ಲಖನೌ:
ಡೈರೆಕ್ಟರೇಟ್ ಜನರಲ್ ಆಫ್ ಜಿಎಸ್ಟಿ ಇಂಟೆಲಿಜೆನ್ಸ್ ಮತ್ತು ಆದಾಯ ತೆರಿಗೆ ಅಧಿಕಾರಿಗಳ ನೇತೃತ್ವದಲ್ಲಿ ಇತ್ತೀಚೆಗಷ್ಟೇ ಉದ್ಯಮಿಯೊಬ್ಬರ ಮನೆಯ ಮೇಲೆ ನಡೆದ ದಾಳಿಯ ವೇಳೆ ಸಿಕ್ಕಂತಹ ರಾಶಿ ರಾಶಿ ಹಣದ ಪ್ರಕರಣವೂ ಇದೀಗ ದೇಶದ ಗಮನ ಸೆಳೆದಿದೆ.
ಬರೋಬ್ಬರಿ 250 ಕೋಟಿ ರೂ. ಹಣ ಸಂಗ್ರಹಿಸಿದ್ದ ಉದ್ಯಮಿಯ ಕೆಲವೊಂದಿಷ್ಟು ವಿಚಾರಗಳು ಇದೀಗ ಕುತೂಹಲ ಕೆರಳಿಸಿದೆ.
ಸುಮಾರು 31 ಕೋಟಿ ರೂಪಾಯಿ ವಂಚನೆ ಆರೋಪದ ಮೇಲೆ ಉತ್ತರ ಪ್ರದೇಶದ ಕಾನ್ಪುರ ಮೂಲದ ಉದ್ಯಮಿ ಪಿಯೂಷ್ ಜೈನ್ರನ್ನು ಇಂದು ಬಂಧಿಸಲಾಗಿದೆ. ಸುಮಾರು 120 ಗಂಟೆಗಳ ಕಾರ್ಯಾಚರಣೆಯ ಬಳಿಕ ಡೈರೆಕ್ಟರೇಟ್ ಜನರಲ್ ಆಫ್ ಜಿಎಸ್ಟಿ ಇಂಟೆಲಿಜೆನ್ಸ್ ಮತ್ತು ಆದಾಯ ತೆರಿಗೆ ಅಧಿಕಾರಿಗಳು ಪಿಯುಷ್ ಜೈನ್ರನ್ನು ಬಂಧಿಸಿದ್ದಾರೆ.
ಇತ್ತೀಚಿನ ಡೇಟಾ ಪ್ರಕಾರ ಜೈನ್ ಮನೆಯಲ್ಲಿ 300 ಕೋಟಿ ರೂಪಾಯಿ ನಗದು ಸಿಕ್ಕಿದೆ ಎಂದು ಹೇಳಲಾಗಿದೆ. ದುಬೈನಲ್ಲಿರುವ ಎರಡ ಆಸ್ತಿ ಸೇರಿದಂತೆ ಅನೇಕ ಆಸ್ತಿ ದಾಖಲೆಗಳು ಮತ್ತು ವಿದೇಶಿ ಮಾರ್ಕಿಂಗ್ ಇರುವ ಚಿನ್ನವನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಸ್ಥಳೀಯರು ಹೇಳುವ ಪ್ರಕಾರ ಜೈನ್ ಸರಳ ಜೀವನ ನಡೆಸುತ್ತಿದ್ದರಂತೆ. ತನ್ನ ಹಳೆಯ ಸ್ಕೂಟರ್ನಲ್ಲೇ ಯಾವಾಗಲೂ ಪ್ರಯಾಣ ಮಾಡುತ್ತಿದ್ದರು. ಸರಳ ಬಟ್ಟೆಯನ್ನು ಧರಿಸಿ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ಎಂದಿಗೂ ಇತರರ ವ್ಯವಹಾರಗಳಲ್ಲಿ ಮೂಗು ತೂರಿಸುತ್ತಿರಲಿಲ್ಲ ಮತ್ತು ಕಡಿಮೆ ಪ್ರೊಫೈಲ್ ಇಟ್ಟುಕೊಂಡಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.
ಜೈನ್ ಅವರ ತಾತ ಫೂಲ್ ಛಂದ್ ಜೈನ್ ಪ್ರಿಟಿಂಗ್ ಬಟ್ಟೆಗಳ ಬಿಸಿನೆಸ್ ಮಾಡುತ್ತಿದ್ದರು, ಜೈನ್ ಸಹೋದರನ ಹೆಸರು ಅಂಬರೀಷ್. ಇಬ್ಬರು ಕಾನ್ಪುರ ವಿಶ್ವವಿದ್ಯಾಲಯದಲ್ಲಿ ರಸಾಯನಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ್ದರು.
ಸುಗಂಧ ದ್ರವ್ಯ ಇಂಡಸ್ಟ್ರಿಯನ್ನು ಆರಂಭಿಸುವ ಮುನ್ನ ಜೈನ್, ಮುಂಬೈನಲ್ಲಿ ಸೇಲ್ಸ್ಮನ್ ಆಗಿ ಕೆಲಸ ಮಾಡುತ್ತಿದ್ದ. ಕೆಮಿಸ್ಟ್ರಿಯಲ್ಲಿ ಚೆನ್ನಾಗಿ ಪಳಗಿದ್ದ ಜೈನ್, ಸಾಬೂನು ಮತ್ತು ಡಿಟೆಂರ್ಜೆಂಟ್ನ ಕಾಂಪೌಂಡ್ ತಯಾರಿಸುತ್ತಿದ್ದ.
ಪಿಯೂಷ್ ಜೈನ್ ಬೆಳೆದಂತೆ, ಅವರು ಕುಟುಂಬದ ವ್ಯವಹಾರವನ್ನು ವಹಿಸಿಕೊಂಡರು ಮತ್ತು ಸೋಪ್ ಮತ್ತು ಡಿಟರ್ಜೆಂಟ್ ಕಾಂಪೌಂಡ್‌ಗಳನ್ನು ತಯಾರಿಸಲು ಪ್ರಾರಂಭಿಸಿದರು.
ಅಲ್ಲದೆ, ಗುಟ್ಕಾ ಮತ್ತು ತಂಬಾಕು ಉತ್ಪನ್ನಗಳಿಗೆ ಖಾದ್ಯ ಸಂಯುಕ್ತಗಳನ್ನು ತಯಾರಿಸಲು ಮುಂದಾದರು. ನಂತರ ಸುಗಂಧ ದ್ರವ್ಯ ತಯಾರಿಕೆಗೆ ಇಳಿದರು. ವ್ಯವಹಾರ ವಿಸ್ತಾರಗೊಳ್ಳುತ್ತಿದ್ದಂತೆ ಜೈನ್, ಕನೌಜ್ನಿಂದ ಕಾನ್ಪುರಕ್ಕೆ ಸ್ಥಳಾಂತರಗೊಂಡರು.
ಜೈನ್ಗೆ ಮೂವರು ಮಕ್ಕಳಿದ್ದಾರೆ. ಅದರಲ್ಲಿ ಓರ್ವ ಮಗಳು ನೀಲಾಂಶ ಎಂಬಾಕೆ ಪೈಲಟ್ ಮದುವೆ ಆಗಿದ್ದಾರೆ. ಇಬ್ಬರು ಗಂಡು ಮಕ್ಕಳಾದ ಪ್ರತ್ಯುಷ್ ಮತ್ತು ಪ್ರಿಯಾಂಶ್ ಅಧಿಕಾರಿಗಳ ದಾಳಿ ನಡೆದಾಗ ಮನೆಯಲ್ಲೇ ಇದ್ದರು. ಜೈನ್ ಅವರ ತಂದೆ ಮಹೇಶ್ ಚಂದ್ರ ಜೈನ್ ಚಿಕಿತ್ಸೆಗಾಗಿ ದೆಹಲಿಯಲ್ಲಿದ್ದರು.
ಇನ್ನು ಉದ್ಯಮಿ ಜೈನ್ ಮನೆಯ ಮೇಲಿನ ದಾಳಿ ಇದೀಗ ರಾಜಕೀಯ ತಿರುವು ಪಡೆದುಕೊಂಡಿದೆ. ಬಿಜೆಪಿ ಮತ್ತು ಸಮಾಜವಾದಿ ಪಕ್ಷಗಳ ನಡುವೆ ಮಾತಿನ ಚಕಮಕಿಗೆ ಕಾರಣವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ