ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿರುವ ಬ್ಯಾಂಕುಗಳು (ಭಾಗ-4)

  ನಗದು ಹಣ ವರ್ಗಾವಣೆ ಕಡಿಮೆ ಮಾಡಿ ಆನ್‍ಲೈನ್ ವ್ಯವಹಾರ ಹೆಚ್ಚಿಸಬೇಕೆನ್ನುವ ಉದ್ದೇಶ ಕೇಂದ್ರ ಸರ್ಕಾರದ್ದು, ನೋಟು ಅಮಾನ್ಯೀಕರಣದ ಉದ್ದೇಶವು ಸಹ ಜನತೆಯನ್ನು ಆರ್ಥಿಕ ಪರಿಧಿಯ ಒಳಗೆ ತರಬೇಕೆನ್ನುವುದು. ಈ ಯೋಜನೆ ಜಾರಿಗೆ ಬಂದ ತರುವಾಯ ಜನರ ಬಳಿ ನೋಟು ಹರಿದಾಡುವುದು ಕಡಿಮೆಯಾಯಿತು. ಆನ್‍ಲೈನ್, ಡಿಜಿಟಲೀಕರಣದ ವ್ಯವಸ್ಥೆಗೆ ಒತ್ತು ನೀಡಲಾಯಿತು. ಇದರ ಪರಿಣಾಮವಾಗಿ ಎಲ್ಲಾ ಕಡೆ ಬ್ಯಾಂಕ್‍ಗಳು ಹೆಚ್ಚು ಹಣವನ್ನು ನೀಡಲು ನಿರಾಕರಿಸುತ್ತಾ ಬಂದವು. ನಗದು ಬದಲಾಗಿ ಹಣ ವರ್ಗಾವಣೆಯನ್ನು ಆನ್‍ಲೈನ್‍ನಲ್ಲಿ ಮಾಡಿಕೊಳ್ಳಿ ಎಂಬ ಒತ್ತಾಯಗಳು ಆರಂಭವಾದವು.
     ಕೇಂದ್ರ ಸರ್ಕಾರವು ಹಣಕಾಸಿನ ಎಲ್ಲಾ ವ್ಯವಹಾರಗಳು ಪಾರದರ್ಶಕವಾಗಿರಬೇಕು ಎಂಬ ಉದ್ದೇಶದಿಂದ ಬ್ಯಾಂಕ್ ವ್ಯವಹಾರಗಳು ಸೇರಿದಂತೆ ಇನ್ನಿತರೆ ವ್ಯವಹಾರಗಳು ಆನ್‍ಲೈನ್ ಮೂಲಕವೇ ನಡೆಸಬೇಕು ಎಂಬ ಕಾರಣದಿಂದ ಡಿಜಿಟಲೈಸೇಷನ್ ಯೋಜನೆ ಪ್ರಾರಂಭ ಮಾಡಿತು. ಇದರೊಂದಿಗೆ ಪ್ರತಿಯೊಬ್ಬರು ಖಾತೆ ಹೊಂದಬೇಕು. ರೈತರಿಂದ ಹಿಡಿದು ಸಣ್ಣ ವ್ಯಾಪಾರಸ್ಥರು, ಬೃಹತ್ ಬಂಡವಾಳದಾರರು ಹೀಗೆ ಪ್ರತಿಯೊಬ್ಬರೂ ಖಾತೆ ಹೊಂದಿದ್ದು, ಇವರೆಲ್ಲಾ ನಗದು ಬದಲಿಗೆ ಆನ್‍ಲೈನ್ ಮೂಲಕವೇ ವಹಿವಾಟು ನಡೆಸಬೇಕು ಎಂಬ ಯೋಜನೆಗೆ ಹೆಚ್ಚು ಒತ್ತು ನೀಡಲಾಯಿತು.
      ಸರ್ಕಾರದ ಈ ಯೋಜನೆಯನ್ನು ಕೆಲವರು ಸ್ವಾಗತಿಸಿದರೆ ಮತ್ತೆ ಕೆಲವರು ವಿರೋದಿಸುತ್ತಲೇ ಇದ್ದಾರೆ. ಆನ್‍ಲೈನ್ ವ್ಯವಹಾರಗಳಿಗೆ ಒಗ್ಗಿಕೊಳ್ಳಲಾಗದೇ ಸಣ್ಣಪುಟ್ಟ ವ್ಯವಹಾರಸ್ಥರು, ಗ್ರಾಮೀಣ ಸಮುದಾಯ  ಒಂದು ರೀತಿಯಲ್ಲಿ ಅಡಕತ್ತರಿಗೆ ಸಿಲುಕಿ ಬಿಟ್ಟಿದೆ.  ಸಣ್ಣಪುಟ್ಟ ವ್ಯವಹಾರಗಳಿಗೆ ಹೆಚ್ಚಿನ ವೆಚ್ಚ ಭರಿಸುವ ಸ್ಥಿತಿ ನಿರ್ಮಾಣವಾಗಿದ್ದು, ಇದರಿಂದ ಸಣ್ಣ ರೈತರು, ಸಣ್ಣ ವ್ಯಾಪಾರಸ್ಥರ ಸ್ಥಿತಿಗತಿಗಳು ಏನಾಗಬೇಕು ? ಬ್ಯಾಂಕುಗಳಲ್ಲಿ ಪ್ರತಿಯೊಂದಕ್ಕೂ ಹೆಚ್ಚಿನ ವೆಚ್ಚ ವಿಧಿಸುವುದಾದರೆ ಇಲ್ಲಿ ಡಿಜಿಟಲೈಸೇಸನ್‍ನ ಉದ್ದೇಶ ಏನಾಗುತ್ತಿದೆ..? ಸೇವಾ ಮನೋಭಾವನೆ ಎಲ್ಲಿ ಹೋಯಿತು. ಪ್ರತಿಯೊಂದಕ್ಕೂ ಗ್ರಾಹಕರ ಮೇಲೆ ಹೊರೆ ಹಾಕುತ್ತಿರುವ ಈ ಉದ್ದೇಶವಾದರೂ ಏನು? ಈ ಸಂಪತ್ತಿಗೆ ಆನ್‍ಲೈನ್ ವ್ಯವಹಾರ, ಡಿಜಿಟಲೀಕರಣ ತರಬೇಕಿತ್ತೇ ಎಂಬ ಪ್ರಶ್ನೆಗಳು ಇನ್ನೂ ಕೇಳಿ ಬರುತ್ತಲೇ ಇವೆ. 
    ಆನ್‍ಲೈನ್ ಮೂಲಕ ಹಣ ವರ್ಗಾವಣೆ ಮಾಡುವುದು ಸಲಭದ ವಿಧಾನ ಇರಬಹುದು. ಇದು ವಿದ್ಯಾವಂತ ವಲಯಕ್ಕೆ, ಮೊಬೈಲ್ ತಾಂತ್ರಿಕತೆಯ ಅನುಭವ ಇರುವವರಿಗೆ ಅಷ್ಟೇಗೊತ್ತು. ಆದರೆ ನಮ್ಮ ದೇಶ, ನಮ್ಮ ಜನರ ಜೀವನ ಪರಿಸ್ಥಿತಿಯನ್ನು ಅವಲೋಕಿಸಿದರೆ ಇನ್ನೂ ಈ ತಾಂತ್ರಿಕತೆಗೆ ಒಗ್ಗಿಕೊಳ್ಳುವಷ್ಟು ನೈಪುಣ್ಯತೆ ಪಡೆದಿಲ್ಲ. ಇವರೆಲ್ಲಾ ಈಗ ಅಕ್ಷರಶಃ ಸಂಕಷ್ಟದಲ್ಲಿ ಸಿಲುಕಿದ್ದಾರೆ. 
     ಸಣ್ಣಪುಟ್ಟ ವ್ಯಾಪಾರಸ್ಥರು, ದೈನಂದಿನ ಬಳಕೆದಾರರು, ವಿದ್ಯಾರ್ಥಿಗಳು, ಶಾಲಾ ಕಾಲೇಜುಗಳಾದಿಯಾಗಿ ಬಹುತೇಕ ಕ್ಷೇತ್ರಗಳು ಮುಂದಿನ ದಿನಗಳಲ್ಲಿ ನಗದು ರಹಿತ ವ್ಯವಸ್ಥೆಯಿಂದ ಮತ್ತಷ್ಟು ಗೊಂದಲ  ಹಾಗೂ ಸಮಸ್ಯೆಗೆ ಸಿಲುಕುವ ಸಾಧ್ಯತೆಗಳು ಇಲ್ಲದಿಲ್ಲ. ಎಲ್ಲವೂ ಆನ್‍ಲೈನ್‍ನಲ್ಲಿಯೇ ನಡೆಯಬೇಕೆಂದರೆ ಡೊನೇಷನ್ ಮತ್ತಿತರ ಹಣವನ್ನು ಶಾಲಾ ಕಾಲೇಜುಗಳು ಹೇಗೆ ಸ್ವೀಕರಿಸಿಯಾವು? ಇದಕ್ಕಾಗಿಯೇ ಮತ್ತೊಂದು ಖಾತೆ ತೆರೆಯಬೇಕಾಗುವುದೇ? ಶಾಲಾ ಕಾಲೇಜುಗಳು ನಗದನ್ನೇ ನೀಡಿ ಎಂದು ಒತ್ತಾಯಿಸಿದರೆ ಏನು ಮಾಡಬೇಕು ಎಂಬ ಪ್ರಶ್ನೆಗಳು ಸಹಜವಾಗಿ ಏಳುತ್ತವೆ.  ಆ್ಯ
    ಆನ್‍ಲೈನ್ ವ್ಯವಹಾರ ಎಷ್ಟು ಸುಲಭವೋ ಅಷ್ಟೇ ಅಪಾಯಕಾರಿಯೂ ಇದೆ ಎನ್ನುತ್ತಾರೆ ಕೆಲವರು. ಯಾಮಾರಿದರೆ ನಮ್ಮ ಖಾತೆಯಲ್ಲಿರುವ ಹಣ ಯಾರದ್ದೋ ಪಾಲಾಗಬಹುದು. ನಮ್ಮ ಖಾತೆಗಳ ಮಾಹಿತಿ ಪಡೆಯುವ ಆಗಂತುಕರು ಈಗ ಹೆಚ್ಚು ಹುಟ್ಟಿಕೊಂಡಿದ್ದಾರೆ. ಒಮ್ಮೆ ನಮ್ಮ ಖಾತೆಯ ಮಾಹಿತಿ ಇವರಿಗೆ ಸಿಕ್ಕಿತೆಂದರೆ ಸಾಕು ಕೆಲವೇ ನಿಮಿಷಗಳಲ್ಲಿ ಹಣ ದೋಚುತ್ತಾರೆ. ಈವರೆಗೆ ಇಂತಹ ಆನ್‍ಲೈನ್ ಹಣ ಕಳವು ಪ್ರಕರಣಗಳು ಅದೇಷ್ಟೋ ಸಾವಿರಕ್ಕೂ ಮೀರಿವೆ. ಆದರೆ ಹಣ ಕಳೆದುಕೊಂಡ ಗ್ರಾಹಕರಿಗೆ ಏನು ಪರಿಹಾರ ಸಿಕ್ಕಿದೆ? ಎಷ್ಟು ಪ್ರಕರಣಗಳನ್ನು ಬೇಧಿಸಲಾಗಿದೆ? ಎಷ್ಟು ಕಳ್ಳರು ಸಿಕ್ಕಿದ್ದಾರೆ ಎಂಬ ಯಾವುದೇ ಮಾಹಿತಿ ಲಭ್ಯವಿಲ್ಲ. ಹಣ ಕಳೆದುಕೊಂಡವರು ದೂರು ನೀಡುತ್ತಾರೆ. ಈ ದೂರನ್ನು ಸ್ವೀಕರಿಸಲು ಸಹ ಅಲೆದಾಡಿಸಲಾಗುತ್ತದೆ. ಸಂಬಂಧಿಸಿದ ಪೋಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಬೇಕು. ಆ ನಂತರ ಉಳಿಕೆ ಪ್ರಕ್ರಿಯೆಗಳು ನಡೆಯುತ್ತವೆ. 
ಹೆಚ್ಚುತ್ತಿರುವ ಬ್ಯಾಂಕ್ ವಂಚನೆ ಪ್ರಕರಣಗಳು 
   ದೇಶದಲ್ಲಿ ಈಗ ಹಣ ಸಂಪಾದನೆಯ ಸುಲಭ ಮಾರ್ಗವನ್ನು ಕೆಲ ಕಳ್ಳಕಾಕರು ಕಂಡುಕೊಂಡಿದ್ದಾರೆ. ದೇಶದಲ್ಲಿ ಬ್ಯಾಂಕಿಂಗ್ ವಂಚನೆಗಳು ಏರಿಕೆಯಾಗುತ್ತಲೇ ಇವೆ. 2008-19ರ ಹಣಕಾಸು ವರ್ಷದಲ್ಲಿ 71, 543 ಕೋಟಿ ರೂ ವಂಚನೆಯಾಗಿದೆ. ಇದನ್ನು ರಿಸರ್ವ್ ಬ್ಯಾಂಕ್ ಅಧಿಕೃತವಾಗಿ ಘೋಷಿಸಿದೆ.
   2017-18ರಲ್ಲಿ 41,167 ಕೋಟಿ ರೂಗಳಷ್ಟಿದ್ದ ಆರ್ಥಿಕ ವಂಚನೆ 2018-19ರಲ್ಲಿ ಗಣನೀಯ ಏರಿಕೆ ಕಂಡಿದ್ದು, ಈ ಪ್ರಮಾಣ ವರ್ಷದಿಂದ ವರ್ಷಕ್ಕೆ ಏರುತ್ತಿರುವುದನ್ನು ಗಮನಿಸಿದರೆ ಗ್ರಾಹಕರಿಗೆ ಬ್ಯಾಂಕ್‍ ಗಳಿಂದ ಸುರಕ್ಷಿತೆ ಎಲ್ಲಿಂದ ಎಂಬ ಪ್ರಶ್ನೆ ಏಳುತ್ತದೆ. ಸಣ್ಣಪುಟ್ಟ ವ್ಯವಹಾರಗಳಿಗೂ, ಸೌಲಭ್ಯ  ಗಳಿಗೂ ಶುಲ್ಕ ವಿಧಿಸುವ ಬ್ಯಾಂಕುಗಳು ಹಣ ವಂಚನೆಯ ಪ್ರಕರಣಗಳಲ್ಲಿ ಮಾತ್ರ ತನ್ನದೇನೂ ಪಾತ್ರ ಇಲ್ಲ ಎಂಬಂತೆ ವರ್ತಿಸುತ್ತವೆ. 
ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಿಂದ ಆಗುತ್ತಿರುವ ಲಾಭಗಳಾದರೂ ಏನು? 
   ಈ ಹಿಂದೆ ಸರ್ಕಾರಿ ಸ್ವಾಮ್ಯದ ಅಥವಾ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ವಹಿವಾಟು ನಡೆಸಲು ಹೆಚ್ಚಿನ ವೆಚ್ಚ ಇರಲಿಲ್ಲ. ಇದರಿಂದ ಸಾಕಷ್ಟು ಜನ ಖಾತೆಗಳನ್ನು ಹೊಂದಿದ್ದರು. ಇದರಲ್ಲಿ ದಿನದಿಂದ ದಿನಕ್ಕೆ ಬ್ಯಾಂಕುಗಳಲ್ಲಿ ವಹಿವಾಟು ಹೆಚ್ಚಾಗುತ್ತಿತ್ತು. ಆದರೆ ಬರುಬರುತ್ತಾ ಬ್ಯಾಂಕುಗಳಲ್ಲಿ ನೀಡುವ ಸೇವೆಗಳಿಗೆ ಇದ್ದಂತಹ ಕಡಿಮೆ ವೆಚ್ಚವನ್ನು ಹೆಚ್ಚಿಸುತ್ತಾ ಬಂದರು.
   ಕೆಲವು ಬಂಡವಾಳಶಾಹಿಗಳು ಬ್ಯಾಂಕುಗಳ ಸಾಲ ಪಡೆದು ಸಾಲ ಮರುಪಾವತಿ ಮಾಡಲಾಗದೆ ಓಡಿ ಹೋಗುತ್ತಿದ್ದು, ಆ ಹಣವನ್ನು ಭರಿಸಲು ಈಗ ಖಾತೆದಾರರ ಮೇಲೆ ಬರೆ ಎಳೆಯಲಾಗುತ್ತಿದೆ.  ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆದಂತಾಗಿದೆ ಸದ್ಯದ ಬ್ಯಾಂಕುಗಳ ಕಾರ್ಯವೈಖರಿ. ಬಹುದೊಡ್ಡ ಸಾಲಗಾರರು ಬ್ಯಾಂಕುಗಳಿಂದ ಸುಲಭವಾಗಿ ಮತ್ತು ಸಲಿಸಾಗಿ ಹಣ ಪಡೆದು ಪಂಗನಾಮ ಹಾಕುತ್ತಿದ್ದಾರೆ.
     ಅವರನ್ನು ರಕ್ಷಣೆ ಮಾಡಲೆಂದೇ ಕೆಲವು ಬ್ಯಾಂಕ್ ಅಧಿಕಾರಿಗಳು ರಂಗೋಲಿ ಕೆಳಗಿನ ಸೂತ್ರವನ್ನು ಹೇಳಿಕೊಡುತ್ತಾರೆ. ದೇಶದ ಉದ್ದಗಲಕ್ಕೂ ಇದನ್ನು ನೋಡಲು ಸಾಧ್ಯವಿದೆ. ಆದರೆ ಬಡಪಾಯಿಗಳು, ನಿಜವಾಗಿಯೂ ಸಾಲ ತೀರಿಸುವವರಿದ್ದು ಸಾಲ ಬೇಕೆಂದು ಬೇಡಿಕೆ ಇಡುವವರಿಗೆ ಮಣೆ ಹಾಕುವುದೇ ಇಲ್ಲ. ದೊಡ್ಡ ಕುಳಗಳ ಸಾಲ ವಸೂಲಿ ಮಾಡಲಾಗದೆ ಸಣ್ಣ ಖಾತೆದಾರರು ಹಾಗೂ ಮಧ್ಯಮ ಖಾತೆದಾರರ ಮೇಲೆ ಬರೆ ಎಳೆಯಲಾಗುತ್ತಿದೆ. 
 
   ಖಾತೆದಾರರು ವಿವಿಧ ಸೌಲಭ್ಯಗಳಿಗೆ ಶುಲ್ಕ ಪಾವತಿಸುವುದರ ಜೊತೆಗೆ 18% ರಂತೆ ಜಿಎಸ್‍ಟಿ ಹಣ ಸೇರಿಸಿ ವೆಚ್ಚ ಭರಿಸಬೇಕು ಎಂಬುದು ಎಷ್ಟರ ಮಟ್ಟಿಗೆ ಸರಿ. ಪ್ರತಿಯೊಬ್ಬರು ಬ್ಯಾಂಕ್‍ನ ಖಾತೆದಾರರು ಆಗಬೇಕು ಎಂದರೆ ಸೇವೆಗಳು ಉಚಿತವಾಗಬೇಕೇ ಹೊರತು ದುಪ್ಪಟ್ಟು ವೆಚ್ಚ ಭರಿಸುವಂತೆ ಮಾಡಬಾರದು ಎಂಬುದು ಹಲವು ಗ್ರಾಹಕರ ಅನಿಸಿಕೆ.  
   ಎಲ್ಲಾ ಬ್ಯಾಂಕುಗಳಲ್ಲಿ ಆನ್‍ಲೈನ್  ವ್ಯವಹಾರ ನಡೆಸುವಂತೆ ಕೇಂದ್ರ ಸರ್ಕಾರ ಪ್ರಚೋದನೆ ನೀಡುತ್ತಿದೆ. ಆದರೆ ಇಂದು ಬ್ಯಾಂಕುಗಳಲ್ಲಿ ಪ್ರತಿಯೊಂದು ವ್ಯವಹಾರಕ್ಕೆ ಇಂತಿಷ್ಟು ಎಂದು ಹಣ ಶುಲ್ಕ ಭರಿಸಬೇಕಾಗುತ್ತಿದೆ. ಆ ಶುಲ್ಕವನ್ನು ಕಡಿತಗೊಳಿಸಬೇಕೆಂದರೆ ಬ್ಯಾಂಕ್‍ಗಳಿಗೆ ತೆರಳಿ ತಮ್ಮ ವ್ಯವಹಾರ ನಡೆಸಿಕೊಳ್ಳಬೇಕಿದೆ. ಹೀಗಿದ್ದಾಗ ಆನ್‍ಲೈನ್ ವ್ಯವಹಾರ
ನಡೆಸುವ ಅಗತ್ಯ ವಿದೆಯೇ..? 
ಎಟಿಎಂ ಶುಲ್ಕವೇ ಹೆಚ್ಚು
      ಬ್ಯಾಂಕ್‍ಗಳಲ್ಲಿ ಉಳಿತಾಯ ಖಾತೆಯಲ್ಲಿ ಇಡಲಾದ ಹಣವನ್ನು ಅವಶ್ಯಕತೆ ಇದ್ದಾಗ ಎಟಿಎಂ ಮೂಲಕ ಹಣ ಪಡೆಯಲು ಮುಂದಾದರೆ ಅದಕ್ಕೂ ಶುಲ್ಕ ಭರಿಸಬೇಕಾಗುತ್ತದೆ. ಮೊದಲ ಐದು ಬಾರಿ ಉಚಿತವಾಗಿ ಹಣ ಪಡೆಯಬಹುದು. ಆರನೇ ಬಾರಿಯಿಂದ ಎಟಿಎಂ ಬಳಸಿ ಹಣ ಪಡೆಯಬೇಕಾದರೆ ಶುಲ್ಕ ಭರಿಸಬೇಕಾಗುತ್ತದೆ. ಅಲ್ಲದೆ ಹೆಚ್ಚುವರಿ ಶುಲ್ಕದ ಹಣ ಬ್ಯಾಂಕ್‍ಗೆ ಸೇರುವುದಿಲ್ಲ. ಬದಲಿಗೆ ನಮಗೆ ನೀಡಲಾದ ಎಟಿಎಂ ಕಾರ್ಡ್ ( ವಿಸಾ, ರೂಪೆ, ಮಾಸ್ಟರ್ ಕಾರ್ಡ್) ತಯಾರಿಸುವ ಕಂಪನಿಗೆ ಹೋಗುತ್ತದೆ. ಇದರಿಂದ ಬ್ಯಾಂಕ್‍ಗೂ ಲಾಭವಿಲ್ಲ. ಖಾತೆದಾರನಿಗೂ ಲಾಭವಿಲ್ಲ. ಬದಲಾಗಿ ಮೂರನೇ ವ್ಯಕ್ತಿ ಇದರ ಲಾಭ ಪಡೆಯುತ್ತಿದ್ದಾನೆ. 
      ಬಜೆಟ್ ನಂತರದಲ್ಲಿ ಆದ ಬದಲಾವಣೆಗಳ ಪ್ರಕಾರ ಆಯಾ ಬ್ಯಾಂಕ್‍ನ ಎಟಿಎಂ ಮಷಿನ್‍ಗಳಲ್ಲಿ ಹಣ ತೆಗೆದುಕೊಂಡರೆ ಯಾವುದೇ ಶುಲ್ಕ ಭರಿಸಬೇಕಿಲ್ಲ. ಬದಲಾಗಿ ಇತರೆ ಬ್ಯಾಂಕ್ ಎಟಿಎಂಗಳಲ್ಲಿ ಹಣ ಬಿಡಿಸಿಕೊಂಡಾಗ ಮಾತ್ರ ಶುಲ್ಕ ಭರಿಸಬೇಕಾಗುತ್ತದೆ. ಕೆಲ ಖಾತೆದಾರರಿಗೆ ಪ್ಲಾಟಿನಂ ಪ್ಲಾನ್ ಕಾರ್ಡ್‍ದಾರರಿಗೆ ಅನಿಯಮಿತ ಹಣ ಬಿಡಿಸಿಕೊಳ್ಳಬಹುದಾಗಿದೆ. 
   
     ಎಟಿಎಂ ಕಾರ್ಡ್‍ಗಳು ಅಸ್ತಿತ್ವಕ್ಕೆ ಬಂದ ನಂತರ ಮತ್ತಷ್ಟು ಸಮಸ್ಯೆಗಳು ಎದುರಾಗುತ್ತಿವೆ. ಹಿಂದೆಲ್ಲಾ ಬ್ಯಾಂಕಿಗೆ ತೆರಳಿ ನಿಗದಿತ ನಮೂನೆಯ ಚಲನ್ ಭರ್ತಿ ಮಾಡಿ ನೀಡಬೇಕಿತ್ತು. ಅದಕ್ಕೆ ಒಂದು ಟೋಕನ್ ಕೊಡುತ್ತಿದ್ದರು. ಕೂಗಿ ಕರೆದಾಗ ನಮ್ಮ ಹಣ ಪಾವತಿ ಮಾಡುತ್ತಿದ್ದರು. ಇದು ಬ್ಯಾಂಕ್‍ಗಳಲ್ಲಿ ನಡೆದುಕೊಂಡು ಬಂದಿದ್ದ ಟೋಕನ್ ಸಿಸ್ಟಂ ವ್ಯವಸ್ಥೆ. ಈಗ ಯಾವ ಬ್ಯಾಂಕಿಗೆ ಹೋದರೂ ನೇರವಾಗಿ ನಗದು ನೀಡಲು ನಿರಾಕರಿಸುತ್ತಾರೆ.
     ನೀವು ಎಟಿಎಂ ಕಾರ್ಡ್ ಮಾಡಿಸಿಲ್ಲವೆ ಎಂದು ಪ್ರಶ್ನಿಸುತ್ತಾರೆ ಇಲ್ಲ ಎಂದರೆ ಬೇಗ ಮಾಡಿಸಿಕೊಳ್ಳಿ ಎನ್ನುತ್ತಾರೆ. ಹೀಗೆ ಎಟಿಎಂ ಕಾರ್ಡ್‍ಗಳನ್ನು ಮಾಡಿಸಲು ಒತ್ತಾಯಪೂರ್ವಕ ಹೊರೆ ಹಾಕುವ ಬ್ಯಾಂಕ್ ಸಿಬ್ಬಂದಿಗಳು ಒಂದು ವೇಳೆ ಎಟಿಎಂ ಕಾರ್ಡ್ ಬಳಕೆಯಲ್ಲಿ ತಾಂತ್ರಿಕ ದೋಷಗಳು ಕಂಡು ಬಂದರೆ ಅಪ್ಪಿತಪ್ಪಿಯೂ ಆ ಬಗ್ಗೆ ಮಾಹಿತಿ ನೀಡುವುದಿಲ್ಲ. ಕಾರ್ಡ್‍ನಲ್ಲಿ ದೋಷವಿರಬಹುದು, ಕಷ್ಟಮರ್‍ಕೇರ್‍ಗೆ ಕರೆ ಮಾಡಿ ಎಂದು ಯಾವುದೋ ಸಬೂಬುಗಳನ್ನು ಹೇಳುತ್ತಾರೆ. 
   
    ಇಲ್ಲಿ ಎದುರಾಗುವ ಪ್ರಶ್ನೆ ಎಂದರೆ ಎಟಿಎಂ ಕಾರ್ಡ್‍ಗಳನ್ನು ವಿತರಿಸುವವರು ಬ್ಯಾಂಕುಗಳು. ಈ ಕಾರ್ಡ್‍ಗಳು ದೋಷಪೂರಿತವಾದರೆ ಬ್ಯಾಂಕ್‍ಗಳು ಹೊಣೆ ಹೊರಬೇಕು. ಆದರೆ ಅದಕ್ಕೂ ನಮಗೂ ಸಂಬಂಧವಿಲ್ಲ ಎಂಬಂತೆ ವರ್ತಿಸಿದರೆ
ಗ್ರಾಹಕರ ಗತಿಯೇನು? 
     ಕಷ್ಟಮರ್‍ಕೇರ್ ಅಥವಾ ಯಾವುದೋ ಸಂಬಂಧಿಸಿದ ನಂಬರ್‍ಗಳಿಗೆ ಕರೆ ಮಾಡಿದರೆ ಇಂಗ್ಲೀಷ್‍ನಲ್ಲೋ ಅಥವಾ ಕನ್ನಡದಲ್ಲೂ ಮಾಹಿತಿ ಸಿಗಬಹುದು. ಗ್ರಾಮೀಣ ಪ್ರದೇಶದ ಜನರಿಗೆ, ವ್ಯವಹಾರ  ಬಾರದ ಜನರು ಏನು ಮಾಡಬೇಕು ಎಂಬ ಪ್ರಶ್ನೆ ಏಳುತ್ತವೆ.  ಗ್ರಾಹಕರ ಈ ದೌರ್ಬಲ್ಯಗಳನ್ನು ಅರಿತೇ ಬ್ಯಾಂಕ್ ಸುತ್ತಾಮುತ್ತಾ ಕಳ್ಳಕಾಕರು ಕಾಯುತ್ತಿರುತ್ತಾರೆ. ಸಹಾಯ ಮಾಡುವವರಂತೆ ನಟಿಸಿ ಹಣ ದೋಚುವ ಸಂದರ್ಭಗಳು ಸೃಷ್ಟಿಯಾಗುತ್ತಿವೆ. ನನ್ನ ಖಾತೆ ಯಾರಿಗೂ ಗೊತ್ತಾಗಬಾರದು ಎಂದು ಈ ಹಿಂದಿನಿಂದಲೂ  ಗ್ರಾಹಕರು ಪ್ರತಿಪಾದಿಸಿಕೊಂಡು ಬಂದಿದ್ದರು.
     ಈಗ ನೋಡಿದರೆ ಎಲ್ಲವೂ ಬಟಾಬಯಲಾಗುತ್ತಿವೆ. ತಾಂತ್ರಿಕ ದೋಷಗಳು ಏನೆಂಬುದು ಯಾರಿಗೂ ಅರ್ಥವಾಗುವುದಿಲ್ಲ. ಬ್ಯಾಂಕ್ ಒಳಗೆ ಸಿಬ್ಬಂದಿಯ ಜೊತೆ ಮಾತನಾಡಿದರೆ ಸರಿಯಾದ ಉತ್ತರಗಳು ಸಿಗುವುದಿಲ್ಲ. ಮನುಷ್ಯರ ಜೊತೆ ಮಾತನಾಡುವ ಬದಲು ಈಗ  ಯಂತ್ರಗಳ ಜೊತೆ ಮಾತನಾಡ ಬೇಕಿರುವುದರಿಂದ ಅಂತಹ ತಂತ್ರಗಾರಿಕೆ, ನಾವಿನ್ಯತೆ ಎಷ್ಟು ಜನರಿಗೆ ಗೊತ್ತು.  ಏನು ಅರಿಯದ ಅಮಾಯಕರು ಮತ್ಯಾರದೋ ಸಹಾಯಕ್ಕೆ ಮುಂದಾಗಿ ಪಂಗನಾಮ ಹಾಕಿಸಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ.  
      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap