ಬೆಂಗಳೂರು:
ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆ ಆಗಿದ್ದಾರೆ. ಮೂರು ದಿನಗಳ ಹಿಂದೆ ಅವರಿಗೆ ಜಾಮೀನು ದೊರೆತಿತ್ತು. ಎ2 ಆರೋಪಿ ನಟ ದರ್ಶನ್ ಈಗಾಗಲೇ ಜೈಲಿನಿಂದ ಆಚೆ ಇದ್ದಾರೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನಟ ದರ್ಶನ್, ಪವಿತ್ರಾಗೌಡ ಸೇರಿದಂತೆ ಎಲ್ಲ 7 ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದೆ. ನಟ ದರ್ಶನ್, ಪವಿತ್ರ ಗೌಡ, ನಾಗರಾಜು, ಅನು ಕುಮಾರ್, ಎಂ ಲಕ್ಷ್ಮಣ್, ಜಗದೀಶ್ ಹಾಗೂ ಪ್ರದೋಷ್ ರಾವ್ ಗೆ ಹೈಕೋರ್ಟ್ ಜಾಮೀನು ನೀಡಿದೆ.
6 ತಿಂಗಳ ಹಿಂದೆ ಜೈಲು ಸೇರಿದ್ದ ದರ್ಶನ್ ಗೆಳತಿ ಪವಿತ್ರಾ ಗೌಡ ಮತ್ತು ಇತರರಿಗೆ ಶುಕ್ರವಾರ ಹೈಕೋರ್ಟ್‌ನ (High Court) ನ್ಯಾ. ಎಸ್.ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ಪೀಠ ಜಾಮೀನು ಮಂಜೂರು ಮಾಡಿತ್ತು. ಸೋಮವಾರ ಜಾಮೀನು ಪ್ರಕ್ರಿಯೆಗಳು ಎಲ್ಲಾ ಪೂರ್ಣಗೊಂಡ ಹಿನ್ನೆಲೆಯಲ್ಲಿ ಇಂದು(ಡಿ.17) ಬೆಳಗ್ಗೆ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಪವಿತ್ರಾ ಗೌಡ ಜೊತೆ 14ನೇ ಆರೋಪಿ ಪ್ರದೂಶ್ ಬಿಡುಗಡೆಯಾಗಿದ್ದಾನೆ.
ಎಲ್ಲಾ ಆರೋಪಿಗಳು ತಲಾ 1 ಲಕ್ಷ ರೂ. ಮೊತ್ತದ ವೈಯಕ್ತಿಕ ಬಾಂಡ್ ಹಾಗೂ ಇಷ್ಟೇ ಮೊತ್ತಕ್ಕೆ ಇಬ್ಬರ ಭದ್ರತೆ ನೀಡಬೇಕು ಸೇರಿದಂತೆ ಹಲವು ಷರತ್ತುಗಳನ್ನು ಕೋರ್ಟ್ ವಿಧಿಸಿದೆ. ಆರೋಪಿಗಳನ್ನು ಬಂಧಿಸಿದ ನಂತರ ಪ್ರಾಸಿಕ್ಯೂಷನ್ ತಕ್ಷಣವೇ ಇವರನ್ನು ಯಾಕೆ ಬಂದಿಸಿದ್ದೇವೆ ಎನ್ನುವುದಕ್ಕೆ ಸರಿಯಾದ ಕಾರಣ ನೀಡಿಲ್ಲ. ಹೀಗಾಗಿ ಕಾನೂನಿನ ಈ ಲೋಪದ ಆಧಾರದಡಿ ಎಲ್ಲರ ಜಾಮೀನು ಅರ್ಜಿಗಳನ್ನು ಪುರಸ್ಕರಿಸಲಾಗುತ್ತಿದೆ ಎಂದು ನ್ಯಾಯಪೀಠ ತನ್ನ 68 ಪುಟಗಳ ತೀರ್ಪಿನಲ್ಲಿ ಹೇಳಿತ್ತು.
ಹೈಕೋರ್ಟ್‌ನಿಂದ ಜಾಮೀನು ಪ್ರತಿ ಸಿಕ್ಕಿದ್ದು ಕೂಡಲೇ ಜೈಲಿನ ಮುಖ್ಯ ಅಧಿಕಾರಿಗಳಿಗೆ ತಲುಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಜೈಲಿಂದ ಅವರು ರಿಲೀಸ್ ಆಗಿದ್ದು, ಆರ್.ಆರ್ ನಗರದ ಮನೆಗೆ ಪವಿತ್ರಾ ಗೌಡ ತೆರಳಿದ್ದಾರೆ.