ತುಮಕೂರು:
ಪಾಳುಬಿದ್ದಿದೆ ಕೋಟಿ ವೆಚ್ಚದ ಅಮರ ಶಿಲ್ಪಿ ಜಕಣಾಚಾರಿ ಸ್ಮಾರಕ ಭವನ
ತುಮಕೂರು ನಗರದ ಸೆರಗಿನಲ್ಲೆ ಇರುವ ಕೈದಾಳದಲ್ಲಿ ಅಮರ ಶಿಲ್ಪಿ ಜಕಣಾಚಾರಿ ಸ್ಮರಣಾರ್ಥವಾಗಿ ಸರ್ಕಾರದ ವಿವಿಧ ಇಲಾಖೆಗಳ ನೆರವಿನಿಂದ ನಿರ್ಮಿಸಿರುವ ಸ್ಮಾರಕ ಭವನವು ಅಕ್ಷರಶಃ ಪಾಳುಬಿದ್ದಿದೆ. ಭವನದ ಆವರಣದಲ್ಲಿ ಆಳೆತ್ತರದ ಗಿಡ-ಗೆಂಟೆಗಳು ಬೆಳೆದಿದ್ದು, ಕುರಿ-ಮೇಕೆಗಳಿಗೆ ಮೇವಿನ ಆಶ್ರಯ ತಾಣವಾಗಿದೆ.
ಕಾಮಗಾರಿ ಆರಂಭಿಸಿ ದಶಕ ಕಳೆದರೂ ಉದ್ಘಾಟನೆಗೊಳ್ಳದ ಈ ಭವ್ಯ ಭವನವು, ಗ್ರಾಮಾಂತರ ಕ್ಷೇತ್ರದ ರಾಜಕೀಯ ಮೇಲಾಟಕ್ಕೆ ಮೂಕ ಸಾಕ್ಷಿಯಾಗಿ ನಿಂತಿದ್ದು, ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಅಳಿದುಳಿದ ಕಾಮಗಾರಿಗಳನ್ನು ಪೂರ್ಣಗೊಳಿಸಲೂ ಆಗದೆ ಭವನ ಲೋಕಾರ್ಪಣೆ ಮಾಡಲೂ ಆಗದೆ ಪರದಾಡುವಂತಾಗಿದೆ.
ಇನ್ನೂ ಬಾಕಿ ಇದೆ ಕಾಮಗಾರಿ : ಸ್ಮಾರಕ ಭವನದೊಳಗೆ ಇಲೆಕ್ಟ್ರಿಕ್, ಪ್ಲÀ್ಲಂಬಿಂಗ್ ಹಾಗೂ ಪಾಕಶಾಲೆ ಕಾಮಗಾರಿಗಳು ಬಾಕಿ ಉಳಿದಿವೆ. ಭವನದ ಮುಂಭಾಗ ಪಾರ್ಕಿಂಗ್‍ಗೆ ವ್ಯವಸ್ಥೆ ಮಾಡಿ, ಆವರಣದೊಳಗೆ ಬೆಳೆದಿರುವ ಗಿಡ-ಗೆಂಟೆಗಳನ್ನು ತೆಗೆಸಿ, ಸ್ವಚ್ಛಗೊಳಿಸಿ,
ಅಂತಿಮವಾಗಿ ಮತ್ತೊಂದು ಸುತ್ತು ಸುಣ್ಣ-ಬಣ್ಣ ಬಳಿದರೆ ಸ್ಮಾರಕ ಭವನ ಲೋಕಾರ್ಪಣೆಗೆ ಸಿದ್ಧವಾಗುತ್ತದೆ. ಇಷ್ಟು ಕಾಮಗಾರಿಗಳಿಗೆ ಒಟ್ಟಾರೆ ಅಂದಾಜು 1 ಕೋಟಿ ರೂ. ಆಗಬಹುದು ಎನ್ನುತ್ತಾರೆ ಸ್ಥಳೀಯ ನಾಗರಿಕರು.
ಪ್ರ್ರವಾಸೋದ್ಯಮ ಸಚಿವರಿಗೆ ಸುರೇಶ್‍ಗೌಡ ದೂರು :
ಜಕಣಾಚಾರಿಯವರ ಹೆಸರಿನಲ್ಲಿ ಇಲ್ಲಿನ ದೇವಾಲಯ ಅಭಿವೃದ್ಧಿಯಾಗಬೇಕು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಬಡವರ ಮದುವೆಗಳು ಇಲ್ಲಿ ಆಗಲಿ ಎಂದು ಸಮುದಾಯ ಭವನ ನಿರ್ಮಾಣ ಮಾಡಲಾಗಿದೆ. ಒಟ್ಟಾರೆಯಾಗಿ ಜನರಿಗೆ ಅನುಕೂಲವಾಗಿ ದೇವಾಲಯಕ್ಕೂ ಆದಾಯ ಬರಲಿ ಎಂಬ ಆಶಯ ನಮ್ಮದು.
ಆದರೆ ಕೋಟ್ಯಂತರ ರೂ. ಖರ್ಚು ಮಾಡಿಯೂ ಹಾಲಿ ಶಾಸಕರು ಭವನವನ್ನು ಪಾಳು ಬೀಳಿಸಿದ್ದಾರೆ ಎಂದು ಆರೋಪಿಸಿರುವ ಮಾಜಿ ಶಾಸಕ ಸುರೇಶ್‍ಗೌಡ ಅವರು, ಈ ಕುರಿತು ಪ್ರವಾಸೋದ್ಯಮ ಸಚಿವ ಆನಂದ್‍ಸಿಂಗ್ ಅವರನ್ನು ಸಂಪರ್ಕಿಸಿ, ಸ್ಥಳೀಯ ಶಾಸಕರು ರಾಜಕೀಯ ಮಾಡಿ ಭವನ ಪ್ರಾರಂಭೋತ್ಸವ ಮಾಡಲು ಬಿಡುತ್ತಿಲ್ಲ ಎಂದು ದೂರಿದ್ದು,
ಸ್ಥಳೀಯ ಗ್ರಾಮ ಪಂಚಾಯಿತಿ ಅಥವಾ ಡಿಸಿ, ಎಸಿ ನೇತೃತ್ವದಲ್ಲಿ ಒಂದು ಕಮಿಟಿ ಮಾಡಿ ಭವನವನ್ನು ಆ ಕಮಿಟಿಗೆ ಒಪ್ಪಿಸಿ, ನಂತರ ನಿರ್ವಹಣೆ ಮಾಡಲು ಕ್ರಮ ಕೈಗೊಳ್ಳಲು ಸೂಚಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಪ್ರವಾಸೋದ್ಯಮ ಸಚಿವರು ಜಿಲ್ಲಾಧಿಕಾರಿಗೆ ಈ ಕುರಿತು ಸೂಚಿಸಿದ್ದು, ನಂತರ ಜಿಲ್ಲಾಧಿಕಾರಿ ನಿರ್ದೇಶನದ ಮೇರೆಗೆ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪೂರ್ಣವಾಗಲು ಇನ್ನೂ 20 ಲಕ್ಷ ರೂ. ಹಣ ಬೇಕೆಂದು ವರದಿ ನೀಡಿದೆ ಎನ್ನಲಾಗಿದೆ.
ಪ್ರವಾಸೋದ್ಯಮ ಸಚಿವರು ಸಹ ತಕ್ಷಣ ಹಣ ಬಿಡುಗಡೆಗೆ ಸಮ್ಮತಿಸಿದ್ದು ಆದಷ್ಟು ಬೇಗ ಕಾಮಗಾರಿ ಮುಗಿಸಿ ಶೀಘ್ರ ಭವನ ಲೋಕಾರ್ಪಣೆಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲು ಡಿಸಿಗೆ ಸೂಚಿಸಿದ್ದಾರೆ ಎನ್ನುತ್ತ್ತಿವೆ ಅಧಿಕೃತ ಮೂಲಗಳು.
ಯೋಜನೆಯ ಹಿನ್ನೆಲೆ :
2011 ರಲ್ಲಿ ಆಗಿನ ತುಮಕೂರು ಗ್ರಾಮಾಂತರ ಶಾಸಕ ಬಿ.ಸುರೇಶ್‍ಗೌಡ ಅವರ ವಿಶೇಷ ಆಸಕ್ತಿಯಿಂದಾಗಿ ಅಂದಿನ ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್ ಅವರು ಸದರಿ ಅಮರ ಶಿಲ್ಪಿ ಜಕಣಾಚಾರಿ ಸ್ಮರಣಾರ್ಥವಾಗಿ ಕೈದಾಳದಲ್ಲಿ ಭವನ ನಿರ್ಮಿಸಲು ಸರ್ಕಾರದಿಂದ ಒಟ್ಟು 3 ಕೋಟಿ ರೂ. ಅನುದಾನ ಬಿಡುಗಡೆ ಮಾಡಬೇಕೆಂದು ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದರು.
ನಂತರ ಇದಕ್ಕೆ ಸ್ಪಂದಿಸಿದ ಯಡಿಯೂರಪ್ಪ ಅವರು ಮುಜರಾಯಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ತಲಾ 1 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದರು.
ಸುರೇಶ್‍ಗೌಡರು ಟೂಡಾ ಸದಸ್ಯರಾಗಿದ್ದ ಅವಧಿಯಲ್ಲಿ ಸ್ಮಾರಕ ಭವನಕ್ಕೆ ಟೂಡಾದಿಂದ 2.50 ಕೋಟಿ ರೂ. ಅನುದಾನ ಬಿಡುಗಡೆಯಾಗಿ ಒಟ್ಟು 4.50 ಕೋಟಿ ರೂ. ವೆಚ್ಚದೊಂದಿಗೆ ನಿರ್ಮಿತಿ ಕೇಂದ್ರದಿಂದ ಕಾಮಗಾರಿ ಚುರುಕಾಗಿ ನಡೆದು ಇನ್ನೇನೂ ಅಂತಿಮ ಹಂತ ತಲುಪಿತು ಎನ್ನುವಾಗಲೆ 2018 ರಲ್ಲಿ ವಿಧಾನಸಭೆಗೆ ಚುನಾವಣೆ ನಡೆದು ಕ್ಷೇತ್ರದಲ್ಲಿ ರಾಜಕೀಯ ಅಧಿಕಾರದ ಪಲ್ಲಟಗಳು ನಡೆದವು.
ಹಾಗಾಗಿ 2018 ರಲ್ಲೆ ಶೇ. 90 ರಷ್ಟು ಕಾಮಗಾರಿ ಮುಗಿದಿದ್ದರೂ ಕಳೆದ 4 ವರ್ಷದಿಂದ ಉಳಿದ ಯಾವುದೇ ಸಣ್ಣಪುಟ್ಟ ಕಾಮಗಾರಿಗಳು ನಡೆಯದೆ ಭವನವು ಪಾಳು ಬಿದ್ದಿದೆ ಎನ್ನುತ್ತವೆ ಸ್ಥಳೀಯ ಮೂಲಗಳು.
ಮಾಜಿ ಶಾಸಕರ ಆರೋಪ ಹಾಗೂ ಭವನ ನನೆಗುದಿಗೆ ಬಿದ್ದ ವಿಚಾರವಾಗಿ ಗ್ರಾಮಾಂತರ ಶಾಸಕರಾದ ಡಿ.ಸಿ.ಗೌರಿಶಂಕರ್ ಅವರ ಪ್ರತಿಕ್ರಿಯೆ ಕೇಳಲು ಕರೆ ಮಾಡಿದಾಗ ಶಾಸಕರ ಮೊಬೈಲ್ ಸ್ವಿಚ್ಡ್ ಆಫ್ ಆಗಿತ್ತು
ಕೈದಾಳವು ಜಿಲ್ಲಾ ಕೇಂದ್ರಕ್ಕೆ ಸಮೀಪವಿದ್ದು, ಪ್ರವಾಸೋದ್ಯಮ ಕೇಂದ್ರವಾಗಿ ದಿನೆ ದಿನೆ ಬೆಳೆಯುತ್ತಿದೆ. ತುಮಕೂರು ನಗರದಲ್ಲಿರುವಂತಹ ಕಲ್ಯಾಣ ಮಂಟಪಗಳನ್ನೂ ಈ ಭವನ ತನ್ನ ವಿಸ್ತಾರ, ಸೌಲಭ್ಯಗಳಿಂದ ಮೀರಿಸಿದ್ದು, ದಿನಕ್ಕೆ 1 ಲಕ್ಷ ರೂ. ದುಡಿಯುವ ಸಾಮಥ್ರ್ಯ ಹೊಂದಿದೆ.
ಸರ್ಕಾರ ಭವನಕ್ಕೆ ಬಿಡುಗಡೆ ಮಾಡಿರುವ ಹಣ ಜನರ ತೆರಿಗೆಯ ಹಣ. ಹಾಗಾಗಿ ಸಂಬಂಧಪಟ್ಟವರು ಇನ್ನಾದರೂ ತಡ ಮಾಡದೆ ಶೀಘ್ರ ಭವನವನ್ನು ಜನ ಬಳಕೆಗೆ ಮುಕ್ತಗೊಳಿಸಬೇಕು.
-ಉಮಾಶಂಕರ್, ಉಪಾಧ್ಯಕ್ಷರು, ಹೆತ್ತೇನಹಳ್ಳಿ ಗ್ರಾಪಂ.
ಅಭಿವೃದ್ಧಿ ವಿಚಾರದಲ್ಲಿ ಹಾಲಿ ಶಾಸಕರು ಬೇಕಂತಲೆ ರಾಜಕೀಯ ಮಾಡುತ್ತಿದ್ದಾರೆ. ಸುರೇಶ್‍ಗೌಡ ಕಟ್ಟಿಸಿದ ಭವನವನ್ನು ನಾನ್ಯಾಕೆ ಪೂರ್ಣಗೊಳಿಸಿ ಜನರಿಗೆ ಅನುಕೂಲ ಮಾಡಿಕೊಡಲಿ, ಇದನ್ನು ಹಾಳು ಮಾಡೋಣ ಎಂಬುದು ಶಾಸಕರ ಉದ್ದೇಶವಾಗಿದೆ. ನಾನು ವೈಯಕ್ತಿಕವಾಗಿ ಛತ್ರ ಕಟ್ಟಿಸಿದ್ದರೂ ಈ ರೀತಿಯಾಗಿ ಕಟ್ಟಿಸುತ್ತಿರಲಿಲ್ಲವೇನೊ ಎಂದೆನಿಸುತ್ತದೆ.
ಕೆಲವರು ರಾಜಕೀಯದಲ್ಲಿ ನಾವೆ ಶಾಶ್ವತ ಎಂದುಕೊಂಡಿರುತ್ತಾರೆ. ಆದರೆ ನಾವು ಮಾಡುವ ಒಳ್ಳೆಯ ಕೆಲಸಗಳು ಶಾಶ್ವತ ಎಂಬುದು ಅವರಿಗೆ ತಿಳಿಯಬೇಕಿದೆ. ಭವನದ ಕಾಮಗಾರಿಯ ಗುಣಮಟ್ಟದಲ್ಲಿ ಎಲ್ಲೂ ಸಹ ರಾಜಿ ಆಗಿಲ್ಲ. ನನಗೆ ನನ್ನ ಜನರ ಪ್ರೀತಿ, ವಿಶ್ವಾಸ ಮುಖ್ಯ.
-ಸುರೇಶ್‍ಗೌಡ, ಮಾಜಿ ಶಾಸಕರು, ತುಮಕೂರು ಗ್ರಾಮಾಂತರ.
ಜಿಲ್ಲಾಧಿಕಾರಿಯವರ ನಿರ್ದೇಶನದ ಮೇರೆಗೆ ಪ್ರವಾಸೋದ್ಯಮ ಇಲಾಖೆ ಹಾಗೂ ನಿರ್ಮಿತಿ ಕೇಂದ್ರದ ಅಧಿಕಾರಿಗಳ ಜೊತೆ ಜಂಟಿಯಾಗಿ ಭವನವನ್ನು ಪರಿಶೀಲಿಸಿದ್ದೇವೆ. ಬಾಕಿ ಉಳಿದ ಕಾಮಗಾರಿಗಳ ಪಟ್ಟಿ ಹಾಗೂ ಅದಕ್ಕೆ ತಗಲುವ ಅಂದಾಜು ವೆಚ್ಚದ ಪಟ್ಟಿಯಯನ್ನು ಡಿಸಿ ಕಚೇರಿಗೆ ಸಲ್ಲಿಸಲಾಗಿದೆ.
-ಜಿ.ವಿ.ಮೋಹನ್‍ಕುಮಾರ್, ತಹಸೀಲ್ದಾರ್, ತುಮಕೂರು ತಾಲ್ಲೂಕು.
ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ನಾನು ಮತ್ತು ತಹಸೀಲ್ದಾರ್, ನಿರ್ಮಿತಿ ಕೇಂದ್ರದವರು ಸ್ಮಾರಕ ಭವನ ವೀಕ್ಷಿಸಿ ಬಂದಿದ್ದೇವೆ. ನಿಜಕ್ಕೂ ಕಟ್ಟಡ ಕಾಮಗಾರಿ ಗುಣಮಟ್ಟದಿಂದ ಚೆನ್ನಾಗಿ ಮೂಡಿಬಂದಿದೆ. ವಸ್ತು ಸ್ಥಿತಿಯ ವರದಿಯನ್ನು ಫೋಟೊ ಸಮೇತ ಡಿಸಿಯವರಿಗೆ ಸಲ್ಲಿಸಿದ್ದೇವೆ.
-ಮಂಗಳಗೌರಿ ವಿ ಭಟ್, ಸಹಾಯಕ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ.
-ಚಿದಾನಂದ್ ಹುಳಿಯಾರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ