ಪ್ರೀತಿ-ಶಾಂತಿ ಸೌಹಾರ್ದತೆ ಸಾರುವ ಕ್ರಿಸ್ತ ಜಯಂತಿ

      ಮತ್ತೆ ಕ್ರಿಸ್‍ಮಸ್ ಬಂದಿದೆ. ಚುಮು ಚುಮು ಚಳಿಯ ನಡುವೆ ಜಗದ ತುಂಬೆಲ್ಲ ಹರುಷ ಪಸರಿಸುತ್ತಿದೆ. ಕ್ರಿಸ್ಮಸ್ ಹಬ್ಬ ವರ್ಷದ ಕೊನೆಯಲ್ಲಿ ಬರುವುದರಿಂದ ಸಕಲ ರೀತಿಯಲ್ಲೂ, ಸರ್ವ ವರ್ಗದವರೂ ಅವರ್ಣನೀಯವಾಗಿ ಆನಂದವನ್ನು ಅನುಭವಿಸುತ್ತಾರೆ. ಇದಕ್ಕೆ ಕಾರಣವಿಷ್ಟೆ.

     ವರ್ಷಾಂತ್ಯವಾದುದರಿಂದ ದುಡಿಯುವ ವರ್ಗ ತಮ್ಮ ದುಡಿಮೆಗೆ ಒಂದು ವಾರದ ಬ್ರೇಕ್ ತೆಗೆದುಕೊಂಡು ಪ್ರವಾಸ ಪ್ರಿಯರಾದರೆ, ಕುಟುಂಬದ ಜೊತೆ ಹೊಸ ಜಾಗಕ್ಕೆ ಪ್ರವಾಸ ಹೊರಡುವುದು, ವಿದ್ಯಾಭ್ಯಾಸ ಮಾಡುವ ಮಕ್ಕಳಿಗೆ ಕ್ರಿಸ್ಮಸ್ ರಜಾ ಇರುವುದರಿಂದ ಇದೆ ಸಮಯವನ್ನು ಮನೆಯಲ್ಲಿ ಶುಭ ಸಮಾರಂಭಗಳ ಆಯೋಜನೆಯನ್ನು ನಿಗದಿಪಡಿಸುತ್ತಾರೆ. ಹೀಗೆ ಒಂದಲ್ಲಾ ಒಂದು ರೀತಿಯಲ್ಲಿ ಮೈಮನಸ್ಸುಗಳಿಗೆ ಹರ್ಷ ತರುವ ಹಬ್ಬ ಕ್ರಿಸ್ಮಸ್ ಎಂದರೆ ಅತಿಶಯೋಕ್ತಿಯೇನಲ್ಲ.

     ಭಾರತವು ವೈವಿಧ್ಯಭಾರತಿ ದೇಶ. ಭಾಷೆ, ಸಂಸ್ಕøತಿ, ಧರ್ಮ ಹೀಗೆ ವಿವಿಧತೆ ಮೇಳೈಸಿದೆ ಮತ್ತು ಸಾಮುದಾಯಿಕ ಬದುಕಿಗೆ ಆನಂದದ ಅನುಭೂತಿಯನ್ನೂ ನೀಡಿದೆ. ನೂರಾರು ವರ್ಷಗಳಿಂದಲೇ ಭಾರತದ ಪ್ರಧಾನ ಸಂಸ್ಕøತಿಯ ಜೊತೆ ಕ್ರೈಸ್ತ ಸಂಸ್ಕøತಿಯು ಜೊತೆಯಾಗಿ ಸಾಗುತ್ತಿದೆ. ಕೊಡು-ಕೊಳುವಿಕೆಯಲ್ಲಿ ತನ್ನನ್ನು ಶ್ರೀಮಂತಪಡಿಸಿಕೊಂಡಿದೆ.

     ಭಾರತದಲ್ಲಿ ಕ್ರೈಸ್ತರ ಸಂಖ್ಯೆ ತೀರಾ ಅಲ್ಪವಾದರೂ `ಒಳಗೊಳ್ಳುವ’ ಮನೋಭಾವದಿಂದಾಗಿ ಕ್ರಿಸ್ಮಸ್ ಸಾರ್ವಜನಿಕ ಹಬ್ಬವಾಗಿ ಪರಿತವರ್ತನೆಯಾಗಿದೆ ಎಂದರೆ ತಪ್ಪಾಗಲಾರದು. ಪ್ರಧಾನ ತತ್ತ್ವವದ ಪ್ರೀತಿ-ಸಹೋದರತೆಯೇ ಮೇಳೈಸಿ ಈ ಹಬ್ಬ ಜಾತಿ, ಧರ್ಮದ ಹಂಗಿಲ್ಲದೆ ಎಲ್ಲರೂ ಭಾಗವಹಿಸುವ ಮೂಲಕ ಕಳೆ ಗಟ್ಟುತ್ತದೆ.

      ಎರಡು ಸಾವಿರ ವರ್ಷದ ಹಿಂದೆ ಯೇಸು ಕ್ರಿಸ್ತನು ದನಕ ಕೊಟ್ಟಿಗೆಯಲ್ಲಿ ಹುಟ್ಟುತ್ತಾನೆ. ಇದು ಅತಿಶಯವಾದ ಘಟನೆ ಎನ್ನುವುದಕ್ಕೆ ಆ ಕೊಟ್ಟಿಗೆಯ ಮೇಲೆ ಪ್ರಕಾಶಮಾನವಾಗಿ ನೆಲೆ ನಿಂತಿರುವ ನವ ನವೀನವಾದ ನಕ್ಷತ್ರವು ಸಾಕ್ಷಿಯಾಗಿದೆ. ಈ ದೇವ ಮಗುವಿನ ಜನನದ ಸುದ್ದಿಯನ್ನು ಮೊದಲು ಪಡೆದವರು ಕುರಿ ಕಾಯುತ್ತಿದ್ದ ಕುರುಬರು. ನಂತರದಲ್ಲಿ ಅಸಾಮಾನ್ಯವಾದುದನ್ನು ಲೆಕ್ಕಾಚಾರದ ಮೂಲಕ ತಿಳಿಯುವ ಜ್ಯೋತಿಷ್ಯ ಪಾರಂಗತ ಯೋಯಿಸರು. ಹೀಗೆ ಭೂಮಿಯಲ್ಲಿಯೂ, ಪರಲೋಕದಲ್ಲಿಯೂ ಸಂತೋಷಕ್ಕೆ ಕಾರಣವಾದ ಯೇಸು ಮಗುವಿನ ಜನನ ಬೆತ್ಲೆ ಹೇಮ್ ಎಂಬ ಊರಿನಲ್ಲಿ ಘಟಿಸುತ್ತದೆ.

       ಕ್ರಿಸ್ಮಸ್ ಹಬ್ಬವು ಕ್ರಿಸ್ತಾವಲಂಬಿಗಳು ಕಾತರದಿಂದ ವರ್ಷ ಪೂರ್ತಿ ನಿರೀಕ್ಷೆ ಮಾಡಿಕೊಂದಿದ್ದು. ಸಡಗರದಿಂದ ಆಚರಿಸುವ ಹಬ್ಬವಾಗಿದೆ. ಇಲ್ಲಿ ಹಬ್ಬದ ಸಂಭ್ರಮ-ಸಡಗರದಂತಹ ಸಾಮಾನ್ಯ ವಿಚಾರಗಳ ಜೊತೆ ಸಮಕಾಲೀನ ವಿಚಾರಗಳೂ ಮಹತ್ವ ಪಡೆದಿದೆ. ಸಾಮಾನ್ಯವಾದ ವಿಚಾರಗಳ ಕಡೆಗೆ ಗಮನ ಹರಿಸುವುದಾದರೆ ಹಬ್ಬದ ಅಚರಣೆಗೆ ಒಂದು ತಿಂಗಳು ಮುಂಚೆಯೇ ಮನೆಯನ್ನು ಶುಚಿ ಮಾಡುವ, ಅಂದ ಚೆಂದ ಮಾಡುವ, ಸುಣ್ಣ ಬಣ್ಣ ಹೊಡೆಸುವ ಕೆಲಸದಲ್ಲಿ ಮನೆಮಂದಿಯಲ್ಲರೂ, ಹಿರಿಕಿರಿಯರೆನ್ನದೆ ತೊಡಗಿಕೊಳ್ಳುತ್ತಾರೆ ಇಲ್ಲಿಂದಲೇ ಸಡಗರಕ್ಕೆ ಮುನ್ನಡಿ ಬರೆಯಲಾಗುತ್ತದೆ.

        ನಂತರ ಹಬ್ಬದ ದಿನ ಸನಿಹವಾದಂತೆ ಹೊಸ ಬಟ್ಟೆ ಬರೆಗಳ ಖರೀದಿಗೆ ಮುಂದಾಗುತ್ತಾರೆ. ಸಾಕಷ್ಟು ಮುಂಚಿತವಾಗಿ ಹಬ್ಬದ ಸಿದ್ಧತೆಗಳು ನಡೆಯುತ್ತವೆ. ಕೆಲವರು ಹಬ್ಬದ ಚೀಟಿಗೂ ಸೇರಿಕೊಂಡು ಪ್ರತಿ ತಿಂಗಳೂ ನಿಗದಿಪಡಿಸಿದ ಮೊತ್ತವನ್ನು ನೀಡಿ, ಹಬ್ಬದ ಅಡುಗೆ ಸಾಮಾನುಗಳಿಗೆ, ಪಟಾಕಿ ಮೊದಲಾದುವುಗಳಿಗೆ ಈ ಹಣವನ್ನು ಉಪಯೋಗಿಸುತ್ತಾರೆ. ಬಡ ಮಧ್ಯಮ ವರ್ಗದ ಜನ ಅಲ್ಪ ಮೊತ್ತವನ್ನು ಪ್ರತಿ ತಿಂಗಳೂ ಚೀಟಿ ರೂಪದಲ್ಲಿ ಉಳಿತಾಯ ಮಾಡುವುದರಿಂದ ವರ್ಷದ ಕೊನೆಯಲ್ಲಿ ಸಾಕಷ್ಟು ಉತ್ತಮ ಮೊತ್ತವೇ ಹಬ್ಬದ ಆಚರಣೆಗಾಗಿ ಕೈ ಸೇರುತ್ತದೆ.

     ಕ್ರಿಸ್ಮಸ್ ಹಬ್ಬ ಉಡುಗೊರೆ ವಿನಿಮಯದ ಹಬ್ಬವೇ ಆದುದರಿಂದ ತಿಂಡಿ ತಿನಿಸುಗಳನ್ನು ವಿಶೇಷವಾಗಿ ನೆರೆಹೊರೆಯವರೊಂದಿಗೆ ಹಂಚಿಕೊಳ್ಳುತ್ತಾರೆ. ಈ ತಿಂಡಿ ತಿನಿಸುಗಳನ್ನು ಸ್ವತಃ ತಮ್ಮ ಮನೆಯಗಳಲ್ಲಿಯೇ ಭಾರಿ ಸಿದ್ಧತೆಯೊಂದಿಗೆ ತಯಾರಿಸುತ್ತಾರೆ. ಇದರಲ್ಲಿ ಸಾಂಪ್ರದಾಯಿಕವಾಗಿ ಕಲ್ ಕಲ್, ಕರ್ಜಿಕಾಯಿ, ಚಕ್ಕಲಿ, ತುಕ್ಕಡಿ ಮೊದಲಾದ ತಿಂಡಿ ತಿನಿಸುಗಳನ್ನು ತಯಾರಿಸುತ್ತಾರೆ. ಇದರ ಜೊತೆ ಬೇಕರಿಗಳಿಂದ ಸಿದ್ಧವಾಗಿರುವ ಆಹಾರ ಪದಾರ್ಥಗಳಾದ ವಿವಿಧ ಬಗೆಯ ಕೇಕ್‍ಗಳ ಜೊತೆ ಸೇಬು, ಬಾಳೆಹಣ್ಣು, ಕಿತ್ತಲೆ, ಖರ್ಜೂರವನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಸೇಬು, ಕಿತ್ತಲೆ ಈ ಕಾಲದಲ್ಲಿ ಸಮೃದ್ಧವಾಗಿ ದೊರೆಯುವ ಹಣ್ಣಾದರೆ ಖರ್ಜೂರ ಇಸ್ರೇಲ್‍ನಂತಹ ಒಣಪ್ರದೇಶದ ಹಣ್ಣು. ಧಾರ್ಮಿಕ ಸಂಬಂಧ ಹೊಂದಿಕೊಂಡು ಬಳಕೆಯಾಗುತ್ತಿದೆ.

       ಹಬ್ಬದ ಸಂದರ್ಭದಲ್ಲಿ ಅಲಂಕಾರದಲ್ಲಿ ತರಹೇವಾರಿ ವಿದ್ಯುತ್ ದೀಪಗಳ ಅಲಂಕಾರದ ಜೊತೆ ಕ್ರಿಸ್ಮಸ್ ಮರಗಳನ್ನೂ ಶೃಂಗರಿಸುತ್ತಾರೆ. ಹಬ್ಬದ ನೆಪದಲ್ಲಿ ಪ್ರಕೃತಿಯ ಜೊತೆ ಸಂಬಂಧ ಹೊಂದಿರುವುದನ್ನು ಈ ಕ್ರಿಯೆಯ ಮೂಲಕ ನಾವು ಗುರುತಿಸಲು ಸಾಧ್ಯವಿದೆ. ಕ್ರಿಸ್ಮಸ್ ಮರಕ್ಕೆ ಪ್ರೀತಿ ಪಾತ್ರರಿಂದ, ಸ್ನೇಹಿತರಿಂದ, ಬಂಧುಗಳಿಂದ ಬಂದಿರುವ ವಿಶೇಷ ಶುಭಾಶಯದ ಕಾರ್ಡ್ (ಗ್ರೀಟಿಂಗ್ಸ್) ಗಳನ್ನು ತೂಗು ಹಾಕುತ್ತಾರೆ. ಚಿಕ್ಕ ಗಾತ್ರದ ಬೆಲ್, ನಕ್ಷತ್ರ, ಸಾಂತಾ ಕ್ಲಾಸ್‍ನ ಪ್ರತಿರೂಪಗಳನ್ನು ತೂಗು ಹಾಕುತ್ತಾರೆ.

     ಕ್ರಿಸ್ಮಸ್ ಬೆಳಕಿನ ಹಬ್ಬವೆಂದೆ ಖ್ಯಾತವಾಗಿದೆ. ಯೇಸು ಕ್ರಿಸ್ತನ ಸಂದೇಶ ಈ ಜಗತ್ತಿಗೆ ಬೆಳಕಾಗಿದೆ. ಎನ್ನುವುದನ್ನುಕ್ಯಾಂಡಲ್ ಮೇಳದ ಬತ್ತಿ ಬೆಳಗುವುದು ಸಂಕೇತಿಸುತ್ತದೆ. ಮೇಣದ ಬತ್ತಿಯ ಆರಾಧನೆಯೆಂದೆ ದೇವಾಲಯಗಳಲ್ಲಿ ಕ್ರಿಸ್ಮಸ್ ಆಚರಣೆಯ ಹಿಂದಿನ ದಿನಗಳಲ್ಲಿ ಮೇಣದ ಬತ್ತಿ ಬೆಳಕಿನಲ್ಲಿಯೆ ರಾತ್ರಿ ಹೊತ್ತಿನಲ್ಲಿ ಈ ಆರಾಧನೆ ನಡೆಯುತ್ತದೆ.

     ಬದುಕಿನಲ್ಲಿ ನಾವು ಆಧುನಿಕತೆಯನ್ನು ಕಳಚಿಕೊಂಡು ಬಂದರೆ ಕ್ಷಣ ಇಂತಹ ಕ್ಷಣಗಳಿಗೆ ಸಾಕ್ಷಿಯಾಗುವುದು ವಿಶೇಷವಾದ ಅನುಭೂತಿಯನ್ನು ಕೊಡುತ್ತದೆ. ಇದರಂತೆಯೆ ನಕ್ಷತ್ರದ ಉಪಯೋಗ ಹಬ್ಬದಲ್ಲಿ ವಿಶೇಷವಾಗಿದೆ. ಈ ಲೋಕಕ್ಕೆ ನಕ್ಷತ್ರ ಪ್ರಾಯದವನೊಬ್ಬನ ಆಗಮನವನ್ನು ಈ ನಕ್ಷತ್ರ ತೋರಿಸುತ್ತದೆ. ಇದು ಮಾರ್ಗದರ್ಶನವೂ ಹೌದು. ಹಾಗಾಗಿ ಪ್ರತಿ ಮನೆಯಲ್ಲಿಯೂ ಇದೆ ಆಶಯವನ್ನು ಹೊಂದುವಂತಹ ನಕ್ಷತ್ರಗಳನ್ನು ತೂಗು ಹಾಕುತ್ತಾರೆ.

      ಈ ಹಬ್ಬದಲ್ಲಿ ಕ್ಯಾರೆಲ್ಸ್ ಅಥವಾ ಭಜನೆ ಅತಿ ಮುಖ್ಯವಾದ ಭಾಗವಾಗಿದೆ. ಪ್ರತಿ ಚರ್ಚಿನ ಸದಸ್ಯರೂ ಮನೆ ಮನೆಗೆ ಯೇಸು ಕ್ರಿಸ್ತನ ಜನನದ ಶುಭವಾರ್ತೆಯನ್ನು ಈ ಮೂಲಕ ತಿಳಿಸುತ್ತಾರೆ. ಸಂಜೆಯ ಹೊತ್ತಿನಲ್ಲಿ ದೇವಾಲಯದ ಭಜನಾ ಮಂಡಳಿಯ ಸದಸ್ಯರು ಮನೆಗಳನ್ನು ಸಂದರ್ಶಿಸಿ ಹಾಡು ಹಾಡಿ ಪ್ರಾರ್ಥನೆಯನ್ನು ಮಾಡಿ ಶುಭ ಹಾರೈಸುತ್ತಾರೆ. ಈ ಮನೆಯ ಸದಸ್ಯರು ಕೇಕ್, ತಿಂಡಿ ನೀಡುವ ಮೂಲಕ ಅವರನ್ನು ಆತ್ಮೀಯವಾಗಿ ಸತ್ಕರಿಸುತ್ತಾರೆ.

   ಒಟ್ಟಾರೆ ಕ್ರಿಸ್ಮಸ್ ಸಾಂಪ್ರದಾಯಿಕತೆಯನ್ನು ಹೊಂದಿಕೊಂಡಂತೆ ಆಧುನಿಕ ಸ್ಪರ್ಶ ಹೊಂದಿ ಎಲ್ಲ ವರ್ಗದ ಜನರಿಂದ ಸಾಮೂಹಿಕವಾಗಿ, ಸಂತೋಷವಾಗಿ ಆಚರಿಸಲ್ಪಡುವ ಮೂಲಕ ಪ್ರೀತಿ, ಶಾಂತಿ, ಸೌಹಾರ್ದತೆಯನ್ನು ಪ್ರಚುತಪಡಿಸುವ ಹಬ್ಬವಾಗಿದೆ ಎನ್ನಬಹುದು.

 ಅಜಿತ್ ಕುಮಾರ್,
ಸಹ ಪ್ರಾಧ್ಯಾಪಕರು, ಕನ್ನಡ ವಿಭಾಗ, ಯೂನಿಯನ್ ಕ್ರಿಶ್ಚಿಯನ್ ಕಾಲೇಜು, ತುಮಕೂರು (9880415361).

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap