ರಾಜಿಯಲ್ಲಿ ಇಬ್ಬರು ಕಕ್ಷಿದಾರರಿಗೂ ನ್ಯಾಯ ಲಭ್ಯ

 ಪಾವಗಡ :

      ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸೂಚನೆಯಂತೆ, ಪಾವಗಡದ ನ್ಯಾಯಾಲಯದಲ್ಲಿ ಇತ್ಯರ್ಥವಾಗದಿರುವ ಮತ್ತು ಚಾಲ್ತಿ ಇರುವ ಪ್ರಕರಣಗಳ ಇತ್ಯರ್ಥಕ್ಕಾಗಿ ಬರುವ ಆಗಸ್ಟ್ 14 ರಂದು ಲೋಕ ಅದಾಲತ್ ಏರ್ಪಡಿಸಿದೆ. ಕಕ್ಷಿದಾರರು ತಮ್ಮ ಪ್ರಕರಣಗಳನ್ನು ಸುಲಭವಾಗಿ ರಾಜಿ ಮಾಡಿಕೊಂಡು ಇತ್ಯರ್ಥ ಪಡಿಸಿಕೊಳ್ಳಬಹುದು ಎಂದು ಪಾವಗಡದ ಹಿರಿಯ ಶ್ರೇಣಿ ನ್ಯಾಯಾಧೀಶರಾದ ಎಂ.ಎಸ್, ಹರಿಣಿ ಮತ್ತು ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಜಗದೀಶ್ ಬಿಸಿರೊಟ್ಟಿ ಹಾಗೂ ಅಧಿಕ ಸಿವಿಲ್ ನ್ಯಾಯಾಧೀಶರಾದ ಎಚ್.ಕೆ. ಅಖಿಲಾ ತಿಳಿಸಿದ್ದಾರೆ.

      ಬುಧವಾರ ಪಟ್ಟಣದ ನ್ಯಾಯಾಲಯದ ಆವರಣದಲ್ಲಿನ  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರುಗಳು, ಕಳೆದ 3 ತಿಂಗಳಿಂದ ಕೋವಿಡ್ ಅಲೆಯಿಂದ ಪಾವಗಡದ ಮೂರು ನ್ಯಾಯಾಲಯಗಳಲ್ಲಿ 3678 ಪ್ರಕರಣಗಳು ಬಾಕಿ ಇವೆ. ಕಳೆದೆರಡು ವರ್ಷಗಳ ಲೊಕ ಅದಾಲತ್‍ನಲ್ಲಿ 5900 ಪ್ರಕರಣಗಳಲ್ಲಿ ಕಕ್ಷಿದಾರರು ರಾಜಿ ಮಾಡಿಕೊಂಡಿದ್ದಾರೆ. ಆದ್ದರಿಂದ ಪ್ರಕರಣಗಳನ್ನು ಬೇಗ ಇತ್ಯರ್ಥಪಡಿಸಿಕೊಳ್ಳಬಹುದಾಗಿದೆ. ಲೋಕ ಅದಾಲತ್‍ನಲ್ಲಿ ಜೀವನಾಂಶ ಪ್ರಕರಣಗಳು, ಕ್ರಿಮಿನಲ್, ಅಪಘಾತ ನಷ್ಟ ಪರಿಹಾರ, ಚೆಕ್ ಬೌನ್ಸ್, ಜನನ ಪ್ರಮಾಣ ಪತ್ರ, ಹಣ ವಸೂಲಿ, ಕೃಷಿ ಸಾಲ, ಪೋಲೀಸ್ ಇಲಾಖೆಯ, ಬ್ಯಾಂಕುಗಳಿಗೆ ಸಂಬಂಧಪಟ್ಟ ಇತರೆ ಪ್ರಕರಣಗಳನ್ನು ರಾಜಿ ಮೂಲಕ ಇತ್ಯರ್ಥ ಪಡಿಸಿಕೊಂಡು ಹಣ ಮತ್ತು ಸಮಯ ಉಳಿಸಿಕೊಳ್ಳಬಹುದು ಎಂದು ಕಕ್ಷಕಿದಾರರಿಗೆ ಕಿವಿ ಮಾತು ಹೇಳಿದರು. ಲೋಕ ಅದಾಲತ್‍ನಲ್ಲಿ ಇತ್ಯರ್ಥಪಡಿಸಿಕೊಂಡ ನಂತರ ಮುಂದಿನ ಅಪೀಲ್‍ಗೆ ಹೋಗಲು ಅವಕಾಶ ಇರುವುದಿಲ್ಲ. ಒಂದು ವೇಳೆ ಪ್ರಕರಣಗಳಲ್ಲಿ ತೀರ್ಪು ಕೊಟ್ಟರೆ ಒಬ್ಬರಿಗೆ ಮಾತ್ರ ನ್ಯಾಯ ಸಿಗುತ್ತದೆ. ರಾಜಿ ಮಾಡಿಕೊಂಡಲ್ಲಿ ಇಬ್ಬರಿಗೂ ನ್ಯಾಯ ಸಿಗುತ್ತದೆ. ಆದ್ದರಿಂದ ಇತ್ಯರ್ಥ ಪಡಿಸಿಕೊಳ್ಳುವ ಕಕ್ಷಿದಾರರು ತಮ್ಮ ವಕೀಲರ ಬಳಿ ನೋಂದಾಯಿಸಬೇಕು ಎಂದು ತಿಳಿಸಿದರು.

     ಗೋಷ್ಠಿಯಲ್ಲಿ ಸರ್ಕಾರಿ ಅಭಿಯೋಜಕರಾದ ಜಿ.ಎಚ್. ಸಣ್ಣೀರಪ್ಪ, ಕಾನೂನು ಸೇವಾ ಪ್ರಾಧಿಕಾರದ ನಿರ್ದೇಶಕ ಜಿ.ಎಸ್. ವೆಂಕಟೇಶ್ ಮತ್ತು ನ್ಯಾಯಾಲಯದ ಸಿಬ್ಬಂದಿ ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link