ಪಾವಗಡ :

2015ರಲ್ಲಿ ಕೆಪಿಟಿಸಿಎಲ್ ಟವರ್ ನಿರ್ಮಾಣಕ್ಕೆ ಭೂಮಿ ಕೊಟ್ಟ ರೈತರಿಗೆ ಇಂದಿಗೂ ಪರಿಹಾರ ನೀಡದೆ, ಏಕಾಏಕಿ ವಿದ್ಯುತ್ ಟವರ್ ನಿರ್ಮಾಣಕ್ಕೆ ಮುಂದಾದ ಗುತ್ತಿಗೆದಾರರ ಕ್ರಮವನ್ನು ಖಂಡಿಸಿ ರೈತರು ವಿಷದ ಬಾಟಲಿ ಹಿಡಿದು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದ ಘಟನೆ ತಾಲ್ಲೂಕಿನ ಪಳವಳ್ಳಿ ಗ್ರಾಮದಲ್ಲಿ ಬುಧವಾರ ನಡೆದಿದೆ.
ತಾಲ್ಲೂಕಿನಲ್ಲಿ ಸೋಲಾರ್ ನಿರ್ಮಾಣದ ನಂತರ ತಾಲ್ಲೂಕಿನಾದ್ಯಂತ ವಿದ್ಯುತ್ ಪೂರೈಕೆಗಾಗಿ ಕೆಪಿಟಿಸಿಎಲ್ ವತಿಯಿಂದ ಬೃಹತ್ ಟವರ್‍ಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ರೈತರ ಜಮೀನಿನಲ್ಲಿ ಹಾದುಹೋಗುವ ಟವರ್‍ಗಳ ಜಾಗವನ್ನು ಗುರುತಿಸಿ ಕಾನೂನಾತ್ಮಕವಾಗಿ ರೈತರಿಂದ ಭೂಮಿ ಪಡೆಯದೆ, ಪರಿಹಾರವನ್ನೂ ನೀಡದೆ ಕಾಮಗಾರಿ ಆರಂಭಿಸುತ್ತಿರುವ ಹಿನ್ನೆಲೆಯಲ್ಲಿ ಕೆರಳಿದ ರೈತರು ಕಾಮಗಾರಿ ತಡೆದು ಭೂಮಿಯ ಇಂದಿನ ಮಾರುಕಟ್ಟೆ ದರದಂತೆ ಪರಿಹಾರ ಪಾವತಿಸಿ ಕಾಮಗಾರಿ ಆರಂಭಿಸುವಂತೆ ಪದೇ ಪದೇ ಮನವಿ ಮಾಡಿದರೂ ಪೋಲಿಸ್ ಸರ್ಪಗಾವಲಿನಲ್ಲಿ ಗುತ್ತಿಗೆದಾರರು ಕಾಮಗಾರಿ ಮಾಡಲು ಮುಂದಾದ ಹಿನ್ನೆಲೆಯಲ್ಲಿ ಸೂಕ್ತ ಪರಿಹಾರ ನೀಡದೆ ಕಾಮಗಾರಿ ಮಾಡಲು ಮುಂದಾದರೆ ಆತ್ಮಹತ್ಯೆಗೆ ನಾವು ಸಿದ್ದ ಎಂದು ಗುತ್ತಿಗೆದಾರರಿಗೆ ಹಾಗೂ ಪೋಲಿಸ್ ಇಲಾಖೆಗೆ ಎಚ್ಚರಿಕೆ ನೀಡಿದ ಘಟನೆ ನಡೆಯಿತು.
ಪಳವಳ್ಳಿ ಗ್ರಾಮದ ಪಿ.ವೈ.ಶ್ರೀನಿವಾಸ 58 ಗುಂಟೆ, ಸುಶೀಲಮ್ಮ 39 ಗುಂಟೆ, ಸ.ನಂ.275/2ರಲ್ಲಿ ನರಸಿಂಹಪ್ಪ ಜಮೀನಿನಲ್ಲಿ 48 ಗುಂಟೆ, ಸ.ನಂ.278ರಲ್ಲಿ 20 ಗುಂಟೆ, ಓಬಳಮ್ಮ ಜಮೀನಿನಲ್ಲಿ 27 ಗುಂಟೆ, ರಾಮು 23 ಗುಂಟೆ, ಕೆ.ಎನ್.ನರಸಿಂಹಮೂರ್ತಿ 9 ಗುಂಟೆ ಹೀಗೆ ರೈತರ ಜಮೀನನ್ನು ಟವರ್ ನಿರ್ಮಾಣಕ್ಕೆ ಗುರುತಿಸಿದ್ದು, 4 ವರ್ಷಗಳ ಹಿಂದೆ 1 ಗುಂಟೆಗೆ 5 ಸಾವಿರ ಕಾರಿಡಾರ್‍ಗೆ 44 ಸಾವಿರದಂತೆ ನಿಗದಿಪಡಿಸಲಾಗಿತ್ತು. ಆದರೆ 4 ವರ್ಷಗಳು ಕಳೆದರೂ ಕಾನೂನಾತ್ಮಕವಾಗಿ ಭೂಸ್ವಾಧಿನ ಮಾಡಿಕೊಳ್ಳದೆ, ಪರಿಹಾರವನ್ನೂ ನೀಡದೆ, ಅಂದಿನ ದರದಲ್ಲೇ ಇಂದು ಟವರ್ ನಿರ್ಮಾಣಕ್ಕೆ ನಮ್ಮ ವಿರೋಧವಿದೆ. ಇಂದು ಭೂಮಿಯ ಬೆಲೆ ಹೆಚ್ಚಾಗಿದ್ದು, ಇಂದಿನ ದರದಂತೆ ಪರಿಹಾರ ನೀಡಬೇಕು. ಗುತ್ತಿಗೆದಾರ ರವಿ ರೈತರಿಗೆ ಸಿಗುತ್ತಿಲ್ಲ, ಇತರೆ ರೈತರ ಜಮೀನಿನಲ್ಲಿ ಕಾಮಗಾರಿ ಮಾಡಿ ಹಣ ನೀಡದೆ, ಮೊಬೈಲ್ ಕರೆ ಸ್ವೀಕರಿಸಿದಂತೆ ಓಡಾಡುತ್ತಿದ್ದು, ಇವರ ಮೇಲೆ ನಮಗೆ ನಂಬಿಕೆ ಇಲ್ಲ. ಈ ಕ್ಷಣ ಇಂದಿನ ದರದಂತೆ ಪರಿಹಾರ ನೀಡಿ ಕಾಮಗಾರಿ ಮಾಡಬೇಕು ಎಂದು ರೈತ ಪಿ.ವೈ.ಶ್ರೀನಿವಾಸ್ ಒತ್ತಾಯಿಸಿದರು.
ರೈತ ಮಹಿಳೆ ಸುಶೀಲಮ್ಮ ಮಾತನಾಡಿ, ಗುತ್ತಿಗೆದಾರರ ಮೇಲೆ ನಮಗೆ ನಂಬಿಕೆ ಇಲ್ಲ. ಈ ಭೂಮಿಯಿಂದ ನಾವು ಜೀವನ ನಡೆಸುತಿದ್ದೇವೆ. ಪರಿಹಾರವನ್ನು ಒಂದೇ ಬಾರಿ ಕೊಡಬೇಕು. ನಾವು ಬಾಡಿಗೆ ಹಾಗೂ ಗುತ್ತಿಗೆಗೆ ಭೂಮಿ ನೀಡುತ್ತಿಲ್ಲ. ಇದರಿಂದ ಪೆನ್ಷನ್ ರೂಪದಲ್ಲಿ ನಮಗೇನಾದರು ಹಣ ಸೀಗುತದ್ದೆಯೆ? ಇಲ್ಲವಾದಲ್ಲಿ ನಮಗೆ ನ್ಯಾಯಯುತವಾಗಿ ಇಂದಿನ ಮಾರುಕಟ್ಟೆ ದರದಂತೆ ಪರಿಹಾರ ನೀಡಿ, ಕಾಮಗಾರಿ ಮಾಡಿ. ಇಲ್ಲವಾದಲ್ಲಿ ನಮ್ಮ ಭೂಮಿಗಾಗಿ ನಮ್ಮ ಜೀವವೇ ಹೋದರೂ ಕಾಮಗಾರಿ ಮಾಡಲು ಬಿಡುವುದಿಲ್ಲ ಎಂದು ಆವೇದನೆ ತೋಡಿಕೊಂಡರು.
ಸ್ಥಳಕ್ಕೆ ತಹಸೀಲ್ದಾರ್ ಕೆ.ಆರ್.ನಾಗರಾಜು ಭೇಟಿ :

ಜಿಲ್ಲಾಧಿಕಾರಿಗಳು ಪೋಲಿಸ್ ಭದ್ರತೆ ನೀಡಿ ಕಾಮಗಾರಿ ಮಾಡುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಕೆಲಸಕ್ಕೆ ಬಿಡದ ರೈತರನ್ನು ತಹಸೀಲ್ದಾರ್ ಭೇಟಿ ಮಾಡಿ, ಗುತ್ತಿಗೆದಾರರು ಹಾಗೂ ರೈತರ ಜೊತೆ ಮಾತುಕತೆ ನಡೆಸಿ ಹಿಂದೆ ಆದ ಸಮಸ್ಯೆಗಳನ್ನ ತಕ್ಷಣ ಬಗೆಹರಿಸಿ ಪರಿಹಾರವನ್ನು ಹೆಚ್ಚಿಸಿ ತಕ್ಷಣವೆ ರೈತರ ಖಾತೆಗೆ ಹಣ ಪಾವತಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದರು. ಪರಿಹಾರ ಇತ್ತೀಚಿನ ಮಾರುಕಟ್ಟೆ ದರದಂತೆ ನೀಡುವಂತೆ ರೈತರು ಒತ್ತಾಯಿಸಿದ ಕಾರಣ ಸಂಬಂಧಪಟ್ಟವರೊಡನೆ ಮಾತನಾಡಿ, ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದರು. ತಕ್ಷಣ ಪರಿಹಾರ ನೀಡುವವರೆಗೂ ಕೆಲಸ ಮಾಡಲು ಬಿಡುವುದಿಲ್ಲ ಎಂದು ರೈತರು ಪಟ್ಟು ಹಿಡಿದರು.
ಜಿಲ್ಲಾಧಿಕಾರಿಗಳ ಆದೇಶಕ್ಕೆ ಕೆರಳಿದ ರೈತರು :
ನೂರಾರು ಪೋಲಿಸರನ್ನು ಸ್ಥಳಕ್ಕೆ ಕಳುಹಿಸಿ ರೈತರ ಮೇಲೆ ದೌರ್ಜನ್ಯ ನಡೆಸಿ, ಬಲವಂತವಾಗಿ ರೈತರ ಭೂಮಿಯನ್ನು ವಶಪಡಿಸಿಕೊಳ್ಳಲಾಗುತ್ತಿದೆ. ನಮ್ಮ ಭೂಮಿ ನಿಮಗೆ ಬೇಕೆ ಬೇಕು ಎಂದಲ್ಲಿ ನಮಗೆ ವಿಷ ನೀಡಿ, ಭೂಮಿ ವಶಕ್ಕೆ ಪಡೆಯಿರಿ ಎಂದು ಜಿಲ್ಲಾಧಿಕಾರಿಗಳ ನಡೆಯ ಬಗ್ಗೆ ರೈತರು ಆಕ್ರೋಶ ವ್ಯಕ್ತ ಪಡಿಸಿದರು.
ಸ್ಥಳದಲ್ಲಿ ರೈತರು ಹಾಗೂ ಪೋಲೀಸರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಆದರು ಎಷ್ಟೆ ಪೋಲೀಸರು ಬಂದರೂ ಕಾಮಗಾರಿ ಮಾಡಲು ಬಿಡುವುದಿಲ್ಲ ಎಂದು ರೈತರು ಪಟ್ಟು ಬಿಡದೆ ಕೂತರು.
ಈ ಸಂದರ್ಭದಲ್ಲಿ ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್, ಭೂಮಿ ಕಳೆದು ಕೊಳ್ಳುತ್ತಿರುವ ರೈತರುಗಳಾದ ನರಸಿಂಹಪ್ಪ, ಓಬಳೇಶ, ಮೂರ್ತಿ, ಓಬಳಮ್ಮ, ರಾಮು, ಕೆ.ಎನ್.ನರಸಿಂಹಮೂರ್ತಿ ಇತರೆ ರೈತರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








