ಜವಾಬ್ದಾರಿ ಮರೆತ ಆಡಳಿತ ; ಕುಟುಂಬಸ್ಥರಿಂದಲೇ ಸೋಂಕಿತ ಶವದ ಅಂತ್ಯಕ್ರಿಯೆ

 ಪಾವಗಡ : 

ಅಂತ್ಯ ಸಂಸ್ಕಾರಕ್ಕೆ ಗ್ರಾಪಂ ನೋಡಲ್ ಅಧಿಕಾರಿ ಹಾಗೂ ಪಿಡಿಒಗಳು ಭಾರದ ಹಿನ್ನೆಲೆಯಲ್ಲಿ ಕುಟುಂಬಿಕರೆ ಅಂತ್ಯ ಸಂಸ್ಕಾರ ಮಾಡುತ್ತಿರುವ ಪೋಟೊ

      ಕೊವಿಡ್‍ನಿಂದ ಮೃತಪಟ್ಟ ಮಹಿಳೆಯ ಶವವನ್ನು ಮರದ ಕೆಳಗೆ ಎಸೆದು ಹೋಗಿರುವ ಅಮಾನವೀಯ ಘಟನೆ ಮರಡಿಪಾಳ್ಯ ಗ್ರಾಮದಲ್ಲಿ ನಡೆದಿದೆ.

     ತಾಲ್ಲೂಕಿನ ನಲಿಗಾನಹಳ್ಳಿ ಗ್ರಾಪಂ ವ್ಯಾಪ್ತಿಯ ಮರಡಿಪಾಳ್ಯ ಗ್ರಾಮದಲ್ಲಿ ಕೋವಿಡ್ ಸೋಂಕು ದೃಢ ಪಟ್ಟಿದ್ದ ದೊಡ್ಡಕ್ಕ (55) ಎಂಬುವರನ್ನು ಪಟ್ಟಣದ ಶಿರಾ ರಸ್ತೆಯ ಕುರುಬರ ಹಳ್ಳಿ ಗೇಟ್ ಬಳಿಯ ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಗಿತ್ತು. ಇವರು ಸೋಮವಾರ ಬೆಳಗ್ಗೆ 8 ಗಂಟೆಯಲ್ಲಿ ಸಾವನ್ನಪ್ಪಿದ್ದಾರೆ. ಸಾರ್ವಜನಿಕ ಆಸ್ಪತ್ರೆಯ ಆ್ಯಂಬ್ಯುಲೆನ್ಸ್‍ನಲ್ಲಿ ಶವವನ್ನು ತಂದು, ಗ್ರಾಮದ ಸಮೀಪ ಮರದ ಕೆಳಗೆ ಇಟ್ಟು ಹೋಗಿದ್ದಾರೆ. ಸಂಜೆ ನಾಲ್ಕು ಗಂಟೆಯಾದರೂ ಗ್ರಾಪಂನವರು ಶವ ಸಂಸ್ಕಾರ ಮಾಡದೆ, ಪಿಡಿಓ ಹಾಗೂ ನೋಡಲ್ ಅಧಿಕಾರಿಗಳಿಗಾಗಿ ಕಾದು ಕೂತರೂ ಯಾರೂ ಬಾರದ ಹಿನ್ನೆಲೆಯಲ್ಲಿ ಕುಟುಂಬಸ್ಥರೆ ಅಂತ್ಯ ಸಂಸ್ಕಾರ ಮಾಡಿದ ಘಟನೆ ನಡೆದಿದೆ.

      ಮೃತ ದೊಡ್ಡಕ್ಕನ ತಮ್ಮ ರಂಗಸ್ವಾಮಿ ಮಾತನಾಡಿ, ಕಳೆದ ವಾರ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಶಿರಾ ರಸ್ತೆಯ ಕುರುಬರ ಹಳ್ಳಿ ಗೇಟ್ ಬಳಿಯ ಕ್ವಾರಂಟೈನ್ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಭಾನುವಾರ ಉಸಿರಾಟದ ಸಮಸ್ಯೆ ಉಲ್ಬಣಗೊಂಡರೂ, ಆಕ್ಸಿಜನ್ ಹಾಗೂ ವೆಂಟಿಲೇಟರ್ ನೀಡದ ಹಿನ್ನೆಲೆಯಲ್ಲಿ ನಮ್ಮಕ್ಕ ಸಾವನ್ನಪ್ಪಿದ್ದಾರೆ. ಸಾವಿನ ನಂತರವಾದರೂ ತಾಲ್ಲೂಕು ಆಡಳಿತ ಶವವನ್ನು ಬೆಳಗ್ಗೆಯೆ ತಂದು ಮರದಡಿ ಹಾಕಿದರೆ ಹೊರತು, ಯಾರೂ ಅಂತ್ಯ ಸಂಸ್ಕಾರ ನಡೆಸಲು ಮುಂದಾಗದ ಹಿನ್ನೆಲೆಯಲ್ಲಿ ನಾವೇ ಸ್ವಯಂ ಪ್ರೇರಿತವಾಗಿ ಮಾಡುತ್ತಿದ್ದೇವೆಂದು ನೋವು ತೋಡಿಕೊಂಡರು.

   ವ್ಯಾಪಕ ಆಕ್ರೋಶ :

ಕೋವಿಡ್ ಸೋಂಕಿನಿಂದ ಮೃತಪಟ್ಟ ಮಹಿಳೆಯ ಶವವನ್ನು ಮರದ ಕೆಳಗೆ ಹಾಕಿರುವುದು.

      ಕೊವಿಡ್ 2ನೇ ಅಲೆಯನ್ನು ತಡೆಗಟ್ಟುವ ಸಲುವಾಗಿ ಗ್ರಾಪಂಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿದೆ. ಪಿಡಿಓ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಜನತೆಗೆ ಅರಿವು ಮೂಡಿಸಬೇಕೆಂಬ ಆದೇಶವಿದೆ. ಆದರೂ ಸೋಮವಾರ ಬೆಳಗಿನಿಂದ ಮೃತ ದೇಹದ ಕಡೆ ಯಾರೂ ತಿರುಗಿ ನೋಡಿಲ್ಲ. ಈ ಘಟನೆಯಿಂದ ನೋಡಲ್ ಅಧಿಕಾರಿಗಳ ಹಾಗೂ ಪಿಡಿಓಗಳ ಕರ್ತವ್ಯ ಭ್ರಷ್ಟತೆಯು ಎದ್ದು ಕಾಣುತ್ತಿದೆ. ಯಾವುದೇ ಗ್ರಾಪಂ ವ್ಯಾಪ್ತಿಯಲ್ಲಿ ಕೋವಿಡ್ ತಡೆಗಟ್ಟಲು ಯಾವುದೇ ಅಗತ್ಯ ಕ್ರಮ ಕೈಗೊಂಡಿಲ್ಲ ಎಂಬುದಕ್ಕೆ ಈ ಘಟನೆಯೆ ಸಾಕ್ಷಿಯಾಗಿದೆ.

 

Recent Articles

spot_img

Related Stories

Share via
Copy link