ಬೆಂಗಳೂರು
ಪದೇ ಪದೇ ಲೇಖಾನುದಾನ ಪಡೆಯುವ ಪ್ರವೃತ್ತಿಗೆ ವಿಶ್ರಾಂತಿ ಹೇಳಿ ಪೂರ್ಣ ಪ್ರಮಾಣದ ಬಜೆಟ್ ಅಂಗೀಕಾರ ಪಡೆಯಲು ನಿಯಾಮಾವಳಿ ಪ್ರಕಾರ ಚೆರ್ಚೆಗೆ ಅವಕಾಶ ನೀಡಬೇಕೆಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿ ಅವರನ್ನು ಒತ್ತಾಯಿಸಿದರು.
2019-20ನೇ ಸಾಲಿನ ಆಯವ್ಯಯದ ಮೇಲಿನ ಚೆರ್ಚೆಯಲ್ಲಿ ಪಾಲ್ಗೊಂಡು, ಕಾರಣಾಂತರದಿಂದ ಎರಡು ಬಾರಿ ಲೇಖಾನುದಾನ ಪಡೆಯಲಾಗಿದೆ. ಇನ್ನು ಮುಂದೆ ಇದಕ್ಕೆ ಅವಕಾಶ ನೀಡಬಾರದು ಎಂದು ಸಲಹೆ ನೀಡಿದರು.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಎಲ್ಲಾ ಯೋಜನೆಗಳನ್ನು ಮುಂದುವರೆಸುವುದರ ಜೊತೆಗೆ ಅನುದಾನ ನೀಡಿಕೆಯಲ್ಲಿ ಉಂಟಾಗಿರುವ ತಾರತಮ್ಯವನ್ನು ಸರಿಪಡಿಸಬೇಕೆಂದು ಅವರು ಒತ್ತಾಯಿಸಿದರು. ಹೊಸ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಹಲವಾರು ಯೋಜನೆಗಳನ್ನು ಸ್ಥಗಿತಗೊಳಿಸಲಾಗಿದೆ. ಟೆಂಡರ್ ಪ್ರಕ್ರಿಯೆ ಮುಗಿದು ಕಾರ್ಯ ಆರಂಭಗೊಂಡ ಕಾಮಗಾರಿಗಳನ್ನು ಸ್ಥಗಿತಗೊಳಿಸಲಾಗಿದೆ. ಶಾಸಕರು ಆತಂಕಗೊಂಡಿದ್ದು, ಅವರಿಗೆ ಭರವಸೆ ನೀಡಬೇಕೆಂದು ಪ್ರತಿಪಕ್ಷದ ನಾಯಕರು ಸರ್ಕಾರವನ್ನು ಒತ್ತಾಯಿಸಿದರು.
ರಾಜ್ಯದ ಹಣಕಾಸು ಸ್ಥಿತಿ ಉತ್ತಮವಾಗಿದೆ ಆದರೂ ಸಹ ಖಜಾನೆ ಖಾಲಿಯಾಗಿದೆ ಎಂಬ ಬಿಜೆಪಿ ಅಧ್ಯಕ್ಷರ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಅಧ್ಯಕ್ಷರಿಗೆ ಹಣಕಾಸಿನ ಮಾಹಿತಿ ಇಲ್ಲ ಎಂದು ಲೇವಡಿ ಮಾಡಿದರು. ರಾಜ್ಯದಲ್ಲಿ ಮೋಟಾರು ವಾಹನ ತೆರಿಗೆ ಹೊರತುಪಡಿಸಿ ಉಳಿದೆ ಎಲ್ಲಾ ಬಾಬತ್ತಿನಲ್ಲಿ ಸಂಪನ್ಮೂಲ ಸಂಗ್ರಹಣೆಯಲ್ಲಿ ಉತ್ತಮವಾಗಿದೆ. ಮುಂದಿನ ದಿನಗಳಲ್ಲಿ ನಿಗದಿತ ಪ್ರಮಾಣದಲ್ಲಿ ಸಂಪನ್ಮೂಲ ಸಂಗ್ರಹವಾಗಲಿದೆ ಎಂದರು.
ಜೆಡಿಎಸ್ ನಾಯಕ , ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ತಮ್ಮ ಅಧಿಕಾರಾವಧಿಯಲ್ಲಿ ಎಲ್ಲಾ ಶಾಸಕರಿಗೆ ಬಿಡುಗಡೆ ಮಾಡಿರುವ ಅನುದಾನವನ್ನು ಪುನಃ ಪರಿಶೀಲಿಸಿ ಬಿಡುಗಡೆ ಮಾಡಬೇಕು ತಡೆ ಹಿಡಿದಿರುವ ಕಾಮಗಾರಿಗಳನ್ನು ಮುಂದುವರೆಸಲು ಸೂಚನೆ ನೀಡಬೇಕು. ಉಳಿದ 5 ತಿಂಗಳಲ್ಲಿ ರಾಜ್ಯದ ಅಭಿವೃದ್ಧಿಗೆ ಆಯವ್ಯಯದಲ್ಲಿ ನಿಗದಿ ಮಾಡಿರುವ ಹಣವನ್ನು ವೆಚ್ಚಮಾಡಬೇಕೆಂದು ಸಲಹೆ ನೀಡಿದರಲ್ಲದೆ, ಬೆಂಗಳೂರು ನಗರದ ಅಭಿವೃದ್ಧಿ ಕುರಿತಂತೆ ಕ್ಷೇತ್ರದ ಶಾಸಕರ ಸಭೆ ಕರೆದು ಚರ್ಚಿಸಿ ಪರಿಹಾರ ಕಂಡುಹಿಡಿಯಬೇಕೆಂದು ಸಲಹೆ ನೀಡಿದರು.ಮುಖ್ಯಮಂತ್ರಿ ಯಡಿಯೂರಪ್ಪ ಮಧ್ಯ ಪ್ರವೇಶಿಸಿ ರಾಜ್ಯ ಸರ್ಕಾರ ಎಲ್ಲಾ ಶಾಸಕರ ಕ್ಷೇತ್ರಗಳ ಅಭಿವೃದ್ಧಿಗೆ ಆದ್ಯತೆ ನೀಡಲಿದೆ. ಕೆಲವೆಡೆ ಅನುದಾನದಲ್ಲಿ ತಾರತಮ್ಯವಾಗಿದೆ ಎಂಬ ಆಕ್ಷೇಪಗಳಿವೆ ಅವುಗಳನ್ನು ಸರಿಪಡಿಸಲಾಗುವುದೆಂದು ಮುಖ್ಯಮಂತ್ರಿ ಅವರು ಭರವಸೆ ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
