ನವದೆಹಲಿ:
ಪಟೇಲ್ ಸಮುದಾಯಕ್ಕೆ ಮೀಸಲಾತಿ ನೀಡುವಂತೆ ಒತ್ತಾಯಿಸುವ ಮೂಲಕ ಪ್ರಸಿದ್ಧಿ ಪಡೆದಿದ್ದ ಪಾಟೀದಾರ್ ಅನಾಮತ್ ಆಂದೋಲನ ಸಮಿತಿಯ ಮುಖಂಡ ಹಾರ್ದಿಕ್ ಪಟೇಲ್ ತಮ್ಮ ಬಾಲ್ಯದ ಗೆಳತಿಯ ಜೊತೆ ಭಾನುವಾರ ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದಾರೆ.
ಗುಜರಾತ್ ನ ಸುರೇಂದ್ರ ನಗರ್ ನಲ್ಲಿ ನಡೆದ ಸರಳ ವಿವಾಹ ಸಮಾರಂಭದಲ್ಲಿ ಹಾರ್ದಿಕ್ ಪಟೇಲ್ ತಮ್ಮ ಬಾಲ್ಯದ ಗೆಳತಿ ಕಿಂಜಲ್ ಪರಿಖ್ ಅವರನ್ನು ಅತ್ಯಂತ ನಿಕಟ ಸ್ನೇಹಿತರು-ಕುಟುಂಬ ಸದಸ್ಯರ ಸಮ್ಮುಖದಲ್ಲಿ ವಿವಾಹವಾಗಿದ್ದಾರೆ.

ಇಬ್ಬರೂ ಸಹ ಅಹ್ಮದಾಬಾದ್ ಜಿಲ್ಲೆಯ ಚಂದನ್ ನಗರಿಯವರಾಗಿದ್ದು ಕಿಂಜಲ್ ಪರಿಖ್ ಪದವೀಧರೆಯಾಗಿದ್ದು, ಈಗ ಕಾನೂನು ಅಭ್ಯಾಸ ಮಾಡುತ್ತಿದ್ದಾರೆ.
“ಇದು ನನ್ನ ಕುಟುಂಬ ಜೀವನದ ಎರಡನೇ ಇನ್ನಿಂಗ್ಸ್ ನ ಆರಂಭ. ನಾವಿಬ್ಬರೂ ದೇಶದ ನವನಿರ್ಮಾಣಕ್ಕೆ ಒಟ್ಟಾಗಿಯೇ ದುಡಿವ ಸಂಕಲ್ಪ ಮಾಡಿದ್ದೇವೆ. ನಾವಿಬ್ಬರೂ ನಮ್ಮ ಕೊನೇ ಉಸಿರಿರುವವರೆಗೂ ಸತ್ಯಕ್ಕಾಗಿ, ಜನರಿಗಾಗಿ ಮತ್ತು ಸಮಾನತೆಯ ಹಕ್ಕಿಗಾಗಿ ಹೋರಾಡುತ್ತೇವೆ” ಎಂದು ಮದುವೆಯ ಸಂದರ್ಭದಲ್ಲಿ ಪಟೇಲ್ ಹೇಳಿದರು.
ಕೇವಲ 100 ಜನರನ್ನಷ್ಟೇ ತಮ್ಮ ಮದುವೆಗೆ ಆಮಂತ್ರಿಸಿದ್ದು, ತೀರಾ ಸರಳವಾಗಿಯೇ ವಿವಾಹವಾಗಬೇಕು ಎಂಬುದು 25 ವರ್ಷ ವಯಸ್ಸಿನ ಹಾರ್ದಿಕ್ ಪಟೇಲ್ ಆಸೆಯಾಗಿತ್ತು ಎನ್ನಲಾಗಿದೆ.
