ತುಮಕೂರು
ಮಹತ್ವದ ಬೆಳವಣಿಗೆಯೊಂದರಲ್ಲಿ ತುಮಕೂರು ಮಹಾನಗರ ಪಾಲಿಕೆಯು ತನ್ನ ಕಚೇರಿಯಲ್ಲಿ ಆಡಳಿತದ ಅನುಕೂಲಕ್ಕಾಗಿ ನಿವೃತ್ತ ನ್ಯಾಯಾಧೀಶರನ್ನು ಒಳಗೊಂಡ “ಕಾನೂನು ಕೋಶ” (ಲೀಗಲ್ ಸೆಲ್) ತೆರೆಯಲು ನಿರ್ಧಾರ ಕೈಗೊಂಡಿದೆ.
ಮೇಯರ್ ಲಲಿತಾ ರವೀಶ್ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ (ಮಾರ್ಚ್ 6) ನಡೆದಿದ್ದ ತುಮಕೂರು ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ (ವಿಷಯ: 38/8-1) ಇಂತಹುದೊಂದು ಪ್ರಮುಖ ನಿರ್ಧಾರಕ್ಕೆ ಸಭೆ ಸಮ್ಮತಿಸಿದೆ.ವಿಷಯ ಪ್ರಸ್ತಾಪಿಸಿದ ಆಯುಕ್ತ ಟಿ.ಭೂಪಾಲನ್ ಅವರು, ಪ್ರಸ್ತುತ ಪಾಲಿಕೆ ವಿರುದ್ಧ ವಿವಿಧ ನ್ಯಾಯಾಲಯಗಳಲ್ಲಿ ಅನೇಕ ಮೊಕದ್ದಮೆಗಳಿವೆ. ಸದರಿ ಪ್ರಕರಣಗಳ ನಿರ್ವಹಣೆಯನ್ನು ಸಮರ್ಪಕಗೊಳಿಸುವ ಸಲುವಾಗಿ ಪ್ರತ್ಯೇಕವಾದ “ಕಾನೂನು ಕೋಶ”ವನ್ನು ರಚಿಸಬೇಕು ಮತ್ತು ಪಾರದರ್ಶಕವಾಗಿ ಕಾರ್ಯನಿರ್ವಹಿಸುವಂತಹ ನಿವೃತ್ತ ನ್ಯಾಯಾಧೀಶರನ್ನು ನಿಯಮಾನುಸಾರ ನೇಮಕ ಮಾಡಬೇಕು ಎಂದು ಹೇಳಿದಾಗ ಸಭೆಯು ಅನುಮೋದನೆ ನೀಡಿದೆ.
ಸರ್ಕಾರಕ್ಕೆ ಪ್ರಸ್ತಾವನೆ
ಸಭೆಯ ಅನುಮೋದನೆ ಲಭಿಸಿರುವ ಹಿನ್ನೆಲೆಯಲ್ಲಿ ಆಯುಕ್ತರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಪಾಲಿಕೆಯಲ್ಲಿ “ಕಾನೂನು ಕೋಶ” ತೆರೆಯಲು ಅನುಮತಿ ನೀಡುವಂತೆ ಕೋರಿದ್ದಾರೆ. ಸರ್ಕಾರದಿಂದ ಅನುಮತಿ ಲಭಿಸಿದ ಒಡನೆಯೇ ಈ ಕುರಿತ ಮುಂದಿನ ಪ್ರಕ್ರಿಯೆ ಆರಂಭವಾಗಲಿದೆ ಎಂದು ಮೂಲಗಳು ಹೇಳಿವೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮತ್ತು ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಈಗಾಗಲೇ ಇಂತಹ “ಕಾನೂನು ಕೋಶ” ಇದ್ದು, ಅದೇ ಮಾದರಿಯಲ್ಲಿ ಇಲ್ಲೂ ರಚಿಸಲು ಉದ್ದೇಶಿಸಲಾಗಿದೆ.
ಪಾಲಿಕೆಯಲ್ಲಿ ಕಾನೂನಿನ ಪ್ರಕಾರ ಓರ್ವ ಕಾನೂನು ಅಧಿಕಾರಿ (ಲೀಗಲ್ ಆಫೀಸರ್) ಮತ್ತು ಓರ್ವ ಸಹಾಯಕ ಕಾನೂನು ಅಧಿಕಾರಿ (ಅಸಿಸ್ಟೆಂಟ್ ಲೀಗಲ್ ಆಫೀಸರ್) ಯನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಬಹುದು. ಕಾನೂನು ಅಧಿಕಾರಿ ಆಗುವವರು ಎಲ್.ಎಲ್.ಎಂ. ವ್ಯಾಸಂಗ ಮಾಡಿದ್ದು, ಹೈಕೋರ್ಟ್ ಅಥವಾ ಬೇರೆ ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರಬೇಕು. ಸಹಾಯಕ ಕಾನೂನು ಅಧಿಕಾರಿಯು ಎಲ್.ಎಲ್.ಎಂ. ಪದವೀಧರರಾಗಿದ್ದು ನ್ಯಾಯವಾದಿಗಳಾಗಿ ಅನುಭವ ಹೊಂದಿರಬೇಕು ಎಂಬಿತ್ಯಾದಿಯಾಗಿ ನಿಯಮಾವಳಿಗಳಿವೆ.
ಕಾನೂನು ಕೋಶ”ವು ಪಾಲಿಕೆಯ ಆಡಳಿತಕ್ಕೆ ಅಗತ್ಯ ಕಾನೂನು ಸಲಹೆ ನೀಡುವುದರ ಜೊತೆಗೆ, ನ್ಯಾಯಾಲಯ ಪ್ರಕರಣಗಳ ನಿರ್ವಹಣೆ ಬಗ್ಗೆ ಗಮನಿಸುತ್ತದೆ. ಇದರಿಂದ ಪಾಲಿಕೆಯು ನ್ಯಾಯಾಲಯ ಪ್ರಕರಣಗಳನ್ನು ಸಮರ್ಪಕವಾಗಿ ನಿರ್ವಹಿಸಬಹುದು ಎಂದು ಮೂಲಗಳು ತಿಳಿಸಿವೆ.
ಚರ್ಚೆಗೊಂಡ ವಿಷಯ
ಇದಕ್ಕೂ ಮೊದಲು ಇದೇ ಸಭೆಯಲ್ಲಿ 26 ನೇ ವಾರ್ಡ್ (ಎಸ್.ಐ.ಟಿ.) ಸದಸ್ಯ ಎಚ್.ಮಲ್ಲಿಕಾರ್ಜುನಯ್ಯ (ಬಿಜೆಪಿ) ಈ ಕುರಿತು ವಿಷಯ (ಸಂಖ್ಯೆ: 38/3)ಮಂಡಿಸಿ ವ್ಯಾಪಕ ಚರ್ಚೆ ನಡೆಸಿದ್ದರು. “ಪಾಲಿಕೆಯ ಮೊಕದ್ದಮೆಗಳನ್ನು ನಿರ್ವಹಿಸಲು ಬೆಂಗಳೂರು ಮತ್ತು ತುಮಕೂರಿನಲ್ಲಿ ನೇಮಿಸಿಕೊಂಡಿರುವ ವಕೀಲರುಗಳು ಯಾರು? ಅವರಿಗೆ ನೀಡುತ್ತಿರುವ ಸಂಭಾವನೆ ಎಷ್ಟು? ವಿಚಾರಣೆಗೆ ಬಂದ ಪ್ರಕರಣಗಳೆಷ್ಟು? ಬಾಕಿ ಉಳಿದಿರುವ ಮೊಕದ್ದಮೆಗಳ ಸಂಖ್ಯೆ ಎಷ್ಟು? ನ್ಯಾಯಾಲಯ ಪ್ರಕರಣಗಳನ್ನು ಗಮನಿಸುತ್ತಿರುವ ಪಾಲಿಕೆ ಸಿಬ್ಬಂದಿ ಯಾರು? ಎಷ್ಟು ಪ್ರಕರಣಗಳು ಇತ್ಯರ್ಥವಾಗಿವೆ?” ಎಂದು ಮಲ್ಲಿಕಾರ್ಜುನಯ್ಯ ಪ್ರಶ್ನಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ಪಾಲಿಕೆ ಅಧಿಕಾರಿಗಳು ಸ್ಥಳೀಯ ಸಿವಿಲ್ ನ್ಯಾಯಾಲಯದಲ್ಲಿ 361ಪ್ರಕರಣಗಳು, ಇತರೆ ನ್ಯಾಯಾಲಯದಲ್ಲಿ 4 ಪ್ರಕರಣಗಳು, ಕರ್ನಾಟಕ ಹೈಕೋರ್ಟ್ನಲ್ಲಿ 21 ಪ್ರಕರಣಗಳು ಇವೆ. ಕೆ.ಎಸ್.ಮಮತ, ಶಫಿಉಲ್ಲ, ಎ.ಕೆ.ಕೃಷ್ಣಮೂರ್ತಿ ಮತ್ತು ಎನ್. ಶ್ರೀಧರಬಾಬು ವಕೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಉತ್ತರಿಸಿದ್ದರು. ಇದೇ ಸಭೆಯಲ್ಲಿ ಆ ಬಳಿಕ ಆಯುಕ್ತರು ನಿಯಮಾನುಸಾರ “ಕಾನೂನು ಕೋಶ” ರಚಿಸುವ ವಿಷಯವನ್ನು ಪ್ರತ್ಯೇಕವಾಗಿ ಪ್ರಸ್ತಾಪಿಸಿದಾಗ ಸಭೆಯು ಮೇಲಿನಂತೆ ನಿರ್ಧರಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ