ಮುಂಬೈ:
ಭಾರತೀಯ ಆಡಳಿತ ಸೇವೆಯಲ್ಲಿ ಸ್ಥಾನ ಪಡೆಯಲು ಅಂಗವಿಕಲತೆ ಮತ್ತು ಇತರೆ ಹಿಂದುಳಿದ ವರ್ಗಗಳ ಕೋಟಾವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಸಮಿತಿ ವರದಿ ಸಲ್ಲಿಸಿದ ನಂತರ ಸತ್ಯ ಮೇಲುಗೈ ಸಾಧಿಸುತ್ತದೆ ಎಂದು ವಿವಾದಿತ ಪ್ರೊಬೇಷನರಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಅವರು ಸೋಮವಾರ ಹೇಳಿದ್ದಾರೆ.
34 ವರ್ಷದ ಪೂಜಾ ಖೇಡ್ಕರ್ ಅವರು ಐಎಎಸ್ ಪರೀಕ್ಷೆಯಲ್ಲಿ ಪಾಸ್ ಆಗಲು ನಕಲಿ ಅಂಗವೈಕಲ್ಯ ಮತ್ತು ಇತರೆ ಹಿಂದುಳಿದ ವರ್ಗದ(ಒಬಿಸಿ) ಪ್ರಮಾಣಪತ್ರಗಳನ್ನು ಸಲ್ಲಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
“ನಾನು ಸಮಿತಿಯ ಮುಂದೆ ಸಾಕ್ಷಿ ಹೇಳುತ್ತೇನೆ. ಸಮಿತಿ ತೆಗೆದುಕೊಳ್ಳುವ ಯಾವುದೇ ನಿರ್ಧಾರವು ಎಲ್ಲರಿಗೂ ಸ್ವೀಕಾರಾರ್ಹವಾಗಿರಬೇಕು ಎಂದು ನಾನು ಭಾವಿಸುತ್ತೇನೆ” ಎಂದು ಖೇಡ್ಕರ್ ವಾಶಿಮ್‌ನಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ. “ಇಲ್ಲಿ ಪ್ರೊಬೇಷನರಿ ಅಧಿಕಾರಿಯಾಗಿ ನನ್ನ ಕೆಲಸವೆಂದರೆ ಕೆಲಸ ಮಾಡುವುದು ಮತ್ತು ಕಲಿಯುವುದು ಮತ್ತು ಅದನ್ನೇ ನಾನು ಮಾಡುತ್ತಿದ್ದೇನೆ. ನಾನು ಅದರ ಬಗ್ಗೆ ಯಾವುದೇ ಕಾಮೆಂಟ್ ಮಾಡಲು ಸಾಧ್ಯವಿಲ್ಲ” ಎಂದು ಹೇಳಿದರು.
‘ಮಾಧ್ಯಮಗಳು ನಾನು ಅಪರಾಧಿ ಎಂದು ಸಾಬೀತು ಪಡಿಸುವುದು ತಪ್ಪು. ಸರ್ಕಾರದ ತಜ್ಞರು(ಸಮಿತಿ) ಅದನ್ನು ನಿರ್ಧರಿಸುತ್ತಾರೆ. ನಾನು ಅಥವಾ ನೀವು (ಮಾಧ್ಯಮ) ಅಥವಾ ಸಾರ್ವಜನಿಕರು ನಿರ್ಧರಿಸಲು ಸಾಧ್ಯವಿಲ್ಲ” ಎಂದು ಖೇಡ್ಕರ್ ಹೇಳಿದ್ದಾರೆ.
ನಿಮ್ಮನ್ನು ಟಾರ್ಗೆಟ್ ಮಾಡಲಾಗುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಖೇಡ್ಕರ್, “ಏನು ನಡೆಯುತ್ತಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಭಾರತೀಯ ಸಂವಿಧಾನವು ಅಪರಾಧ ಸಾಬೀತಾಗುವವರೆಗೂ ನೀವು ನಿರಪರಾಧಿ ಎಂದು ಹೇಳುತ್ತದೆ. ಆದ್ದರಿಂದ ಮಾಧ್ಯಮ ವಿಚಾರಣೆಯಿಂದ ನನ್ನನ್ನು ತಪ್ಪಿತಸ್ಥ ಎಂದು ಸಾಬೀತುಪಡಿಸುವುದು ಪ್ರತಿಯೊಬ್ಬರ ತಪ್ಪು ಎಂದಿದ್ದಾರೆ.