ಕಾಳ ಸಂತೆಯಲ್ಲಿ ಶಿಕ್ಷಣವನ್ನು ಹರಾಜಿಗಿಟ್ಟ ವೈದ್ಯಕೀಯ ಕಾಲೇಜುಗಳು..!

ತುಮಕೂರು

 ವಿಶೇಷ ಲೇಖನ: ಟಿ ಎನ್ ಮಧುಕರ್

 

    ಸೇವಾಕ್ಷೇತ್ರವಾಗಿ ಬೆಳೆಯಬೇಕಿದ್ದ ವೈದ್ಯಕೀಯ ಶಿಕ್ಷಣ ಕ್ಷೇತ್ರವಿಂದು Seat Blocking (ಅಡ್ಮಿಶನ್ ದಂಧೆ) ದಂಧೆಯಲ್ಲಿ ಮುಳುಗಿದೆ. ಖಾಸಗಿ ಸಂಸ್ಥೆಗಳು ವೈದ್ಯ ಶಿಕ್ಷಣವನ್ನು ಹರಾಜಿಗಿಟ್ಟಿವೆ. ಇಲ್ಲಿ ನಡೆಯುತ್ತಿರುವ ಸೀಟು ಹಂಚಿಕೆಯ ಅಕ್ರಮ ಚಟುವಟಿಕೆಗಳು ಎಂತಹವರನ್ನೂ ದಂಗು ಬಡಿಸುತ್ತವೆ.

   ಸಾಮಾನ್ಯ ಜನರಿಗೆ ಏನೊಂದೂ ಗೊತ್ತಾಗದ ರೀತಿಯಲ್ಲಿ ಹಣ ಮಾಡುವ ಕರಾಮತ್ತು ಇಲ್ಲಿ ಎಗ್ಗಿಲ್ಲದೆ ಸಾಗಿದೆ. ಇದಕ್ಕಾಗಿ ವ್ಯವಸ್ಥಿತ ಜಾಲವೇ ರೂಪುಗೊಂಡಿದೆ. ದೇಶದ ಕೆಲವೇ ಭಾಗಗಳಲ್ಲಿ ಕಾಣಿಸಿಕೊಂಡಿದ್ದ Seat Blocking ದಂಧೆ ಇಂದು ಕರ್ನಾಟಕವನ್ನು ಒಳಗೊಂಡಂತೆ ಎಲ್ಲ ರಾಜ್ಯಗಳಲ್ಲಿ ತನ್ನ ಕಬಂಧ ಬಾಹುಗಳನ್ನು ಚಾಚಿಕೊಂಡಿದೆ.

    ವೃತ್ತಿಪರ ಶಿಕ್ಷಣ ಕಾಲೇಜುಗಳು ಸಂಪನ್ಮೂಲ ಹೊಂದಿರುವ ಪ್ರಾಧ್ಯಾಪಕರನ್ನು ಹಾಗೂ ಇನ್ನಿತರೆ ವೃತ್ತಿ ಕೌಶಲ್ಯ ಹೊಂದಿರುವವರನ್ನು ನೇಮಕಾತಿ ಮಾಡಿಕೊಂಡು ಕಾಲೇಜುಗಳ ದಕ್ಷತೆ ಹೆಚ್ಚಿಸಿಕೊಳ್ಳುತ್ತಾರೆ. ಇದನ್ನು ನಂಬಿ ದೇಶದ ಹಲವೆಡೆಗಳಿಂದ ಮೆಡಿಕಲ್ ಕಾಲೇಜುಗಳಿಗೆ ದಾಖಲಾತಿ ಪಡೆಯಲು ಮುಂದೆ ಬರುತ್ತಾರೆ.

    ಇದು ಸಹಜ ಕೂಡ. ಆದರೆ ಇದನ್ನೇ ಬಂಡವಾಳವನ್ನಾಗಿ ಮಾಡಿಕೊಳ್ಳುವ ಕಾಲೇಜುಗಳು ತಮ್ಮ ಮೂಲ ಉದ್ದೇಶವನ್ನೇ ಮರೆತು ಅಡ್ಮಿಷನ್ ದಂಧೆಯಲ್ಲಿ ಮುಳುಗಿ ಹೋಗಿವೆ. ಇದಕ್ಕೆ ಸಹಕರಿಸಲು ದಲ್ಲಾಳಿತನದಲ್ಲಿ ಕೌಶಲ್ಯ ಇರುವಂತಹವರನ್ನು ನೇಮಕಾತಿ ಮಾಡಿಕೊಂಡು ತಮ್ಮ ಉದ್ದೇಶ ಈಡೇರಿಸಿಕೊಳ್ಳುತ್ತಿವೆ. ದಲ್ಲಾಳಿಗಳು (ಏಜೆಂಟ್) ಹಾಗೂ ಖಾಸಗಿ ಸಂಸ್ಥೆಗಳ ನಡುವಿನ ಒಳ ಒಪ್ಪಂದಗಳು ಯಾರಿಗೂ ಆರ್ಥವಾಗುವುದೇ ಇಲ್ಲ. ಅಷ್ಟರ ಮಟ್ಟಿಗೆ ಆ ವ್ಯವಸ್ಥೆ ರೂಪುಗೊಂಡಿದೆ. ಆ ಮೂಲಕ ವೃತ್ತಿ ಶಿಕ್ಷಣದ ಆರಂಭದ ಅವಧಿಯಲ್ಲಿಯೇ ಭ್ರಷ್ಟಾಚಾರದ ಕರಾಳ ಮುಖವನ್ನು ಕಲಿಯುವ ವಿದ್ಯಾರ್ಥಿಗಳಿಗೆ ಅನಾವರಣ ಮಾಡಲಾಗುತ್ತಿದೆ.

ಏನಿದು ಸೀಟ್ ಬ್ಲಾಕಿಂಗ್? ಇದು ಹೇಗೆ ನಡೆಯುತ್ತದೆ?

    ಆಡಳಿತ ಮಂಡಳಿಗಳು ತಮಗೆ ಸರಿಹೊಂದುವಂತಹ ಚಾಣಾಕ್ಷ ಏಜೆಂಟ್‍ಗಳನ್ನು ನೇಮಕ ಮಾಡಿಕೊಂಡಿರುತ್ತಾರೆ. ಸುಮಾರು 150ರಿಂದ 300 ಪ್ರತಿಭಾನ್ವಿತ (Meritorious) ವಿದ್ಯಾರ್ಥಿಗಳನ್ನು ಗುರುತಿಸಿ ಆಯ್ಕೆ ಮಾಡಿಕೊಡುವುದು ಇವರ ಕೆಲಸ. ನೀಟ್ ಪರೀಕ್ಷೆ ಸಮೀಪಿಸುತ್ತಿದ್ದಂತೆಯೇ ಚುರುಕಾಗುವ ಈ ಏಜೆಂಟರುಗಳು ಈ ಹಿಂದೆ ನೀಟ್ ಪರೀಕ್ಷೆ ಬರೆದ ಟಾಪ್ ವಿದ್ಯಾರ್ಥಿಗಳ ಪಟ್ಟಿ ಸಿದ್ಧಪಡಿಸುತ್ತಾರೆ. ಈ ಪಟ್ಟಿಯನ್ನು ಇಟ್ಟುಕೊಂಡು ಸೀಟ್ ಬ್ಲಾಕಿಂಗ್ ದಂಧೆಗೆ ಎರಡು ರೀತಿಯ ಮಾರ್ಗಗಳನ್ನು ಹುಡುಕುತ್ತಾರೆ. ಒಂದು ಮಾರ್ಗ ಟಾಪ್ ವಿದ್ಯಾರ್ಥಿಗಳನ್ನು ಸಂಪರ್ಕಿಸಿ ಅವರು ನಕಲಿ ವಿದ್ಯಾರ್ಥಿಯಾಗಿ ಪರೀಕ್ಷೆ ಬರೆಯಲು ಒಪ್ಪಿಸುವುದು. ಮತ್ತೊಂದು ಮಾರ್ಗವೆಂದರೆ ಸೀಟು ಆಯ್ಕೆಯ ಸಂದರ್ಭದಲ್ಲಿ.

    ಮುಖ್ಯವಾಗಿ ರಾಜಸ್ಥಾನ ಹಾಗೂ ಇನ್ನಿತರೆ ಉತ್ತರ ಭಾರತದ ರಾಜ್ಯಗಳ ವಿದ್ಯಾರ್ಥಿಗಳನ್ನೇ ಏಜೆಂಟರುಗಳು ಹೆಚ್ಚು ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಆ ಭಾಗದಲ್ಲಿ ದೊಡ್ಡ ದೊಡ್ಡ ಅಧಿಕಾರಿಗಳ ಪಡೆಯೇ ಇದ್ದು, ಅವರೆಲ್ಲ ತಮ್ಮ ಮಕ್ಕಳನ್ನು ವ್ಯಾಸಂಗಕ್ಕಾಗಿ ದಕ್ಷಿಣ ಭಾರತದ ಕಡೆಗೆ ಕಳುಹಿಸುತ್ತಾರೆ. ಅವರಿಗೆ ಹಣದ ಕೊರತೆ ಇರುವುದಿಲ್ಲ. ಏಜೆಂಟರುಗಳಿಗೆ, ಖಾಸಗಿ ಮೆಡಿಕಲ್ ಕಾಲೇಜುಗಳಿಗೆ ಇದೇ ಒಂದು ವರದಾನ.

    ವೈದ್ಯಕೀಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡುವ ಹಂಬಲ ಹೊಂದಿದವರು ಸಹಜವಾಗಿ ನಿಯಮಾವಳಿಯಂತೆ ನೀಟ್ ಪರೀಕ್ಷೆಗೆ (National eligibility – cum –entrance Test) ಹಾಜರಾಗುತ್ತಾರೆ. ಆಲ್ ಇಂಡಿಯಾ ರ್ಯಾಂಕಿಂಗ್ (AIR) ನಲ್ಲಿ ಬುಕ್ ಮಾಡಿದ ವಿದ್ಯಾರ್ಥಿಗಳ ಒಂದು ಲಕ್ಷಕ್ಕಿಂತ ಕಡಿಮೆ ರ್ಯಾಂಕ್ ಪಡೆದವರನ್ನು 2 ಲಕ್ಷ ರೂಗಳಷ್ಟು ಹಣ ನೀಡಿ ಬುಕ್ ಮಾಡಲಾಗುತ್ತದೆ. ಈ ವಿದ್ಯಾರ್ಥಿಗಳು ಆಯಾ ರಾಜ್ಯದ ಕಾಲೇಜುಗಳಲ್ಲಿ ಮೆರಿಟ್ ಸೀಟ್ ಪಡೆಯುತ್ತಾರೆ.

   ಅದೇ ವಿದ್ಯಾರ್ಥಿಗಳು ಡೀಮ್ಡ್ ಯುನಿವರ್‍ಸಿಟಿ ಕೌನ್ಸಿಲಿಂಗ್‍ಗೆ ಎಂಸಿಸಿ (Medical Councilling Committee) ಮೂಲಕ ಹಾಜರಾಗುತ್ತಾರೆ. ಎಂಸಿಸಿ ಕೌನ್ಸಿಲಿಂಗ್‍ನಲ್ಲಿ ಮೂಲ ದಾಖಲಾತಿಗಳ ಪರಿಶೀಲನಾ ಪ್ರಕ್ರಿಯೆ ಅನಿವಾರ್ಯವಲ್ಲ. ಇದರಿಂದಾಗಿ ನೀಟ್ ರೋಲ್ ನಂಬರ್ ನೀಡಿ 2 ಲಕ್ಷ ರೂ ಕೌನ್ಸಿಲಿಂಗ್ ಶುಲ್ಕ ನೀಡುತ್ತಾರೆ. ಈ ಹಗರಣದಲ್ಲಿ ಭಾಗಿಯಾಗಿರುವ ಕಾಲೇಜುಗಳನ್ನು ಮೊದಲ ಸುತ್ತಿನಲ್ಲಿ ಆಯ್ಕೆ ಮಾಡಿಕೊಳ್ಳುತ್ತಾರೆ.

    ಆದರೆ ಅಡ್ಮಿಶನ್ ಪಡೆಯದ ಕಾರಣ ಸೀಟು ಖಾಲಿ ಉಳಿದು ಎರಡನೇ ಸುತ್ತಿಗೂ ಖಾಲಿ ಉಳಿಯುತ್ತದೆ. ಮೊದಲ ಸುತ್ತಿನಲ್ಲಿ ಡಿಫಾಲ್ಟ್ (Default) ಆದವರಿಗೆ ಯಾವುದೇ ರೀತಿಯ ದಂಡ ವಿಧಿಸಲಾಗುವುದಿಲ್ಲ. ಪುನಃ ಎರಡನೇ ಸುತ್ತಿಗೆ ಅದೇ ಕಾಲೇಜಿನಲ್ಲಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಆಗಲೂ ಕೂಡ ಅಡ್ಮಿಶನ್ ಪಡೆಯದೆ ನಿರಾಕರಿಸಲಾಗುತ್ತದೆ. ಇದರಿಂದ ಎರಡನೇ ಸುತ್ತಿನಲ್ಲಿಯೂ ಆ ಸೀಟು ಖಾಲಿ ಉಳಿದು ಮಾಪ್ ಅಪ್ ರೌಂಡ್‍ಗೆ (Mop up round) ಗೆ ತೆರೆದುಕೊಳ್ಳುತ್ತದೆ.

    ಎರಡನೇ ಸುತ್ತಿನಲ್ಲಿ ಅಡ್ಮಿಶನ್ ಪಡೆಯದೆ ಡೀ ಫಾಲ್ಟ್ ಆದವರಿಗೆ 2 ಲಕ್ಷ ರೂ. ದಂಡ ವಿಧಿಸಲಾಗುತ್ತದೆ. ಈ ದಂಡವನ್ನು ಏಜೆಂಟ್ ಭರಿಸುತ್ತಾನೆ. ಇಷ್ಟೆಲ್ಲಾ ಆದ ಮೇಲೆ ಪುನಃ Mop up round ಅನ್ನು ಕೂಡ ಅದೇ ವಿದ್ಯಾರ್ಥಿಗಳು ಅದೇ ಕಾಲೇಜಿನಲ್ಲಿ ಆಯ್ಕೆ ಮಾಡಿಕೊಳ್ಳುತ್ತಾರೆ. ಆಗಲೂ ಕೂಡ ಪ್ರವೇಶ ನಿರಾಕರಿಸುತ್ತಾರೆ.ನಂತರ Mop up round ನಲ್ಲೂ ಪ್ರವೇಶ ಪಡೆಯದೆ ಡಿಫಾಲ್ಟ್ ಆಗಿ 2 ಲಕ್ಷ ರೂ. ದಂಡ ಪಾವತಿಸುತ್ತಾರೆ. ಇದನ್ನೂ ಸಹ ಏಜೆಂಟ್ ಭರಿಸುತ್ತಾನೆ. ಇಷ್ಟೆಲ್ಲ ಪ್ರಕ್ರಿಯೆಗಳ ನಂತರ ಈ ಎಲ್ಲಾ ಸುತ್ತುಗಳಲ್ಲೂ ಖಾಲಿ ಉಳಿದ ಸೀಟ್‍ಗಳು ಕಾಲೇಜು ಆಡಳಿತ ಮಂಡಳಿಯಲ್ಲೇ ಉಳಿಯುತ್ತವೆ. ಉಳಿದಂತಹ ಸೀಟುಗಳನ್ನು ಕಾಲೇಜಿನ ಆಡಳಿತ ಮಂಡಳಿ ಸುಮಾರು 60 ಲಕ್ಷ ರೂ.ಗಳಿಂದ 1 ಕೋಟಿಯವರೆಗೂ ಮ್ಯಾನೇಜ್‍ಮೆಂಟ್ ಮೂಲಕವೇ ಅಡ್ಮಿಷನ್ ನೀಡಲಾಗುತ್ತದೆ.

    ಕಾಲೇಜು ಹಂತದಲ್ಲಿಯೇ ಸೀಟು ಹಂಚಿಕೆ ಪ್ರಕ್ರಿಯೆ ನಡೆಯುವುದರಿಂದ ಇಲ್ಲಿ ಯಾವ ನಿಯಮಾವಳಿಯೂ ಇಲ್ಲದೆ ಬೇಕಾದಷ್ಟು ದೋಚುವ ಹಾದಿ ಸುಗಮವಾಗುತ್ತದೆ. ಸೀಟುಗಳನ್ನು ಮಾರಿಕೊಳ್ಳಲು ಇದೊಂದು ರಹದಾರಿ.

     ಮೆಡಿಕಲ್ ಕೋರ್ಸ್‍ಗೆ ಖರ್ಚು ಮಾಡಿರುವ ಹಣ ವಾಪಸ್ ಬರುತ್ತದೆ ಎಂಬ ಕಾರಣವೂ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಬಡ ಹಾಗೂ ಮಧ್ಯಮ ವರ್ಗದ ಮೆರಿಟ್ ವಿದ್ಯಾರ್ಥಿಗಳು ಏಜೆಂಟರುಗಳ ಮಾತಿನ ಮೋಡಿಗೆ ಸುಲಭವಾಗಿ ಒಪ್ಪಿಕೊಳ್ಳುತ್ತಾರೆ. ಬೇರೆ ಬೇರೆ ಕಾಲೇಜುಗಳಲ್ಲಿ ಸೀಟು ಆಯ್ಕೆ ಮಾಡಿಕೊಳ್ಳುವ ಪ್ರಕ್ರಿಯೆಗಳಿಗೆ ಏಜೆಂಟನೇ ವೆಚ್ಚ ಭರಿಸುವುದರಿಂದ ವಿದ್ಯಾರ್ಥಿಗಳು ಹೆಚ್ಚು ಚಿಂತೆಗೀಡಾಗುವುದಿಲ್ಲ.

     ಈ ರೀತಿಯಲ್ಲಿ ಅಕ್ರಮವಾಗಿ ಹಣ ಮಾಡುವ ವ್ಯವಸ್ಥಿತ ಜಾಲ ಇಲ್ಲಿ ರೂಪುಗೊಳ್ಳುತ್ತದೆ. ಇಲ್ಲಿ ಕಾಲೇಜಿಗೆ ಖರ್ಚಾಗುವ ವಾಸ್ತವಿಕ ಹಣ ಹಾಗೂ ಲಾಭ ಪಡೆಯುವ ಹಣ ಎಷ್ಟು ಎಂಬುದನ್ನು ಸ್ಪಷ್ಟವಾಗಿ ಲೆಕ್ಕ ಹಾಕಬಹುದು. ಉದಾಹರಣೆಗೆ ವಿದ್ಯಾರ್ಥಿ ಬುಕ್ ಮಾಡುವುದಕ್ಕೆ 2 ಲಕ್ಷ + 2 ಲಕ್ಷ ಎರಡನೇ ಸುತ್ತಿನ ಡಿಫಾಲ್ಟ್ ಫೈನ್+2 ಲಕ್ಷ ಮಾಪ್‍ಅಪ್ ರೌಂಡ್ ಡಿಫಾಲ್ಟ್ ಫೈನ್ + 2 ಲಕ್ಷ ಏಜೆಂಟ್ ಫೀ. ಒಟ್ಟು = 8 ಲಕ್ಷ ರೂ.ಗಳು. ಇದು ಒಬ್ಬ ವಿದ್ಯಾರ್ಥಿಯ ಹೆಸರಲ್ಲಿ ಬರುವ ವಾಸ್ತವಿಕ ಖರ್ಚು ಲೆಕ್ಕಾಚಾರ. ಕಾಲೇಜುಗಳು ಇಷ್ಟೆಲ್ಲಾ ಖರ್ಚು ಮಾಡಿವೆ ಎಂದು ಗಣನೆಗೆ ತೆಗೆದುಕೊಂಡರೂ 52 ರಿಂದ 92 ಲಕ್ಷದವರೆಗೂ ಪ್ರತಿ ಸೀಟಿಗೆ ಲಾಭ ಪಡೆಯುತ್ತಾರೆ.

    ಇಂತಹ ಕಾಳದಂಧೆಯಲ್ಲಿ ತೊಡಗಿರುವ ವಿಷಯ ಕಾಲೇಜುಗಳನ್ನು ನಿಯಂತ್ರಿಸುವ ಸಂಸ್ಥೆಗಳಾದ M.C.I. (ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ) ಹಾಗೂ ಇನ್ನಿತರ ಸರ್ಕಾರಿ ಸಂಸ್ಥೆಗಳಿಗೆ ತಿಳಿದಿಲ್ಲವೆ? ರಾಷ್ಟ್ರದಲ್ಲಿ ಹಲವಾರು ಮೆಡಿಕಲ್ ಕಾಲೇಜುಗಳ ಮೇಲೆ ಐಟಿ ದಾಳಿ ನಡೆದು ಇಂತಹ ಹಗರಣಗಳನ್ನು ಹೊರ ಹಾಕಿದಾಗ ಮಾತ್ರವೇ ಜನತೆಗೆ ಇಂತಹ ನಿಯಂತ್ರಣ ಸಂಸ್ಥೆಗಳಿವೆ ಎಂದು ತಿಳಿಯುತ್ತಿದೆಯೇ?

ಎಲ್ಲಿದೆ ನೈತಿಕತೆ?

     ವೈದ್ಯ ಶಿಕ್ಷಣದಂತಹ ವೃತ್ತಿಪರ ಶಿಕ್ಷಣದ ಕಾಲೇಜುಗಳಲ್ಲಿ ಸಾಮಾಜಿಕ ಮೌಲ್ಯಗಳನ್ನು ತುಂಬಬೇಕು. ಏಕೆಂದರೆ, ಶಿಕ್ಷಣದ ತರಬೇತಿ ಮುಗಿಸಿದ ಕೂಡಲೇ ಇವರೆಲ್ಲ ಕೆಲಸ ಮಾಡಬೇಕಿರುವುದು ಮನುಷ್ಯರ ನಡುವೆ. ರೋಗ ವಾಸಿ ಮಾಡಬೇಕಾದ ವೈದ್ಯರಲ್ಲಿ ರೋಗಿಗಳೊಂದಿಗೆ ಪ್ರೀತಿಯಿಂದ ಮಾತನಾಡುವ ಗುಣಗಳಿರಬೇಕು.

     ನೈತಿಕತೆ, ಕೌಶಲ್ಯ, ಮಾನವೀಯ ಗುಣಗಳ ಬಗ್ಗೆ ಹೇಳಿಕೊಡುವ ಇಂತಹ ಕಾಲೇಜುಗಳಲ್ಲೇ ಈ ರೀತಿಯ ದಂಧೆ ನಡೆಯುತ್ತಿದೆ ಎಂದರೆ ಅದಕ್ಕಿಂತ ವಿಷಾದದ ಸಂಗತಿ ಮತ್ತೊಂದಿಲ್ಲ. ಇಂತಹ ವಾಮ ಮಾರ್ಗಗಳ ಮೂಲಕ ಸೀಟು ಪಡೆದು ಬರುವ ವಿದ್ಯಾರ್ಥಿಗಳಲ್ಲಿ ಮುಂದೆ ಇನ್ನೆಂತಹ ನೈತಿಕತೆ ನಿರೀಕ್ಷಿಸಲು ಸಾಧ್ಯ? ಇದೊಂದು ಹಣ ಕೊಟ್ಟು ಸೀಟು ಪಡೆಯುವ ದಂಧೆಯಾಗಿ ಪರಿವರ್ತನೆಯಾಗಿರುವುದು ಸಾಮಾಜಿಕ ಕಳಂಕ.

     ಸೀಟು ಪಡೆದವರು ವೈದ್ಯರಾಗಿ ಹೊರಬಂದಾಗ ರೋಗಿಗಳೊಂದಿಗೆ ಹೇಗೆ ಸೌಜನ್ಯದಿಂದ ನಡೆದುಕೊಂಡಾರು? ಕೊನೆಗೆ ಹಣ ಮಾಡುವುದೇ ಒಂದು ಪ್ರವೃತ್ತಿಯಾಗಿ `ವೈದ್ಯೋ ನಾರಾಯಣ ಹರಿ’ ಎಂಬ ಪದಕ್ಕೆ ಮಸಿ ಬಳಿಯುವ ಕೃತ್ಯಕ್ಕೆ ಇಳಿಯುವುದರಲ್ಲಿ ಯಾವುದೇ ಸಂಶಯವಿಲ್ಲ. ಉದಾತ್ತ ಭಾವನೆಯನ್ನೇ ಮರೆತು ವೈದ್ಯಕೀಯ ಕ್ಷೇತ್ರವನ್ನು ಸೇವಾ ಕ್ಷೇತ್ರದ ಬದಲಾಗಿ ಒಂದು ಉದ್ದಿಮೆಯನ್ನಾಗಿ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದು ನಿಂತಿರುವುದು ದುರಂತ.

ನಿಯಮಗಳು ಇದ್ದೂ ಇಲ್ಲದಂತೆ.!

     ಬಹುತೇಕ ಮೆಡಿಕಲ್ ಕಾಲೇಜುಗಳು ರಾಜಕೀಯ ವ್ಯಕ್ತಿಗಳಿಗೆ ಸಂಬಂಧಿಸಿದ ಸಂಸ್ಥೆಗಳೇ ಆಗಿವೆ. ಅವು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ರಾಜಕಾರಣಿಗಳ ಕೃಪಾ ಕಟಾಕ್ಷದಲ್ಲೇ ನಡೆಯುತ್ತಿವೆ. ಶಾಸನ ರೂಪಿಸುವವರು ಇವರೇ ಆಗಿರುವುದರಿಂದ ತಮಗೆ ಬೇಕಾದಂತೆ ಕಾನೂನನ್ನು ಬದಲಾಯಿಸಿಕೊಳ್ಳುವ ಅಧಿಕಾರವೂ ಇವರಲ್ಲಿಯೇ ಇದೆ.

    ಹೀಗಾಗಿ ಯಾವುದೇ ಕಾನೂನು ಕಟ್ಟಳೆಗಳಿಗೆ ಸುಲಭವಾಗಿ ಸಿಲುಕಿಕೊಳ್ಳದ ಹಾಗೆ ವ್ಯವಹಾರ ನಡೆಸುತ್ತ ಸಂಸ್ಥೆಗಳಿಗೆ ಶ್ರೀರಕ್ಷೆಯಾಗಿ ನಿಂತಿದ್ದಾರೆ. ನಿಯಮಾವಳಿ ಉಲ್ಲಂಘಿಸುವ ಸಂಸ್ಥೆಗಳ ಮೇಲೆ ಕ್ರಮ ಜರುಗಿಸುವ ತಾಕತ್ತು ಶಿಸ್ತುಪಾಲನಾ ಸಂಸ್ಥೆಗಳಿಗೆ ಹೇಗೆ ಬರಲು ಸಾಧ್ಯ? ಒಂದು ವೇಳೆ ಉಲ್ಲಂಘನೆ ಹೆಸರು ಕೇಳಿ ಬಂದೊಡನೆಯೇ ಕೆಲವೇ ದಿನಗಳಲ್ಲಿ ಆ ನಿಯಮಾವಳಿಯೂ ಮಾರ್ಪಾಟಾಗುವುದರಿಂದ ಇಲ್ಲಿ ಯಾವ ಕಾನೂನು ಕಟ್ಟಳೆಗಳೂ ಲೆಕ್ಕಕ್ಕೆ ಬಾರವು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap