ಬೆಂಗಳೂರು :
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್‌ಗೆ ದಿನಕ್ಕೊಂದು ಸಂಕಷ್ಟ ಶುರುವಾಗುತ್ತಿದೆ. ಒಂದು ಕಡೆ ಜೈಲಿನ ಊಟಕ್ಕೆ ಹೊಂದಿಕೊಳ್ಳಲು ಆಗದೇ ತೂಕ ಕಳೆದುಕೊಳ್ಳುತ್ತಿದ್ದರೆ, ಮತ್ತೊಂದು ಕಡೆ ಪೊಲೀಸರು ತನಿಖೆ ಮಾಡಿದಂತೆಲ್ಲಾ ಹೊಸ ಹೊಸ ಸಾಕ್ಷಿಗಳು ಸಿಕ್ಕುತ್ತಿದೆ.
ದರ್ಶನ್ ತೂಗುದೀಪ ಮತ್ತು ಗ್ಯಾಂಗ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಆರೋಪಿಗಳಿಗೆ ಕಾನೂನು ಪ್ರಕಾರ ಕಠಿಣ ಶಿಕ್ಷೆ ಕೊಡಿಸಲು ಹಗಲು ರಾತ್ರಿ ಎನ್ನದೆ ತನಿಖೆ ಮಾಡುತ್ತಿದ್ದಾರೆ. ದರ್ಶನ್ ಬಂಧನಕ್ಕೆ ಮುನ್ನವೇ ಪ್ರಮುಖ ಸಾಕ್ಷ್ಯಗಳನ್ನು ಕಲೆ ಹಾಕಿಯೇ ಖಾಕಿ ಪಡೆ ದರ್ಶನ್ ಮತ್ತು ಸಹಚರರನ್ನು ಬಂಧಿಸಿತ್ತು.
ರೇಣುಕಾಸ್ವಾಮಿ ಮೊಬೈಲ್ ಪತ್ತೆಗಾಗಿ ಸಾಕಷ್ಟು ಹುಡುಕಾಟ ನಡೆಸಿದ್ದರು. ಆದರೆ ಮೊಬೈಲ್ ಪತ್ತೆಯಾಗದ ಹಿನ್ನಲೆಯಲ್ಲಿ ರೇಣುಕಾಸ್ವಾಮಿ ಬಳಸುತ್ತಿದ್ದ ಸಂಖ್ಯೆಯ ನಕಲಿ ಸಿಮ್ ಪಡೆದು, ರೇಣುಕಾಸ್ವಾಮಿ ಬಳಸುತ್ತಿದ್ದ ಫೇಸ್‌ಬುಕ್, ಇನ್‌ಸ್ಟಾಗ್ರಾಂ, ವಾಟ್ಸಾಪ್ ಅಕೌಂಟ್‌ಗಳಿಗೆ ಲಾಗಿನ್ ಆಗುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ವರದಿಯಾಗಿದೆ. ರೇಣುಕಾಸ್ವಾಮಿ ಪವಿತ್ರಾಗೌಡಗೆ ಏನೆಲ್ಲಾ ಮೆಸೇಜ್ ಮಾಡಿದ್ದರು, ಅದಕ್ಕೆ ಪವಿತ್ರಾ ಗೌಡ ರಿಪ್ಲೈ ಏನು ಎನ್ನುವ ವಿಚಾರಗಳು ಪೊಲೀಸರಿಗೆ ತಿಳಿದಿದೆ ಎನ್ನಲಾಗಿದೆ.
ರೇಣುಕಾಸ್ವಾಮಿ ಕೊಲೆ ಬಳಿಕ ದರ್ಶನ್ ಮನೆಯ ಸಿಸಿಟಿವಿ ದೃಶ್ಯಗಳನ್ನು ಡಿಲೀಟ್ ಮಾಡಲಾಗಿತ್ತು. ಈಗ ಪೊಲೀಸರು ಈ ದೃಶ್ಯಗಳನ್ನು ಮರುಸಂಪಾದನೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಕೊಲೆ ನಡೆದ ದಿನ ಆರೋಪಿಗಳು ದರ್ಶನ್ ಮನೆಗೆ ಬಂದಿದ್ದರಾ? ದರ್ಶನ್ ಮನೆ ಬಳಿ ಅಂದು ಯಾರೆಲ್ಲಾ ಇದ್ದರು ಎನ್ನುವ ಮಹತ್ವದ ವಿಚಾರ ಈಗ ಪೊಲೀಸರಿಗೆ ಸಿಕ್ಕಂತಾಗಿದೆ.
ದರ್ಶನ್ ಬಂಧಿಸುತ್ತಿದ್ದಂತೆ ಅವರ ಮನೆಯ ಸಿಸಿಟಿವಿ ಡಿವಿಆರ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಆದರೆ ಅಷ್ಟರಲ್ಲಾಗಲೇ ಸಿಸಿಟಿವಿ ದೃಶ್ಯಾವಳಿಗಳು ಡಿಲೀಟ್ ಆಗಿದ್ದವು. ದೃಶ್ಯಗಳನ್ನು ರಿಟ್ರೈವ್ ಮಾಡಲು ಕಾಮಾಕ್ಷಿಪಾಳ್ಯ ಪೊಲೀಸರು, ಸಿಐಡಿ ಸೈಬರ್ ತಜ್ಞರ ಮೊರೆ ಹೋಗಿದ್ದರು, ಡಿಲೀಟ್ ಆಗಿದ್ದ ದೃಶ್ಯಗಳನ್ನು ರಿಟ್ರೈವ್ ಮಾಡುವಲ್ಲಿ ಸೈಬರ್ ತಜ್ಞರು ಯಶಸ್ವಿಯಾಗಿದ್ದಾರೆ.
ರೇಣುಕಾಸ್ವಾಮಿ ಕೊಲೆಯಾದ ದಿನ ಮತ್ತು ನಂತರದ ದಿನಗಳಲ್ಲಿ ದರ್ಶನ್ ಮನೆ ಬಳಿ ಯಾರೆಲ್ಲಾ ಬಂದಿದ್ದರು ಎನ್ನುವ ಮಹತ್ವದ ದೃಶ್ಯಗಳು ಲಭ್ಯವಾಗಿವೆ. ಜೂನ್ 8 ರಿಂದ ಜೂನ್ 10 ರವರೆಗೆ ದರ್ಶನ್ ಮನೆ ಬಳಿ ನಡೆದಿರುವ ಚಲನವನಗಳು ಸಿಕ್ಕಿದ್ದು, ಪೊಲೀಸರಿಗೆ ಮಹತ್ವದ ಸಾಕ್ಷಿಗಳು ಸಿಕ್ಕಂತಾಗಿದೆ ಎಂದು ಮಾಧ್ಯಮಗಳು ವರದಿಯಲ್ಲಿ ತಿಳಿಸಿವೆ.
ಬಂಧಿತರಾಗಿರುವ ಆರೋಪಿಗಳ ಫಿಂಗರ್ ಪ್ರಿಂಟ್ ಈಗಾಗಲೇ ರೇಣುಕಾಸ್ವಾಮಿ ಶವ ಸಾಗಿಸಲು ಬಳಕೆ ಮಾಡಿದ್ದ ವಾಹನದಲ್ಲಿ ಪತ್ತೆಯಾಗಿದೆ. ಎರಡೀ ಫಿಂಗರ್ ಪ್ರಿಂಟ್‌ಗಳು ಹೋಲಿಕೆಯಾಗಿದ್ದು, ದರ್ಶನ್ ಮತ್ತು ತಂಡಕ್ಕೆ ಕಾನೂನಿನ ಕುಣಿಕೆ ಮತ್ತಷ್ಟು ಬಿಗಿಯಾಗಿದೆ.
ದರ್ಶನ್ ಮತ್ತು ಗ್ಯಾಂಗ್‌ಗೆ ಆಗಸ್ಟ್ 14ರವರೆಗೆ ನ್ಯಾಯಾಂಗ ಬಂಧನವನ್ನು ವಿಸ್ತರಣೆ ಮಾಡಲಾಗಿದೆ. ದರ್ಶನ್, ಪವಿತ್ರಾ ಗೌಡ ಸೇರಿ 13 ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದರೆ. ಉಳಿದ 4 ಆರೋಪಿಗಳನ್ನು ತುಮಕೂರು ಕಾರಾಗೃಹಕ್ಕೆ ರವಾನಿಸಲಾಗಿದೆ. ಕೆಲವು ಆರೋಪಿಗಳು ಪ್ರಕರಣದಲ್ಲಿ ಸಾಕ್ಷಿಯಾಗಲು ಒಪ್ಪಿಕೊಂಡಿದ್ದಾರೆ ಎನ್ನಲಾಗಿದ್ದು, ಸುರಕ್ಷತೆ ದೃಷ್ಟಿಯಿಂದ ಅವರನ್ನು ತುಮಕೂರು ಕಾರಾಗೃಹಕ್ಕೆ ರವಾನಿಸಲಾಗಿದೆ ಎಂದು ಹೇಳಲಾಗಿದೆ.