ಬೆಂಗಳೂರು:
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಾಕಷ್ಟು ಆರೋಗ್ಯ ಸೇವೆ ಇದ್ದರೂ ಅದನ್ನು ಪಡೆಯದೆ, ಮನೆಯಲ್ಲೇ ಹೆರಿಗೆ ಮಾಡಿಸಿಕೊಳ್ಳಲು ಹೋಗಿ ಯುವತಿ ಸಾವಿಗೀಡಾದ ಹೃದಯ ವಿದ್ರಾವಕ ಘಟನೆ ನಡೆದಿದೆ. ವೈಯಾಲಿಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿ ಮನೆಯೊಂದರಲ್ಲಿ ಹೆರಿಗೆಯಾದ ಯುವತಿಯೊಬ್ಬರು ಅಧಿಕ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾರೆ. ಮೃತ ಯುವತಿ ಉತ್ತರ ಕರ್ನಾಟಕ ಮೂಲದವರಾಗಿದ್ದಾರೆ. ಹೆರಿಗೆಯಾದ ಮಗು ಸುರಕ್ಷಿತವಾಗಿದ್ದು, ಸದ್ಯ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಆರೈಕೆ ಪಡೆಯುತ್ತಿದೆ.
ವೈಯಾಲಿಕಾವಲ್ ವ್ಯಾಪ್ತಿಯ ಮನೆಯೊಂದರಲ್ಲಿ ಕಳೆದ ಎರಡು ತಿಂಗಳಿಂದ ಯುವತಿ ತಮ್ಮ ತಾಯಿಯೊಂದಿಗೆ ವಾಸವಾಗಿದ್ದರು. ಯುವತಿ ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ಕಾನೂನು ಪದವಿ ವ್ಯಾಸಂಗ ಮಾಡುತ್ತಿದ್ದು, ಓರ್ವ ಯುವಕನ ಜೊತೆ ಸಂಪರ್ಕದಲ್ಲಿದ್ದರು ಎಂದು ತಿಳಿದುಬಂದಿದೆ. ಗರ್ಭಿಣಿಯಾಗಿದ್ದ ಯುವತಿಗೆ ನಿನ್ನೆ ರಾತ್ರಿ ಏಕಾಏಕಿ ಹೊಟ್ಟೆನೋವು ಕಾಣಿಸಿಕೊಂಡಿದೆ. ಹೆರಿಗೆಯ ಬಳಿಕ ಆಕೆಗೆ ವಿಪರೀತ ರಕ್ತಸ್ರಾವ ಆಗಿದ್ದು, ದುರಂತಕ್ಕೆ ಕಾರಣವಾಯಿತು. ಬೆಳಗಿನ ಜಾವ 3 ಗಂಟೆ ಸುಮಾರಿಗೆ, ರೂಮಿನಿಂದ ಅಸಹಜ ಶಬ್ದ ಕೇಳಿ ಬಂದಾಗ, ಮನೆಯಲ್ಲಿದ್ದ ಸಂಬಂಧಿಯೊಬ್ಬರು ರೂಮಿಗೆ ಧಾವಿಸಿದ್ದಾರೆ. ಅಲ್ಲಿ ಗರ್ಭಿಣಿ ರಕ್ತಸ್ರಾವದಿಂದ ಬಳಲುತ್ತಿರುವುದನ್ನು ಕಂಡು ಆಘಾತಗೊಂಡಿದ್ದಾರೆ.
ಯುವತಿಯ ತಾಯಿ ಅಲ್ಲೇ ಪಕ್ಕದಲ್ಲಿಯೇ ಕುಳಿತಿದ್ದರೂ, ಆಸ್ಪತ್ರೆಗೆ ಕರೆದೊಯ್ಯುವ ಬಗ್ಗೆ ಆರಂಭದಲ್ಲಿ ನಿರಾಕರಿಸಿದ್ದರು ಎಂದು ಸಂಬಂಧಿಗಳು ತಿಳಿಸಿದ್ದಾರೆ. ಸ್ವಲ್ಪ ಸಮಯದ ಬಳಿಕ ಹೆರಿಗೆಯಾಗಿದೆ. ಆದರೆ ರಕ್ತಸ್ರಾವವನ್ನು ತಡೆಯಲಾಗದೆ ಯುವತಿ ಸಾವನ್ನಪ್ಪಿದ್ದಾರೆ.
ಘಟನೆಯ ಬಗ್ಗೆ ಸಂಬಂಧಿಯೊಬ್ಬರು ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಯುವತಿಯ ತಾಯಿ ಮಗಳ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರಿದ್ದರಿಂದ ಈ ದುರಂತ ಸಂಭವಿಸಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಸದ್ಯ, ಪೊಲೀಸರು ದೂರನ್ನು ಪರಿಶೀಲಿಸುತ್ತಿದ್ದು, ತನಿಖೆಯನ್ನು ಆರಂಭಿಸಿದ್ದಾರೆ. ಯುವತಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬೌರಿಂಗ್ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆಯ ನಿಖರ ಕಾರಣವನ್ನು ತಿಳಿಯಲು ಪೊಲೀಸರು ಸಂಬಂಧಿಕರಿಂದ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ.








