ಆರ್ಥಿಕ ಸಂಕಷ್ಟ : ಉದ್ಯಮ ವಲಯ ತತ್ತರ(ಭಾಗ-3)

ನಗದು ಲಭ್ಯತೆ ಕುಂಟಿತದಿಂದ ವ್ಯಾಪಾರೋಧ್ಯಮ ಏರುಪೇರು
ವಿಶೇಷ ವರದಿ:ಸಾ.ಚಿ.ರಾಜಕುಮಾರ
     ತೆರಿಗೆಯಲ್ಲಿ ವಂಚನೆ, ವಿಳಂಬ ಅಥವಾ ತೆರಿಗೆ ಪಾವತಿಯಿಂದ ತಪ್ಪಿಸಿಕೊಳ್ಳಲು ಅವಕಾಶವಿದ್ದ ಸಮಯದಲ್ಲಿ ಉದ್ಯಮ ಸಂಸ್ಥೆಗಳಲ್ಲಿ ಸಾಕಷ್ಟು ಹಣದ ಹರಿವು ಇರುತ್ತಿತ್ತು. ಸಾಮಾಜಿಕ, ಧಾರ್ಮಿಕ ಕಾರ್ಯಗಳಿಗಾಗಿ ನೆರವು ನೀಡಲೆಂದೇ ಒಂದಷ್ಟು ಹಣವನ್ನು ಇರಿಸಿಕೊಳ್ಳುತ್ತಿದ್ದರು. ಈಗ ಹಣ ತೊಡಗಿಸುವ ವಿಧಾನಗಳೆಲ್ಲ ಪಾರದರ್ಶಕವೇ ಆಗಿರುವುದರಿಂದ, ಎಲ್ಲವೂ ಆನ್‍ಲೈನ್‍ನಲ್ಲಿಯೇ ವಹಿವಾಟು ನಡೆಯುವುದರಿಂದ ಹಣ ತೊಡಗಿಸಿಕೊಳ್ಳುವ ವಿಧಾನಗಳಲ್ಲಿ ಭಾರಿ ಏರಿಳಿತ ಕಂಡು ಬಂದಿದೆ.
 
     ಇದರ ಪರಿಣಾಮ ಸಂಸ್ಥೆಗಳ ಮೇಲೆ ಆಗುತ್ತಿದೆ. ನಗದು ಲಭ್ಯತೆ ಕಡಿಮೆಯಾಗುತ್ತಿರುವ ಈ ದಿನಗಳಲ್ಲಿ ಹಣದ ವಹಿವಾಟು ಗಣನೀಯ ಸಂಖೆಯಲ್ಲಿ ಕುಸಿದಿದೆ. ಸಂಸ್ಥೆ ಲಾಭದಲ್ಲಿದೆಯೋ, ನಷ್ಟದಲ್ಲಿದೆಯೋ ಎಂಬ ವಿವರಣೆ ಯಾವುದೂ ಲೆಕ್ಕಕ್ಕೆ ಬರುವುದೇ ಇಲ್ಲ. ತೆರಿಗೆ ಕಟ್ಟಲೆಬೇಕು.  
   
       2016ರ ನವೆಂಬರ್‍ನಲ್ಲಿ ಜಾರಿಗೆ ಬಂದ ನೋಟು ಅಮಾನ್ಯೀಕÀರಣ, 2017ರ ಜುಲೈ ತಿಂಗಳಿನಲ್ಲಿ ಜಾರಿಗೆ ಬಂದ ಸರಕು ಮತ್ತು ಸೇವಾ ತೆರಿಗೆ, ಬಿಗಿ ಹಣಕಾಸು ನೀತಿ ಇವೆಲ್ಲವೂ ಒಂದಕ್ಕೊಂದು ಪೂರಕ ಎನ್ನುವಂತೆ ಇಡೀ ಆರ್ಥಿಕ ವ್ಯವಸ್ಥೆಯನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾದವು. ಡಾಲರ್‍ನ ಎದುರು ಕುಸಿಯುತ್ತಲೇ ಬಂದ ರೂಪಾಯಿ ಮೌಲ್ಯವನ್ನು ಕಾಪಾಡಿಕೊಳ್ಳಲು ಹಾಗೂ ಹಣದುಬ್ಬರವನ್ನು ನಿಯಂತ್ರಣದಲ್ಲಿಡಲು ಅಗತ್ಯ ಹಣಕಾಸು ನೀತಿಯನ್ನು ಸರ್ಕಾರ ಅನುಸರಿಸಿತೆ  ಹೊರತು ಭವಿಷ್ಯದ ಆರ್ಥಿಕ ಮುಗ್ಗಟ್ಟು ನಿಗ್ರಹಿಸುವತ್ತ ಗಮನ ಹರಿಸಲೆ ಇಲ್ಲ. ಬಡ್ಡಿ ದರಗಳನ್ನು ಯಥಾಸ್ಥಿತಿಯಲ್ಲಿ ಕಾಪಾಡಿಕೊಳ್ಳಲಾಯಿತು.
       ಇದರಿಂದ ಹಣಕಾಸಿನ ಕೊರತೆ ಅನುಭವಿಸುತ್ತಿದ್ದ ಮಾರುಕಟ್ಟೆಗೆ ಲಾಭವಾಗಲಿಲ್ಲ. ಇದರ ಜೊತೆಯಲ್ಲೆ ಸರ್ಕಾರ ಬಿಗಿ ತೆರಿಗೆ ನೀತಿಯನ್ನು ಜಾರಿಗೊಳಿಸಿತು. ಸಣ್ಣ ಪುಟ್ಟ ಉದ್ಯಮಗಳು ಈ  ನೀತಿಯನ್ನು ಅನುಸರಿಸಲಾಗದೆ ತತ್ತರಿಸಿದವು. ಈಗಲೂ ಅದೇ ಸ್ಥಿತಿಯಲ್ಲಿದೆ. ಉದ್ಯಮಗಳ ಸಾಲ, ನಷ್ಟ ಇತ್ಯಾದಿಗಳನ್ನು ಗಮನಿಸದೆ ತೆರಿಗೆ ಸಂಗ್ರಹವನ್ನು ಪ್ರಥಮ ಆದ್ಯತೆಯಾಗಿ ಪರಿಗಣಿಸಿದ ಪರಿಣಾಮ ಉದ್ಯಮಗಳ ಹಿನ್ನಡೆಗೆ ಕಾರಣವಾಯಿತು ಎಂದು ಆರ್ಥಿಕ ವಲಯ ತಜ್ಞರು ವಿಶ್ಲೇಷಿಸುತ್ತಾರೆ.
       ಇಂದು ಉದ್ಯಮ ನಡೆಸುತ್ತಿರುವವರು ಲಾಭ ನಷ್ಟದ ಲೆಕ್ಕಚಾರಗಳಲ್ಲಿ ಮುಳುಗಿ ಹೋಗಿದ್ದಾರೆ. ಉದ್ಯಮ ವಲಯ ನಷ್ಟ ಎಂಬ ಮಾಹಿತಿ ತಿಳಿಯುತ್ತಿದ್ದಂತೆಯೇ ಆತಂಕಕ್ಕೆ ಒಳಗಾಗುತ್ತಿದ್ದಾರೆ. ನಗದು ವಹಿವಾಟು ಕಡಿಮೆಗೊಳಿಸಿ ಸಂಪೂರ್ಣ ಡಿಜಿಟಲೀಕರಣ ಮಾಡಬೇಕೆಂಬ ಸರ್ಕಾರದ ಉದ್ದೇಶವೇನೊ ಒಳ್ಳೆಯದಿರಬಹುದು. ಆದರೆ ಇದರಿಂದ ಆಗುತ್ತಿರುವ ಹೊಡೆತ ಮಾತ್ರ ಯಾರನ್ನೂ ಬಿಟ್ಟಿಲ್ಲ. ಒಂದು ಕಡೆ ಗ್ರಾಹಕರಿಗೆ ಬರೆ ಬೀಳುತ್ತಿದೆ. ಮತ್ತೊಂದು ಕಡೆ ಬ್ಯಾಂಕುಗಳೂ ಸಹ ಸಂಕಷ್ಟಕ್ಕೆ ಸಿಲುಕಿವೆ.
       ಈ ಸಂಕಟವನ್ನು ಗ್ರಾಹಕರ ಮೇಲೆ ಬ್ಯಾಂಕುಗಳು ಹೇರುತ್ತಿವೆ. ಒಂದು ಕಡೆ ಆರ್ಥಿಕ ವ್ಯವಹಾರ ಕುಸಿತ. ಮತ್ತೊಂದು ಕಡೆ ಬ್ಯಾಂಕುಗಳ ವಿಪರೀತ ನಿಯಮಗಳು. ಮಗದೊಂದು ಕಡೆ ಸರ್ಕಾರದ ಹೊಸ ಹೊಸ ಕಾನೂನುಗಳು. ಇವೆಲ್ಲವುಗಳಿಂದ ಶ್ರೀಮಂತರಾದಿಯಾಗಿ ಬಡಜನರೂ ಅಡಕತ್ತರಿಗೆ ಸಿಲುಕಿದ್ದಾರೆ.
       ನಮ್ಮ ದೇಶದಲ್ಲಿ ತೆರಿಗೆ ಕಾನೂನುಗಳು ಹೇಗೆ ಬಿಗಿಯಾಗುತ್ತಿವೆಯೋ ಅದೇ ರೀತಿಯಲ್ಲಿ ತೆರಿಗೆ ವಂಚಕರು ಹೆಚ್ಚುತ್ತಿದ್ದಾರೆ. ವಿಪರ್ಯಾಸವೆಂದರೆ ದೊಡ್ಡ ದೊಡ್ಡ ತೆರಿಗೆ ಕಳ್ಳರು ಕಾನೂನಿನ ಕುಣಿಕೆಗಳಲ್ಲಿ ಸಿಲುಕಿಕೊಳ್ಳುತ್ತಿಲ್ಲ. ತೆರಿಗೆಯಿಂದ ತಪ್ಪಿಸಿಕೊಳ್ಳುವುದನ್ನು ನಿಯಂತ್ರಿಸಲು ಕಾನೂನಿಗೆ ತಿದ್ದುಪಡಿ ತರಲಾಗಿದೆ. ಕ್ರಿಮಿನಲ್ ವ್ಯಾಖ್ಯೆಯನ್ನು ಬಳಸಲಾಗಿದೆ. ದಂಡದ ಜೊತೆಗೆ ಶಿಕ್ಷೆ ವಿಧಿಸುವ ಅವಕಾಶವನ್ನು ತೆರಿಗೆ ಕಾಯ್ದೆಗಳ ಅಡಿ ಸೇರಿಸಲಾಗಿದೆ. ಕಾಯ್ದೆಯ ಕಲಂ 271 ರ ಪ್ರಕಾರ ಆದಾಯ ತೆರಿಗೆ ಪಾವತಿಸದೆ ಆದಾಯವನ್ನು ತೋರಿಸದೆ ಗುಟ್ಟಾಗಿ ಇಡುವುದು, ಘೋಷಣೆ ಮಾಡಿಕೊಳ್ಳದೇ ಇರುವುದು, ನಿಖರ ಮಾಹಿತಿ ನೀಡದೆ ಇರುವುದು ಇವೆಲ್ಲವೂ ಶಿಕ್ಷಾರ್ಹ ಅಪರಾಧಗಳು. 
   
      ಇತರೆ ದೇಶಗಳನ್ನು ಹೋಲಿಸಿ ಕೆಲವರು ಈ ದೇಶದ ನಾಗರಿಕರ ಬಗ್ಗೆ ಮಾತನಾಡುತ್ತಾರೆ. ಅಲ್ಲಿ ಎಲ್ಲರೂ ತೆರಿಗೆ ಪಾವತಿಸುತ್ತಾರೆ. ಇಲ್ಲಿ ಏಕಿಲ್ಲ ಎಂದು ಪ್ರಶ್ನಿಸುತ್ತಾರೆ. ಇನ್ನೂ ಕೆಲವರು ಹೇಳುವ ಪ್ರಕಾರ ಶಾಸನ ರೂಪಿಸುವವರು ರಾಜಕಾರಣಿಗಳು. ಅವರೆ ಕಾನೂನುಗಳನ್ನು ಉಲ್ಲಂಘಿಸುತ್ತಾ ಬಂದಿದ್ದಾರೆ. ಚುನಾವಣೆಗಳ ಸಂದರ್ಭದಲ್ಲಿ ಎಷ್ಟು ಜನ ರಾಜಕಾರಣಿಗಳು ತಮ್ಮ ನಿಜವಾದ ಆಸ್ತಿ ಪಾಸ್ತಿ ಘೋಷಿಸಿಕೊಳ್ಳುತ್ತಾರೆ .  
       ಇದನ್ನು ಬಯಲಿಗೆಳೆಯಬೇಕಲ್ಲವೆ? ಒಂದು ವೇಳೆ ಬಚ್ಚಿಟ್ಟ ಆಸ್ತಿಯನ್ನು ಕೂಡಲೆ ಮುಟ್ಟುಗೋಲು ಹಾಕಿಕೊಳ್ಳುವಂತಹ ವ್ಯವಸ್ಥೆ ಇರಬೇಕಲ್ಲವೆ? ಒಬ್ಬರಿಗೆ ಒಂದು  ಮತ್ತೊಬ್ಬರಿಗೆ ಇನ್ನೊಂದು ಕಾನೂನು ಇಲ್ಲವಲ್ಲ. ಹಾಗಾದರೆ ಕಾನೂನು ಕ್ರಮ ಜರುಗಿಸುತ್ತಿರುವುದು ಯಾರ ಮೇಲೆ? ಇದೂವರೆಗೆ ನಡೆದಿರುವ ದಾಳಿಗಳನ್ನು ಗಮನಿಸಿದರೆ ಎಷ್ಟು ದಾಳಿಗಳಾಗಿವೆ?  ಯಾರ ಮೇಲೆ ದಾಳಿ ನಡೆದಿವೆ? ಅದರ ಹಿನ್ನೆಲೆ ಏನು? ಇವೆಲ್ಲವನ್ನು ಪರಾಮರ್ಶಿಸ ಬೇಕಲ್ಲವೆ ಎನ್ನುತ್ತಾರೆ ಕೆಲವರು.  
       ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ನಿಧಾನ ಗತಿಯ ವ್ಯವಸ್ಥೆ ಬದಲಾವಣೆಯಾಗಬೇಕು. ಕೆಲವು ಕ್ಷೇತ್ರಗಳಲ್ಲಿ ಕ್ರಾಂತಿಕಾರಿ ಬದಲಾವಣೆ ಸಾಧ್ಯವಾದರೂ ಆರ್ಥಿಕ ವಹಿವಾಟು ವಿಚಾರದಲ್ಲಿ ಇದು ಕಷ್ಟಸಾಧ್ಯ. ಸರ್ಕಾರ ತೆಗೆದುಕೊಳ್ಳುವ ದಿಢೀರ್ ನಿರ್ಧಾರಗಳು ಸಮಾಜದ ನಾನಾ ವರ್ಗದ ಜನರ ಮೇಲೆ ಭಿನ್ನ ಪರಿಣಾಮಗಳನ್ನು ಬೀರುತ್ತದೆ. ಇದರಿಂದ ಕೆಲವರು ಸಂಭ್ರಮಿಸಿದರೆ ಮತ್ತೊಂದು ವರ್ಗ ಇಕ್ಕಟ್ಟಿಗೆ ಸಿಲುಕುತ್ತದೆ. ಈ ದೇಶದ ಎಲ್ಲ ವರ್ಗವನ್ನು ಒಂದೇ ತಕ್ಕಡಿಯಲ್ಲಿಟ್ಟು  ತೂಗಲಾಗದು. ಇಂತಹ ಪರಿಸ್ಥಿತಿಯಲ್ಲಿ ಇಡೀ ಪರಿಸ್ಥಿತಿಯನ್ನು ಬದಲಾಯಿಸಿ ಬಿಡುತ್ತೇವೆ ಎಂಬ ಧಾವಂತ ಹಲವು ಅನಾಹುತಗಳಿಗೆ ಕಾರಣವಾಗಬಲ್ಲದು. 
       ಇತ್ತೀಚೆಗಷ್ಟೇ ಆತ್ಮಹತ್ಯೆಗೆ ಒಳಗಾದ ಕಾಫೀ ಡೇ ಸಿದ್ಧಾರ್ಥ, ಈ ದೇಶವನ್ನೇ ಬಿಟ್ಟು ಪರಾರಿಯಾದ ಕಿಂಗ್ ಫಿಷರ್ ಮಲ್ಯ, ನೀರವ್ ಮೋದಿ, ಸತ್ಯಂರಾಜು ಇಂತಹವರ ಸಾಲಿನಲ್ಲಿ ಹಲವು ಉದ್ಯಮಿಗಳು ಸಿಗುತ್ತಾರೆ. ಮೈಸೂರಿನಲ್ಲಿ ಕೋಟ್ಯಧಿಪತಿಯೊಬ್ಬ ಶೂಟ್ ಮಾಡಿಕೊಂಡು ತನ್ನ ಜೊತೆ ಇಡೀ ಕುಟುಂಬವನ್ನೇ ಸರ್ವನಾಶ ಮಾಡಿಕೊಂಡ. ಇವು ಕೆಲವು ಬಹಿರಂಗವಾಗಿರುವ ಪ್ರಕರಣಗಳು ಮಾತ್ರ. ಇನ್ನೂ ಅದೆಷ್ಟೋ ಉದ್ಯಮಿಗಳು ಸಂಕಷ್ಟದಲ್ಲಿದ್ದಾರೆ. ಅವರೆಲ್ಲ ಬಹಿರಂಗವಾಗಿ ಹೇಳಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇವೆಲ್ಲವನ್ನೂ ಗಮನಿಸುತ್ತಾ ಹೋದರೆ ಆರ್ಥಿಕ ವಹಿವಾಟು ನಡೆಸುತ್ತಿರುವವರ ಬಾಯಲ್ಲಿ ಬರುವ ತಕ್ಷಣದ ಮಾತುಗಳೆಂದರೆ ಸರ್ಕಾರದ “ಕಟ್ಟುನಿಟ್ಟಿನ ನಿರ್ಧಾರಗಳು’’ ಎಂದೇ ಹೇಳುತ್ತಾರೆ. ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಉದ್ಯಮಿಗಳನ್ನು ನೀತಿ ನಿಯಮಗಳು ಕಟ್ಟಿ ಹಾಕುತ್ತಿವೆ.
      ಸರ್ಕಾರ ಜಾರಿಗೆ ತರುತ್ತಿರುವ ತೆರಿಗೆ ನಿಯಮಗಳು ಸರಿಯಾಗಿಯೇ ಇವೆ. ಆದರೆ ಅನುಷ್ಠಾನದಲ್ಲಿ ಕೆಲವು ಗೊಂದಲಗಳಿವೆ. ನಮ್ಮ ಭಾರತ ದೇಶದಲ್ಲಿ ತೆರಿಗೆ ಕಟ್ಟುವವರಿಗಿಂತ ತೆರಿಗೆ ತಪ್ಪಿಸಿಕೊಳ್ಳುವವರೇ ಹೆಚ್ಚು. ಇಲ್ಲಿಂದ ಅಮೆರಿಕಾದಂತಹ ರಾಷ್ಟ್ರಗಳಿಗೆ ಹೋಗಿರುವವರು ನಿಯಮಾನುಸಾರ ತೆರಿಗೆ ಪಾವತಿ ವ್ಯವಸ್ಥೆಗೆ ಹೊಂದಿಕೊಳ್ಳುತ್ತಾರೆ. ಅದೇ ವ್ಯಕ್ತಿಗಳು ಇಲ್ಲಿನ ವ್ಯವಸ್ಥೆಗೆ ಹೊಂದಿಕೊಳ್ಳಲು ಹಿಂಜರಿಯುತ್ತಾರೆ. ಈ ಪ್ರವೃತ್ತಿ ಏಕೆ ಎಂದು ಲೆಕ್ಕ ಪರಿಶೋಧಕ ಎಸ್.ಪ್ರಕಾಶ್ ಪ್ರಶ್ನಿಸುತ್ತಾರೆ. ಸರಕು ಮತ್ತು ಸೇವಾ ತೆರಿಗೆ ವ್ಯಾಪ್ತಿಗೆ ಶೇ.15 ರಿಂದ 20 ರಷ್ಟು ಮಂದಿ ಬಂದಿರಬಹುದಷ್ಟೇ. ಇನ್ನೂ ಶೇ.80 ಭಾಗ ಹೊರಗೆ ಇದ್ದಾರೆ ಎನ್ನುತ್ತಾರೆ ಅವರು. 
      ನೀವು ಎಷ್ಟು ಬೇಕಾದರೂ ದುಡಿಯಿರಿ, ಸಂಪತ್ತು ಗಳಿಸಿರಿ. ಸರ್ಕಾರ ಅದನ್ನೇನು ಮುಟ್ಟುಗೋಲು ಹಾಕಿಕೊಳ್ಳುವುದಿಲ್ಲ. ಆದರೆ ಅದರ ಬಗ್ಗೆ ಮಾಹಿತಿ ನೀಡಿದರೆ ಸಾಕು. ನಮ್ಮ  ದುಡಿಮೆಯ ಬಗ್ಗೆ ಮಾಹಿತಿ ನೀಡಿ ವಿವರ ಸಲ್ಲಿಸುತ್ತಾ ಹೋದರೆ ಸರ್ಕಾರದ ಕಾನೂನು ಕಟ್ಟಳೆಗಳು ನಮ್ಮನ್ನೇಕೆ ಹೆದರಿಸುತ್ತವೆ. ನಾವು ಸರಿಯಾಗಿದ್ದರೆ ನಮ್ಮನ್ನೇಕೆ ತೆರಿಗೆ ಅಧಿಕಾರಿಗಳು ಹಿಂಬಾಲಿಸುತ್ತಾರೆ ಎಂಬುದು ಪ್ರಕಾಶ್ ಅವರ ಪ್ರಶ್ನೆ.
       ನಾವು ಸರ್ಕಾರಕ್ಕೆ ತೆರಿಗೆ ಪಾವತಿಸುತ್ತಾ ಬಂದಿದ್ದೇವೆ. ಪ್ರತ್ಯಕ್ಷ ಹಾಗೂ ಪರೋಕ್ಷ ತೆರಿಗೆಗಳಿಂದ ಸರ್ಕಾರ ಆಡಳಿತ ನಡೆಸುತ್ತದೆ. ನಾವೇನೋ ಸರ್ಕಾರಕ್ಕೆ ಪ್ರಮಾಣಿಕವಾಗಿ ತೆರಿಗೆ ಪಾವತಿಸುತ್ತೇವೆ. ವಿವಿಧ ನಿಯಮಗಳನ್ನು ಪಾಲಿಸುತ್ತೇವೆ. ಆದರೆ ಸರ್ಕಾರಕ್ಕೆ ಬೆನ್ನೆಲುಬಾಗಿ ನಿಲ್ಲುವ ನಮಗೆ ರಕ್ಷಣೆ ಏನಿದೆ? ಕೆಲವೇ ವ್ಯಕ್ತಿ, ವರ್ಗಗಳಿಗೆ ಸೌಲಭ್ಯಗಳು ಸಿಗುವಂತಾದರೆ ನಮ್ಮಗಳ ಸ್ಥಿತಿ ಕೇಳುವವರು ಯಾರು? ಈ ಬಗ್ಗೆಯೂ ಸರ್ಕಾರ ಚಿಂತಿಸಬೇಕಲ್ಲವೇ? ತೆರಿಗೆದಾದರ ಹಿತ ಕಾಯಬೇಕಲ್ಲವೇ ಎನ್ನುತ್ತಾರೆ ಕೆಲವು ಉದ್ಯಮಿಗಳು. 
    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap