
ಜಿಲ್ಲೆಯ ಹಿಂಗಾರು ಹಂಗಾಮಿನ ಪ್ರಮುಖ ಬೆಳೆಯಾದ ಶೇಂಗಾ ದರ ಕುಸಿತ ಕಂಡಿದ್ದು, ರೈತರು ಕಂಗಾಲಾಗಿದ್ದಾರೆ.
ಯಾದಗಿರಿ ಮತ್ತು ಗುರುಮಠಕಲ್ ತಾಲ್ಲೂಕಿನಲ್ಲಿ ಅತಿ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬಿತ್ತನೆ ಮಾಡಲಾಗಿದ್ದು, ಈಗ ಉತ್ತಮ ಬೆಳೆ ಬಂದಿದೆ.
ಆದರೆ, ಸೂಕ್ತ ಬೆಲೆ ಇಲ್ಲದೆ ರೈತರು ಕಡಿಮೆ ದರಕ್ಕೆ ಮಾರಾಟ ಮಾಡುತ್ತಿದ್ದಾರೆ.
ಜಮೀನುಗಳಿಂದ ಆಟೊ, ಟಂಟಂ, ಟ್ರ್ಯಾಕ್ಟರ್ ಗಳ ಮೂಲಕ ಶೇಂಗಾ ಆವಕವನ್ನು ಯಾದಗಿರಿ ಎಪಿಎಂಸಿಗೆ ತರಲಾಗುತ್ತಿದೆ. ಆದರೆ, ಬೆಲೆ ಕುಸಿತದಿಂದ ರೈತರು ಸಿಕ್ಕ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.
ಬಿತ್ತನೆ ಬೀಜ, ಕೂಲಿಯಾಳು ಖರ್ಚು, ರಾಯಸಾಯನಿಕ ಗೊಬ್ಬರ, ರಬ್ಬರ್ ಹುಳು ಬಾಧೆ ನಿಯಂತ್ರಣಕ್ಕಾಗಿ ಸಾವಿರಾರು ರೂಪಾಯಿ ಖರ್ಚು ಮಾಡಿದ್ದಾರೆ. ಬೆಳೆ ಬೆಳೆದ ನಂತರ ಮಾರುಕಟ್ಟೆಯಲ್ಲಿ ಯೋಗ್ಯ ದರವಿಲ್ಲದೇ ರೈತಾಪಿ ವರ್ಗ ತೊಂದರೆ ಪಡುತ್ತಿದೆ.
‘ಬಿತ್ತನೆ ಬೀಜ ಪಡೆಯಲು ಪರದಾಡಬೇಕಾಯಿತು. ಈಗ ಸೂಕ್ತ ದರವಿಲ್ಲದೇ ಬೆಳೆ ಮಾರಾಟ ಮಾಡಲಾರದ ಪರಿಸ್ಥಿತಿಗೆ ಬಂದಿದ್ದೇವೆ. ವ್ಯಾಪಾರಿಗಳು ಕಡಿಮೆ ಬೆಲೆಗೆ ಕೇಳುತ್ತಿದ್ದಾರೆ. ಗ್ರಾಮದಿಂದ ತಂದಿರುವ ಖರ್ಚು ಲೆಕ್ಕನೋಡಿದರೆ ಲಾಭವೇ ಇಲ್ಲದಂತಾಗಿದೆ. ಎನೂ ಮಾಡಬೇಕು ಎಂದು ತಿಳಿಯುತ್ತಿಲ್ಲ’ ಎನ್ನುತ್ತಾರೆ ರೈತ ವೆಂಕಟೇಶ ಕುಂಬಾರ.
ಮುಂಬೈಗೆ ರಫ್ತಾಗುತ್ತಿದ್ದ ಶೇಂಗಾ:
ಜಿಲ್ಲೆಯಲ್ಲಿ ಬೆಳೆಯುವ ಶೇಂಗಾ ಬೀಜಕ್ಕೆ ದೇಶ ವಿದೇಶಗಳಲ್ಲಿ ಬೇಡಿಕೆ ಇತ್ತು. ಯಾದಗಿರಿ ಜಿಲ್ಲೆಯಿಂದ ಮಹಾರಾಷ್ಟ್ರದಿಂದ ಆಸ್ಟ್ರೇಲಿಯಾ ಸೇರಿದಂತೆ ವಿವಿಧ ಕಡೆ ರಫ್ತು ಆಗುತ್ತಿತ್ತು. ಆದರೆ, ಜಿಲ್ಲೆಯಲ್ಲಿ ಮೊದ ಮೊದಲು ಮಾತ್ರ ಬೀಜ ತೆಗೆದುಕೊಳ್ಳುತ್ತಿದ್ದರು. ಈಗ ವ್ಯಾಪಾರಿಗಳಿಗೆ ದರ ಕಡಿಮೆಯಾಗಿದ್ದರಿಂದ ಅವರು ಹೆಚ್ಚಿನ ದರಕ್ಕೆ ಖರೀದಿ ಮಾಡುತ್ತಿಲ್ಲ. ಇದರಿಂದ ರೈತರು ಕಡಿಮೆ ಬೆಲೆಗೆ ಮಾರಾಟ ಮಾಡುವ ಪರಿಸ್ಥಿತಿ ಬಂದಿದೆ.
ಇಳುವರಿ ಕುಂಠಿತ:
ಜಿಲ್ಲೆಯಲ್ಲಿ ಮೊದಲ ಬಾರಿಗೆ ಬರುವ ಶೇಂಗಾ ಬೀಜ ಗುಣಮಟ್ಟ ಇರುವುದರಿಂದ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತದೆ. ಆ ನಂತರ ಬರುವ ಬೀಜದ ಗುಣಮಟ್ಟ ಇಳಿಕೆಯಾಗುತ್ತಿದ್ದಂತೆಯೇ ದರವೂ ಇಳಿಕೆಯತ್ತ ಸಾಗುತ್ತದೆ.
ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಚಳ್ಳಕೇರಿ, ಚಿತ್ರದುರ್ಗ ಸೇರಿದಂತೆ ವಿವಿಧ ಜಿಲ್ಲೆಯ ವರ್ತಕರು ಶೇಂಗಾ ಖರೀದಿಗಾಗಿ ಬಂದಿದ್ದಾರೆ. ಮೊದಲು ₹6ರಿಂದ 7 ಸಾವಿರ ತನಕ ಖರೀದಿ ಮಾಡುತ್ತಿದ್ದರು. ಈಗ ಅವರಿಗೆ ಚೆನ್ನಾಗಿ ವ್ಯಾಪಾರ ಸಿಗದ ಕಾರಣ ಅವರು ಕೈ ಚೆಲ್ಲಿದ್ದಾರೆ ಎಂದು ವ್ಯಾಪಾರಿಯೊಬ್ಬರು ತಿಳಿಸಿದರು.
10 ಸಾವಿರ ಚೀಲ ಆವಕ: ನಗರದ ಎಪಿಎಂಸಿಗೆ ಗುರುವಾರ 10,854 ಶೇಂಗಾ ಚೀಲಗಳು ಬಂದಿವೆ. ಪ್ರತಿ ಕ್ವಿಂಟಲ್‌ಗೆ ಕನಿಷ್ಠ ₹4,289, ಗರಿಷ್ಠ ₹6,363 ಸರಾಸರಿ ದರ ₹5,851 ದರ ಇದೆ.
ಶೆಂಗಾ ಬೆಳೆ ವಿವರ
ತಾಲ್ಲೂಕು; ಹೆಕ್ಟೇರ್
ಶಹಾಪುರ; 13,275
ಸುರಪುರ; 4,204
ಯಾದಗಿರಿ; 28,660
ಒಟ್ಟು; 46,139
ಆಧಾರ: ಕೃಷಿ ಇಲಾಖೆ
ಶೇಂಗಾ ಬೀಜ ರಫ್ತಾಗದ ಕಾರಣ ದರವೂ ಇಳಿಕೆಯಾಗಿದೆ. ಇದರಿಂದ ವ್ಯಾಪಾರಿಗಳು ಕಡಿಮೆ ದರಕ್ಕೆ ಖರೀದಿ ಮಾಡುತ್ತಿದ್ದಾರೆ. ಮೊದಲೆಲ್ಲ ಬೇರೆ ದೇಶಕ್ಕೆ ರಫ್ತಾಗುತ್ತಿತ್ತು.
– ಚನ್ನಪ್ಪ ಬೊಮ್ಮರೆಡ್ಡಿ, ಎಪಿಎಂಸಿ ವರ್ತಕ
ಯಾದಗಿರಿ ಎಪಿಎಂಸಿ ಮಾರುಕಟ್ಟೆಯಲ್ಲಿ ಶೇಂಗಾ ಬೆಳೆಗೆ ಸೂಕ್ತ ಬೆಲೆ ಇಲ್ಲ. ಇದರಿಂದ ನಾವು ಮಾಡಿದ ಖರ್ಚು ಕೂಡ ತೆಗೆಯುವುದು ಈ ದರಕ್ಕೆ ಕಷ್ಟವಾಗಿದೆ. ಸರ್ಕಾರ ನಮ್ಮ ನೆರವಿಗೆ ಬರಬೇಕು.
– ಹಣಮಂತ ತೊರಣತಿಪ್ಪ, ರೈತ
ಶೇಂಗಾ ಇಳುವರಿಯಲ್ಲಿ ಕಡಿಮೆ ಪ್ರಮಾಣದಲ್ಲಿದ್ದರೆ ದರವೂ ಕಡಿಮೆ ಇರಲಿದೆ. ₹4500 ರಿಂದ ₹5500 ದರ ಇದೆ. ಶೇಂಗಾ ಬೀಜದಲ್ಲೂ ಗುಣಮಟ್ಟ ಇಲ್ಲದಿದ್ದರೆ ಬೆಲೆ ಕಡಿಮೆಯಾಗಲಿದೆ.
– ಶಿವಕುಮಾರ ದೇಸಾಯಿ, ಎಪಿಎಂಸಿ ಸಹಾಯಕ ನಿರ್ದೇಶಕ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
