ಹುಬ್ಬಳ್ಳಿ:
ತನ್ನ ಪ್ರೀತಿಗೆ ಒಪ್ಪದ ಕಾರಣಕ್ಕೆ ಹುಬ್ಬಳ್ಳಿ ಕಾರ್ಪೋರೇಟರ್ ಪುತ್ರಿ ನೇಹಾಳನ್ನು ಹತ್ಯೆ ಮಾಡಿದ್ದ ಫಯಾಜ್ ಆಕೆಯನ್ನು ಎಷ್ಟು ಹಿಂಸಿಸಿದ್ದಾನೆ ಎನ್ನುವುದು ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಗಿದೆ. ನೇಹಾ ಮರಣೋತ್ತರ ಪರೀಕ್ಷೆ ವರದಿ ಇದೀಗ ಬಯಲಾಗಿದ್ದು ಫಯಾಜ್ ಮಾಡಿದ ಕೃತ್ಯದ ವಿವರ ಗೊತ್ತಾಗಿದೆ.
ಫಯಾಜ್ ಆಕೆಗೆ 9 ಬಾರಿ ತಿವಿದಿದ್ದ ಎನ್ನಲಾಗಿತ್ತು. ಆತನೂ ಜೈಲಾಧಿಕಾರಿಗಳ ಮುಂದೆ ಇದನ್ನೇ ಹೇಳಿದ್ದ. ನನ್ನ ಜೊತೆ ಮಾತನಾಡಲ್ಲ ಎಂದಿದ್ದಕ್ಕೆ ಚಾಕುವಿನಿಂದ 9 ಬಾರಿ ತಿವಿದಿದ್ದೆ ಎಂದಿದ್ದ.
ಆದರೆ ಆತ 9 ಬಾರಿಯಲ್ಲ, ಒಟ್ಟು 14 ಬಾರಿ ತಿವಿದಿದ್ದ ಎಂಬುದು ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಗಿದೆ. ನೇಹಾಳ ಹೃದಯಕ್ಕೆ ಚಾಕುವಿನಿಂದ ಇರಿದಿದ್ದ ಪಾಪಿ ಕುತ್ತಿಗೆಗೆ ಹಲವು ಬಾರಿ ಇರಿದಿದ್ದ. ಪರಿಣಾಮ ಕುತ್ತಿಗೆಯ ನರ ಕಟ್ ಆಗಿ ವಿಪರೀತ ರಕ್ತಸ್ರಾವದಿಂದ ನೇಹಾ ಮೃತಪಟ್ಟಿದ್ದಾಳೆ. ಕುತ್ತಿಗೆ ಮಾತ್ರವಲ್ಲದೆ, ಬೆನ್ನಿಗೂ ಆತ ಚಾಕುವಿನಿಂದ ಇರಿದಿದ್ದ ಎನ್ನುವುದಕ್ಕೆ ಗಾಯಗಳು ಸಾಕ್ಷಿಯಾಗಿವೆ.
ಇಷ್ಟು ಭೀಕರವಾಗಿ ಹತ್ಯೆ ಮಾಡಿದ ಬಳಿಕ ಫಯಾಜ್ ಕಿಮ್ಸ್ ಆಸ್ಪತ್ರೆಯ ಹಿಂಭಾಗ ಅಡಗಿ ಕುಳಿತಿದ್ದ. ಸ್ಥಳೀಯರ ನೆರವಿನಿಂದ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದರು. ಅತ್ತ ವಿಪರೀತ ಗಾಯಗೊಂಡಿದ್ದ ನೇಹಾಳನ್ನು ತಕ್ಷಣವೇ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಷ್ಟರಲ್ಲಿ ಆಕೆ ಸಾವನ್ನಪ್ಪಿದ್ದಳು.