ವೈ.ಎನ್.ಹೊಸಕೋಟೆ :

ಒಂದು ವರ್ಷದೊಳಗೆ ತುಂಗಭದ್ರಾ ನದಿ ಮೂಲದ ಕುಡಿಯುವ ನೀರನ್ನು ತಾಲ್ಲೂಕಿನ ಜನತೆಗೆ ನೀಡಲಾಗುವುದು ಎಂದು ಶಾಸಕ ವೆಂಕಟರಮಣಪ್ಪ ತಿಳಿಸಿದರು.
ಶುಕ್ರವಾರ ಗ್ರಾಮದ ಹಳೆಯ ಸರ್ಕಾರಿ ಆಸ್ಪತ್ರೆಯ ಹಿಂಭಾಗದಲ್ಲಿ ನೀರು ಶೇಖರಣಾ ಘಟಕದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ಈಗಾಗಲೆ ತುಂಗಭದ್ರಾ ಕುಡಿಯುವ ನೀರಿನ ಶೇಖರಣೆಯ ಘಟಕಗಳ ಕಾಮಗಾರಿ ಪ್ರಗತಿಯಲ್ಲಿದ್ದು, ಕೆಲವೆಡೆ ಪೂರ್ಣಗೊಂಡಿದೆ. ಉಳಿದಿರುವುವು ಶೀಘ್ರದಲ್ಲೆ ಪೂರ್ಣಗೊಳ್ಳಲಿವೆ. ಹಾಗಾಗಿ ಇನ್ನೊಂದು ವರ್ಷದೊಳಗೆ ತಾಲ್ಲೂಕಿನ ಎಲ್ಲಾ ಜನತೆ ತುಂಗಭದ್ರಾ ನೀರನ್ನು ಕುಡಿಯಬಹುದು. ಇಂದು ಭೂಮಿ ಪೂಜೆ ಮಾಡಲಾಗುತ್ತಿರುವ ನೀರು ಸಂಗ್ರಹ ಘಟಕವು 3,50,000 ಲೀಟರ್ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿದೆ. ಇದರ ನಿರ್ಮಾಣಕ್ಕಾಗಿ 48 ಲಕ್ಷ ರೂ.ಗಳನ್ನು ವ್ಯಯ ಮಾಡಲಾಗುತ್ತಿದೆ. ಇದು ಮುಂದಿನ 4 ತಿಂಗಳೊಳಗಾಗಿ ಪೂರ್ಣಗೊಳ್ಳಲಿದೆ ಎಂದರು.
ತಾಲ್ಲೂಕಿನಲ್ಲಿ ವ್ಯವಸಾಯದ ಪ್ರಗತಿಗಾಗಿ ಭದ್ರಾ ಮೇಲ್ದಂಡೆ ಯೋಜನೆ, ಎತ್ತಿನಹೊಳೆ ಯೋಜನೆಗಳ ಕಾಮಗಾರಿಗಳು ನಡೆಯುತ್ತಿದ್ದು, ಶೀಘ್ರದಲ್ಲೇ ತಾಲ್ಲೂಕಿನ ಎಲ್ಲಾ ಕೆರೆಗಳಿಗೆ ನೀರು ಹರಿಸಲಾಗುವುದು. ಈಗಾಗಲೇ ರೈಲ್ವೆ ಕಾಮಗಾರಿ ನಡೆಯುತ್ತಿದ್ದು, ಶೇ. 80 ರಷ್ಟು ಕಾಮಗಾರಿ ಆಗಿದ್ದು, ಮುಂದಿನ ಒಂದು ವರ್ಷದೊಳಗೆ ಪೂರ್ಣಗೊಳ್ಳಲಿದೆ. ತಾಲ್ಲೂಕಿನಲ್ಲಿ 100 ಕಿ.ಮೀ ಜಿಲ್ಲಾಪಂಚಾಯಿತಿ ರಸ್ತೆಗಳನ್ನು ಮೇಲ್ದರ್ಜೆಗೆ ಏರಿಸಲಾಗಿದೆ. ಗ್ರಾಮೀಣ ರಸ್ತೆಗಳ ದುರಸ್ತಿ ಕಾರ್ಯ ನಡೆಯುತ್ತಿದೆ. ಹೀಗೆ ತಾಲ್ಲೂಕಿನಲ್ಲಿ ಶಾಶ್ವತ ಕಾರ್ಯಗಳು ಭರದಿಂದ ಸಾಗುತ್ತಿದ್ದು, ನನ್ನ ಮೇಲೆ ನಂಬಿಕೆ ಇಟ್ಟು ಮತ ನೀಡಿರುವ ಜನತೆಯ ಬಹುದಿನಗಳ ಈ ಬೇಡಿಕೆಗಳನ್ನು ಈಡೇರಿಸಲು ಶ್ರಮಿಸುತ್ತಿದ್ದೇನೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಗ್ರಾಮಪಂಚಾಯಿತಿ ವತಿಯಿಂದ ಶಾಸಕ ವೆಂಕಟರವಣಪ್ಪರವನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಮಪಂಚಾಯಿತಿ ಅಧ್ಯಕ್ಷೆ ಗಂಗಮ್ಮನಾಗರಾಜ್, ಉಪಾಧ್ಯಕ್ಷ ಪಿ.ಎ.ಶ್ರೀನಿವಾಸ, ಜಿ.ಪಂ ಸದಸ್ಯೆ ಗೌರಮ್ಮತಿಮ್ಮಪ್ಪ, ತಾ.ಪಂ ಸದಸ್ಯ ಪಿ.ಸಿ.ನಾಗರಾಜು, ಎಇಇ ಹನುಮಂತರಾಯಪ್ಪ, ಎಇ ಬಸವಲಿಂಗಪ್ಪ, ಗ್ರಾಮಪಂಚಾಯಿತಿ ಸದಸ್ಯರಾದ ತಿಪ್ಪೇಸ್ವಾಮಿ, ಹೆಚ್.ಪಿ.ಕೃಷ್ಣಪ್ಪ, ಶ್ರೀನಿವಾಸ, ಗೋವಿಂದಪ್ಪ, ಹನುಮಂತರಾಯ, ಜಾಫರ್, ಅಪಲೇಪಲ್ಲಿ ಮೆಹಬೂಬ್, ಮುಖಂಡರಾದ ಷಂಷುದ್ದೀನ್, ಎನ್.ಆರ್.ಅಶ್ವತ್ಥ್, ಪಿ.ಸಿ.ಗೋಪಿ, ಗೋಪಾಲ, ಟಿ.ಆರ್.ವಿ.ಪ್ರಸಾದ್, ಎಚ್.ಆನಂದ, ಶ್ರೀನಿವಾಸಾಚಾರಿ. ಆರ್.ಡಿ.ರೊಪ್ಪ ಆನಂದ ಮತ್ತು ಮೆಗಾ ನಿರ್ಮಾಣ ಸಂಸ್ಥೆಯ ಎಂಜನಿಯರ್ ಮತ್ತು ಸಿಬ್ಬಂದಿ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








