ಚಟಗಳಿಗೆ ಬಲಿಯಾಗುತ್ತಿದ್ದಾರಾ ವಿದ್ಯಾರ್ಥಿ –ಯುವ ಜನತೆ
ತುಮಕೂರು:
ಬಲಗೈಲಿ ಕಪ್ ಹಿಡಿದು ಟೀ ಸೇವನೆ, ಎಡಗೈಲಿ ಸಿಗರೇಟ್ ಹಿಡಿದು ಧೂಮದ ಹೊಗೆ. ಸುತ್ತಲೂ ಒಂದಷ್ಟು ಹುಡುಗರ ಗುಂಪು. ತಮ್ಮದೇ ಲೋಕ. ಅವರದ್ದೇ ಭಾಷೆಗಳು. ಕೆಲವು ಹೊತ್ತು ಅಲ್ಲಿ ಕೂತು ಟೀ ಸೇವಿಸಿ ನಂತರ ಕಾಲೇಜಿನತ್ತ ಪಯಣ, ಇಲ್ಲವೆ ಮನೆಯತ್ತ ನಡಿಗೆ.
ಅಲ್ಲಲ್ಲಿ ಕೆಲವು ಟೀ ಅಂಗಡಿಗಳಲ್ಲಿ ನಿತ್ಯ ಕಂಡುಬರುವ ದೃಶ್ಯವಿದು. ಬಿ.ಹೆಚ್.ರಸ್ತೆ, ಎಸ್.ಐ.ಟಿ. ಬಡಾವಣೆ, ಕುಣಿಗಲ್ ರಸ್ತೆ ಸೇರಿದಂತೆ ಕೆಲವು ಪ್ರದೇಶಗಳ ಟೀ ಅಂಗಡಿಗಳ ಒಳ ಹೊಕ್ಕು ನೋಡಿದರೆ ಅಲ್ಲಿ ಕಾಲೇಜು ಹುಡುಗರು ಗುಂಪು ಗುಂಪಾಗಿ ಸಿಗುತ್ತಾರೆ. ಟೀ ಹೀರುತ್ತಾ, ಹೊಗೆ ಉಗುಳುತ್ತಾ ಗಂಟೆಗಟ್ಟಲೆ ಸಮಯ ಕಳೆಯುತ್ತಾರೆ. ಆರಂಭದಲ್ಲಿ ಟೀ ಸೇವನೆಯನ್ನು ಒಂದು ಸಾಮಾನ್ಯ ಅಭ್ಯಾಸವಾಗಿಸಿಕೊಳ್ಳುವ ಇವರು ನಂತರ ಸಿಗರೇಟ್ ಚಟಕ್ಕೆ ಬೀಳುತ್ತಾರೆ. ಒಬ್ಬ ಸೇದುವುದನ್ನು ಮತ್ತೊಬ್ಬ ನೋಡುತ್ತಾನೆ. ಅವನೂ ಸೇದುವಂತೆ ಪ್ರೇರೇಪಿಸುತ್ತಾನೆ. ಈ ಅಭ್ಯಾಸ ದೈನಂದಿನ ಚಟುವಟಿಕೆಯಾಗಿ ಕದ್ದೂಮುಚ್ಚಿ ನಡೆಯುವ ಈ ವ್ಯಸನಗಳಿಗೆ ಕೊನೆ ಮೊದಲಿಲ್ಲವಾಗುತ್ತದೆ.
ಕೆಲವು ದಿನಗಳಲ್ಲೇ ಸಮಾನ ಮನಸ್ಕರ ಗುಂಪು ಟೀ ಅಂಗಡಿಗಳಲ್ಲಿ ಜಮಾವಣೆಯಾಗುತ್ತದೆ. ಒಮ್ಮೆ ಸೇರಿಕೊಂಡರೆ ಮತ್ತೆ ಮತ್ತೆ ಅಲ್ಲಿಗೆ ಹೋಗುವ ಆಸೆ ಇಮ್ಮಡಿಸುತ್ತದೆ. ಕಾಲೇಜಿನ ಕಲಿಯುವ ದಿನಗಳಲ್ಲಿ ಹೆಚ್ಚು ಸಮಯವನ್ನು ಇಲ್ಲಿ ವ್ಯಯಿಸಲು ಆರಂಭಿಸುತ್ತಾರೆ. ಟೀ ಮತ್ತು ಸಿಗರೇಟ್ ಸೇವನೆ ನೆಪಮಾತ್ರ. ಅಲ್ಲಿಂದ ಆರಂಭವಾಗುವ ದುಶ್ಚಟಗಳು ಯುವಕರ ಬದುಕನ್ನೇ ಬರ್ಬಾದು ಮಾಡುತ್ತದೆ. ಇದು ಸೈಲೆಂಟ್ ಕಿಲ್ಲಿಂಗ್ ಎಂಬುದು ಬಿಸಿರಕ್ತದ ಯುವಕರಿಗೆ ಗೊತ್ತಾಗುವುದಾದರೂ ಹೇಗೆ?
ಮನೋ ವೈದ್ಯಕೀಯ ವರದಿಗಳ ಪ್ರಕಾರ ಸಾಮಾನ್ಯವಾಗಿ 15 ರಿಂದ 25 ವರ್ಷಗಳ ವಯೋಮಾನದ ಯುವಜನತೆಯಲ್ಲಿ ಹೊಸ ಹೊಸ ವಿಷಯಗಳತ್ತ ಆಕರ್ಷಣೆ ಹೆಚ್ಚು. ಕುತೂಹಲದ ಮನಸ್ಸು ಒಳಿತಿಗಿಂತ ದುಶ್ಚಟಗಳ ಆಕರ್ಷಣೆಗೆ ಹೆಚ್ಚು ಒಳಗಾಗುತ್ತದೆ. ಮದ್ಯ, ಮಾದಕ ವಸ್ತುಗಳ ಬಗೆಗೆ ಕೇಳಿಯಷ್ಟೇ ತಿಳಿದಿರುವ ಈ ಯುವ ಸಮೂಹಕ್ಕೆ ಟೀ ಸೇವನೆ ಮೊದಲ ಆಯ್ಕೆಯಾಗುತ್ತದೆ. ಇದಕ್ಕೊಂದು ಸ್ಥಳಾವಕಾಶ ಸಿಗುತ್ತದೆ. ಇದಕ್ಕಾಗಿಯೇ ಕೆಲವು ಟೀ ಅಂಗಡಿಗಳು ಸಿದ್ಧಗೊಂಡಿರುತ್ತವೆ. ಹೆಸರಿಗಷ್ಟೇ ಇವು ಟೀ ಸ್ಟಾಲ್ಗಳಾಗಿದ್ದು, ಅದರೊಳಗೆ ಹುಡುಗರಿಗೆ ಸಿಗಬಾರದ್ದೆಲ್ಲಾ ಸಿಗುತ್ತದೆ. ಸರ್ಕಾರದ ನಿಯಮಾವಳಿಯಲ್ಲಿ ಬ್ಯಾನ್ ಆಗಿರುವ ವಸ್ತುಗಳು ಅಲ್ಲಿರುತ್ತವೆ.
ಇತ್ತೀಚಿನ ಕಾನೂನುಗಳು ತಂಬಾಕು ಹಾಗೂ ಅದರ ಉತ್ಪನ್ನಗಳನ್ನು ನಿಷೇಧಿಸಿದೆ. ಬಹಿರಂಗವಾಗಿ ಎಲ್ಲಿಯೂ ಮಾರಾಟ ಮಾಡುವಂತಿಲ್ಲ. ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಕೂಡ ನಿಷೇಧ. ಚಾಪೆಯ ಕೆಳಗೆ ನುಸುಳುವ ಕಲೆಯೆಂಬಂತೆ ಕೆಲವು ಅಂಗಡಿಗಳವರು ನಿಷೇಧಿತ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ. ಯುವ ಸಮೂಹ ಇದಕ್ಕೆ ದಾಸರಾಗುತ್ತಿದ್ದು, ಇವರಿಂದಲೇ ಅಂಗಡಿಗಳಿಗೆ ಭರ್ಜರಿ ವ್ಯಾಪಾರವಾಗುತ್ತಿದೆ. ಗುಟ್ಕಾ ಇತ್ಯಾದಿಗಳು ಬಹಿರಂಗವಾಗಿ ಸಿಗದಿದ್ದರೇನಂತೆ, ಅದಕ್ಕೆ ತಕ್ಕನಾದ ಮತ್ತಷ್ಟು ಮಾದಕ ವಸ್ತುಗಳು ಎಗ್ಗಿಲ್ಲದೆ ದೊರಕುತ್ತಿವೆ. ಅಂಗಡಿಗಳ ಮುಂಭಾಗದಲ್ಲಿ ಟೀ ಸ್ಟಾಲ್ಗಳಾಗಿ ನಾಮಫಲಕ ಇದ್ದು, ಒಳ ಭಾಗದಲ್ಲಿ ವಿದ್ಯಾರ್ಥಿಗಳನ್ನು ಆಕರ್ಷಿಸುವ ಮಾದಕ ವ್ಯಸನ ಕೇಂದ್ರಗಳಾಗಿ ಕೆಲವು ಮಾರ್ಪಟ್ಟಿರುವುದು ಅತ್ಯಂತ ಆತಂಕ ಮೂಡಿಸುವ ವಿಷಯ.
ತಂಬಾಕು ಉತ್ಪನ್ನಗಳು, ಗಾಂಜಾ, ಕಾಫ್ ಸಿರಪ್, ಸೆಲ್ಯೂಷನ್ ಸೇರಿದಂತೆ ಹಲವು ವೈವಿಧ್ಯದ ಘನ ಹಾಗೂ ದ್ರವ ರೂಪದ ಮಾದಕ ವಸ್ತುಗಳು ಇಲ್ಲೆಲ್ಲಾ ದೊರೆಯುವುದರಿಂದ ಹಾಗೂ ಅದರ ಸೇವನೆಗೆ ಇಲ್ಲಿ ಅವಕಾಶವೂ ಸಿಗುವುದರಿಂದ ಕುತೂಹಲಭರಿತರಾಗಿ ಆಕರ್ಷಣೆಗೆ ಒಳಗಾಗುತ್ತಾರೆ.
ಗ್ರಾಮೀಣ ಪ್ರದೇಶಗಳಲ್ಲಿನ ಕಿರಾಣಿ ಅಂಗಡಿಗಳಲ್ಲಿ ಅನಧಿಕೃತವಾಗಿ ದೊರೆಯುವ ಮದ್ಯದಂತೆ ನಗರಗಳ ಕೆಲವು ಟೀ ಅಂಗಡಿಗಳಲ್ಲಿ ನಿಷೇಧಿತ ಮಾದಕ ದ್ರವ್ಯಗಳು ದೊರೆಯುತ್ತಿವೆ. ಬಾರ್ ಮತ್ತು ಮದ್ಯದ ಅಂಗಡಿಗಳಿಗೆ ತೆರಳಿ ಕೂಲಿ ಕಾರ್ಮಿಕರು ಮತ್ತು ಭರಿಸಿಕೊಂಡರೆ ಕಾಲೇಜು ವಿದ್ಯಾರ್ಥಿಗಳು ಇಂತಹ ಅಂಗಡಿಗಳಲ್ಲಿಯೇ ಮತ್ತಿನ ಮಜಾ ಅನುಭವಿಸುತ್ತಾರೆ. ಇಂತಹ ಗೀಳಿಗೆ ಒಳಗಾಗಿ ಅದೆಷ್ಟೋ ಮಂದಿ ಯುವಕರು ತಮ್ಮ ಭವಿಷ್ಯವನ್ನೇ ರೌರವ ನರಕಕ್ಕೆ ದೂಡಿಕೊಂಡಿದ್ದಾರೆ.
ಶಿಕ್ಷಣ ಪೂರೈಸಿ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಬಾಳಿ ಬದುಕಬೇಕಾದವರು ಬದುಕನ್ನೇ ಮೂರಾಬಟ್ಟೆ ಮಾಡಿಕೊಳ್ಳುತ್ತಿ ರುವುದು ನಾಗರಿಕ ಸಮಾಜದ ಅಣಕವಾಗುತ್ತಿದೆ. ಮದ್ಯ ಮತ್ತು ಮಾದಕ ವಸ್ತುಗಳ ದಾಸರಾಗಿ ಜೀವನ ಪರ್ಯಂತ ಹೆಣಗುತ್ತಿರುವ ಉದಾಹರಣೆಗಳು ಕಣ್ಮುಂದೆ ಇದ್ದರೂ ಅದಾವುದರ ಪರಿವೇ ಇಲ್ಲದೆ ಕಾಲೇಜು ಯುವ ಸಮೂಹ ಅದರ ಆಕರ್ಷಣಿಗೆ ಒಳಗಾಗುತ್ತಿರುವುದು ದುರಂತ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
