ಮಧುಗಿರಿ : ಮಹಿಳೆಗೆ 7 ವರ್ಷ ಜೈಲು : ರೂ.5 ಲಕ್ಷ ದಂಡ

ಮಧುಗಿರಿ :

      ಅಪರೂಪದ ಪ್ರಕರಣವೊಂದರಲ್ಲಿ ಇಲ್ಲಿನ 4 ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ತಾರಕೇಶ್ವರಗೌಡ ಪಾಟೀಲ್ ಮಹಿಳಾ ಆರೋಪಿಯೊಬ್ಬರಿಗೆ 7 ವರ್ಷಗಳ ಕಾರಾಗೃಹ ಶಿಕ್ಷೆ ಮತ್ತು 5 ಲಕ್ಷ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

      ತಾಲ್ಲೂಕಿನ ಕಸಬಾ ವ್ಯಾಪ್ತಿಯ ಗುಡಿರೊಪ್ಪ ಗ್ರಾಮದ ಲಕ್ಷ್ಮಮ್ಮನ ಮೊದಲನೇ ಮಗನಾದ ಲಕ್ಕಪ್ಪನಿಗೆ 6 ವರ್ಷಗಳ ಹಿಂದೆ ಲಕ್ಷ್ಮಮ್ಮ ( ಲಚ್ಚಿ) ಎಂಬುವವರೊಂದಿಗೆ ವಿವಾಹವಾಗಿದ್ದು, ಇವರಿಗೆ ಒಬ್ಬ ಮಗನಿದ್ದಾನೆ. 2018 ಏಪ್ರಿಲ್ 24 ರಂದು ತಾಯಿ ಲಕ್ಷ್ಮಮ್ಮ ಬೆಂಗಳೂರಿನಲ್ಲಿರುವ ತನ್ನ ಮಗಳನ್ನು ನೋಡಿಕೊಂಡು ಬರಲು ಮೊಮ್ಮೊಕ್ಕಳೊಂದಿಗೆ ಹೋಗಿದ್ದ ಸಂದರ್ಭದಲ್ಲಿ ಮಾರನೇ ದಿನ ರಾತ್ರಿ ಗ್ರಾಮಸ್ಥರು ನಿನ್ನ ಮಗ ಮನೆಯಲ್ಲೇ ಸತ್ತು ಹೋಗಿದ್ದಾನೆ ಎಂದು ಫೋನ್ ಮೂಲಕ ತಾಯಿಗೆ ಮಾಹಿತಿ ನೀಡಿದ್ದಾರೆ.

      ಊರಿಗೆ ವಾಪಾಸ್ಸಾದ ತಾಯಿ ಮನೆಗೆ ಬಂದು ನೋಡಿದಾಗ ಮಗನ ಶವದ ತಲೆಯ ಹಿಂಭಾಗ ಗಾಯವಾಗಿರುವುದನ್ನು ಕಂಡು, ಸಾವಿನ ಬಗ್ಗೆ ಸೊಸೆ ಲಕ್ಷ್ಮಮ್ಮಳ ಬಳಿ ವಿಚಾರಿಸಿದಾಗ, ರಾತ್ರಿ 10 ಗಂಟೆಯ ಸಮಯದಲ್ಲಿ ಮಂಚದ ಮೇಲೆ ಮಲಗಿದ್ದ ಲಕ್ಕಪ್ಪ ಮಂಚದ ಮೇಲಿನಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾನೆ ಎಂದು ತಿಳಿಸಿದ್ದಾಳೆ. ನಿಜವೆಂದು ನಂಬಿದ ತಾಯಿ ಮತ್ತು ಸಂಬಂಧಿಕರು ತಮ್ಮದೇ ಜಮೀನಿನಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ. ಇದಾದ 2 ತಿಂಗಳ ನಂತರ ಮಗನ ಸಾವಿನ ಬಗ್ಗೆ ಅನುಮಾನಗೊಂಡ ತಾಯಿ ಲಕ್ಷ್ಮಮ್ಮ , 2018 ಜೂ. 14 ರಂದು ಮಧುಗಿರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಜೂ. 19 ರಂದು ಉಪವಿಭಾಗಾಧಿಕಾರಿಗಳ ಸಮ್ಮುಖದಲ್ಲಿ ಲಕ್ಕಪ್ಪನ ಶವ ಹೊರತೆಗೆದು ಶವ ಪರೀಕ್ಷೆ ನಡೆಸಿದಾಗ ‘I am of the opinion The Death is due to head injury sustained’ ಎಂಬುದಾಗಿ ವೈದ್ಯರು ವರದಿ ನೀಡಿದ್ದರು. ಸಿಪಿಐ ಅಂಬರೀಶ್ ಆರೋಪಿತಳನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪಣೆಯ ಪಟ್ಟಿ ಸಲ್ಲಿಸಿದ್ದರು.

     ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು, ಆರೋಪಿಯ ವಿರುದ್ಧ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಕೊಲೆಯಲ್ಲದ ಮಾನವ ಹತ್ಯೆ ಎಂಬುದಾಗಿ ತೀರ್ಪು ನೀಡಿ ದಂಡದ ಹಣದಲ್ಲಿ 4 ಲಕ್ಷ ರೂ.ಗಳನ್ನು ಪರಿಹಾರವಾಗಿ ಮೃತನ ತಾಯಿಗೆ ನೀಡುವಂತೆ ಆದೇಶಿಸಿದ್ದಾರೆ. ಸರ್ಕಾರಿ ಅಭಿಯೋಜಕರಾಗಿ ಬಿ.ಎಂ. ನಿರಂಜನಮೂರ್ತಿ ವಾದ ಮಂಡಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap