ಮಹದಾಯಿ ಯೋಜನೆ ಬಗ್ಗೆ ಗೋವಾ ಸಿಎಂ ಹೇಳಿಕೆಯು ಅವರ ವೈಯಕ್ತಿಕ- ಪ್ರಲ್ಹಾದ್‌ ಜೋಶಿ

ನವದೆಹಲಿ: 

    ʼಮಹದಾಯಿ ಯೋಜನೆಗೆ   ಕೇಂದ್ರ ಅನುಮತಿ ನೀಡುವುದಿಲ್ಲʼ ಎಂಬುದು ಗೋವಾ ಸಿಎಂ ವೈಯಕ್ತಿಕ ಹೇಳಿಕೆ. ಇದು ಕೇಂದ್ರ ಸರ್ಕಾರದ ಅಧಿಕೃತ ಹೇಳಿಕೆಯಲ್ಲ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್‌ ಜೋಶಿ  ಸ್ಪಷ್ಟಪಡಿಸಿದ್ದಾರೆ. ಗೋವಾ ಸಿಎಂ ಪ್ರಮೋದ್ ಸಾವಂತ್ ʼಮಹದಾಯಿಗೆ ಕೇಂದ್ರ ಅನುಮತಿ ನೀಡಲ್ಲʼವೆಂದು ವಿಧಾನಸಭೆಯಲ್ಲಿ ಹೇಳಿಕೆ ನೀಡಿರುವುದು ಅವರ ವೈಯುಕ್ತಿಕ ಅನಿಸಿಕೆಯಾಗಿದೆ. ಕೇಂದ್ರ ಸರ್ಕಾರ ಹಾಗೆ ಹೇಳಿಯೇ ಇಲ್ಲ. ಈ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದು ಆಕ್ಷೇಪಿಸಿದ್ದಾರೆ.

    ಕೇಂದ್ರ ಸರ್ಕಾರ ನೆಲ, ಜಲ, ಭಾಷೆ ವಿಚಾರದಲ್ಲಿ ಯಾವತ್ತೂ ರಾಜಕೀಯ ಮಾಡುವುದಿಲ್ಲ. ಮೂರೂ ರಾಜ್ಯಗಳಿಗೆ ಹೊಂದಿಕೆ ಆಗುವಂತೆಯೇ ನಿರ್ಧಾರ ತೆಗೆದುಕೊಳ್ಳಲಿದೆ. ಅದರಲ್ಲೂ ಕರ್ನಾಟಕದ ಕುಡಿಯುವ ನೀರಿನ ಸಮಸ್ಯೆಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತದೆ ಎಂದು ಜೋಶಿ ಭರವಸೆ ನೀಡಿದ್ದಾರೆ. 

    ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಗದಗ, ಬಾಗಲಕೋಟೆ ಭಾಗದ ಜನರ ಕುಡಿಯುವ ನೀರಿಗಾಗಿ 40 ಟಿಎಂಸಿ ನೀರನ್ನು ಬಳಸಿಕೊಳ್ಳುವ ಕಳಸಾ-ಬಂಡೂರಿ ಯೋಜನೆ ಈಗಾಗಲೇ ಅನುಷ್ಠಾನಕ್ಕೆ ಸಿದ್ಧಗೊಂಡಿದೆ ಎಂದು ಅವರು ತಿಳಿಸಿದ್ದಾರೆ. ಕಳಸಾ ಬಂಡೂರಿ ವಿಚಾರದಲ್ಲಿ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡಿ ಮನವರಿಕೆ ಮಾಡುತ್ತೇನೆ. ಕರ್ನಾಟಕದ ಹಿತಾಸಕ್ತಿ ಕಾಪಾಡುವ ವಿಚಾರದಲ್ಲಿ ಅವರು ನಿಷ್ಪಕ್ಷಪಾತ ನಡೆ ಅನುಸರಿಸುತ್ತಾರೆ. ಇದರಲ್ಲಿ ಯಾವುದೇ ಸಂಶಯ ಬೇಕಿಲ್ಲ ಎಂದು ಹೇಳಿದ್ದಾರೆ. 

    ಮಹದಾಯಿ ವಿಚಾರ ಸುಪ್ರೀಂ ಕೋರ್ಟ್‌ನಲ್ಲಿ ಇನ್ನೂ ಇತ್ಯರ್ಥವಾಗಬೇಕಿದೆ. ವಾದ-ವಿವಾದ ನಡೆಯುತ್ತಿರುವ ಈ ಸಂದರ್ಭದಲ್ಲಿ ಗೋವಾ ಸಿಎಂ ಹೇಳಿಕೆ ವೈಯುಕ್ತಿಕವಾಗಿದ್ದು, ಇದಕ್ಕೆ ರಾಜಕೀಯ ಬಣ್ಣ ಹಚ್ಚಬಾರದು ಎಂದು ಸಚಿವ ಪ್ರಲ್ಹಾದ್‌ ಜೋಶಿ ಮನವಿ ಮಾಡಿದ್ದಾರೆ. 

    ಡಿಸಿಎಂ ಡಿ.ಕೆ. ಶಿವಕುಮಾರ್‌ ಸಹ ಮಹದಾಯಿ ವಿಚಾರದಲ್ಲಿ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವ ಭೂಪೇಂದ್ರ ಯಾದವ್ ಅವರನ್ನು ಭೇಟಿ ಮಾಡಿದ್ದಾರೆ. ಬಳಿಕ ನನ್ನನ್ನೂ ಭೇಟಿಯಾಗಿ ʼಜಲಶಕ್ತಿ ಸಚಿವರು ರಾಜಕೀಯ ಮಾಡುವುದಿಲ್ಲ. ಅಭಿವೃದ್ಧಿಗೆ ಬೆಂಬಲವಾಗಿದ್ದಾರೆʼ ಎಂದಿದ್ದಾರೆ. ಮಾಧ್ಯಮಗಳ ಮುಂದೆಯೂ ಅದನ್ನೇ ಹೇಳಿದ್ದಾರೆಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದ್ದಾರೆ.

Recent Articles

spot_img

Related Stories

Share via
Copy link