‘ಪೊಲೀಸ್ ವ್ಯವಸ್ಥೆ ಬಲಪಡಿಸಲು ಕ್ರಮ’ – ಸಿಎಂ ಯಡಿಯೂರಪ್ಪ

 ಬೆಂಗಳೂರು :  

      ತಂತ್ರಜ್ಞಾನ ಬೆಳವಣಿಗೆಯೊಂದಿಗೆ ಅಪರಾಧಗಳ ಸ್ವರೂಪವೂ ಬದಲಾಗುತ್ತಿದೆ. ಇಂತಹ ಅಪರಾಧಗಳನ್ನು ನಿಯಂತ್ರಿಸಲು ಅಗತ್ಯ ಸೌಲಭ್ಯಗಳನ್ನು ಒದಗಿಸುವ ಮೂಲಕ ರಾಜ್ಯ ಪೊಲೀಸ್ ವ್ಯವಸ್ಥೆಯನ್ನು ಬಲ ಪಡಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ಇಲ್ಲಿ ತಿಳಿಸಿದರು.

      ಅವರು ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

      ಪೊಲೀಸರ ಮನೋಸ್ಥೈರ್ಯವನ್ನು ಹೆಚ್ಚಿಸಿ, ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಲು ಪೊಲೀಸ್ ಸಿಬ್ಬಂದಿಗಳ ಕಲ್ಯಾಣ ಕಾರ್ಯಕ್ರಮಗಳನ್ನು ಸರ್ಕಾರ ಹಮ್ಮಿಕೊಂಡಿದೆ.

      ರಾಜ್ಯಾದ್ಯಂತ ಪೊಲೀಸ್ ಗೃಹ-2020 ಯೋಜನೆಯಡಿ 2020ರ ಅಕ್ಟೋಬರ್ ಅಂತ್ಯಕ್ಕೆ ಒಟ್ಟು 9,820 ವಸತಿ ಗೃಹಗಳು ನಿರ್ಮಾಣಗೊಂಡಿವೆ. ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳ ನೇಮಕಾತಿ ಹಾಗೂ ಪರಿಹಾರ ಭತ್ಯೆಗಳ ಮಂಜೂರಾತಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಯೋಜನೆಗಳು ಪೊಲೀಸ್ ಸಿಬ್ಬಂದಿಯ ಕುರಿತ ನಮ್ಮ ಕಾಳಜಿಯ ಪ್ರತೀಕವಾಗಿದೆ ಎಂದು ಮುಖ್ಯಮಂತ್ರಿಗಳು ವಿವರಿಸಿದರು.

      ರಾಜ್ಯ ನ್ಯಾಯ ವಿಜ್ಞಾನ ಪ್ರಯೋಗಾಲಯ, ಬೆಂಗಳೂರು ಮತ್ತು ಬೆಳಗಾವಿ ನಗರದಲ್ಲಿ 02 ಮಹಿಳಾ ಬ್ಯಾರೆಕ್‍ಗಳು, ದಾವಣಗೆರೆಯಲ್ಲಿ ಸಾರ್ವಜನಿಕ ಪೊಲೀಸ್ ಪಬ್ಲಿಕ್ ಶಾಲೆಗಳ ನಿರ್ಮಾಣ, 5 ನಗರಗಳಲ್ಲಿ ಒನ್ ಸ್ಟಾಪ್ ಸರ್ವೀಸ್ ಸೆಂಟರ್‍ಗಳ ಸ್ಥಾಪನೆ ಸೇರಿದಂತೆ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ. ಸಂಕಷ್ಟದಲ್ಲಿರುವ ಜನರಿಗೆ ತ್ವರಿತವಾಗಿ ಸ್ಪಂದಿಸಲು ಅನುಕೂಲವಾಗುವಂತೆ ನಿರ್ಭಯ ಯೋಜನೆಯಡಿಯಲ್ಲಿ 700 ದ್ವಿ-ಚಕ್ರ ವಾಹನಗಳನ್ನು ರಾಜ್ಯದ ವಿವಿಧ ಪೊಲೀಸ್ ಠಾಣೆಗಳಿಗೆ ನೀಡಲಾಗಿದೆ ಎಂದು ತಿಳಿಸಿದರು.

      ಸಮಾಜದಲ್ಲಿ ಅಪರಾಧ ಪ್ರಕರಣಗಳನ್ನು ಹತ್ತಿಕ್ಕಲು ಸೈಬರ್ ಎಕನಾಮಿಕ್ ಮತ್ತು ನಾರ್ಕೊಟಿಕ್ಸ್ ಪೊಲೀಸ್ ಠಾಣೆ, ಹೊಸ ಸಂಚಾರಿ ಪೊಲೀಸ್ ಠಾಣೆಗಳನ್ನು ಸೃಜಿಸಲಾಗಿದೆ. ಅಪರಾಧ ನಿಯಂತ್ರಣ, ಅಪರಾಧ ಪತ್ತೆಯಲ್ಲಿಯೂ ದಕ್ಷತೆಯಿಂದ ಕಾರ್ಯನಿರ್ವಹಿಸಬೇಕು.ಸೈಬರ್ ಅಪರಾಧ, ಆರ್ಥಿಕ ಅಪರಾಧಗಳನ್ನು ತಡೆಗಟ್ಟಲು ಆದ್ಯತೆ ನೀಡಬೇಕು ಎಂದು ಮುಖ್ಯಮಂತ್ರಿಗಳು ಸೂಚನೆ ನೀಡಿದರು. ಜೊತೆಗೆ ಠಾಣೆಗೆ ದೂರು ನೀಡಲು ಬರುವ ಸಾರ್ವಜನಿಕರೊಂದಿಗೆ ಮಾನವೀಯತೆಯಿಂದ ವರ್ತಿಸುವಂತೆ ಸಲಹೆ ನೀಡಿದರು.

      ಈ ಸಂದರ್ಭದಲ್ಲಿ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಕರ್ನಾಟಕ ಪೊಲೀಸ್ ಇಲಾಖೆ ದಕ್ಷತೆ, ಪ್ರಾಮಾಣಿಕತೆಯ ಪರಂಪರೆಯನ್ನು ಹೊಂದಿದೆ. ಅತ್ಯಂತ ಒತ್ತಡ, ಸವಾಲಿನ ಸನ್ನಿವೇಶದಲ್ಲಿಯೂ ಪೊಲೀಸರು ದಕ್ಷತೆಯಿಂದ ಕಾರ್ಯನಿರ್ವಹಿಸಿದ್ದಾರೆ ಎಂದು ಅಭಿನಂದನೆ ಸಲ್ಲಿಸಿದರು. ಮುಂದಿನ ದಿನಗಳಲ್ಲಿಯೂ ಸ್ವಚ್ಛ, ದಕ್ಷ ಮತ್ತು ಒತ್ತಡಮುಕ್ತವಾಗಿ ಪೊಲೀಸರು ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.

     ಪೊಲೀಸರು ಹೊಸ ಸವಾಲುಗಳನ್ನು ಎದುರಿಸಲು ಅನುವಾಗುವಂತೆ ಇಲಾಖೆಯನ್ನು ಬಲಪಡಿಸಬೇಕಾಗಿದೆ. ಪೊಲೀಸರಿಗೆ ತರಬೇತಿ, ತಾಂತ್ರಿಕ ಬೆಂಬಲ, ತಂತ್ರಜ್ಞಾನದ ಉನ್ನತೀಕರಣದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

      ಕಳೆದ ವರ್ಷದಲ್ಲಿ ಮಾದಕವಸ್ತುಗಳನ್ನು ದಾಖಲೆ ಪ್ರಮಾಣದಲ್ಲಿ ವಶಪಡಿಸಿಕೊಳ್ಳಲಾಗಿದ್ದು, ಶಾಲೆ, ಕಾಲೇಜುಗಳ ಸಮೀಪ ಮಾದಕವಸ್ತುಗಳು ಲಭ್ಯವಾಗದಂತೆ ಪೊಲೀಸ್ ಠಾಣೆಯ ಹಂತದಲ್ಲಿಯೇ ಆದ್ಯತೆಯ ಮೇರೆಗೆ ಕ್ರಮ ವಹಿಸುವಂತೆ ಸೂಚಿಸಿದರು.

     ಪ್ರಾಸ್ತಾವಿಕವಾಗಿ ಮಾತನಾಡಿದ ರಾಜ್ಯ ಪೊಲೀಸ್ ಮಹಾನಿರ್ದೇಶಕ ಹಾಗೂ ಮಹಾ ನಿರೀಕ್ಷಕ ಪ್ರವೀಣ್ ಸೂದ್ ಅವರು ಪೊಲೀಸ್ ಐಟಿ ಉನ್ನತೀಕರಣ ತುರ್ತು ಅಗತ್ಯವೆಂದು ಮುಖ್ಯಮಂತ್ರಿಗಳ ಗಮನ ಸೆಳೆದರು. ಇದಕ್ಕೆ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

     ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್, ಒಳಾಡಳಿತ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್ ಗೋಯಲ್ ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap