ಹುಳಿಯಾರು
ಪತ್ರಿಕೆಯ ವರದಿಯ ಫಲಶೃತಿಯಿಂದ ಹುಳಿಯಾರಿನ ಕೇಶವಾಪುರ ಭಾಗದ ರಾಷ್ಟ್ರೀಯ ಹೆದ್ದಾರಿಯ ಗುಂಡಿಗಳನ್ನು ಹೈವೆ ಪ್ರಾಧಿಕಾರದ ಅಧಿಕಾರಿಗಳು ಬುಧವಾರ ಮುಚ್ಚಿಸಿದ್ದಾರೆ.
ಹುಳಿಯಾರು-ಬಾಣವಾರ ರಾಷ್ಟ್ರೀಯ ಹೆದ್ದಾರಿಯ ಹುಳಿಯಾರಿನ ಕೇಶವಾಪುರ ಭಾಗದ ರಸ್ತೆಯಲ್ಲಿ ಗುಂಡಿ ಬಿದ್ದು, ಮಳೆ ನೀರು ತುಂಬಿಕೊಂಡು, ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುವಂತಾಗಿತ್ತು.ಕಳೆದ ಮೂರು ದಿನಗಳಿಂದ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ರಸ್ತೆ ತುಂಬ ನೀರು ನಿಂತಿರುವುದರಿಂದ ಪಾದಚಾರಿಗಳಿಗೆ ಹಾಗೂ ವಾಹನ ಸವಾರರಿಗೆ ಗುಂಡಿ ಕಾಣದೇ ಬೀಳುತ್ತಿರುವುದು ನಿರಂತರವಾಗಿ ನಡೆಯುತ್ತಿದೆ. ಅಲ್ಲದೆ ಬೈಕ್ ಸವಾರರು, ಪಾದಚಾರಿಗಳು ಕೆಸರು ಸಿಡಿಸಿಕೊಂಡ ನಿದರ್ಶನ ಸಹ ಬೇಕಾದಷ್ಟಿತ್ತು.
ರಸ್ತೆಯಲ್ಲಿ ಗುಂಡಿಬಿದ್ದಿರುವುದರಿಂದ ಆಗಿರುವ ತೊಂದರೆಯ ಬಗ್ಗೆ ಇಲ್ಲಿನ ನಿವಸಿ ಈರುಳ್ಳಿ ಮಂಜು ಪತ್ರಿಕೆಗೆ ದೂರು ನೀಡಿ ತಕ್ಷಣ ಗುಂಡಿ ಮುಚ್ಚಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಮನವಿ ಮಾಡಿದ್ದು ಈ ಬಗ್ಗೆ ಪತ್ರಿಕೆಯಲ್ಲಿ ವರದಿ ಪ್ರಕಟವಾಗಿತ್ತು.
ಪತ್ರಿಕೆಯ ವರದಿಯಿಂದ ಎಚ್ಚೆತ್ತುಕೊಂಡ ಅಧಿಕಾರಿಗಳು ಹೈವೆ ರಸ್ತೆಯಲ್ಲಿ ಬಿದ್ದಿದ್ದ ಗುಂಡಿಗಳನ್ನು ಮುಚ್ಚಿಸಿದ್ದಾರೆ. ಆದರೆ ಹೆಚ್ಚು ಗುಂಡಿಗಳು ಬಿದ್ದಿದ್ದ ಜಾಗದಲ್ಲಿ ಮಾತ್ರ ಜಲ್ಲಿ ಸಹಿತ ಡಾಂಬರ್ ಹಾಕಿ ಗುಂಡಿ ಮುಚ್ಚಿದ್ದಾರೆ ವಿನಹ ರಸ್ತೆಯಲ್ಲಿ ಅಲ್ಲಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚದೆ ನಿರ್ಲಕ್ಷ್ಯಿಸಿದ್ದಾರೆ.ಇದರಿಂದ ಈ ರಸ್ತೆಯಲ್ಲಿ ಬಿದ್ದಿರುವ ಗುಂಡಿಯಿಂದಾದ ಸಮಸ್ಯೆ ಇನ್ನೂ ಸಂಪೂರ್ಣವಾಗಿ ಪರಿಹಾರ ಕಂಡಂತ್ತಾಗಿಲ್ಲ. ಅಧಿಕಾರಿಗಳು ಕನಿಷ್ಟ ದೊಡ್ಡದೊಡ್ಡ ಗುಂಡಿಗಳನ್ನಾದರೂ ಮುಚ್ಚಿಸಿ ಪ್ರಯಾಣಿಕರಿಗೆ ಅನುಕೂಲ ಮಾಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.