ಪಾವಗಡ :
ರಾಜ್ಯದಲ್ಲಿ ಕೋವಿಡ್ ಎರಡನೆ ಅಲೆ ಹೆಚ್ಚಾಗಿದ್ದು, ರಾಜ್ಯದಲ್ಲಿ ದಿನದಿಂದ ದಿನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಕೋವಿಡ್‍ಗೆ ತುತ್ತಾಗುತ್ತಿದ್ದಾರೆ. ಸರ್ಕಾರದ ಆದೇಶದಂತೆ ತುಮಕೂರು ಜಿಲ್ಲೆಯಲ್ಲಿ ಕೊರೋನಾ ಸೋಂಕಿತರನ್ನು ನಿಯಂತ್ರಣ ಮಾಡುವ ದೃಷ್ಟಿಯಿಂದ ಜಿಲ್ಲಾಧಿಕಾರಿಗಳು ತಾಲ್ಲೂಕುವಾರು ಅಧಿಕಾರಿಗಳ ಸಭೆ ನಡೆಸಿ, ಸಾರ್ವಜನಿಕ ಸ್ಥಳಗಳಲ್ಲಿ ಜನ ಸಂದಣಿ ಸೇರದಂತೆ ಎಚ್ಚರ ವಹಿಸ ಬೇಕೆಂದು ತಿಳಿಸಿದ್ದಾರೆ.
ತಾಲ್ಲೂಕಿನ ಜವಾಬ್ದಾರಿ ತಹಸೀಲ್ದಾರ್ ಹಾಗೂ ಪುರಸಭೆ ಅಧಿಕಾರಿಗಳು, ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿಗೆ ವಹಿಸಿದ್ದಾರೆ. ಕಟ್ಟುನಿಟ್ಟಾಗಿ ಸಾರ್ವಜನಿಕರ ಸ್ಥಳಗಳಲ್ಲಿ ಮಾಸ್ಕ್ ಧರಿಸಿ, ವ್ಯಕ್ತಿಗತ ಅಂತರ ಕಾಪಾಡಲು ಅರಿವು ಮೂಡಿಸುವ ಕಾರ್ಯ ಕೈಗೊಳ್ಳಲು ತಿಳಿಸಿದ್ದರೂ ಸಹ ಎಚ್ಚರ ವಹಿಸದೆ ತಾಲ್ಲೂಕು ಆಡಳಿತ ನಿರ್ಲಕ್ಷ್ಯ ಭಾವನೆ ತೋರಿದೆ ಎಂದು ಪ್ರಜ್ಞಾವಂತ ನಾಗರಿಕರು ಆರೋಪಿಸಿದ್ದಾರೆ.
ತಾಲ್ಲೂಕಿನಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದರೂ, ಯಾವುದೇ ಭಯ ಭೀತಿಯಿಲ್ಲದೆ ಸಾರ್ವಜನಿಕರು ಓಡಾಡುತ್ತಿದ್ದಾರೆ. ಈ ನಿರ್ಲಕ್ಷ್ಯಕ್ಕೆ ತಾಲ್ಲೂಕು ಆಡಳಿತವೆ ಕಾರಣವಾಗಿದೆ. ಪಟ್ಟಣ ಹಾಗೂ ಗ್ರಾಪಂ ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳಲ್ಲಿ ಕೊರೊನಾ ವೈರಸ್ ಬಗ್ಗೆ ಅರಿವು ಮೂಡಿಸುತ್ತಿಲ್ಲ. ಪ್ರತಿದಿನ ಗ್ರಾಮಾಂತರದಿಂದ ಪಟ್ಟಣಕ್ಕೆ ಜನತೆ ಬರುತ್ತಿರುತ್ತಾರೆ. ಕಿರಾಣಿ ಹಾಗೂ ಶಾಪ್‍ಗಳ ಮಾಲೀಕರು ಮಾಸ್ಕ್ ಧರಿಸದೆ ಇರುವ ವ್ಯಕ್ತಿಗಳಿಗೆ ಯಾವುದೇ ವಸ್ತು ನೀಡಬಾರದೆಂದು ಅಧಿಕಾರಿಗಳು ಕಟ್ಟು ನಿಟ್ಟಾಗಿ ಆದೇಶ ನೀಡಿದರೆ ಮಾತ್ರ ಕೊರೋನಾ ಸೋಂಕು ನಿಯಂತ್ರಣ ಮಾಡಬಹುದೆಂಬುದು ಸಾರ್ವಜನಿಕರ ಮಾತಾಗಿದೆ.
ಪುರಸಭೆ ಮತ್ತು ತಾಲ್ಲೂಕು ಆಡಳಿತ ಮತ್ತು ವರ್ತಕರು ಮತ್ತು ಅಂಗಡಿ ಮಾಲೀಕರಿಗೆ ಮಾಸ್ಕ್ ಇಲ್ಲದಿದ್ದರೆ ಯಾವುದೇ ಸರಕು ಮತ್ತು ವಸ್ತುಗಳನ್ನು ನೀಡಬಾರದೆಂದು ತಿಳಿಸಲು ಮಾರ್ಗದರ್ಶನ ನೀಡದ ಕಾರಣ ಗ್ರಾಹಕರು ಮಾಸ್ಕ್ ಧರಿಸದೆ ಹಾಗೂ ಅಂತರ ಕಾಪಾಡದೆ ಅಂಗಡಿಗಳಿಗೆ ಹೋಗಿ ವ್ಯಾಪಾರ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ತಿಳಿಸಿದರು.
ಸೋಂಕಿತರು ಹೆಚ್ಚಾಗಲು ತಾಲ್ಲೂಕು ಆಡಳಿತವೆ ಕಾರಣ
ಕೊರೊನಾ ಸೋಂಕಿತರು ಹೆಚ್ಚಾಗಲು ತಾಲ್ಲೂಕು ಆಡಳಿತವೆ ಕಾರಣವಾಗಿದ್ದು, ತಹಸೀಲ್ದಾರ್ ಮತ್ತು ಪುರಸಭೆ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಪ್ರಚಾರವಿಲ್ಲ. ಜನ ಸೇರುವ ಸ್ಥಳಗಳಾದ ಸಂತೆ, ಚಿತ್ರ ಮಂದಿರ, ಹೂವಿನ ಮಾರುಕಟ್ಟೆ, ಕುರಿಸಂತೆ, ಮದುವೆ ಕಾರ್ಯಕ್ರಮಗಳು ನಡೆಯುವ ಸ್ಥಳಗಳನ್ನು ಗುರ್ತಿಸಿ ಇಂತಹ ಕಡೆ ಕಟ್ಟು ನಿಟ್ಟಾಗಿ ಜನರಿಗೆ ಎಚ್ಚರಿಕೆ ನೀಡಿದರೆ ಮಾತ್ರ ಕೋವಿಡ್ ತಡೆಗಟ್ಟಲು ಸಾಧ್ಯವಾಗಬಹುದೆಂದು ನಾಗರಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅರಿವು ಮೂಡಿಸಲು ಸರ್ಕಾರದಿಂದ ಬಂದ ಅನುದಾನ ಏನಾಯಿತು?
ತಾಲ್ಲೂಕು ಆಡಳಿತಕ್ಕೆ ಮತ್ತು ಪರಸಭೆ ಮತ್ತು ಗ್ರಾಪಂಗಳಿಗೆ ಸರ್ಕಾರ ಕೋವಿಡ್ ಸೋಂಕು ನಿಯಂತ್ರಿಸಲು ವಿವಿಧ ಯೊಜನೆಗಳನ್ನು ರೂಪಿಸಿ ಸ್ವಚ್ಛತೆ, ಚರಂಡಿ ದುರ್ನಾತ ಬೀರದಂತೆ ಬ್ಲೀಚಿಂಗ್ ಪೌಡರ್ ಸಿಂಪಡಿಸುವುದು, ಜಾಗೃತಿ ಮೂಡಿಸುವುದು, ಹಲವಾರು ಕಾರ್ಯಕ್ರಮಗಳಿಗೆ ಇಂತಿಷ್ಟು ಎಂದು ಹಣ ನೀಡಿದ್ದರೂ ಪ್ರಯೋಜನವಿಲ್ಲದಂತೆ ಕಾಣುತ್ತಿದೆ.
ಆರೋಗ್ಯ ಇಲಾಖೆ ಸಾರ್ವಜನಿಕ ಆಸ್ವತ್ರೆ ಡಾಕ್ಟರ್‍ಗಳು ಮಾತ್ರ ಕೋವಿಡ್ ಪ್ರಚಾರ ದಿನ ದಿಂದಲೂ ರೋಗಿಗಳಿಗೆ ಎಚ್ಚರಿಸುತ್ತ್ತಲೆ ಸಾರ್ವಜನಿಕರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಆಶಾ ಕಾರ್ಯಕರ್ತರ ಸಹಾಯದೊಂದಿಗೆ ಕೊರೊನಾ ವೈರಸ್ ಬಗ್ಗೆ ಅರಿವು ಮೂಡಿಸಿ ಸ್ವಚ್ಛತೆ ಕಾಪಾಡಿಕೊಂಡು ಬರುತ್ತಿರುವುದನ್ನು ಕಾಣಬಹುದು. ಅವರು ಗ್ರಾಮೀಣ ಪ್ರದೇಶದಲ್ಲಿ ಸೋಂಕಿತರ ಬಗ್ಗೆ ಗಮನ ಹರಿಸಿ ಸರ್ಕಾರದ ಗಮನಕ್ಕೆ ತರುತ್ತಿದ್ದಾರೆ. ಗ್ರಾಮ ವಾಸ್ತವ್ಯ ಹೂಡಿದ್ದ ಗ್ರಾಮಗಳಲ್ಲಿ ಕೋವಿಡ್ ಅರಿವು ಮೂಡಿಸಿ, ಕೊರೊನಾ ತನಿಖೆ ಹಮ್ಮಿಕೊಂಡು ಸಾರ್ವಜನಿಕರಿಗೆ ತಪಾಸಣೆ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.
ಕೋವಿಡ್ ಪ್ರಾರಂಭದಿಂದ ಹಿಡಿದು ಇದುವರೆಗೂ ಜಿಲ್ಲಾ ಮತ್ತು ತಾಲ್ಲೂಕು ಆರೋಗ್ಯ ಇಲಾಖೆಗಳಿಂದ ಸಕ್ರಿಯವಾಗಿ ಅರಿವು ಮತ್ತು ತಪಾಸಣೆ ಕಾರ್ಯ ನಡೆಸುತ್ತಿದ್ದಾರೆ. ವೈದ್ಯರ ಸೇವೆ ಮಾತ್ರ ಸಾರ್ವಜನಿಕರಿಗೆ ದೊರಕುತ್ತಿದೆ ಎಂದು ಪ್ರಜ್ಞಾವಂತರು ತಿಳಿಸಿದ್ದಾರೆ.
ರಾಜ್ಯ ಹಾಗೂ ಜಿಲ್ಲಾದ್ಯಂತ ವಲಸೆ ಹೋಗಿದ್ದ ಕೂಲಿ ಕಾರ್ಮಿಕರು ಯುಗಾದಿ ಹಬ್ಬದ ಪ್ರಯುಕ್ತ ಭಾನುವಾರದಿಂದ ಹುಟ್ಟೂರಿಗೆ ಬಂದಿದ್ದಾರೆ. ಬೆಂಗಳೂರುನಲ್ಲಿ ಸೋಂಕು ಹೆಚ್ಚಾಗಿದೆ ಎಂಬ ಮಾಹಿತಿ ಇದೆ. ಇಂತಹ ಕಡೆಯಿಂದ ಬಂದ ಕೂಲಿ ಕಾರ್ಮಿಕರು ಮತ್ತು ಕೆಲ ಅಧಿಕಾರಿಗಳು ತಮ್ಮ ಮನೆಗಳನ್ನು ಸೇರಿಕೊಂಡಿದ್ದಾರೆ. ಇಂತಹವರನ್ನು ಆಶಾ ಕಾರ್ಯಕರ್ತರ ಸಹಾಯದೊಂದಿಗೆ ತಕ್ಷಣವೆ ತಪಾಸಣೆ ಕೈಗೊಳ್ಳಬೇಕಾಗಿದೆ.
ತಾಲ್ಲೂಕಿನ ಅಧಿಕಾರಿಗಳು ಮಾಡಿರುವ ಘನ ಕಾರ್ಯವೆಂದರೆ, ಸೋಮವಾರ ಸಂತೆ ನಿಲ್ಲಿಸಿ ಎಂದು ಪ್ರಚಾರ ಮಾಡಿರುವುದು ಬಿಟ್ಟರೆ, ಯಾವುದೇ ಸಾರ್ವಜನಿಕರ ಸ್ಥಳಗಳಲ್ಲಿ ಪರಿಶೀಲನೆ ನಡೆಸಿಲ್ಲ. ಸೋಮವಾರ ಬೆಳಗ್ಗೆ ಹೊಸ ಬಸ್ ನಿಲ್ದಾಣದಲ್ಲಿ ಹೂವು ಮಾರುಕಟ್ಟೆ ನಡೆದು, ವ್ಯಾಪಾರಸ್ಥರು ಮತ್ತು ರೈತರು ಹಾಗೂ ಜನರು ನೂಕು ನುಗ್ಗಲಂತೆ ವ್ಯಾಪಾರ ಮಾಡಿರುವುದು ಗಮನಿಸಬೇಕಾಗಿದೆ.
2020 ಮಾರ್ಚಿ 23 ರಂದು ಲಾಕ್‍ಡೌನ್ ಆಗಿದ್ದಾಗ ಪಾವಗಡ ತಾಲ್ಲೂಕಿನಲ್ಲಿ ಒಬ್ಬ ವ್ಯಕ್ತಿಗೆ ಮಾತ್ರ ಸೋಂಕು ಕಾಣಿಸಿಕೊಂಡಿದ್ದ ಕಾರಣ, ತಾಲ್ಲೂಕಿನ ಜನತೆ ಭಯ ಭೀತರಾಗಿ ಮಾಸ್ಕ್ ಇಲ್ಲದೆ ಹೊರಗಡೆ ಬರುತ್ತಿರಲಿಲ್ಲ. ಬಂದರೂ ಪೋಲೀಸ್ ಒದೆಗೆ ಹೆದರಿ, ದಿಕ್ಕು ತೋಚದೆ ಮನೆಗಳಲ್ಲಿ ಲಾಕ್ ಆಗಿದ್ದುದನ್ನು ನಾವು ಕಂಡಿದ್ದೇವೆ.
2021 ಏಪ್ರಿಲ್ ತಿಂಗಳಿಂದ ಸೋಂಕಿತರ ಸಂಖ್ಯೆ ಹೆಚ್ಚಳದಿಂದ ರಾಜ್ಯದಾದ್ಯಂತ ಲಾಕ್‍ಡೌನ್ ಆಗುವ ನಿರೀಕ್ಷೆ ಇದ್ದರೂ ಸಹ ಸಾರ್ವಜನಿಕರು ಈಗ ಕೇರ್ ಮಾಡುತ್ತಿಲ್ಲ. ಇತ್ತೀಚೆಗೆ ದಿನದಿಂದ ದಿನಕ್ಕೆ ಪಾಸಿಟಿವ್ ಕೇಸ್‍ಗಳು ಹೆಚ್ಚಾದರೂ ಸಹ, ಸಾರ್ವಜನಿಕರು ಇದನ್ನು ಲೆಕ್ಕಿಸದೆ ತಮ್ಮ ದೈನಂದಿನ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಸರ್ಕಾರ ಕೊರೊನಾ ಬಗ್ಗೆ ಎಷ್ಟೆ ಎಚ್ಚರ ಹೇಳಿದರು ನಿರ್ಲಕ್ಷ್ಯ ತೋರಿಸುತ್ತಿರುವುದನ್ನು ನಾವು ಕಾಣಬಹುದು.
ಶೇಕಡ 75 ರಷ್ಟು ಜನ ಮಾಸ್ಕ್ ಹಾಕದೆ ಓಡಾಡುತ್ತಿರುವುದನ್ನು ನೋಡಿದರೆ, ಕೊರೊನಾ ವೈರಸ್ ತಡೆಗಟ್ಟಲು ಹರಸಹಾಸ ಪಡ ಬೇಕಾಗುತ್ತದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ. ಪುರಸಭೆ ಅಧಿಕಾರಿಗಳು ಜಡ್ಡು ಹಿಡಿದಿದ್ದು, ಜನಪ್ರತಿನಿದಿಗಳು ತಮಗೆ ಯಾವುದೇ ಜವಾಬ್ದಾರಿ ಇಲ್ಲ ಎಂಬಂತೆ ಓಡಾಡುತ್ತಿದ್ದಾರೆ. ಅಧಿಕಾರಿಗಳು ಕೊರೊನಾ ಬಗ್ಗೆ ತಲೆಕೆಡಿಸಿಕೊಳ್ಳದೆ ತಮ್ಮ ಕೆಲಸಗಳಲ್ಲಿ ಮಗ್ನರಾಗಿದ್ದಾರೆ. ವಾರ್ಡ್‍ಗಳಲ್ಲಿ ಸಹ ಪ್ರಚಾರ ಕೈಗೊಳ್ಳದೆ ವಾರ್ಡ್‍ಗಳಲ್ಲಿ ಬ್ಲೀಚಿಂಗ್ ಪೌಡರ್, ಫೆನಾಯಿಲ್, ಫಾಗಿಂಗ್ ಮಾಡಿಸದೆ ಇದ್ದಾರೆ ಎಂದು ವಾರ್ಡ್ ಜನತೆ ಆರೋಪಿಸಿದ್ದಾರೆ.
ತಾಲ್ಲೂಕಿನ ಶಾಸಕರು ಮತ್ತು ಜಿಲ್ಲಾ, ತಾಪಂ ಸದಸ್ಯರು ಹಾಗೂ ಗ್ರಾಪಂ ಸದಸ್ಯರುಗಳು ತಮ್ಮ ಕ್ಷೇತ್ರವಾರು ಜನಪ್ರತಿನಿಧಿಗಳು ಕೊರೊನಾ ವೈರಸ್ ಬಗ್ಗೆ ಅರಿವು ಮೂಡಿಸಿ ಸೋಂಕಿತರನ್ನು ನಿಯಂತ್ರಿಸಲು ಶ್ರಮ ವಹಿಸಬೇಕಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ