ತುಮಕೂರು:
ತೆರಿಗೆ ಹಣಕಾಸು ಸ್ಥಾಯಿ ಸಮಿತಿ ಸಭೆಯಲ್ಲಿ ಮೇಯರ್, ಅಧ್ಯಕ್ಷರು, ಸದಸ್ಯರ ಅಸಮಾಧಾನ
ಪಾಲಿಕೆ ಕಂದಾಯ ಶಾಖೆಯಲ್ಲಿ ಲಂಚಕ್ಕೆ ಬೇಡಿಕೆ ಮಿತಿಮೀರಿದ್ದು, ಪ್ರತೀ ಕಡತಕ್ಕೂ ಕನಿಷ್ಠ 1000 ರೂ. ಲಂಚ ಮಾಮೂಲಿಯಾಗಿದೆ. ತಂದೆಯಿಂದ ಮಕ್ಕಳ ಹೆಸರಿನ ಖಾತೆಗೂ 15 ಸಾವಿರ ಫಿಕ್ಸ್ ಮಾಡಲಾಗಿದೆ ಎಂದು ಸೋಮವಾರ ನಡೆದ ತೆರಿಗೆ ಹಣಕಾಸು ನಿರ್ಧರಣೆ ಸ್ಥಾಯಿ ಸಮಿತಿ ಸಭೆಯಲ್ಲಿ ಸದಸ್ಯರಾದ ಟಿ.ಎಂ. ಮಹೇಶ್, ಶ್ರೀನಿವಾಸ್ ಗಂಭೀರ ಆರೋಪ ಮಾಡಿದರು. ಇದರಿಂದ ಕುಪಿತರಾದ ಮೇಯರ್ ಬಿ.ಜಿ.ಕೃಷ್ಣಪ್ಪ, ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷೆ ನಳಿನಾ ಇಂದ್ರಕುಮಾರ್ ಕಂದಾಯ ಶಾಖೆ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡು ಅಸಮಾಧಾನ ವ್ಯಕ್ತಪಡಿಸಿದರು.
ಹಣಕಾಸು ತೆರಿಗೆ ನಿರ್ಧರಣೆ ಸ್ಥಾಯಿ ಸಮಿತಿ ಅಧ್ಯಕ್ಷೆ ನಳಿನಾ ಇಂದ್ರಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ಮೆಸ್ ಮಹೇಶ್ ಕಂದಾಯ ಅಧಿಕಾರಿ ಹೆಸರನ್ನೇ ನೇರವಾಗಿ ಸಭೆಯಲ್ಲಿ ಪ್ರಸ್ತಾಪಿಸಿ ಲಂಚವಿಲ್ಲದೆ ಕಂದಾಯ ಶಾಖೆಯಲ್ಲಿ ಕೆಲಸವೇ ಆಗದಂತಾಗಿದೆ. ತಂದೆಯಿಂದ ಮಗನ ಹೆಸರಿಗೆ ವರ್ಗಾವಣೆಗೆ 15 ಸಾವಿರ ಬೇಡಿಕೆಯಿಡುತ್ತಾರೆ. ಕಾರ್ಪೋರೇಟರ್ ಗಮನಕ್ಕೆ ಬರುತ್ತದೆ ಎಂದರೂ ಅವರಿಗೆ ಭಯವಿಲ್ಲ.
ನಾವು ಸೂಚಿಸಿದ ವಾರ್ಡ್ ಖಾತೆದಾರರಿಗೂ ಖಾತೆ ಮಾಡಿಕೊಡಲು ಮೂರ್ನಾಲ್ಕು ತಿಂಗಳು ಸತಾಯಿಸುತ್ತಿದ್ದಾರೆ. ಅರಸಿಂಗರ ಬೀದಿಯಿಂದ ಚಿಕ್ಕಪೇಟೆಯೆಂದು ಖಾತೆಯಲ್ಲಿ ತಿದ್ದುಪಡಿ ಮಾಡಿಕೊಡುವಂತೆ ಅರ್ಜಿ ಸಲ್ಲಿಸಿದ ವಿಶೇಷಚೇತನ ವ್ಯಕ್ತಿ ಮೂರ್ನಾಲ್ಕು ತಿಂಗಳು ಅಲೆಯಬೇಕೆಂದರೆ ಏನರ್ಥ ಎಂದು ಅಸಮಾಧಾನ ಹೊರಹಾಕಿದರು.
ಪಾಲಿಕೆ ಮರ್ಯಾದೆಗೋಸ್ಕರ ಸುಮ್ಮನಿದ್ದೇವೆ:
ಧನಿಗೂಡಿಸಿದ ಸದಸ್ಯ ಶ್ರೀನಿವಾಸ್ ಪಾಲಿಕೆ ಲಂಚಾವತರಾದ ಬಗ್ಗೆ ಹಾದಿ ಬೀದಿಯಲ್ಲಿ ಮಾತಾಡಿಕೊಳ್ಳುವಂತಾಗಿದ್ದು, ದುಡ್ಡುಕೊಟ್ಟರೆ ಮಾತ್ರ ಕೆಲಸವಾಗುತ್ತದೆ ಎಣದು ಟೀಶಾಪ್, ಹೋಟೆಲ್‍ಗಳಲ್ಲೆಲ್ಲ ಚರ್ಚಿಸುತ್ತಿದ್ದಾರೆ.
ತಪ್ಪು ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ದೂರು ನೀಡಿ ಲೋಕಾಯುಕ್ತ, ಎಸಿಬಿಗೆ ಟ್ರಾಪ್ ಮಾಡಿಸಬಹುದು. ಆದರೆ ಪಾಲಿಕೆ ಮರ್ಯಾದೆ ರಾಜ್ಯಾದ್ಯಂತ ಹರಾಜಾಗುತ್ತದೆ ಎಂಬ ಕಾರಣಕ್ಕೆ ಸುಮ್ಮನಿದ್ದೇವೆ. ಈ ಭ್ರಷ್ಟಾಚಾರ ನಿಯಂತ್ರಿಸದಿದ್ದರೆ ಸದಸ್ಯರೇ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದರು.
ತಿದ್ದುಪಡಿಗೂ ಮೂರ್ನಾಲ್ಕು ತಿಂಗಳು ಸತಾಯಿಸುತ್ತಿದ್ದು, ಯಾವುದೇ ಒಂದು ದಾಖಲೆ ಇಲ್ಲದಿದ್ದರೆ ಮಾಲೀಕರನ್ನು ಸಂಪರ್ಕಿಸದೆ ಫೈಲ್ ಪೆಂಡಿಂಗ್ ಇಡುತ್ತಿದ್ದಾರೆ. ದುಡ್ಡಿಲ್ಲದೆ ಕಡತಗಳೇ ಮೂವ್ ಆಗುತ್ತಿಲ್ಲ. ಆರ್‍ಓಗಳೇ ಇದಕ್ಕೆ ನೇರಹೊಣೆಹೊರಬೇಕು ಎಂದರು.
ಅಧ್ಯಕ್ಷೆ ನಳಿನಾ ಅವರು ಸಹ ಮಧ್ಯಪ್ರವೇಶಿಸಿ ಕಾರ್ಪೋರೇಟರ್ ಹೇಳಿದ ಕೆಲಸ ತಡಮಾಡುತ್ತಾರೆ. ಲೆಕ್ಕಪತ್ರ ಶಾಖೆಯಿಂದ ಒಂದು ಮಾಹಿತಿ ಕೇಳಿದಕ್ಕೆ 6 ತಿಂಗಳ ಬಳಿಕ ನೀಡಿದ್ದಾರೆ. ಇದೆಂಥಾ ಆಡಳಿತ ಎಂದು ಅಸಮಾಧಾನ ಹೊರಹಾಕಿದರು.
ಸದಸ್ಯ ಮಹೇಶ್ ಕಂದಾಯ ಕಟ್ಟಿದವರಿಗೂ, ಕಟ್ಟದವರಿಗೂ ಒಂದೇ ಧೋರಣೆಯನ್ನು ಪಾಲಿಕೆ ಅನುಸರಿಸುತ್ತಿದ್ದು, ಎಸ್‍ಆರ್ ವ್ಯಾಲ್ಯೂ ಹೆಚ್ಚಳದ ಬಳಿಕ ತೆರಿಗೆದಾರರಿಗೆ ಹೆಚ್ಚಿನ ಹೊರೆಯಾಗುತ್ತಿದೆ ಎಂದರು.
ಧೂಳಿನಿಂದ ವಾರ್ಡ್ ಜನರನ್ನು ರಕ್ಷಿಸಿ: ಪಾಲಿಕೆಅಧಿಕಾರಿಗಳು ಜನರ ಆರೋಗ್ಯ ರಕ್ಷಣೆ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ನನ್ನ ವಾರ್ಡ್‍ನಲ್ಲಿ ರೈಸ್‍ಮಿಲ್, ಫ್ಯಾಕ್ಟರಿಯಿಂದ ಧೂಳು ವಿಪರೀತವಾಗಿದ್ದು, ಇದರ ನಿಯಂತ್ರಣಕ್ಕೆ ಹಲವು ಬಾರಿ ಹೇಳಿದರೂ ಕ್ರಮ ವಹಿಸುತ್ತಿಲ್ಲ ಎಂದು ತೆರಿಗೆ ಸಮಿತಿ ಅಧ್ಯಕ್ಷೆ ನಳಿನಾ ಇಂದ್ರಕುಮಾರ್ ಬೇಸರ ವ್ಯಕ್ತಪಡಿಸಿದರು.
ಜಾಹೀರಾತು ಸಂಗ್ರಹ ಮಾಹಿತಿ ಒದಗಿಸುವಂತೆ ಅಧಿಕಾರಿಗಳನ್ನು ಪ್ರಶ್ನಿಸಿದರು. ಆಯುಕ್ತೆ ರೇಣುಕಾ ಅವರು ತಾವೇ ಸ್ಥಳಕ್ಕೆ ಬಂದು ವೀಕ್ಷಣೆ ಮಾಡಿ ಧೂಳಿಸ ಸಮಸ್ಯೆ ಇತ್ಯರ್ಥಕ್ಕೆ ಕ್ರಮವಹಿಸುವುದಾಗಿ ಭರವಸೆ ನೀಡಿದರು. ಸಭೆಯಲ್ಲಿ ಉಪಮೇಯರ್ ನಾಜಿಮಾ ಬೀ, ಸದಸ್ಯರಾದ ನವೀನಾ ಅರುಣ್, ನಿರ್ಮಲಶಿವಕುಮಾರ್, ದೀಪಶ್ರೀ ಮಹೇಶ್‍ಬಾಬು ಹಾಗೂ ಕಂದಾಯ ಲೆಕ್ಕಪತ್ರ, ಆರೋಗ್ಯ ಶಾಖೆ ಅಧಿಕಾರಿಗಳು ಹಾಜರಿದ್ದರು.
ತಿಂಗಳೊಳಗೆ ಖಾತೆ ಕಡತ ಇತ್ಯರ್ಥವಾಗಬೇಕು: ಮೇಯರ್
ಕಂದಾಯ ಶಾಖೆವಿರುದ್ಧ ಸದಸ್ಯರು ಮಾಡಿದ ಭ್ರಷ್ಟಾಚಾರ ಆರೋಪಗಳಿಗೆ ಪ್ರತಿಕ್ರಿಯಿಸಿದ ಮೇಯರ್ ಬಿ.ಜಿ.ಕೃಷ್ಣಪ್ಪ ಕುಪಿತರಾಗಿ ಕಂದಾಯ ಶಾಖೆ ಪರಿಸ್ಥಿತಿ ತುಂಬಾ ಕೆಟ್ಟಿದೆ.
ಇದು ಇಡೀ ಪಾಲಿಕೆಗೆ ಅವಮಾನಕಾರ ಸಂಗತಿ. ತಪ್ಪಿತಸ್ಥರನ್ನು ಅಮಾನತ್ತುಗೊಳಿಸಿ ಕ್ರಮಜರುಗಿಸಬೇಕು ಎಂದು ಆಯುಕ್ತರಿಗೆ ಸೂಚಿಸದರಿಲ್ಲದೆ ಯಾವುದೇ ಖಾತೆ ಕಡತಗಳು ಒಂದು ತಿಂಗಳಿಗೂ ಮೀರಿ ಬಾಕಿ ಉಳಿಸಿಕೊಳ್ಳುವಂತಿಲ್ಲ. ದಾಖಲೆ ಕೊರತೆಯಿದ್ದರೆ ಮಾಲೀಕರಿಂದ ತೀರಿಸಿ ಕಡತ ಇತ್ಯರ್ಥಗೊಳಿಸಬೇಕು ಎಂದು ನಿರ್ದೇಶಿಸಿದರು.
ಪಾಲಿಕೆಯಲ್ಲಿ ಕಾರ್ಪೋರೇಟರ್‍ಗಳಿಗೆ ಬೆಲೆ ಇಲ್ಲದಂತಾಗಿದೆ. ಅಧಿಕಾರಿಗಳು ತಮಗೆ ಬೇಕಾದವರು ದುಡ್ಡುಕೊಟ್ಟವರಿಗೆ ಬೇಗ ಖಾತೆ ಮಾಡಿಕೊಡುತ್ತಾರೆ. ಹೆಸರು ಬೀದಿಯ ಸಣ್ಣ ತಿದ್ದುಪಡಿಗೂ ತಿಂಗಳುಗಟ್ಟಲೇ ಕಾಯಬೇಕಾಗಿರುವುದು ಅವಮಾನಕರ.
-ಮಹೇಶ್, ಹಣಕಾಸು ಸ್ಥಾಯಿ ಸಮಿತಿ ಸದಸ್ಯ.
ಒಂದಿಬ್ಬರು ಅಧಿಕಾರಿಗಳು ಮಾಡುವ ತಪ್ಪಿಗೆ ಎಲ್ಲಾ ಅಧಿಕಾರಿಗಳ ಮೇಲೆ ಧೂಷಣೆ ಸರಿಯಲ್ಲ. ರಾಜ್ಯದಲ್ಲಿ ಮಂಗಳೂರು ಬಿಟ್ಟರೆ ತುಮಕೂರು ಪಾಲಿಕೆ 2600 ಇ ಆಸ್ತಿ ಖಾತೆ ಮಾಡಿಕೊಟ್ಟು 2ನೇಸ್ಥಾನದಲ್ಲಿದೆ. ಖಾತಾ ವರ್ಗಾವಣೆಯಲ್ಲಿ ವಿಳಂಬವಾಗುತ್ತಿಲ್ಲ. ತಿದ್ದುಪಡಿಯಲ್ಲಿ ಕೆಲವು ಮೂಲ ದಾಖಲೆಗಳನ್ನು ಪರಿಶೀಲಿಸಬೇಕಿರುವುದರಿಂದ ವಿಳಂಬವಾಗಿದೆ.
ಅವ್ಯವಹಾರ ವೆಸಗಿದ್ದ ಬಿಲ್‍ಕಲೆಕ್ಟರ್ ಮೇಲೆ ಶಿಸ್ತು ಕ್ರಮ ಜರುಗಿಸಿದ್ದೇನೆ. ಅಧಿಕಾರಿಗಳು ತಪ್ಪು ಮಾಡಿದ್ದು ಗಮನಕ್ಕೆ ತಂದರೆ ಇಲಾಖಾ ಶಿಸ್ತು ಕ್ರಮ ಜರುಗಿಸಲಾಗುವುದು.
-ರೇಣುಕಾ ಆಯುಕ್ತರು, ತುಮಕೂರು ಮಹಾನಗರಪಾಲಿಕೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ