ಖಾಸಗಿ ಗೋಲ್ಡ್ ಕಂಪನಿಗಳಲ್ಲಿ ಚಿನ್ನ ಅಡ ಇಡುವ ಮುನ್ನ ಎಚ್ಚರ..!

ಮಂಡ್ಯ

     ರಾಜ್ಯದಲ್ಲಿ ನಾಯಿ ಕೊಡೆಗಳಂತೆ ತಲೆ ಎತ್ತಿರುವ ಮೈಕ್ರೋ ಫೈನಾನ್ಸ್  ಸಂಸ್ಥೆಗಳು ಬಡಜನರ ಜೀವ ಹಿಂಡುತ್ತಿದ್ದು, ಅನಧಿಕೃತ ಫೈನಾನ್ಸ್ ಸಂಸ್ಥೆಗಳಿಗೆ ಕಡಿವಾಣ ಹಾಕಲು ಸರ್ಕಾರ ಸುಗ್ರೀವಾಜ್ಞೆ ಜಾರಿಗೊಳಿಸಿದೆ. ಈ ನಡುವೆ ಗೋಲ್ಡ್ ಲೋನ್  ಹೆಸರಿನಲ್ಲಿ ವಂಚನೆ ಮಾಡುವ ದಂಧೆ ಶುರುವಾಗಿದ್ದು, ಅಮಾಯಕರನ್ನೇ ಗುರಿಯಾಗಿಸಿ ಮಾಡಿ ಮೋಸದ ಜಾಲಕ್ಕೆ ಕೆಡವಲಾಗುತ್ತಿದೆ.

    ಮಂಡ್ಯ  ಜಿಲ್ಲೆ ಮಳವಳ್ಳಿ ತಾಲ್ಲೂಕಿನಲ್ಲಿ ಚಿನ್ನಾವರಣ ಹೆಸರಿನಲ್ಲಿ ವಂಚನೆ ಮಾಡುವ ಜಾಲ ಸಕ್ರಿಯವಾಗಿದ್ದು, ಖಾಸಗಿ ಸಂಸ್ಥೆಯೊಂದರ ಮೋಸದ ಜಾಲಕ್ಕೆ ಸಿದ್ದಲಿಂಗಸ್ವಾಮಿ ಎಂಬುವರು ಸಿಲುಕಿ ಚಿನ್ನ ಕಳೆದುಕೊಂಡಿದ್ದಾರೆ. ಇದೀಗ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

   6 ತಿಂಗಳ ಬಳಿಕ ಚಿನ್ನ ಬಿಡಿಸಿಕೊಳ್ಳಲು ಹೋದರೆ, ಹದಿನೈದು ದಿನ ಬಿಟ್ಟು ಬನ್ನಿ, ಮುಂದಿನ ತಿಂಗಳು ಕೊಡುತ್ತೇವೆ, ಇವತ್ತು ಮ್ಯಾನೇಜರ್ ಇಲ್ಲ ಎಂದು ಒಂದೊಂದದೇ ಸಬೂಬು ಹೇಳಿಕೊಂಡು ಸಾಗ ಹಾಕಿದ್ದರು. ಕೊನೆಗೆ ರೋಸಿಹೋದ ಸಿದ್ದಲಿಂಗಸ್ವಾಮಿ, ನ್ಯಾಯಕೊಡಿಸುವಂತೆ ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.