ಬೆಂಗಳೂರು:
ಕೈವಾರ ತಾತಯ್ಯ ಯೋಗಿನಾರೇಯಣ ಯತೀಂದ್ರರ 299ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಬಿಜೆಪಿ ಕಾರ್ಯಕರ್ತರ ವಿರುದ್ಧ ಪ್ರದೀಪ್ ಈಶ್ವರ್ ವಾಗ್ದಾಳಿ ನಡೆಸಿದ ಪ್ರಕರಣದ ಬಗ್ಗೆ ಸಂಸದ ಪಿಸಿ ಮೋಹನ್ ಪ್ರತಿಕ್ರಿಯೆ ನೀಡಿದ್ದಾರೆ.
ತಾವು ವೇದಿಕೆ ಮೇಲೆ ಮಾತನಾಡುತ್ತಿದ್ದಾಗ ಕೆಲ ಬಿಜೆಪಿ ಕಾರ್ಯಕರ್ತರು ಆಕ್ಷೇಪ ಎತ್ತಿದ್ದರು, ರೊಚ್ಚಿಗೆಬ್ಬಿಸಿದರು ಹೀಗಾಗಿ ತಾವು ಇದು ಸಿದ್ದರಾಮಯ್ಯ ಸರ್ಕಾರ ನಿಮ್ಮಪ್ಪಂದಲ್ಲ ಎಂಬ ಹೇಳಿಕೆ ನೀಡಿದ್ದಾಗಿ ಪ್ರದೀಪ್ ಈಶ್ವರ್ ತಮ್ಮ ಹೇಳಿಕೆ, ನಡೆಯನ್ನು ಸಮರ್ಥಿಸಿದ್ದಾರೆ.
ಈ ವಿಷಯವಾಗಿ ಪ್ರತಿಕ್ರಿಯೆ ನೀಡಿರುವ ಪಿಸಿ ಮೋಹನ್, ಯಾರೂ ಪ್ರದೀಪ್ ಈಶ್ವರ್ ಅವರನ್ನು ರೊಚ್ಚಿಗೆಬ್ಬಿಸಿಲ್ಲ. ಅದೊಂದು ಸಮುದಾಯದ ಕಾರ್ಯಕ್ರಮವಾಗಿತ್ತು. ನನ್ನ ವೈಯಕ್ತಿಕ ಕಾರ್ಯಕ್ರಮ ಅಲ್ಲ. ಸರ್ಕಾರಿ ಕಾರ್ಯಕ್ರಮವಾಗಿತ್ತು. ಸರ್ಕಾರದಿಂದ ನನ್ನ ಹೆಸರೂ ಹಾಕಿದ್ದರು. ನಾನೂ ಹೋಗಿ ಭಾಗವಹಿಸಿದ್ದೆ. ಸಮುದಾಯದ ಕುರಿತು ಸಭಿಕರು ನನಗೂ ಮನವಿ ಸಲ್ಲಿಸಿ, ಬೇಡಿಕೆಗಳನ್ನು ಕೇಳಿದರು ಅದರಲ್ಲಿ ತಪ್ಪೇನಿದೆ? ಜನರು ಕೇಳಿದ್ದನ್ನು, ಹೇಳಿದ್ದನ್ನೆಲ್ಲಾ ಆವೇಶದಿಂದ ತೆಗೆದುಕೊಳ್ಳಬಾರದು. ಬಲಿಜ ಸಮುದಾಯಕ್ಕೆ ಬಿಜೆಪಿ ಸಾಕಷ್ಟು ಕೊಡುಗೆಗಳನ್ನು ಕೊಟ್ಟಿದೆ. ಆ ಸಮುದಾಯಕ್ಕೆ ಕಾಂಗ್ರೆಸ್ ಸರ್ಕಾರದಿಂದ ಮೋಸವಾಗಿದೆ. ಆ ಬಗ್ಗೆ ಸಮುದಾಯಕ್ಕೆ ಆಕ್ರೋಶ ಇದೆ ಎಂದು ಪಿಸಿ ಮೋಹನ್ ಹೇಳಿದ್ದಾರೆ.
ಪ್ರದೀಪ್ ಈಶ್ವರ್ ಬಹಿರಂಗ ವೇದಿಕೆಯಲ್ಲಿ ನಡೆದುಕೊಂಡ ರೀತಿ ನನಗೂ ಅರ್ಥವಾಗಿಲ್ಲ. ಸಮುದಾಯ ತೊಂದರೆಯಲ್ಲಿದೆ. ಉದ್ಯೋಗ ಸಿಗುತ್ತಿಲ್ಲ. ಕಾಂಗ್ರೆಸ್ ನಿಂದ ಆದ ಅನ್ಯಾಯವನ್ನು ಸರಿಪಡಿಸುವುದಕ್ಕೆ ಆಗುತ್ತಿಲ್ಲ. ಇದರಿಂದ ಜನತೆ ತೊಂದರೆಯಲ್ಲಿದ್ದಾರೆ. ನಾವು ಒಟ್ಟಾಗಿ ಅದನ್ನು ಸರಿಪಡಿಸಲು ಪ್ರಯತ್ನಿಸುತ್ತಿದ್ದೇವೆಯೇ ಹೊರತು ಈ ರೀತಿ ಬಹಿರಂಗವಾಗಿ ಮಾತನಾಡುವುದರಿಂದ ಏನೂ ಪ್ರಯೋಜನವಿಲ್ಲ ಎಂದು ಪ್ರದೀಪ್ ಈಶ್ವರ್ ಗೆ ಪಿಸಿ ಮೋಹನ್ ಹೇಳಿದ್ದಾರೆ.
ಪ್ರದೀಪ್ ಈಶ್ವರ್ ಮೊದಲ ಬಾರಿ ಶಾಸಕರಾಗಿದ್ದಾರೆ. ಈಗ ಸಮುದಾಯಕ್ಕೆ ಅಭಿವೃದ್ಧಿ ಮಂಡಳಿ ಮಾಡಿದ್ದೇವೆ. ಅದಕ್ಕೆ ಬರಬೇಕಿರುವ 300 ಕೋಟಿ ಅನುದಾನವನ್ನು ತರಲಿ, ಅಧ್ಯಕ್ಷರನ್ನು ನೇಮಕ ಮಾಡಲಿ. ಜೊತೆಗೆ ಸಂಶೋಧನಾ ಕೇಂದ್ರಕ್ಕೆ 10 ಕೋಟಿ ಠೇವಣಿ ಇಡಿಸಲಿ ಎಂದು ಪಿಸಿ ಮೋಹನ್ ಸವಾಲು ಹಾಕಿದ್ದಾರೆ. ಇದು ಸಿದ್ದರಾಮಯ್ಯ ಸರ್ಕಾರ ನಿಮ್ಮಪ್ಪಂದಲ್ಲ ಎಂಬ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಿಸಿ ಮೋಹನ್, ಅದು ಅವರ ಸಂಸ್ಕಾರ, ಆ ಬಗ್ಗೆ ನಾವೇನು ಹೇಳೋದಕ್ಕೆ ಆಗುವುದಿಲ್ಲ ಎಂದಷ್ಟೇ ಹೇಳಿದ್ದಾರೆ.
