ಕಳೆದ ಶತಮಾನದ ಮೊದಲ ದಶಕದಲ್ಲಿ (29 ನೆ ಡಿಸೆಂಬರ್ 1904) ಹೆಗ್ಗಾಡಿನ, ಕಗ್ಗಾಡಿನ, ವರ್ಷದ ಒಂದೆರಡು ತಿಂಗಳುಗಳ ಬಿಡುವು ಬಿಟ್ಟಂತೆ ದನಗೋಳು ಮಳೆಯಿಂದ ಹೆಂಬೇಸರ ಉಂಟು ಮಾಡುತ್ತಿದ್ದ, ಮಲೇರಿಯಾ ರೋಗದ ತವರು ಕೊಂಪೆಯೆನಿಸಿದ್ದ ಮಲೆನಾಡಿನಲ್ಲಿ ಹುಟ್ಟಿದವರು ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ ನಾಮಾಂಕಿತದ ಕುವೆಂಪು.
ತಮ್ಮದೆ ಮನೆಯ ತುಂಬು ಅವಿಭಕ್ತ ಕುಟುಂಬದಲ್ಲಿ ಮನೆಯ ಇತರ ಮಕ್ಕಳಲ್ಲದೆ, ನೆಂಟರಿಷ್ಟರ ಮನೆಯ ಮಕ್ಕಳೂ ಸೇರಿದಂತೆ ಮನೆಯ ಉಪ್ಪರಿಗೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಜೀವನ ಯಾಪನೆಗೆ ಹೋಗಿದ್ದ `ಐಗಳು’ ಎಂದು ಕರೆಯುತ್ತಿದ್ದ ಗುರುಗಳ ಮೂಲಕ ಮರಳಿನ ಮೇಲೆ ಬಲಗೈನ ಮಧ್ಯದ ಬೆರಳಿನಿಂದ ಕನ್ನಡ ವರ್ಣಮಾಲೆ ತಿದ್ದುವ ಮೂಲಕ ಅಕ್ಷರಾಭ್ಯಾಸಕ್ಕೆ ಅಡಿ ಇಟ್ಟವರು.
ಮಾಧ್ಯಮಿಕ ಶಾಲೆಯಲ್ಲಿ ಓದುವಾಗಲೆ ತಂದೆಯು ಅಕಾಲ ಮರಣಕ್ಕೆ ತುತ್ತಾದರು. ಕಡ್ಡಾಯ ಇಂಗ್ಲಿಷ್ ಮಾಧ್ಯಮ ಶಿಕ್ಷಣವಿದ್ದು, ಓದಿನಲ್ಲಿ ಚುರುಕಾಗಿದ್ದ ಬಾಲಕ ಪುಟ್ಟಪ್ಪ ಶ್ರೀಮಂತರೂ, ಮೈಸೂರು ಪ್ರಜಾಪ್ರತಿನಿಧಿ ಸಭೆಯ ಸದಸ್ಯರೂ ಆಗಿದ್ದ ಮಾವ ದೇವಂಗಿ ರಾಮಣ್ಣಗೌಡರ ಮೊದಲ ಅಳಿಯರಾಗಿದ್ದ, ಆ ಕಾಲಕ್ಕೆ (1900ರ ಆಸು ಪಾಸು) ಎಸ್‍ಎಸ್‍ಎಲ್‍ಸಿ ಪಾಸು ಮಾಡಿದ್ದ ಹೊಸಮನೆ ಮಂಜಪ್ಪ ಗೌಡರ ಗಮನ ಸೆಳೆಯುತ್ತಾರೆ. ಇವರು ತಂದೆ ಇಲ್ಲದ ಬಾಲಕ ಪುಟ್ಟಪ್ಪನನ್ನು ತಮ್ಮ ತಮ್ಮಂದಿರ ಜೊತೆ ಮೈಸೂರಿನಲ್ಲಿ ಓದಿಸಲು ಕುವೆಂಪು ಚಿಕ್ಕಪ್ಪನವರಾದ ಕುಪ್ಪಳಿ ರಾಮಣ್ಣಗೌಡರೊಂದಿಗೆ ಮಾತನಾಡಿ ಒಪ್ಪಿಸುತ್ತಾರೆ.
ಮುಂದಿನದು ಇತಿಹಾಸ..! ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದಾಗಲೆ `ಬಿಗಿನರ್ಸ್ ಮ್ಯೂಸ್’ ಹೆಸರಿನ ಇಂಗ್ಲಿಷ್ ಕವನ ಸಂಕಲನ ಹೊರ ತರುತ್ತಾರೆ. ಯೋಗಾಯೋಗವೆಂಬಂತೆ ಪಿಯುಸಿಯಲ್ಲಿ ವಿಜ್ಞಾನದ ವಿದ್ಯಾರ್ಥಿಯಾಗಿದ್ದ ಕುವೆಂಪು ತತ್ವಶಾಸ್ತ್ರದಲ್ಲಿ ಬಿ.ಎ. ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗುತ್ತಾರೆ.
ನಂತರ ತತ್ವಶಾಸ್ತ್ರದ ಎಂ.ಎ. ಬದಲಿಗೆ ಅವರ ಗುರುಗಳಾದ ಎ. ಆರ್.ಕೃಷ್ಣಶಾಸ್ತ್ರಿಯವರ ಮಾರ್ಗದರ್ಶನದಂತೆ ಅದೇ ತಾನೆ ಮಹಾರಾಜ ಕಾಲೇಜಿನಲ್ಲಿ ಆರಂಭವಾಗಿದ್ದ ಕನ್ನಡ ಎಂ.ಎ.ತರಗತಿಗೆ ಸೇರುತ್ತಾರೆ. ಇಂಗ್ಲಿಷ್ ಭಾಷೆಯಲ್ಲಿ ನಿರಂತರ ಕಾವ್ಯ ಕೃಷಿ ಸಾಗಿತ್ತು. ಜರ್ಮನಿಯ ಕವಿ ಕಸಿನ್ ಮೈಸೂರಿಗೆ ಬಂದಾಗ ಎಂ.ಎಚ್.ಕೃಷ್ಣ ಐಯ್ಯಂಗಾರ್ ಶಿಷ್ಯನ ಕವನ ಸಂಕಲನದ ಹಸ್ತಪ್ರತಿಯೊಂದಿಗೆ ಅವರನ್ನು ಭೇಟಿ ಮಾಡಿಸುತ್ತಾರೆ. ಐರಿಷ್ ಅದನ್ನು ಎಸೆದು ನಿಮ್ಮ ಭಾಷೆಯಲ್ಲಿ ಏನು ಬರೆದಿದ್ದೀರಿ ಎಂದು ಪ್ರಶ್ನಿಸುತ್ತಾರೆ.
ಆಗ ಕುವೆಂಪು ಕನ್ನಡ ಭಾಷೆ ಬೆಳೆದಿಲ್ಲ. ಅದರಲ್ಲಿ ಭಾವನೆಗಳನ್ನು ವ್ಯಕ್ತಪಡಿಸಲು ಸಾಧ್ಯವಿಲ್ಲ ಎನ್ನುತ್ತಾರೆ. ಆಗ ಅವರು “ನಿಮಗೆ ಗೊತ್ತಿಲ್ಲ, ನಿಮ್ಮ ಭಾವನೆಗಳನ್ನು ಮಾತೃಭಾಷೆಯಲ್ಲದೆ ಬೇರೆ ಭಾಷೆಯಲ್ಲಿ ವ್ಯಕ್ತಪಡಿಸಲಾಗದು. ನಿಮ್ಮ ಕವಿತೆ ನಿಮಗೆ ಚೆನ್ನಿರಬಹುದು. ಆದರೆ ನಮಗೆ ಗೊತ್ತಾಗುತ್ತದೆ ಅವೆಷ್ಟು ಹಾಸ್ಯಾಸ್ಪದವಾಗಿವೆ ಎಂದು. ರವೀಂದ್ರನಾಥ್ ಟ್ಯಾಗೂರ್ ಬರುವ ತನಕ ಬೆಂಗಾಲಿ ಭಾಷೆ ಕೂಡ ಹಾಗೆಯೆ ಇತ್ತು. ಅಂತೆಯೆ ನೀವು ನಿಮ್ಮ ಭಾಷೆಯನ್ನು ಬಳಸಿ, ಬೆಳೆಸಿ’’ ಎಂಬುದಾಗಿ ಸಲಹೆ ನೀಡಿ ಕಳುಹಿಸುತ್ತಾರೆ.
ಇದೂ ಒಂದು ಇತಿಹಾಸ. ರೂಮಿಗೆ ಬಂದವರೆ ಕನ್ನಡದಲ್ಲಿ ಕವಿತೆ ಬರೆಯಲು ಶುರುವಿಟ್ಟು ಒಂದೆ ತಿಂಗಳಲ್ಲಿ 68 ಕವಿತೆಗಳನ್ನು ಬರೆಯುತ್ತಾರೆ..! ಕೇವಲ ನಲವತ್ತನೆ ವಯಸ್ಸಿಗೆ ರಾಮಾಯಣ ದರ್ಶನಂ ಮಹಾಕಾವ್ಯ ರಚಿಸಿ, ಅದು ಕನ್ನಡಕ್ಕೆ ಪ್ರಪ್ರಥಮ ಜ್ಞಾನಪೀಠ ಪ್ರಶಸ್ತಿ ತಂದು ಕೊಡುತ್ತದೆ. ಅಲ್ಲದೆ ಹತ್ತಾರು ಕವನ ಸಂಕಲನಗಳು, ಹತ್ತಾರು ನಾಟಕಗಳು, ಎರಡು ಮಹಾ ಕಾದಂಬರಿಗಳು, ವಿಮರ್ಶಾಗ್ರಂಥಗಳು, ಆತ್ಮಕತೆ (ನೆನಪಿನ ದೋಣಿಯಲ್ಲಿ), ಮಕ್ಕಳ ಸಾಹಿತ್ಯ ಮುಂತಾದ ಬರವಣಿಗೆಯಿಂದ ಆಧುನಿಕ ಕನ್ನಡ ಸಾಹಿತ್ಯವನ್ನು ಅವರು ಹುಟ್ಟಿ ಬಂದ ಸಹ್ಯಾದ್ರಿ ಶಿಖರದಷ್ಟೆ ಎತ್ತರಕ್ಕೆ ಕೊಂಡೊಯ್ಯುತ್ತಾರೆ. ಆ ಮೂಲಕ ಕನ್ನಡ ವಾಗ್ದೇವಿಯ ಮುಕುಟಕ್ಕೆ ರತ್ನಾಭರಣರಾಗುತ್ತಾರೆ.
ಈ ಮಧ್ಯೆ ಬಿಎ ಅಭ್ಯಾಸ ಮಾಡುವಾಗ ತೀವ್ರ ಕಾಯಿಲೆಗೆ ಒಳಗಾಗಿ ಅದಾಗ ತಾನೆ ಮೈಸೂರಿನಲ್ಲಿ ಚಿಕ್ಕ ಬಾಡಿಗೆ ಮನೆಯೊಂದರಲ್ಲಿ ಆರಂಭವಾಗಿದ್ದ ಶ್ರೀ ರಾಮಕೃಷ್ಣಾಶ್ರಮದ ಸ್ವಾಮೀಜಿ ಶ್ರೀ ಸಿದ್ದೇಶ್ವರಾನಂದರ ಮೂಲಕ ಆಶ್ರಮಕ್ಕೆ ಬಂದು ನೆಲೆ ನಿಲ್ಲುತ್ತಾರೆ. ಇಲ್ಲಿ ಸತತ 12 ವರ್ಷಗಳ ಕಾಲ ಇದ್ದು, ತಮ್ಮ ಬದುಕಿನ ಉತ್ತುಂಗದ ದಿನಗಳನ್ನು ಕಳೆಯುತ್ತಾರೆ.
ಇಡೀ ಜಗತ್ತು ಮಹಾಕಾವ್ಯದ ಯುಗ ಮುಗಿಯಿತು ಎಂಬ ತೀರ್ಮಾನದಲ್ಲಿದ್ದಾಗ ಭುವನದ ಭಾಗ್ಯವೆಂಬಂತೆ ರಾಮಾಯಣ ದರ್ಶನಂ ಮಹಾಕಾವ್ಯ ಹುಟ್ಟುತ್ತದೆ. ಕುವೆಂಪುರವರೆ ಸ್ವತಃ ಹೇಳಿರುವಂತೆ ರಾಮಾಯಣ ದರ್ಶನಂ ಕೃತಿಯನ್ನು ಅವರು ಸೃಷ್ಟಿಸಲಿಲ್ಲ, ಆ ಮಹಾಕೃತಿಯೆ ಕವಿ ಕುವೆಂಪುರವರನ್ನು ಸೃಷ್ಟಿಸಿತು..! ಯುಗಮಾನದ ಜನಕೋಟಿಯ ಹೆಬ್ಬಯಕೆಯಿಂದ ಮಹಾಕಾವ್ಯ ಹುಟ್ಟುತ್ತದೆ ಎನ್ನುತ್ತಾರೆ. ಮಹಾಕಾವ್ಯವನ್ನು ದುಡ್ಡುಕೊಟ್ಟು ಸೃಷ್ಟಿಸಲಾಗದು ಎಂಬ ಮಾತೂ ಇದೆ. ಇಂತಹ ಕವಿಯನ್ನು ಕುರಿತು ವರಕವಿ ಬೇಂದ್ರೆ `ಯುಗದ ಕವಿಗೆ ಜಗದ ಕವಿಗೆ, ಶ್ರೀರಾಮಾಯಣ ದರ್ಶನದಿಂದಲೆ ಕೈ ಮುಗಿದ ಕವಿಗೆ ಮಣಿಯದವರಾರು?’ ಎಂದು ಪ್ರಶಂಸಿಸಿದ್ದಾರೆ.
ಕುವೆಂಪು ಕಾವ್ಯನಾಮದ 20ನೆ ಶತಮಾನದ ಅಚ್ಚರಿಯನ್ನು ಪ್ರೀತಿಸುವವರು, ದ್ವೇಷಿಸುವವರು, ಪ್ರೀತಿಸಿ-ದ್ವೇಷಿಸಿದವರು, ದ್ವೇಷಿಸಿ-ಪ್ರೀತಿಸಿದವರು ಎಲ್ಲರೂ ಉಂಟು! ಆದರೆ ಅವರ ಸಾಹಿತ್ಯವನ್ನು ಅಧ್ಯಯನ ಮಾಡಿಯೂ ದ್ವೇಷಿಸಿದವರು ಇಲ್ಲವೇ ಇಲ್ಲ ಎಂದರೂ ಸರಿಯೆ..! ಕನ್ನಡದ ಆದಿಕವಿ ಪಂಪ `ಮಾನವ ಜಾತಿ ತಾನೊಂದೆ ವಲಂ’ ಎಂದು ಸಾವಿರ ವರ್ಷಗಳ ಹಿಂದೆ ಸಾರಿದ ಸಾರ್ವಕಾಲಿಕ ಸತ್ಯವು, 20 ನೆ ಶತಮಾನದಲ್ಲಿ ವಿಶ್ವಮಾನವ ಕುವೆಂಪುರವರ `ಮನುಜ ಮತ-ವಿಶ್ವ ಪಥ’ ದ ಮೂಲಕ ಅನುರಣಿಸುತ್ತಾ, ಸತ್ಯಸ್ಯ ಸತ್ಯವಾಗಿರುವುದು ಅಚ್ಚರಿಯೆನಿಸಿದರೂ ವಾಸ್ತವವಾಗಿದೆ.
ನಾಗಾರ್ಜುನ ಸಾಗ್ಗೆರೆ
(ಮೊ : 99161 22264)
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ