ಸಾವಿರಾರು ಕುಟುಂಬಗಳು ಬೀದಿಗೆ ಬೀಳುವ ಸಂದರ್ಭ…!
ತುಮಕೂರು:
ಭಾರತದ ವಿವಿಧ ಉದ್ಯಮಗಳು ಆರ್ಥಿಕ ಹಿಂಜರಿತದ ಸುಳಿಗೆ ಸಿಲುಕಿ ತತ್ತರಿಸುತ್ತಿದ್ದು, ಇಡೀ ಅರ್ಥಿಕ ವಲಯ ಬಹುದೊಡ್ಡ ಗಂಡಾಂತರಕ್ಕೆ ಸಿಲುಕಿದೆ. ಕಳೆದ ಒಂದು ವಾರದಿಂದ ಒಂದಲ್ಲ ಒಂದು ಉದ್ಯಮ ಮುಚ್ಚಿ ಹೋಗುವ, ಈಗಾಗಲೇ ಮುಚ್ಚಿರುವ ಉದಾಹರಣೆಗಳನ್ನು ನಾವು ನೋಡುತ್ತಲೇ ಬಂದಿದ್ದೇವೆ. ಹೆಚ್ಚಿನ ಹೊಡೆತ ಅನುಭವಿಸುತ್ತಿರುವ ಆಟೋಮೊಬೈಲ್ ಕ್ಷೇತ್ರವಂತೂ ತತ್ತರಿಸಿ ಹೋಗಿದ್ದು, ಮಾರಾಟ ಕುಸಿತ ಸಮಸ್ಯೆ ಎದುರಿಸುತ್ತಿರುವ ವಾಹನ ತಯಾರಿಕಾ ಸಂಸ್ಥೆಗಳ ಸಾಲಿಗೆ ಮಾರುತಿ ಸುಜೂಕಿ ಇಂಡಿಯಾ ಸೇರಿ ಹೋಗಿದೆ. ಈ ಕಂಪನಿಯಲ್ಲಿ 3 ಸಾವಿರ ಗುತ್ತಿಗೆ ನೌಕರರು ಈಗ ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.
ಅಲ್ಲಿ ನೆರೆಯಿಂದ ಜನ ತತ್ತರಿಸುತ್ತಿದ್ದರೆ ಇಲ್ಲಿ ಉದ್ಯೋಗಗಳು ಕಡಿತವಾಗಿ ಕಾರ್ಮಿಕರು ಅತಂತ್ರ ಸ್ಥಿತಿಗೆ ಸಿಲುಕಿದ್ದಾರೆ. ಒಂದೇ ತಿಂಗಳಲ್ಲಿ ಏನೆಲ್ಲ ಬದಲಾವಣೆಗಳಾದವು ಎಂಬುದಕ್ಕೆ ಈ ಎರಡು ಉದಾಹರಣೆಗಳು ನಮ್ಮ ಕಣ್ಮುಂದೆ ಇವೆ. ಅತಿವೃಷ್ಠಿ-ಅನಾವೃಷ್ಠಿಗಳ ನಡುವೆ ಆರ್ಥಿಕ – ಉದ್ಯಮ ವಲಯ ತತ್ತರಿಸಿದ್ದು ಚೇತರಿಸಿಕೊಳ್ಳಲಾಗದ ಪರಿಸ್ಥಿತಿಗೆ ಬಂದು ನಿಂತಿವೆ. ಒಂದು ಕಡೆ ಪ್ರವಾಹ ಪರಿಸ್ಥಿತಿಯಿಂದಾಗಿ ನಮ್ಮ ಬದುಕು ಮುಳುಗೇ ಹೋಯಿತು ಎಂದು ಅಲ್ಲಿ ಬೊಬ್ಬೆ ಇಡುತ್ತಿದ್ದರೆ ಇತ್ತ ಒಂದೊಂದೇ ಉದ್ಯಮಗಳು ಮುಚ್ಚಿ ಹೋಗುವ ಸ್ಥಿತಿಗೆ ಬಂದಿದ್ದು, ಉದ್ಯೋಗಸ್ಥರು ತಮ್ಮ ಭವಿಷ್ಯ ನೆನೆದು ಕಣ್ಣೀರಿಡುತ್ತಿದ್ದಾರೆ.
ಬೆಂಗಳೂರಿನ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ 10 ಸಾವಿರಕ್ಕೂ ಹೆಚ್ಚು ಕೈಗಾರಿಕೆಗಳು ನಷ್ಟದ ಹಾದಿಯಲ್ಲಿದ್ದು, ಒಟ್ಟು 12 ಲಕ್ಷ ಕಾರ್ಮಿಕರು ಕೆಲಸ ಕಳೆದುಕೊಳ್ಳುವ ಭೀತಿಗೆ ಸಿಲುಕಿದ್ದಾರೆ. ದಿನೇ ದಿನೇ ಎದುರಾಗುತ್ತಿರುವ ಇಂತಹ ವಿಪ್ಲವಗಳು ನಾಗರಿಕ ಸಮಾಜದ ಮೇಲೆ ತೀವ್ರ ಪರಿಣಾಮ ಬೀರುತ್ತಿವೆ. ತಕ್ಷಣಕ್ಕೆ ಈ ವಿಪ್ಲವ ತಿಳಿಯದೇ ಹೋದರೂ ಮುಂದೆ ತಿಳಿಯುವಷ್ಟರ ವೇಳೆಗೆ ಮತ್ತಷ್ಟು ಅನಾಹುತಗಳು ಸಂಭವಿಸಿರುತ್ತವೆ.
ಪೀಣ್ಯ ಕೈಗಾರಿಕಾ ಪ್ರದೇಶ ಇಡೀ ರಾಷ್ಟ್ರದಲ್ಲೇ ಹೆಸರು ಮಾಡಿರುವ ಒಂದು ಔದ್ಯಮಿಕ ವಲಯ. ರಾಜ್ಯದ ವಿವಿಧ ಮೂಲೆಗಳಿಂದ ಮಾತ್ರವಲ್ಲದೆ, ರಾಷ್ಟ್ರದ ವಿವಿಧ ಭಾಗಗಳ ಉದ್ಯೋಗಸ್ಥರು, ಕೂಲಿ ಕಾರ್ಮಿಕರು ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಲಕ್ಷ ಲಕ್ಷಗಳ ಸಂಖ್ಯೆಯಲ್ಲಿ ಉದ್ಯೋಗ ಸೃಷ್ಟಿಯಾಗಿ ತಮ್ಮ ಬದುಕು ಕಟ್ಟಿಕೊಂಡ ಅಸಂಖ್ಯಾತ ಜನರಿದ್ದಾರೆ. ಇವರಲ್ಲಿ ಬಹುಪಾಲು ಜನ ಈಗ ಅಕ್ಷರಶಃ ಬೀದಿಗೆ ಬೀಳುವಂತಾಗಿದೆ. ಇವರೆಲ್ಲರ ಮುಖದಲ್ಲಿ ಈಗ ಮಂದಹಾಸ ಮಾಯವಾಗಿದ್ದು, `ಮುಂದೇನು’? ಎಂಬ ಚಿಂತೆ ಗಾಢವಾಗಿ ಕಾಡತೊಡಗಿವೆ.
ತುಮಕೂರು ಮೂಲದ ವ್ಯಕ್ತಿಯೊಬ್ಬರು ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೆಂಡತಿ ಮಕ್ಕಳೊಂದಿಗೆ ತುಮಕೂರಿನಲ್ಲಿಯೇ ಸಂಸಾರ ನಡೆಸುತ್ತಿದ್ದಾರೆ. ಇಷ್ಟು ವರ್ಷಗಳ ಕಾಲ ಬಿಡಿ ಭಾಗಗಳನ್ನು ತಯಾರಿಸುವ ಕಂಪನಿಗೆ ಹೋಗಿಬರುತ್ತಿದ್ದೆ. ಉತ್ಪಾದನೆ ಹೆಚ್ಚಿದ್ದು ಬಿಡಿ ಭಾಗಗಳನ್ನು ಕೇಳುವವರೇ ಇಲ್ಲ. ಹೀಗಾಗಿ ಉತ್ಪಾದನೆ ಸ್ಥಗಿತಗೊಳಿಸುತಿದ್ದೇವೆ ಎಂಬ ಸಂದೇಶವನ್ನು ಕಾರ್ಖಾನೆ ಮುಖ್ಯಸ್ಥರು ನೀಡಿದ್ದಾರೆ. ಈ ಹಿಂದೆ ಓಟಿ ಮಾಡಿ ಹೆಚ್ಚು ಹಣ ಸಂಪಾದನೆ ಮಾಡುತ್ತಿದ್ದೆವು.
ಇನ್ನು ಮುಂದೆ ಅದೂ ಇಲ್ಲ. ಹೋಗಲಿ ಇರುವ ಕಂಪನಿಯನ್ನು ಸ್ಥಗಿತಗೊಳಿಸದಿದ್ದರೆ ಸಾಕು ಎನ್ನುವ ಸ್ಥಿತಿಗೆ ಬಂದಿದ್ದೇವೆ ಎಂದು ಆತಂಕದಿಂದಲೇ ಹೇಳುವ ಆತನೊಳಗೆ ಭವಿಷ್ಯದ ಕತ್ತಲೆಯ ಕಾರ್ಮೋಡ ಮನೆ ಮಾಡಿದೆ. ಒಂದು ವೇಳೆ ಇಡೀ ಕಾರ್ಖಾನೆ ಸ್ಥಗಿತಗೊಂಡರೆ ಬದುಕಿನ ಆಸರೆ ಏನು? ಕುಟುಂಬದ ಸ್ಥಿತಿ ಏನು? ಎಂಬ ಭವಿಷ್ಯದ ಕೊರಗು ಆತನಲ್ಲಿ ಎದ್ದುಕಾಣುತ್ತಿತ್ತು.
ಇದು ಒಬ್ಬರದ್ದಲ್ಲ. ಅಲ್ಲಿ ಕೆಲಸ ನಿರ್ವಹಿಸುವ 12 ಲಕ್ಷ ಕಾರ್ಮಿಕರ ಪ್ರಶ್ನೆ. ಕೈಗಾರಿಕಾ ಪ್ರದೇಶದಲ್ಲಿ ಉದ್ಯೋಗದಲ್ಲಿರುವವರು ಕೆಲಸ ಕಳೆದುಕೊಂಡರೆ ಅವರು ಮತ್ತು ಅವರ ಕುಟುಂಬಕ್ಕಷ್ಟೇ ಬಾಧಿಸುವುದಿಲ್ಲ. ಈ ಪ್ರದೇಶದ ಸುತ್ತಮುತ್ತ ಇರುವ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಜೀವನ ಅವಲಂಬಿಸಿರುವ ಮತ್ತಷ್ಟು ಕುಟುಂಬಗಳು ಬೀದಿಗೆ ಬೀಳಲಿವೆ.
ಪೀಣ್ಯ ಕೈಗಾರಿಕಾ ಪ್ರದೇಶ ಅದೆಷ್ಟೋ ಲಕ್ಷಾಂತರ ಜನರಿಗೆ ಪರೋಕ್ಷ ಉದ್ಯೋಗ ಕಲ್ಪಿಸುವ ಕಾರ್ಖಾನೆಗಳ ಪಕ್ಕದಲ್ಲೇ ಇರುವ ಸಣ್ಣಪುಟ್ಟ ಅಂಗಡಿಗಳಿಂದ ಹಿಡಿದು, ರಸ್ತೆ ಬದಿಯಲ್ಲಿ ಇರುವ ಕಾಫಿ, ಟೀ ಅಂಗಡಿಗಳು, ಕ್ಯಾಂಟೀನ್‍ಗಳು ಹೀಗೆ ಹಲವು ಉದ್ಯೋಗಗಳನ್ನು ಕಂಡುಕೊಂಡಿದ್ದವರ ಮುಖದಲ್ಲಿ ಕಪ್ಪು ಛಾಯೆ ಆವರಿಸಿದೆ.
ಕೈಗಾರಿಕಾ ಪ್ರದೇಶದ ಒಳಹೊಕ್ಕು ನೋಡಿದರೆ ವಿವಿಧ ಬಗೆಯ ತಯಾರಿಕಾ ಘಟಕಗಳು ಕಂಡುಬರುತ್ತವೆ. ಟರ್ನಂಗ್, ಮಿಲ್ಲಿಂಗ್, ಕ್ರೋಂ ಪ್ಲಾಂಟಿಂಗ್, ಅನೋಡೈಸಿಂಗ್, ಹೀಟ್ ಟ್ರೀಟ್‍ಮೆಂಟ್, ಫ್ಯಾಬ್ರಿಕೇಟಿಂಗ್ ಹೀಗೆ ಹಲವು ಹತ್ತಾರು ವಿಧದ ಘಟಕಗಳು ಅಲ್ಲಿ ಗೋಚರಿಸುತ್ತವೆ. ಇವೆಲ್ಲವೂ ಆಟೋಮೊಬೈಲ್ ಕ್ಷೇತ್ರದ ಆನ್ಸಲರಿಗಳಾಗಿ ಪರಿಗಣಿತವಾಗಿವೆ. ಬೆಂಗಳೂರಿನ ಪೀಣ್ಯ ಕೈಗಾರಿಕಾ ಪ್ರದೇಶವೂ ಸಏರಿಕೊಂಡಂತೆ ದೇಶದ ಬಹುದೊಡ್ಡ ನಗರಗಳಲ್ಲಿ ಇಂತಹ ಕೈಗಾರಿಕೆಗಳು ನೂರಾರಿವೆ.
ಪೂನಾ, ಚೆನ್ನೈ, ಮುಂಬೈ, ಗುರಗಾಂ, ನೋಯಿಡಾ, ಇತ್ತೀಚೆಗೆ ಕಲ್ಯಾಣದುರ್ಗದ ಪೆನಗೊಂಡದಲ್ಲಿ ಹೊಸದಾಗಿ ಸ್ಥಾಪನೆಯಾಗಿರುವ ಕೊರಿಯನ್ ಕಂಪನಿಯ ಕಿಯಾ ಮೋಟಾರ್ಸ್ ವಾಹನ ತಯಾರಿಕಾ ಕಂಪನಿ ಹೀಗೆ ಹಲವು ಹತ್ತು ಹೆಸರುಗಳು ಈ ಕ್ಷೇತ್ರದಲ್ಲಿ ಕೇಳಿಬರುತ್ತವೆ. ಈ ಎಲ್ಲ ಕೈಗಾರಿಕಾ ಕ್ಷೇತ್ರದ ಘಟಕಗಳ ಮೇಲೂ ಆರ್ಥಿಕ ಹಿಂಜರಿಕೆಯ ಹೊಡೆತ ಬೀಳುತ್ತಿದ್ದು, ಭಾರತದ ಒಟ್ಟಾರೆ ಆರ್ಥಿಕ ವಲಯ ಅತ್ಯಂತ ಗಂಡಾಂತರ ಸ್ಥಿತಿಗೆ ತಲುಪಿದೆ.
ಕೆಲವು ಘಟಕಗಳಿಗೆ ಈಗ ಸಮಸ್ಯೆ ಎದುರಾಗಿದ್ದರೆ ಮತ್ತೆ ಕೆಲವು ಕೈಗಾರಿಕಾ ಘಟಕಗಳಿಗೆ ಮುಂದಿನ ದಿನಗಳಲ್ಲಿ ಅತಂಕ ಎದುರಾಗಬಹುದು. ಏಕೆಂದರೆ ಇದೆಲ್ಲವು ಒಂದಕ್ಕೊಂದು ಪೂರಕವಗಿರುವ ವಲಯ. ಒಂದು ಕಡೆ ಹಾನಿಯಾದರೆ ಅದರ ಪರಿಣಾಮ ಮತ್ತೊಂದು ವಲಯಕ್ಕೂ ತಟ್ಟುತ್ತದೆ. ಈಗ ಸುಸ್ಥಿತಿಯಲ್ಲಿರುವ ಕೈಗಾರಿಕೆಗಳು ಮುಂದೆಯೂ ಇದೇ ಸ್ಥಿತಿಯಲ್ಲಿ ಇರುವ ಯಾವ ಖಾತರಿಯೂ ಇಲ್ಲ.
ಕಾಲಿಗೆ ಮುಳ್ಳು ಚುಚ್ಚಿದರೆ ದೇಹಕ್ಕೆ ನೋವಾಗುವುದಿಲ್ಲವೆ? ಬೆರಳು ಕತ್ತರಿಸಿದರೆ ಇಡೀ ದೇಹ ನಲುಗುವುದಿಲ್ಲವೆ?ಕೈಗಾರಿಕೆಗಳು ಮತ್ತು ಅದರ ಘಟಕಗಳಿಗೆ ಹೇಗೆ ಬಿಸಿ ತಟ್ಟುತ್ತದೆಯೋ ಅದೇ ರೀತಿ ಉದ್ಯೋಗ ವಲಯಕ್ಕೂ ಬಿಸಿ ತಟ್ಟುತ್ತದೆ. ಒಬ್ಬ ಕಾರ್ಮಿಕ ಉದ್ಯೋಗ ಕಳೆದುಕೊಂಡರೆ ಆತನಷ್ಟೇ ನರಳುವುದಿಲ್ಲ. ಇಡೀ ಕುಟುಂಬ ಸಂಕಷ್ಟಕ್ಕೆ ಸಿಲುಕುತ್ತದೆ. ಒಂದು ಕುಟುಂಬದಲ್ಲಿ ಗಂಡ, ಹೆಂಡತಿ, ಮಕ್ಕಳು ಸೇರಿದಂತೆ ಕನಿಷ್ಠ ನಾಲ್ಕೈದು ಮಂದಿ ಇರಬಹುದು.
ಇವರೆಲ್ಲ ಆ ಕುಟುಂಬದ ಉದ್ಯೋಗಿಯನ್ನೇ ಅವಲಂಬಿಸಿರುತ್ತದೆ. ಪ್ರತಿ ಮಾಹೆಯ ಸಂಬಳದ ಮೇಲೆ ಜೀವನ ನಿರ್ವಹಣೆ ಅಡಗಿರುತ್ತದೆ. ಮಾಸಿಕ ಮನೆ ಬಾಡಿಗೆಯಿಂದ ಹಿಡಿದು ಮಕ್ಕಳ ಶೈಕ್ಷಣಿಕ ಖರ್ಚು, ಮನೆಯ ಖರ್ಚು ಇತ್ಯಾದಿಗಳೆಲ್ಲವೂ ಇದರಲ್ಲೇ ನಿರ್ವಹಣೆಯಾಗಬೇಕು. ನಿಗದಿತ ಮಾಸಿಕ ಆದಾಯ ಇರುವ ಈ ವಲಯ ಉದ್ಯೋಗ ರಹಿತರಾದರೆ ಏನೆಲ್ಲಾ ಏರಿಳಿತಗಳಾಗುತ್ತವೆ ಎಂಬುದನ್ನು ಊಹಿಸಬಹುದು. ಅವರ ದೈನಂದಿನ ಬದುಕೇ ಛಿದ್ರವಾಗುತ್ತದೆ. ಕೌಟುಂಬಿಕ ನೆಮ್ಮದಿ ಹಾಳಾಗುತ್ತದೆ. ಮನೆಯಲ್ಲಿ ಸಂತೋಷದ ವಾತಾವರಣ ಕಣ್ಮರೆಯಾಗುತ್ತದೆ. ಇದು ಮತ್ತಷ್ಟು ಅವಘಡಗಳಿಗೆ ಕಾರಣವಾಗಬಲ್ಲದು. ಒಟ್ಟಾರೆ ಮುಂದಿನ ದಿನಗಳು ಅತ್ಯಂತ ಸೂಕ್ಷ್ಮ ಹಾಗೂ ಸಾಮಾಜಿಕ ವಿಘಟನೆಯ ದಿನಗಳು ಎಂಬುದನ್ನು ಈಗಿನ ಆರ್ಥಿಕ ಹಿನ್ನಡೆ ಸಾರಿ ಸಾರಿ ಹೇಳುವಂತಿದೆ.
ಪೀಣ್ಯ ಕೈಗಾರಿಕಾ ಪ್ರದೇಶದ ಒಂದು ಉದಾಹರಣೆಯನ್ನೇ ತೆಗೆದುಕೊಂಡರೆ ಅಲ್ಲಿ ಮಾರ್ಚ್ ತಿಂಗಳಿನಲ್ಲೇ ಬಿಡಿ ಭಾಗಗಳ ಮಾರಾಟ ಕುಸಿತ ಕಂಡಿತ್ತು. ತಿಂಗಳುಗಳು ಉರುಳಿದಂತೆ ಬೇಡಿಕೆ ಮತ್ತಷ್ಟು ಕುಸಿಯುತ್ತಾ ಸಾಗಿತು. ಜೂನ್ ಮತ್ತು ಜುಲೈ ತಿಂಗಳಿನಲ್ಲಿ ಮಾರಾಟದ ಪ್ರಮಾಣ ಪಾತಾಳಕ್ಕೆ ಕುಸಿಯಿತು. ಕಳೆದ 5 ತಿಂಗಳಿನಿಂದಲೂ ಉದ್ಯೋಗ ವಲಯ ತತ್ತರಿಸುತ್ತಲೇ ಬಂದಿದೆ. ಆಗಲೇ ಎಚ್ಚೆತ್ತುಕೊಂಡಿದ್ದರೆ ಈ ಪರಿಸ್ಥಿತಿ ಬರಲು ಸಾಧ್ಯವಾಗುತ್ತಿರಲಿಲ್ಲ.
ಈಗ ಕಾಲ ಮಿಂಚಿ ಹೋಗಿದೆ. ಮುಂದೇನು ಎಂಬ ಆತಂಕ ಎಲ್ಲರಲ್ಲೂ ಕಾಡುತ್ತಿದೆ. ಉದ್ಯೋಗಿಗಳಿಗೆ ಬದುಕಿನ ಪ್ರಶ್ನೆ ಎದುರಾಗಿದ್ದರೆ ಕೈಗಾರಿಕೆಗಳ ಮಾಲೀಕರಿಗೆ ತಮ್ಮ ಉದ್ಯಮ ಉಳಿಸಿಕೊಳ್ಳುವ ಚಿಂತೆಯ ಜೊತೆಗೆ ತಮ್ಮನ್ನೇ ನಂಬಿ ಬದುಕುತ್ತಿದ್ದ ಕಾರ್ಮಿಕರು ತಮ್ಮಿಂದ ದೂರವಾಗುತ್ತಿರುವ ಮತ್ತೊಂದು ಚಿಂತೆ. ಕಷ್ಟವೋ… ಸುಖವೋ… ಅಂತೂ ಉತ್ಪಾದನಾ ಚಟುವಟಿಕೆಗಳಲ್ಲಿ ಎಲ್ಲರೂ ಸಹಭಾಗಿಗಳಾಗಿ ಕೆಲಸ ನಿರ್ವಹಿಸಿಕೊಂಡು ಬಂದಿದ್ದರು. ಕೆಲವೊಮ್ಮೆ ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತಿದ್ದರು. ಉತ್ತಮ ವೇತನವನ್ನೂ ನೀಡುತ್ತಾ ಬಂದಿದ್ದರು. ಅದಕ್ಕೆ ಪೂರಕವಾಗಿ ಉದ್ಯೋಗಿಗಳು ಸ್ಪಂದಿಸುತ್ತಾ ಬಂದಿದ್ದರು. ಇದೀಗ ಇಂತಹ ಸೌಹಾರ್ದ ವಾತಾವರಣಕ್ಕೆ ಬರೆ ಎಳೆಯುವ ಕಾಲ ಬಂದಿದೆ. ಕೆಲವೊಮ್ಮೆ ಆರ್ಥಿಕ ಲಾಭ-ನಷ್ಟಗಳ ನಡುವೆಯೂ ಯಶಸ್ವಿಯಾಗಿ ಉದ್ಯಮ ನಡೆಸಿಕೊಂಡು ಬಂದವರು ಹಿಂದಿನ ದಿನಗಳನ್ನು ನೆನೆದು ಕಣ್ಣೀರು ಹಾಕುತ್ತಿದ್ದಾರೆ. ಇಲ್ಲಿ ಆರ್ಥಿಕ ಅಭದ್ರತೆಯ ಜೊತೆಗೆ ಸಾಮಾಜಿಕ ಬಾಂಧವ್ಯದ ನಂಟು ಬಟಾಬಯಲಾಗುತ್ತಿದೆ. ಸಂಬಂಧಗಳು ದೂರಾಗುತ್ತಿವೆ.
ಪರೋಕ್ಷ ಎಚ್ಚರಿಕೆ
ಇಂದು ಕೆಲವು ಉದ್ಯಮಗಳು ನಷ್ಟದ ಹಾದಿಯಲ್ಲಿರಬಹುದು. ಇನ್ನು ಕೆಲವು ಆರ್ಥಿಕ ಹಿಂಜರಿತದ ಸುಳಿಗೆ ಸಿಲುಕಿ ಮುಚ್ಚಿ ಹೋಗಿರಬಹುದು. ಅಥವಾ ಮುಂದೆ ಮುಚ್ಚಿಹೋಗಬಹುದಾದ ಭೀತಿಯಲ್ಲಿರಬಹುದು. ಈ ವಿದ್ಯಮಾನಗಳನ್ನು ಗಮನಿಸುತ್ತಾ ಕುಳಿತಿರುವ ಸುಸ್ಥಿತಿಯಲ್ಲಿರುವ ಉದ್ಯಮಗಳು ಅತ್ಯಂತ ಸೇಫ್ ಎಂದುಕೊಳ್ಳುವ ಹಾಗಿಲ್ಲ. ಕಾರ್ಖಾನೆಗಳು, ಉದ್ದಿಮೆಗಳು ಮುಚ್ಚಿದಂತೆಲ್ಲಾ ಸರ್ಕಾರಕ್ಕೂ ಅದರ ಬಿಸಿ ತಟ್ಟುತ್ತದೆ. ಸರ್ಕಾರಕ್ಕೆ ಬರಬೇಕಿದ್ದ ಆದಾಯಗಳು ಕಡಿಮೆಯಾಗುತ್ತವೆ.
ಎಷ್ಟು ಸಂಸ್ಥೆಗಳು ಮುಚ್ಚಿ ಹೋಗುತ್ತವೋ ಅಷ್ಟೂ ಸಂಸ್ಥೆಗಳಿಂದ ಸರ್ಕಾರಕ್ಕೆ ಬರಬೇಕಿದ್ದ ತೆರಿಗೆ ಆದಾಯವನ್ನು ಸುಸ್ಥಿತಿಯಲ್ಲಿರುವ ಕಂಪನಿಗಳಿಂದ ಪಡೆಯುವ ಹುನ್ನಾರ ಆರಂಭವಾಗುತ್ತದೆ. ಹೀಗಾಗಿ ಹೆಚ್ಚಿನ ತೆರಿಗೆ ಈ ಕಂಪನಿಗಳ ಮೇಲೆಯೇ ಬೀಳುವ ಅಪಾಯವೂ ಇದೆ. ಆದಾಯ ತೆರಿಗೆ, ಜಿ.ಎಸ್.ಟಿ., ಸೇವಾ ತೆರಿಗೆ (ರಾಜಧನ) ಪರವಾನಿಗೆ ಶುಲ್ಕ ಇತ್ಯಾದಿ ಹಲವು ಹತ್ತು ವಿಧದ ಆದಾಯ ತೆರಿಗೆ ರೂಪದಲ್ಲಿ ಈ ವಲಯದಿಂದ ಸರ್ಕಾರಕ್ಕೆ ಸಂಗ್ರಹವಾಗುತ್ತದೆ. ನಷ್ಟದ ಹಾದಿಯನ್ನು ಸರಿದೂಗಿಸಲು ಆರೋಗ್ಯ ಸ್ಥಿತಿಯಲ್ಲಿರುವ ಉದ್ಯಮಗಳ ಮೇಲೆ ಹೊರೆ ಹಾಕುವ ಅನಿವಾರ್ಯತೆ ಸೃಷ್ಟಿಯಾಗಲೂಬಹುದು. ಹೀಗಾಗಿ ನಾನು ಅತ್ಯಂತ ಸೇಫ್ ಜೋನ್‍ನಲ್ಲಿದ್ದೇನೆ ಎಂದು ಯಾರೂ ಸಹ ಅಂದುಕೊಳ್ಳುವ ಸ್ಥಿತಿ ಇಲ್ಲ.
ಆಗಸ್ಟ್ 25 ರಂದು ಬೆಂಗಳೂರಿನಲ್ಲಿ ಮಲೆನಾಡಿನ ಸಂಘ ಸಂಸ್ಥೆಗಳ ಒಕ್ಕೂಟವು ವಿ.ಜಿ.ಸಿದ್ಧಾರ್ಥ ಹೆಗಡೆ ಅವರಿಗೆ ನುಡಿನಮನ ಕಾರ್ಯಕ್ರಮ ಆಯೋಜಿಸಿತ್ತು. ಅಲ್ಲಿ ಭಾಗವಹಿಸಿದ್ದ ಬಹುಪಾಲು ಉದ್ಯಮಿಗಳು ತೆರಿಗೆ ಕಾನೂನುಗಳ ಬಗ್ಗೆಯೇ ಮಾತನಾಡಿದ್ದಾರೆ. ದೇಶವನ್ನು ಮುನ್ನಡೆಸುತ್ತಿರುವವರು ಮತ್ತು ಕೆಲವು ಕಾನೂನುಗಳು ಒಳ್ಳೆಯವರನ್ನು ಹಿಂಸಿಸುತ್ತಿವೆ. ಸಾಲ ತೀರಿಸಲಾಗದೆ, ದೇಶದಿಂದ ಪರಾರಿಯಾಗುವವರಿಗೆ, ಮೋಸಗಾರರ ಪರವಾಗಿ ಕಾನೂನುಗಳು ಕೆಲಸ ಮಾಡುತ್ತವೆ ಎಂಬ ಆಕ್ರೋಶ ಹೊರ ಹಾಕಿದ್ದಾರೆ. ಈ ಬಗ್ಗೆ ಒಂದಷ್ಟು ಚಿಂತನ ಮಂಥನಗಳು ನಡೆಯಬೇಕು.
ತೆರಿಗೆ, ಜಿ.ಎಸ್.ಟಿ., ಸೇವಾ ತೆರಿಗೆ ಇತ್ಯಾದಿಗಳ ಬಗ್ಗೆ ಅರಿವಿರುವ ಹಾಗೂ ಈ ಕ್ಷೇತ್ರದಲ್ಲಿಯೇ ಕೆಲಸ ಮಾಡುವ ಕೆಲವು ಸಂಘ ಸಂಸ್ಥೆಗಳಿವೆ. ಸರ್ಕಾರಿ ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸುವ ಸಂಸ್ಥೆಗಳಿವೆ. ಇವರೆಲ್ಲ ಏನು ಮಾಡುತ್ತಿದ್ದಾರೆ? ಎಫ್.ಕೆ.ಸಿ.ಸಿ.ಐ., ಖಾಸಿಯಾ, ಸಣ್ಣ ಕೈಗಾರಿಕೆಗಳ ಸಂಘ ಹೀಗೆ ಇನ್ನು ಅನೇಕ ಸಂಸ್ಥೆಗಳು ಇದ್ದೂ ಆರ್ಥಿಕ ವಲಯದಲ್ಲಿನ ಏರುಪೇರುಗಳ ಬಗ್ಗೆ ಬಾಯಿ ಮುಚ್ಚಿಕೊಂಡು ಕುಳಿತಿರುವುದಾದರೂ ಏತಕ್ಕೆ? ಈ ಸಂಘಟನೆಗಳಷ್ಟೇ ಅಲ್ಲ, ಆರ್ಥಿಕ ವ್ಯವಹಾರಗಳ ಬಗ್ಗೆ ತಿಳಿದಿರುವವರು ಮಾತನಾಡುತ್ತಿಲ್ಲ.
ಹೀಗೆ ಮೌನ ವಹಿಸಲು ಕಾರಣವಾದರೂ ಏನು? ಎಲ್ಲ ಮುಗಿದು ಹೋದ ಮೇಲೆ ಸಲಹೆ ಕೊಟ್ಟು ಪ್ರಯೋಜನವೇನು? ಇಂತಹ ಒಂದು ಸ್ಥಿತಿ ಭಾರತದಲ್ಲಿ ನಿರ್ಮಾಣವಾಗುತ್ತಿದೆ. ಎಚ್ಚೆತ್ತುಕೊಳ್ಳಿ ಎಂದು ಮುಂದೆ ಬಂದು ಹೇಳಲಾಗದ ಸ್ಥಿತಿಯಲ್ಲಿ ಕೆಲವರು ಇರುವುದಾದರೂ ಏತಕ್ಕೆ? ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಂತಹ ಕೆಲವೇ ವ್ಯಕ್ತಿಗಳು ಈಗಿನ ಪರಿಸ್ಥಿತಿಯ ಬಗ್ಗೆ ಊಹಿಸಿದ್ದರು. ನೋಟು ಅಮಾನ್ಯೀಕರಣದ ನಂತರ ಎದುರಾಗಬಹುದಾದ ಅಪಾಯಗಳನ್ನು ಸರಿಪಡಿಸದಿದ್ದರೆ ಮುಂದೆ ಆರ್ಥಿಕ ಸ್ಥಿತಿ ಶೇ.2 ರಷ್ಟು ಕಡಿಮೆಯಾಗಬಹುದು ಎಂಬ ಎಚ್ಚರಿಕೆ ನೀಡಿದ್ದರು.
ಸರ್ಕಾರ ಇಂತಹ ಕೆಲವರ ಹೇಳಿಕೆಗಳನ್ನು ಗಂಭೀರವಾಗಿ ಪರಿಣಗಿಸಬೇಕಿತ್ತು. ದೇಶದ ಆರ್ಥಿಕ ಬೆಳವಣಿಗೆಗೆ ಪೂರಕವಾಗಿರುವ ಉದ್ಯಮ ವಲಯಗಳಲ್ಲಿ ಬಹು ಮುಖ್ಯವಾದವುಗಳೆಂದರೆ ರಿಯಲ್ ಎಸ್ಟೇಟ್, ಆಟೋಮೊಬೈಲ್, ಟೆಕ್ಸ್‍ಟೈಲ್, ಆನ್ಸಲರಿ, ಆಹಾರ ಉತ್ಪನ್ನ, ಟೆಲಿಕಾಂ ಇಂಡಸ್ಟ್ರಿ ಮುಂತಾದವು. ಆದರೆ ಇವೆಲ್ಲವೂ ಈಗ ಸಂಕಷ್ಟದ ಸ್ಥಿತಿಯಲ್ಲಿವೆ. ಪರಿಸ್ಥಿತಿ ಹೀಗಿರುವಾಗ ಜಿಡಿಪಿ ಬೆಳವಣಿಗೆ ಸಾಧ್ಯ ಹೇಗೆ? ಆರ್ಥಿಕ ವಲಯ ಚೇತರಿಸಿಕೊಳ್ಳುವುದಾದರೂ ಹೇಗೆ? ಮೇಲೆ ಹೇಳಲಾದ ಪ್ರಮುಖ ಉದ್ಯಮ ವಲಯಗಳಲ್ಲೇ ಬಹುಸಂಖ್ಯಾತ ಉದ್ಯೋಗಿಗಳು ಆಶ್ರಯ ಪಡೆದಿದ್ದಾರೆ.
ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸುತ್ತಾ ಬಂದ ಈ ಉದ್ಯಮ ವಲಯಗಳೇ ಈಗ ಸಂಕಟದಲ್ಲಿರುವುದರಿಂದ ಮುಂದಿನ ದಿನಗಳಲ್ಲಿ ನಿರುದ್ಯೋಗದ ಪ್ರಮಾಣ ಭೀಕರವಾಗಲಿದೆ. ಇದನ್ನು ಊಹಿಸಲೂ ಆಗದು. ವಾಹನೋದ್ಯಮ ಕ್ಷೇತ್ರವನ್ನೇ ತೆಗೆದುಕೊಂಡರೆ ದೇಶದ ಒಟ್ಟು ದೇಶಿಯ ಉತ್ಪನ್ನದ (ಜಿಡಿಪಿ) 7.5 ರಷ್ಟು ಉತ್ಪನ್ನ ನೀಡುತ್ತಿದೆ. ಸರಿಸುಮಾರು 4 ಕೋಟಿ ಜನರಿಗೆ ಉದ್ಯೋಗ ನೀಡುತ್ತಿರಬಹುದೆಂದು ಅಂದಾಜಿದೆ. ಅದರ ಪಾಲು ಉತ್ಪಾದನಾ ಜಿಡಿಪಿಯ 49ರಷ್ಟಿದೆ. ದೇಶದ ಅತಿದೊಡ್ಡ ಕಾರು ಉತ್ಪಾದಕ ಮಾರುತಿ ಸಹಿತ 17 ಪ್ರಮುಖ ಕಂಪನಿಗಳಲ್ಲಿ ಹತ್ತರ ಮಾರಾಟ ಇಳಿಮುಖವಾಗಿದ್ದು, ಅವುಗಳಲ್ಲಿ ಕಾರ್ಮಿಕರ ಕೆಲಸ ಕಡಿತ, ವಜಾ ಇತ್ಯಾದಿ ಜಾರಿಗೆ ತರಲಾಗುತ್ತಿದೆ. ಮುಂದೆ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ನಷ್ಟವಾಗುವ ಸೂಚನೆಗಳಿವೆ. 55 ಸಾವಿರ ಕೋಟಿ ರೂ.ಮೌಲ್ಯದ ಕಾರುಗಳು ಮಾರಾಟವಾಗದೆ ಉಳಿದುಕೊಂಡಿವೆ ಎಂದರೆ ಬಿಕ್ಕಟ್ಟಿನ ತೀವ್ರತೆ ಎಷ್ಟಿರಬಹುದು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ