ಪಣಜಿ:
ಕರ್ನಾಟಕ ಸರ್ಕಾರದ ಇಂಧನ ದರ ಏರಿಕೆಯನ್ನು ಟೀಕಿಸುತ್ತಿದ್ದ ಬಿಜೆಪಿ ನಾಯಕರಿಗೆ ಶಾಕ್ ನೀಡುವಂತೆ ಗೋವಾದ ಬಿಜೆಪಿ ಸರ್ಕಾರ ಕೂಡ ಶುಕ್ರವಾರ ಇಂಧನ ದರ ಏರಿಕೆ ಮಾಡಿದೆ.
ನಾಳೆಯಿಂದ ಗೋವಾದಲ್ಲಿ ಪೆಟ್ರೋಲ್ ಬೆಲೆ 1 ರೂಪಾಯಿ, ಡೀಸೆಲ್ 36 ಪೈಸೆ ಏರಿಕೆಯಾಗಲಿದ್ದು, ಗೋವಾ ಸರ್ಕಾರ ಶನಿವಾರದಿಂದ ಜಾರಿಗೆ ಬರುವಂತೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು ಹೆಚ್ಚಿಸುವುದಾಗಿ ಘೋಷಿಸಿದೆ.ಇದು ಪೆಟ್ರೋಲ್ ಬೆಲೆಯನ್ನು 1 ರೂಪಾಯಿ ಮತ್ತು ಡೀಸೆಲ್ ಬೆಲೆಯನ್ನು 36 ಪೈಸೆಗಳಷ್ಟು ಹೆಚ್ಚಿಸಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಹೆಚ್ಚಳದ ಕುರಿತು ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ (ಹಣಕಾಸು) ಪ್ರಣಬ್ ಜಿ ಭಟ್ ಅವರು ಶುಕ್ರವಾರ ಅಧಿಸೂಚನೆಯನ್ನು ಹೊರಡಿಸಿದ್ದು, “ವ್ಯಾಟ್ ಹೆಚ್ಚಳ ಎಂದರೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕ್ರಮವಾಗಿ 1 ಮತ್ತು 36 ಪೈಸೆಗಳಷ್ಟು ಹೆಚ್ಚಾಗುತ್ತದೆ. ಗೋವಾದಲ್ಲಿ ಪ್ರಸ್ತುತ ಪೆಟ್ರೋಲ್ ಬೆಲೆ ಲೀಟರ್‌ಗೆ 95.40 ರೂ ಆಗಿದ್ದು, ಡೀಸೆಲ್‌ಗೆ 87.90 ರೂ ಇದೆ ಎಂದು ಅವರು ತಿಳಿಸಿದ್ದಾರೆ.
ವಿರೋಧ ಪಕ್ಷದ ನಾಯಕ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಯೂರಿ ಅಲೆಮಾವೊ ಅವರು ಇದನ್ನು “ಸಂವೇದನಾಶೀಲ ರಹಿತ ಸರ್ಕಾರ” ಎಂದು ಟೀಕಿಸಿದ್ದಾರೆ. ಅಲ್ಲದೆ ತಕ್ಷಣವೇ ಹೆಚ್ಚಳವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.