ಯುಪಿಎ ಅಧಿಕಾರಕ್ಕೆ ಬಂದರೆ ರಾಜ್ಯ ಸರ್ಕಾರಕ್ಕೆ ಮೇಜರ್ ಸರ್ಜರಿ..!!

0
12

ಬೆಂಗಳೂರು

     ಕೇಂದ್ರದಲ್ಲಿ ಯುಪಿಎ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಮೈತ್ರಿಕೂಟಕ್ಕೆ ಮೇಜರ್ ಸರ್ಜರಿ ಆಗಲಿದ್ದು ದಲಿತ ನಾಯಕ ಜಿ.ಪರಮೇಶ್ವರ್ ಸಿಎಂ ಪಟ್ಟಕ್ಕೇರಲಿದ್ದರೆ,ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಉಪಮುಖ್ಯಮಂತ್ರಿಯಾಗಲಿದ್ದಾರೆ.

     ಹಾಗೆಯೇ ಹಾಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಲಿದ್ದು ಆ ಮೂಲಕ ರಾಜ್ಯ ಹಾಗೂ ಕೇಂದ್ರಗಳಲ್ಲಿ ಬಲಿಷ್ಟವಾಗುಳಿಯಲು ಸಾಧ್ಯವಾಗಲಿದೆ ಎಂದು ಮಾಜಿ ಪ್ರಧಾನಿ ದೇವೇಗೌಡ ಸ್ಕೆಚ್ ಹಾಕಿದ್ದಾರೆ.

     ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟ ಅಧಿಕಾರ ಹಿಡಿಯುತ್ತದೆ ಎಂಬ ಲೆಕ್ಕಾಚಾರಕ್ಕೆ ಬಂದಿರುವ ದೇವೇಗೌಡ,ಹಾಗೊಂದು ವೇಳೆ ಯುಪಿಎ ಅಧಿಕಾರಕ್ಕೆ ಬಂದರೆ ಸಿಎಂ ಹುದ್ದೆಯನ್ನು ಕಾಂಗ್ರೆಸ್‍ಗೆ ಬಿಟ್ಟು ಕೊಡುತ್ತೇವೆ ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರಿಗೆ ಹೇಳಿದ್ದಾರೆ.

      ಕಾಂಗ್ರೆಸ್ ಪಕ್ಷ ಪರಮೇಶ್ವರ್ ಅವರನ್ನು ಸಿಎಂ ಹುದ್ದೆಗೆ ತಂದು ಕೂರಿಸಿದರೆ ಏಕಕಾಲಕ್ಕೆ ಮೈತ್ರಿಕೂಟದ ಉಭಯ ಪಕ್ಷಗಳ ವರ್ಚಸ್ಸು ಹೆಚ್ಚುತ್ತದೆ.ಕರ್ನಾಟಕ ಮೊಟ್ಟ ಮೊದಲ ದಲಿತ ಸಿಎಂ ಅನ್ನು ನೋಡಲು ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರಣವಾದವು ಎಂಬ ಕೀರ್ತಿ ಬರುತ್ತದೆ.

      ಹೀಗೆ ಪರಮೇಶ್ವರ್ ನೇತೃತ್ವದ ಮೈತ್ರಿಕೂಟ ಸರ್ಕಾರ ಅಸ್ತಿತ್ವದಲ್ಲಿದ್ದರೆ ಅದನ್ನು ಉರುಳಿಸಲು ಕಾಂಗ್ರೆಸ್‍ನ ಅತೃಪ್ತರೂ ಹೆದರುತ್ತಾರೆ.ಯಡಿಯೂರಪ್ಪ ನೇತೃತ್ವದ ಬಿಜೆಪಿಯೂ ಹೆದರುತ್ತದೆ ಎಂದು ದೇವೇಗೌಡರು ಹೇಳಿದ್ದಾರೆ.ದಲಿತ ನಾಯಕರೊಬ್ಬರನ್ನು ಸಿಎಂ ಹುದ್ದೆಯಿಂದ ಇಳಿಸಲು ಯಾರೇ ಪ್ರಯತ್ನ ಪಟ್ಟರೂ ರಾಜ್ಯದ ಶೇಕಡಾ ಇಪ್ಪತ್ತೊಂದರಷ್ಟು ಜನಸಂಖ್ಯೆಯಿರುವ ಸಮುದಾಯದ ಆಕ್ರೋಶಕ್ಕೆ ಒಳಗಾಗಬೇಕಾಗುತ್ತದೆ.ಹಾಗೆಯೇ ದಲಿತ ನಾಯಕರೊಬ್ಬರನ್ನು ಸಿಎಂ ಹುದ್ದೆಯಿಂದ ಕೆಳಗಿಳಿಸಲು ಪ್ರಯತ್ನ ನಡೆಸಿದವರು ವಿಲನ್‍ಗಳಾಗುತ್ತಾರೆ.

      ಹೀಗಾಗಿ ಪರಮೇಶ್ವರ್ ಅವರನ್ನು ಸಿಎಂ ಮಾಡೋಣ.ವಾಸ್ತವವಾಗಿ 2004 ರಲ್ಲಿ ಕರ್ನಾಟಕ ಅತಂತ್ರ ವಿಧಾನಸಭೆಯನ್ನು ಕಂಡಾಗ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರ್ಕಾರ ರಚನೆ ಮಾಡಲು ತೀರ್ಮಾನಿಸಿದೆವು.ಆ ಸಂದರ್ಭದಲ್ಲಿ ದಲಿತ ನಾಯಕ ಪರಮೇಶ್ವರ್ ಅವರನ್ನು ಸಿಎಂ ಮಾಡಲು ಮುಂದಾದೆವು.

      ಆದರೆ ಕಾರಣಾಂತರಗಳಿಂದ ಪರಮೇಶ್ವರ್ ಅವರನ್ನು ಸಿಎಂ ಹುದ್ದೆಯಲ್ಲಿ ಕೂರಿಸಲು ಸಾಧ್ಯವಾಗಲಿಲ್ಲ.ಹೀಗಾಗಿ ಅವತ್ತು ಪರಮೇಶ್ವರ್ ಅವರಿಗೆ ದಕ್ಕಬೇಕಿದ್ದ ಸಿಎಂ ಹುದ್ದೆ ಧರ್ಮಸಿಂಗ್ ಅವರಿಗೆ ದಕ್ಕಿತು.ಈ ಹಿನ್ನೆಲೆಯನ್ನೂ ಗಮನದಲ್ಲಿಟ್ಟುಕೊಂಡು ಪರಮೇಶ್ವರ್ ಅವರಿಗೆ ಸಿಎಂ ಹುದ್ದೆ ನೀಡಬೇಕು.ಆ ಮೂಲಕ ಹಿಂದೆ ಆಗಿ ಹೋಗಿರುವ ಪ್ರಮಾದವೊಂದನ್ನು ಸರಿಪಡಿಸಬೇಕು ಎಂದು ದೇವೇಗೌಡರು ಹೇಳಿದ್ದಾರೆ.

      ಪರಮೇಶ್ವರ್ ಸಿಎಂ ಆಗಿ,ರೇವಣ್ಣ ಡಿಸಿಎಂ ಆದರೆ ಸರ್ಕಾರವನ್ನು ಉರುಳಿಸಲು ಬಿಜೆಪಿಯವರಿರಲಿ,ಕಾಂಗ್ರೆಸ್ ಪಕ್ಷದಲ್ಲಿರುವ ಅತೃಪ್ತರೂ ಸುಮ್ಮನಾಗುತ್ತಾರೆ.ಆ ಮೂಲಕ ಸರ್ಕಾರ ಭದ್ರವಾಗಿರುತ್ತದೆ.ಆದರೆ ಇವೆಲ್ಲವೂ ಯುಪಿಎ ಅಧಿಕಾರಕ್ಕೆ ಬರುವುದನ್ನು ಅವಲಂಬಿಸಿದೆ.ಯುಪಿಎ ಬಂದರೆ ಕುಮಾರಸ್ವಾಮಿ ಕೇಂದ್ರ ಮಂತ್ರಿಯಾಗಲಿ,ಪರಮೇಶ್ವರ್-ರೇವಣ್ಣ ಜೋಡಿ ಕರ್ನಾಟಕದಲ್ಲಿ ಸರ್ಕಾರ ನಡೆಸಲಿ.ಒಂದು ವೇಳೆ ಎನ್‍ಡಿಎ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಕುಮಾರಸ್ವಾಮಿ ನೇತೃತ್ವದ ಮೈತ್ರಿಕೂಟ ಸರ್ಕಾರವೇ ಮುಂದುವರಿಯಲಿ ಎಂದು ದೇವೇಗೌಡರು ವಿವರಿಸಿದ್ದಾರೆ ಎಂದು ಮೂಲಗಳು ಹೇಳಿವೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here