ಸಾಮಾನ್ಯ. ತಮ್ಮ ಕೆಲಸಗಳನ್ನು ಈಡೇರಿಸದ ನಾಯಕನಿಗೆ ಕೈ ಕೊಟ್ಟು ಬೇರೆ ಪಕ್ಷಕ್ಕೆ ಹೋದಲ್ಲಿ ತಮ್ಮ ಕೆಲಸಗಳು ಸುಲಭವಾಗುತ್ತವೆ ಎಂಬ ಉದ್ದೇಶದಿಂದ ಹಾಗೂ ಆಸೆ ಆಮಿಷಗಳಿಗೆ ಒಳಗಾಗಿ ಕೆಲವೊಂದು ಸ್ನೇಹಿತರೊಟ್ಟುಗೂಡಿ ತಂಡದೊಂದಿಗೆ ಬೇರೆ ಪಕ್ಷದತ್ತ ಮುಖ ಮಾಡುವವರ ಸಂಖ್ಯೆಗೇನೂ ಕಡಿಮೆಯಿಲ್ಲ.

    ಬೇರೆ ಪಕ್ಷದವರು ಸೇರ್ಪಡೆಯಾಗುತ್ತಾರೆಂದರೆ ಅವರನ್ನು ಪಕ್ಷದ ಮುಖಂಡರು ಪಕ್ಷ ಸೇರ್ಪಡೆ ಮಾಡಿಕೊಳ್ಳುವುದಲ್ಲದೆ ವಿಶೇಷ ಆತಿಥ್ಯವನ್ನೂ ಸಹ ನೀಡಿ ಸತ್ಕರಿಸಿ ತಮ್ಮನ್ನು ಪಕ್ಷದಲ್ಲಿ ಗುರ್ತಿಸುತ್ತಾರೆಂಬ ನಿಟ್ಟಿನಲ್ಲಿ ಪಕ್ಷಾಂತರಗೊಳ್ಳುವುದು ಚುನಾವಣಾ ಸಮಯದಲ್ಲಿ ಸರ್ವೆ ಸಾಮಾನ್ಯ. ಇನ್ನು ಕೆಲವು ಮುಖಂಡರು ಚುನಾವಣೆ ಬಂತೆಂದರೆ ಸಾಕು.

    ಹಣ ಆಮಿಷಕ್ಕೊಳಗಾಗಿ ಚುನಾವಣಾ ಸಂದರ್ಭದಲ್ಲಿ ಪಕ್ಷಾಂತರ ಮಾಡುವುದು ಇದೇನು ಹೊಸದೇನಲ್ಲ. ತುರುವೇಕೆರೆ ಕ್ಷೇತ್ರದಲ್ಲಿ ಈಗ ಪಕ್ಷಾಂತರ ಪರ್ವ ನಡೆಯುತ್ತಿದ್ದು, ಅಲ್ಲಿಂದಿಲ್ಲಿಗೆ, ಇಲ್ಲಿಂದ ಅಲ್ಲಿಗೆ ಜಿಗಿಯುವವರ ಸಂಖ್ಯೆ ಕಂಡುಬರುತ್ತಿದೆ.

ಮೋದಿ ತೋರಿಸಿ ಮತ ಯಾಚನೆ :

    ಶಾಸಕ ಮಸಾಲ ಜಯರಾಮ್ ಅವರು ೨೦೧೪ರಲ್ಲಿ ಕೆಜೆಪಿಯಿಂದ ಸ್ಪರ್ಧಿಸಿ ಎಂ.ಟಿ.ಕೃಷ್ಣಪ್ಪ ವಿರುದ್ಧ ಸೋತಿದ್ದರು. ಮತ್ತೆ ೨೦೧೮ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಮೊದಲ ಬಾರಿಗೆ ಗೆದ್ದು ಶಾಸಕರಾದರು. ಇವರು ಸಾಂಬಾರ ನಿಗಮ ಮಂಡಳಿ ಅಧ್ಯಕ್ಷರಾಗಿ ಆಯ್ಕೆಗೊಂಡು ನಂತರ ಅದಕ್ಕೆ ರಾಜೀನಾಮೆ ನೀಡಿ ಇದೀಗ ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೋರೇಷನ್ ಲಿಮಿಟೆಡ್‌ನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಅವರು ಮತ್ತೆ ಗೆದ್ದಲ್ಲಿ ಸಚಿವ ಸ್ಥಾನ ಸಿಗಬಹುದೆಂಬ ನಿಟ್ಟಿನಲ್ಲಿ ಈ ಬಾರಿ ಹೇಗಾದರೂ ಮಾಡಿ ಗೆಲ್ಲಲೇಬೇಕೆಂಬ ಮಹದಾಸೆಯಿಂದ ಪುನರಾಯ್ಕೆ ಬಯಸಿ ಕ್ಷೇತ್ರ ಪರ್ಯಟನೆ ಕೈಗೊಂಡಿದ್ದಾರೆ.

 ಪಂಚರತ್ನ ಕುರಿತು ಮತದಾರರಿಗೆ ಅರಿವು :

      ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪನವರು ಜೆಡಿಎಸ್ ಪಕ್ಷದಿಂದ ೩ ಬಾರಿ ಶಾಸಕರಾಗಿದ್ದರೂ ಸಹ ಅವರಿಗೆ ಸಚಿವ ಸ್ಥಾನವಾಗಲಿ, ನಿಗಮ ಮಂಡಳಿ ಸ್ಥಾನವಾಗಲಿ ಸಿಕ್ಕಿಲ್ಲ. ೨೦೧೮ ರಲ್ಲಿ ಆಡಳಿತ ನಡೆಸಿದ್ದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಎಂ.ಟಿ.ಕೃಷ್ಣಪ್ಪನವರು ಜಯಶಾಲಿಯಾಗಿದ್ದರೆ ಸಚಿವರಾಗುವ ಯೋಗ ಅವರಲ್ಲಿತ್ತು.

      ಆದರೆ ಅವರ ದುರಾದೃಷ್ಟವೆಂಬAತೆ ಮಸಾಲ ಜಯರಾಮ್ ವಿರುದ್ಧ ಪರಾಭವಗೊಂಡರು. ಈ ಬಾರಿ ಜೆಡಿಎಸ್ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದು ನನಗೆ ಸಚಿವ ಸ್ಥಾನ ಖಂಡಿತ ಸಿಗಲಿದೆ ಎಂಬ ಮಹತ್ವಾ ಕಾಂಕ್ಷೆಯೊಂದಿಗೆ ಈ ಬಾರಿ ಕ್ಷೇತ್ರದ ಜನತೆ ನನ್ನ ಕೈ ಹಿಡಿಯಲಿದ್ದಾರೆ ಎಂಬ ಭರವಸೆ ಹೊತ್ತು ಮತ್ತೆ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಪಂಚರತ್ನ ಯಾತ್ರೆ ಕ್ಷೇತ್ರಕ್ಕೆ ಬಂದ ಸಂದರ್ಭದಲ್ಲಿ ಸಾವಿರಾರು ಜನರನ್ನು ಸೇರಿಸಿ ತಮ್ಮ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಇದು ನನ್ನ ಕೊನೆ ಚುನಾವಣೆ, ಇದೊಂದು ಬಾರಿ ನನಗೆ ಆಶೀರ್ವದಿಸಿ ಎಂದು ಹಳ್ಳಿಗಳನ್ನು ಸುತ್ತುತ್ತಾ ಮತದಾರರನ್ನು ತಮ್ಮ ಪಕ್ಷಕ್ಕೆ ಸೆಳೆಯಲು ವಿರಮಿಸದೆ ಎಡತಾಕುತ್ತಿದ್ದಾರೆ.

ಜೋಡೊ ಯಾತ್ರೆ ಬಳಿಕ ಕ್ಷೇತ್ರದಲ್ಲಿ ಸಂಚಲನ :

       ಕ್ಷೇತ್ರದಲ್ಲಿ ಇನ್ನು ಕಾಂಗ್ರೆಸ್ ಅಭ್ಯರ್ಥಿ ಘೋಷಣೆಯಾಗಿಲ್ಲ. ಆಯ್ಕೆ ವಿಚಾರದಲ್ಲಿ ಕಾಂಗ್ರೆಸ್ ಮುಖಂಡರ ಮಧ್ಯೆ ಸ್ವಲ್ಪ ಗೊಂದಲವಿದೆ ಎಂಬ ಮಾತುಗಳು ಜನರಿಂದ ಕೇಳಿಬರುತ್ತಿದೆಯಾದರೂ ಬೆಮೆಲ್ ಕಾಂತ್‌ರಾಜ್ ಅವರೆ ಕಾಂಗ್ರೆಸ್ ಅಭ್ಯರ್ಥಿ ಎಂಬ ಮಾತುಗಳು ಕೆಲವು ಕಾಂಗ್ರೆಸ್ ಮುಖಂಡರಿAದ ಕೇಳಿಬರುತ್ತಿದೆ.

     ಕ್ಷೇತ್ರದಲ್ಲಿ ಅಭ್ಯರ್ಥಿ ಘೋಷಣೆಯಾಗಿಲ್ಲದಿದ್ದರೂ ಸಹ ಮಾಜಿ ವಿಧಾನ ಪರಿಷತ್ ಸದಸ್ಯ ಬೆಮೆಲ್ ಕಾಂತರಾಜು ಅವರು ನಾನೇ ಅಭ್ಯರ್ಥಿ ಎಂದು ಹೇಳಿಕೊಳ್ಳುತ್ತಾ ಕಾಂಗ್ರೆಸ್ ಸೇರ್ಪಡೆಯಾದಂದಿ ನಿಂದಲೂ ಕ್ಷೇತ್ರದಲ್ಲಿ ಓಡಾಡುತ್ತಾ ಸಂಘಟನೆಯಲ್ಲಿ ನಿರತರಾಗಿದ್ದಾರೆ. ಭಾರತ್ ಜೋಡೊ ಯಾತ್ರೆ ಕ್ಷೇತ್ರಕ್ಕೆ ಬಂದು ಹೋಗಿದ್ದರಿಂದ ಪಕ್ಷದಲ್ಲಿ ಸಂಚಲನ ಮೂಡಿಸಿದಂತಿದ್ದು ಅಭ್ಯರ್ಥಿ ಆಯ್ಕೆ ನಂತರವೇ ಕಾಂಗ್ರೆಸ್‌ನ ಮುಂದಿನ ನಡೆೆ ಏನೆಂಬುದನ್ನು ತಿಳಿಯಬಹುದಾಗಿದೆ.

     ಒಟ್ಟಾರೆ ಚುನಾವಣೆಗೂ ಮುನ್ನವೇ ಕ್ಷೇತ್ರದ ಎಲ್ಲಾ ಪಕ್ಷಗಳ ಅಭ್ಯರ್ಥಿ ಆಕಾಂಕ್ಷಿಗಳು ಗ್ರಾಮಗಳಿಗೆ ಲಗ್ಗೆ ಇಡುತ್ತಿದ್ದು, ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ತಮ್ಮ ತಮ್ಮ ಪಕ್ಷದ ಕಛೇರಿಗಳನ್ನು ತೆರೆದು ಬೇರೆ ಬೇರೆ ಪಕ್ಷದ ಅತೃಪ್ತರನ್ನು ಓಲೈಸಿ ತಮ್ಮ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಮೂಲಕ ತಮ್ಮ ತಮ್ಮ ಗೆಲುವಿನ ಓಟಕ್ಕೆ ತಯಾರಿ ನಡೆಸುತ್ತಿದ್ದು ಮುಂದಿನ ಬೆಳವಣಿಗೆ ಏನೆಂಬುದನ್ನು ನಂತರವಷ್ಟೇ ತಿಳಿಯಬಹುದಾಗಿದೆ.

ನಿರ್ಣಾಯಕ ಮತಗಳತ್ತ ಎಲ್ಲರ ಚಿತ್ತ : ತುರುವೇಕೆರೆ ಕ್ಷೇತ್ರದಲ್ಲಿ ಒಕ್ಕಲಿಗರ ಪ್ರಾಬಲ್ಯವಿದ್ದರೂ ಸಹ ಲಿಂಗಾಯಿತ ಮತಗಳೇ ನಿರ್ಣಾಯಕವಾಗಿವೆ. ೨೦೧೮ ರಲ್ಲಿ ಲಿಂಗಾಯಿತ ಮತಗಳು ಬಿಜೆಪಿ ಕಡೆ ಹೆಚ್ಚು ವಾಲಿದ್ದರಿಂದ ಮಸಾಲ ಜಯರಾಮ್ ಜಯಶೀಲರಾದರು. ಇದೀಗ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪನವರು ಲಿಂಗಾಯಿತ ಮತಗಳ ಬುಟ್ಟಿಗೆ ಕೈ ಹಾಕುತ್ತಿದ್ದು, ಮತದಾರರನ್ನು ತಮ್ಮ ಪಕ್ಷಕ್ಕೆ ಸೆಳೆಯಲು ಮುಂದಾಗಿದ್ದಾರೆ. ಹಾಲಿ ಹಾಗೂ ಮಾಜಿ ಶಾಸಕರಿಬ್ಬರೂ ಸಹ ಪೈಪೋಟಿಗೆ ಬಿದ್ದವರಂತೆ ಮತ ಬೇಟೆಗೆ ಶತಾಯ-ಗತಾಯ ಹೋರಾಟ ಮಾಡುತ್ತಿರುವಂತೆ ಕ್ಷೇತ್ರದಲ್ಲಿ ಭಾಸವಾಗುತ್ತಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap