ಕೋಲ್ಕತ್ತಾ:
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಕಲ್ಕತ್ತಾ ಹೈಕೋರ್ಟ್ ಮಾಜಿ ನ್ಯಾಯಾಧೀಶ ಹಾಗೂ ಬಿಜೆಪಿ ಅಭ್ಯರ್ಥಿ ಅಭಿಜಿತ್ ಗಂಗೋಪಾಧ್ಯಾಯ ಅವರಿಗೆ 24 ಗಂಟೆಗಳ ಕಾಲ ಚುನಾವಣಾ ಪ್ರಚಾರ ನಡೆಸದಂತೆ ಚುನಾವಣಾ ಆಯೋಗ ಮಂಗಳವಾರ ನಿರ್ಬಂಧ ವಿಧಿಸಿದೆ.
ಅಭಿಜಿತ್ ಗಂಗೋಪಾಧ್ಯಾಯ ಅವರ ಹೇಳಿಕೆಯನ್ನು “ಕೀಳು ಮಟ್ಟದ ವೈಯಕ್ತಿಕ ದಾಳಿ”ಯಾಗಿದ್ದು, ಅವರು ಮಾದರಿ ನೀತಿ ಸಂಹಿತೆ(ಎಂಸಿಸಿ) ಉಲ್ಲಂಘಿಸಿರುವುದು ಸಾಬೀತಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಚುನಾವಣಾ ಆಯೋಗ ಇಂದು ಸಂಜೆ 5 ಗಂಟೆಯಿಂದ 24 ಗಂಟೆಗಳ ಕಾಲ ಚುನಾವಣಾ ಪ್ರಚಾರ ನಡೆಸದಂತೆ ಬಿಜೆಪಿ ಅಭ್ಯರ್ಥಿಗೆ ನಿರ್ಬಂಧ ವಿಧಿಸಿದೆ.
ಅಭಿಜಿತ್ ಗಂಗೋಪಾಧ್ಯಾಯ ಅವರು ಮೇ 15 ರಂದು ಹಲ್ದಿಯಾದಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುವಾಗ ಬ್ಯಾನರ್ಜಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಈ ಸಂಬಂಧ ತೃಣಮೂಲ ಕಾಂಗ್ರೆಸ್ ನೀಡಿದ್ದ ದೂರಿನ ಆಧಾರದ ಮೇಲೆ ಚುನಾವಣಾ ಆಯೋಗ, ಶೋಕಾಸ್ ನೋಟಿಸ್ ಜಾರಿ ಮಾಡಿತ್ತು.
ಶೋಕಾಸ್ ನೋಟಿಸ್‌ಗೆ ಗಂಗೋಪಾಧ್ಯಾಯ ಅವರು ಸೋಮವಾರ ನೀಡಿದ ಉತ್ತರವನ್ನು ಆಯೋಗವು ಎಚ್ಚರಿಕೆಯಿಂದ ಪರಿಶೀಲಿಸಿದೆ ಮತ್ತು ಮಮತಾ ವಿರುದ್ಧ ಅವರು ನೀಡಿದ ಹೇಳಿಕೆಯನ್ನು ಮತ್ತೊಮ್ಮೆ ಪರಿಶೀಲಿಸಿದೆ. ಅವರು ಕೀಳು ಮಟ್ಟದ ವೈಯಕ್ತಿಕ ದಾಳಿ ಮಾಡಿದ್ದಾರೆ ಮತ್ತು ಮಾದರಿ ನೀತಿ ಸಂಹಿತೆ(ಎಂಸಿಸಿ) ಉಲ್ಲಂಘಿಸಿದ್ದಾರೆ ಎಂದು ಚುನಾವಣಾ ಆಯೋಗ ಹೇಳಿದೆ.
“ಈಗ, ಆಯೋಗವು ಗಂಗೋಪಾಧ್ಯಾಯ ಅವರ ಹೇಳಿಕೆಯನ್ನು ಬಲವಾಗಿ ಖಂಡಿಸುತ್ತದೆ ಮತ್ತು ಮೇ 21 ರ ಸಂಜೆ 5 ರಿಂದ ಪ್ರಾರಂಭವಾಗಿ, ಮುಂದಿನ 24 ಗಂಟೆಗಳ ಕಾಲ ಪ್ರಚಾರದಿಂದ ಅವರನ್ನು ನಿಷೇಧಿಸುತ್ತದೆ” ಎಂದು ಚುನಾವಣಾ ಆಯೋಗ ತನ್ನ ಆದೇಶದಲ್ಲಿ ತಿಳಿಸಿದೆ.