ಶಾಲಾ ಆವರಣದಲ್ಲಿ ವಿದ್ಯುತ್ ಲೈನ್- ಟವರ್

ತುಮಕೂರು:

ಸ್ಥಳಾಂತರಿಸಲು ಶಿಕ್ಷಣ ಇಲಾಖೆ ಸೂಚನೆ

ಶಾಲೆ ಮತ್ತು ಕಾಲೇಜು ಆವರಣದಲ್ಲಿ ಹಾದು ಹೋಗಿರುವ ವಿದ್ಯುತ್ ಮಾರ್ಗಗಳನ್ನು ಸ್ಥಳಾಂತರಿಸುವ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ರಾಜ್ಯದ ಎಲ್ಲ ಡಿಡಿಪಿಐಗಳಿಗೆ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿದೆ.

ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನಲ್ಲಿ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ವಿದ್ಯುತ್ ಪ್ರವಹಿಸಿ ಅವಘಡ ಸಂಭವಿಸಿದ್ದು, ರಾಜ್ಯಾದ್ಯಂತ ಸುದ್ದಿಯಾಗಿತ್ತು. ಆನಂತರ ಶಾಲಾ ಕಾಲೇಜು ಆವರಣದಲ್ಲಿ ವಿದ್ಯುತ್ ಪರಿವರ್ತಕಗಳು ಮತ್ತು ವಿದ್ಯುತ್ ಲೈನ್‍ಗಳು ಅಪಾಯಕಾರಿಯಾಗಿ ಇರುವ ಬಗ್ಗೆ ಮಕ್ಕಳ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವವರು ಸರ್ಕಾರದ ಗಮನಕ್ಕೆ ತಂದಿದ್ದರು.

ಈ ಸಂಬಂಧ ಸಾಕಷ್ಟು ಚರ್ಚೆ ಮತ್ತು ಸಭೆಗಳು ನಡೆದು ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯನ್ನಿಟ್ಟುಕೊಂಡು ಸರ್ಕಾರ ಕೆಲವು ಕ್ರಮಗಳನ್ನು ಕೈಗೊಂಡಿದೆ.

ಇತ್ತೀಚೆಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಕಛೇರಿಯಿಂದ ಹೊರಬಿದ್ದಿರುವ ಸುತ್ತೋಲೆಯಲ್ಲಿ ಕೆಳಕಂಡ ಅಂಶಗಳನ್ನು ಗಮನಿಸಬಹುದಾಗಿದೆ. ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಪ್ರಾಣ ಮತ್ತು ಆಸ್ತಿ ರಕ್ಷಣೆ ಒದಗಿಸುವುದು ಶಾಲಾ ಮುಖ್ಯಸ್ಥರ ಹಾಗೂ ಇಲಾಖಾಧಿಕಾರಿಗಳ ಕರ್ತವ್ಯವಾಗಿರುತ್ತದೆ.

ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ವಿದ್ಯುತ್ ತಂತಿ ತಗುಲಿ ವಿದ್ಯಾರ್ಥಿಯೊಬ್ಬರು ಮೃತಪಟ್ಟಿರುವುದು ವರದಿಯಾಗಿರುತ್ತದೆ. ಆದಕಾರಣ ಶಾಲಾ ಕಾಲೇಜುಗಳ ತರಗತಿಗಳ ಕೊಠಡಿ, ಆವರಣ ಮತ್ತು ಜಮೀನಿನಲ್ಲಿರುವ ಮೊಬೈಲ್ ಟವರ್ ಮತ್ತು ವಿದ್ಯುತ್ ಮಾರ್ಗಗಳನ್ನು ಬೇರೆಡೆಗೆ ಸ್ಥಳಾಂತರಿಸುವುದು ಅಗತ್ಯವಾಗಿರುತ್ತದೆ.

ಈ ಸಂಬಂಧ ರಾಜ್ಯದ ಎಲ್ಲ ತಾಲ್ಲೂಕು ಮತ್ತು ವಲಯ ಹಂತಗಳಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು ತಂಡಗಳನ್ನು ರಚಿಸಿ ಇಂಧನ ಇಲಾಖೆಯ ಮೇಲಧಿಕಾರಿಗಳ ಗಮನಕ್ಕೆ ತಂದು ವಿದ್ಯುತ್ ಮಾರ್ಗಗಳನ್ನು ಮತ್ತು ಮೊಬೈಲ್ ಟವರ್‍ಗಳನ್ನು ಸ್ಥಳಾಂತರಿಸಲು ಕ್ರಮ ವಹಿಸಬೇಕೆಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಒಂದು ವೇಳೆ ಕ್ರಮ ವಹಿಸದೇ ಹೋದಲ್ಲಿ ಮೇಲಧಿಕಾರಿಗಳ ತಪಾಸಣಾ ಸಮಯದಲ್ಲಿ ನಿರ್ಲಕ್ಷ್ಯ ಕಂಡುಬಂದರೆ ನಿಯಮಾನುಸಾರ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link