ತಿಪಟೂರು
-ರಂಗನಾಥ ಪಾರ್ಥಸಾರಥಿ
ಬೆಂಗಳೂರು-ಹೊನ್ನಾವರ ಹೆದ್ದಾರಿ ಕಾಮಗಾರಿ ಮುಗಿಯುವ ಮೊದಲೇ ಟೋಲ್ ಸಂಗ್ರಹಣೆ ಮಾಡುತ್ತಿದ್ದು ಸಾರ್ವಜನಿಕರ ಆಕ್ರೋಷಕ್ಕೆ ಕಾರಣವಾಗಿದೆ.ಈ ಹೆದ್ದಾರಿಯಲ್ಲಿ ತಾಲ್ಲೂಕಿನ ಗುಡ್ಡದಪಾಳ್ಯದ ಬಳಿಯ ಟೋಲ್‌ಗೇಟ್‌ನಲ್ಲಿ ಮಾ.13 ರಿಂದ ಟೋಲ್ ಸಂಗ್ರಹಣೆ ಪ್ರಾರಂಭಿಸಿದ್ದಾರೆ.
ಸಾರ್ವಜನಿಕರು ಈಗಲೇ ಏಕೆ ಕೊಡಬೇಕು ಎಂದು ಪ್ರಶ್ನಿಸಿದ್ದಕ್ಕೆ ಇಲ್ಲಿಂದ ಮಲ್ಲಸಂದ್ರದ ವರೆಗೆ ರಸ್ತೆ ಸಂಪೂರ್ಣವಾಗಿದೆ ಎಂದು ಹೇಳಿ ದೌರ್ಜನ್ಯದಿಂದ ಟೋಲ್ ಸಂಗ್ರಹಿಸುತ್ತಿದ್ದಾರೆ. ಈ ಬಗ್ಗೆ ಕೆಲವು ಸಮಯ ಸಾರ್ವಜನಿಕರು ಮತ್ತು ಟೋಲ್ ಸಿಬ್ಬಂದಿ ನಡುವೆ ಗದ್ದಲವೇರ್ಪಟ್ಟಿತ್ತು. ಟೋಲ್ ಸಿಬ್ಬಂದಿ ರಸ್ತೆ ಪೂರ್ಣವಾಗಿದೆ ಎಂದು ಹೇಳುತ್ತಾರೆ, ಆದರೆ ಕೂಗಳತೆ ದೂರದಲ್ಲಿರುವ ಹರೇನಹಳ್ಳಿ, ಕೋಂಡ್ಲಿಕ್ರಾಸ್, ದೊಡ್ಡಗುಣಿ, ನಿಟ್ಟೂರು, ಗುಬ್ಬಿಯ ಬಳಿ ರಸ್ತೆ ಕಾಮಗಾರಿ ಪೂರ್ಣಗೊಂಡಿಲ್ಲ. ಇನ್ನು ಕೆ.ಬಿ.ಕ್ರಾಸ್‌ನಲ್ಲಿ ರಸ್ತೆ ಕಾಮಗಾರಿಯೆ ಆರಂಭವಾಗಿಲ್ಲ ಆದರೆ ಆಗಲೇ ಟೋಲ್ ಸಂಗ್ರಹ ಮಾಡುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಸ್ಕೈವಾಕ್ ಇಲ್ಲದೆ ಜನರ ಪರದಾಟ :
ಇದೇ ರಸ್ತೆಯಲ್ಲಿ ಸಿಗುವ ಪವಿತ್ರ ಯಾತ್ರಸ್ಥಳ ಹತ್ಯಾಳು ನರಸಿಂಹಸ್ವಾಮಿ ದೇವಾಲಯಕ್ಕೆ ದಿನನಿತ್ಯ ಸಹಸ್ರಾರು ಭಕ್ತಾದಿಗಳು ಆಗಮಿಸುತ್ತಾರೆ. ತಿಪಟೂರು ಕಡೆಯಿಂದ ಬರುವ ಭಕ್ತಾದಿಗಳಿಗೆ ಬರುವಾಗ ತೊಂದರೆ ಇಲ್ಲ, ಆದರೆ ಹೋಗುವಾಗ ತೊಂದರೆ. ತುಮಕೂರು ಕಡೆಯಿಂದ ಬರುವ ಭಕ್ತಾದಿಗಳಿಗೆ ಬರುವಾಗ ತೊಂದರೆ, ಆದರೇ ಹೋಗುವಾಗ ತೊಂದರೆ ಇಲ್ಲ.
ರಸ್ತೆಯ ನಡುವೆ ಬ್ಯಾರಿಕೇಡ್‌ಗಳನ್ನು ಹಾಕಿರುವುದರಿಂದ ಭಕ್ತಾದಿಗಳು ರಸ್ತೆಯನ್ನು ದಾಟಿ ಇನ್ನೊಂದು ಬದಿಗೆ ಹೋಗಬೇಕೆಂದರೆ ಕೊಂಕಣ ಸುತ್ತಿ ಮೈಲಾರಕ್ಕೆ ಹೋದಂತಾಗುತ್ತದೆ. ಮಕ್ಕಳು, ಮಹಿಳೆಯರು, ವೃದ್ಧರು ನಮ್ಮ ರಸ್ತೆ ದಾಟಲು ನಮ್ಮಿಂದ ಸಾಧ್ಯವಾಗುವುದಿಲ್ಲ ಇಲ್ಲಿಂದಲೆ ಕೈಮುಗಿಯುತ್ತೇವೆಂದು ಸುಸ್ಥಾಗಿ ಕುಳಿತುಕೊಂಡಿದ್ದ ದೃಶ್ಯಗಳು ರಸ್ತೆ ಯಂಚಿನಲ್ಲಿ ಕಂಡು ಬರುತ್ತಿವೆ.
ಸೂಕ್ತ ಸರ್ವೀಸ್ ರಸ್ತೆ ಇಲ್ಲ, ಇದ್ಯಾವ ರಸ್ತೆ :
ತಿಪಟೂರು ಕಡೆಯಿಂದ ಹಿಂಡಿಸ್ಕೆರೆಪಾಳ್ಯ, ಯಗಚೀಕಟ್ಟೆ, ಹರೇನಹಳ್ಳಿ ಹಾಗೂ ತುಮಕೂರು ಕಡೆಯಿಂದ ಬರುವಾಗ ಹತ್ಯಾಳು ನರಸಿಂಹಸ್ವಾಮಿ ಬೆಟ್ಟ, ಗುಡ್ಡದಪಾಳ್ಯ, ರಜತಾದ್ರಿಪುರ ಮುಂತಾದ ಹಳ್ಳಿಗಳಿಗೆ ಹೋಗಲು ಸೂಕ್ತವಾದ ಸರ್ವೀಸ್ ರಸ್ತೆ ಇಲ್ಲದೆ ಸುತ್ತಮುತ್ತಲ ಹಳ್ಳಿಯ ಜನ ಜೀವವನ್ನು ಪಣಕ್ಕಿಟ್ಟು ಏಕ ಮುಖ ಸಂಚಾರ ಮಾಡಿ ಪ್ರಾಣಕ್ಕೆ ಅಪಾಯ ತಂದುಕೊಳ್ಳುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
