ಬಿಜೆಪಿ-ಜೆಡಿಎಸ್ ಗೆ ರಾಜ್ಯದ ಜನತೆ ಪಾಠ ಕಲಿಸಿದ್ದಾರೆ : ಸಿದ್ದರಾಮಯ್ಯ

ಮೈಸೂರು: 

     ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಗೆ ರಾಜ್ಯದ ಜನತೆ ಪಾಠ ಕಲಿಸಿದ್ದಾರೆ. ಈಗ ಆರು ತಿಂಗಳಾಗಿದೆ, ಜನ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳಿ ಎಂದು ಹೇಳಿದ್ದಾರೆ. ತಾವು ಅಧಿಕಾರಕ್ಕೆ ಬಂದೇ ಬಿಡುತ್ತೇವೆ ಎಂದು ಭಾವಿಸಿದ್ದರು.

     ಬಿಜೆಪಿ-ಜೆಡಿಎಸ್ ನವರು ಸಮ್ಮಿಶ್ರ ಸರ್ಕಾರ ಮಾಡುತ್ತೇವೆ ಎಂದು ಅಂದುಕೊಂಡಿದ್ದರು. ಜನತೆ ನಮಗೆ ನಮಗೆ 136 ಸ್ಥಾನ ಕೊಟ್ಟಿದ್ದು ಕಂಡ ಹತಾಶರಾಗಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ, ತಮಗೆ ತೋಚಿದಂತೆ ವರ್ತಿಸುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ.

    ಮೈಸೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕೌರವ ಸಂಸ್ಕೃತಿಯ ರಾಜಕಾರಣವನ್ನು ಸಿದ್ದರಾಮಯ್ಯನವರು ನನ್ನ ಜೊತೆ ಮಾಡುವುದು ಬೇಡ ಎಂಬ ಬಗ್ಗೆ ಪ್ರತಿಕ್ರಿಯಿಸಿದರು.

    ಕುಮಾರಸ್ವಾಮಿಯವರು ಮಾಡಿರುವ ಆರೋಪಗಳನ್ನು ಎಂದಾದರೂ ಸಾಬೀತು ಮಾಡಿದ್ದನ್ನು ನೀವು ನೋಡಿದ್ದೀರಾ?ಅವರು ಹೊಟ್ಟೆಉರಿ, ಹೊಟ್ಟೆಕಿಚ್ಚು, ಅಸೂಯೆ, ದ್ವೇಷದಿಂದ ಹತಾಶರಾಗಿ ಏನೇನೋ ಮಾತನಾಡುತ್ತಾರೆ. 2018ರ ಚುನಾವಣೆಯಲ್ಲಿ 38 ಸ್ಥಾನಗಳನ್ನು ಗೆದ್ದಿದ್ದ ಜೆಡಿಎಸ್ ಈ ಬಾರಿ ಪಂಚರತ್ನ ಕಾರ್ಯಕ್ರಮ ನಡೆಸಿ ಗೆದ್ದಿದ್ದು ಕೇವಲ 19 ಶಾಸಕ ಸ್ಥಾನಗಳನ್ನು. ಇದೇ ಆರೋಪ ಮಾಡಿಕೊಂಡು ಬರುವ ಕೆಲಸವನ್ನು ಬಿಟ್ಟರೆ ಬೇರೇನೂ ಮಾಡಿಲ್ಲ ಎಂದರು.

    ಯತೀಂದ್ರ ಸಿದ್ದರಾಮಯ್ಯ ಅವರನ್ನು ಟಾರ್ಗೆಟ್ ಮಾಡುತ್ತಿದ್ದಾರೆಯೇ ಎಂದು ಕೇಳಿದಾಗ, ಯಾರನ್ನಾದರೂ ಟಾರ್ಗೆಟ್ ಮಾಡಲಿ, ಜನತೆಗೆ ನೀಡಿರುವ ಆಶ್ವಾಸನೆ, ಭರವಸೆಯಂತೆ ಜನತೆಗೋಸ್ಕರ ಸರ್ಕಾರ ನಡೆಸಿಕೊಂಡು ಹೋಗುತ್ತೇವೆ ಎಂದರು.

    ಜೀವಮಾನದಲ್ಲಿಯೇ ಮತ್ತೆ ಅಧಿಕಾರ ಕೈಗೆ ಬಾರದು ಎಂಬ ರಾಜಕೀಯ ವಾಸ್ತವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ನಿದ್ದೆಗೆಡಿಸಿ ಮಾನಸಿಕ ಸ್ವಾಸ್ತ್ಯವನ್ನು ಕಲಕಿದ ಹಾಗೆ ಕಾಣುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಟ್ವಿಟ್ಟರ್ ಮೂಲಕ ಕೂಡ ಲೇವಡಿ ಮಾಡಿದ್ದಾರೆ.

    ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ಸುಳ್ಳುಕೋರನೆಂಬ ಅಪಖ್ಯಾತಿಯನ್ನು ಸ್ವಯಂ ತಾನೇ ಸಾಬೀತುಪಡಿಸುವ ಪೈಪೋಟಿಗೆ ಬಿದ್ದಿರುವ ಈ ಮಾಜಿ ಮುಖ್ಯಮಂತ್ರಿ ಇಂದು ಬೆಳ್ಳಂಬೆಳಗೆ ಎದ್ದು ಮತ್ತೊಂದಷ್ಟು ಸುಳ್ಳುಗಳನ್ನು ಉದುರಿಸಿದ್ದು ನೋಡಿದರೆ ರಾತ್ರಿಯಿಡೀ ನಿದ್ದೆಯಿಲ್ಲದೆ ಹೊರಳಾಡಿದ್ದು ಸ್ಪಷ್ಟವಾಗಿದೆ. ಯಾರಾದರೂ ಹಿತೈಷಿಗಳು ಇವರಿಗೆ ಸರಿಯಾದ ಚಿಕಿತ್ಸೆಗೆ ವ್ಯವಸ್ಥೆ ಮಾಡಬಾರದೇ ವ್ಯಂಗ್ಯವಾಡಿದ್ದಾರೆ.

    ಮಾಜಿ ಶಾಸಕ ಡಾ.ಯತೀಂದ್ರ ಅವರ ಜೊತೆಗಿನ ನನ್ನ ಸಂಭಾಷಣೆ ವರುಣ ಕ್ಷೇತ್ರದ ಸರ್ಕಾರಿ ಶಾಲೆಗಳ ಅಭಿವೃದ್ದಿಗೆ ಸಂಬಂಧಪಟ್ಟಿದ್ದು ಎನ್ನುವುದನ್ನು ದಾಖಲೆ ಸಮೇತ ಸಾಬೀತುಪಡಿಸಿದ್ದರೂ ಹೆಚ್.ಡಿ.ಕುಮಾರಸ್ವಾಮಿ ಇಂದು ಮತ್ತೊಂದು ಸುಳ್ಳನ್ನು ಸೃಷ್ಟಿಸಿ ಜನತೆಯ ದಾರಿ ತಪ್ಪಿಸಲು ಹೆಣಗಾಡಿದ್ದಾರೆ.

   ನಮ್ಮ ಸಂಭಾಷಣೆಯಲ್ಲಿ ಪ್ರಸ್ತಾಪವಾಗಿರುವ ವಿವೇಕಾನಂದ ಅವರು ಮೈಸೂರು ತಾಲೂಕಿನ ಬಿಇಒ ಎನ್ನುವುದು ಸ್ಪಷ್ಟವಾಗಿದ್ದರೂ ಯಾವುದೋ ವರ್ಗಾವಣೆಯ ಪಟ್ಟಿಯಲ್ಲಿನ ವಿವೇಕಾನಂದ ಎಂಬ ಅಧಿಕಾರಿಯ ಹೆಸರು ಹುಡುಕಿ ತನ್ನ ಸುಳ್ಳಿಗೆ ಸಾಕ್ಷಿ ನೀಡುವ ಹತಾಶ ಪ್ರಯತ್ನ ಮಾಡಿದ್ದಾರೆ. ಇದನ್ನು ಮಾನಸಿಕ ಅಸ್ವಸ್ಥತೆ ಎನ್ನದೆ ಬೇರೆ ಏನು ಹೇಳಲು ಸಾಧ್ಯ ಎಂದು ಟೀಕಿಸಿದ್ದಾರೆ.

    ರಾಜ್ಯದಲ್ಲಿ ಕುಮಾರಸ್ವಾಮಿ ಎಂಬ ಹೆಸರಿನವರು ಸಾವಿರಾರು ಮಂದಿ ಇದ್ದಾರೆ. ಅವರಲ್ಲಿಯೂ ಒಂದಷ್ಟು ಪಕ್ಕಾ ಕ್ರಿಮಿನಲ್ ಗಳೂ ಇದ್ದಾರೆ. ಹೆಸರಿನ ಕಾರಣಕ್ಕಾಗಿ ಅವರೆಲ್ಲರ ಪಾಪಕರ್ಮಗಳ ಹೊರೆಯನ್ನು ಹೆಚ್.ಡಿ.ಕುಮಾರಸ್ವಾಮಿಯವರ ತಲೆ ಮೇಲೆ ಹೊರಿಸಲಿಕ್ಕೆ ಆಗುತ್ತಾ ಎಲ್ಲಿದಿಯಪ್ಪಾ ನಿಖಿಲ್ ಎಂದು ಸಾರ್ವಜನಿಕ ಸಭೆಯಲ್ಲಿ ಕುಮಾರಸ್ವಾಮಿ ಕೂಗಿದಾಗ ಅಲ್ಲಿ ಎಷ್ಟು ಮಂದಿ ಆ ಹೆಸರಿನವರಿದ್ದರೋ ಏನೋ? ಓಗೊಟ್ಟಿದ್ದು ಇವರ ಮಗ ಮಾತ್ರ ಅಲ್ವಾ? ಉಳಿದವರು ಓಗೊಟ್ಟಿದ್ದರೂ ಅವರನ್ನು ಮಕ್ಕಳು ಎಂದು ಇವರು ಒಪ್ಪಿಕೊಳ್ಳುತ್ತಿದ್ರಾ? ಎಂದು ಪ್ರಶ್ನಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap