ಬೆಂಗಳೂರು
ಜೆಡಿಎಸ್‍ನ ನೂತನ ಸಾರಥಿ ಎಚ್. ವಿಶ್ವನಾಥ್ ಅವರಿಗೆ ಪಕ್ಷ ಸಂಘಟನೆ ಉದ್ದೇಶದಿಂದ ಹೊಸ ಕಾರನ್ನು ಉಡುಗೊರೆಯಾಗಿ ನೀಡಲಾಗಿದೆ.
ಆಯುಧ ಪೂಜೆ ಮುನ್ನಾ ದಿನವಾದ ಬುಧವಾರ ಇನ್ನೋವಾ ಕ್ರಿಸ್ಟಾ ಕಾರಿಗೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಪಕ್ಷದ ಕಚೇರಿಯಲ್ಲಿ ಪೂಜೆ ಸಲ್ಲಿಸಿದರು. ವಿಶ್ವನಾಥ್ ಪಕ್ಷದ ಕಚೇರಿಗೆ ಆಗಮಿಸದ ಹಿನ್ನೆಲೆಯಲ್ಲಿ ಕಾರಿನ ಕೀ ಯನ್ನು ಗೌಡರು ಪಕ್ಷದ ಕಚೇರಿಗೆ ನೀಡಿದರು. ವಿಶ್ವನಾಥ್ ಅನಾರೋಗ್ಯದ ಹಿನ್ನೆಲೆಯಲ್ಲಿ ನಗರದ ವಿಕ್ರಂ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೂತ್ರಪಿಂಡದಲ್ಲಿ ಕಲ್ಲಿದ್ದ ಕಾರಣ ಎರಡು ದಿನಗಳ ಹಿಂದೆ ಅವರಿಗೆ ಶಸ್ತ್ರ ಚಿಕಿತ್ಸೆ ನಡೆಸಲಾಗಿತ್ತು. ಇದೀಗ ಅವರು ಚೇತರಿಸಿಕೊಳ್ಳುತ್ತಿದ್ದಾರೆ.
ಪಕ್ಷದ ಸಂಘಟನೆಗಾಗಿ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಬೇಕಾದ ರಾಜ್ಯಾಧ್ಯಕ್ಷರಿಗೆ ಹೊಸ ಕಾರು ನೀಡುವ ಪ್ರಸ್ತಾವವನ್ನು ಸ್ವತಃ ದೇವೇಗೌಡರು ಪಕ್ಷದ ಮುಂದೆ ಇಟ್ಟಿದ್ದರು.
ಕಳೆದ ತಿಂಗಳು ಹಾಸನ ಹೊರ ವಲಯದ ರೆಸಾರ್ಟ್‍ವೊಂದರಲ್ಲಿ ನಡೆದಿದ್ದ ಜೆಡಿಎಸ್‍ನ ಅನೌಪಚಾರಿಕ ಶಾಸಕಾಂಗ ಸಭೆಯಲ್ಲಿ ಕಾರು ಖರೀದಿಸುವ ಪ್ರಸ್ತಾವವನ್ನು ದೇವೇಗೌಡರು ಪಕ್ಷದ ಶಾಸಕರೆದುರು ಇಟ್ಟಿದ್ದರು. ಮೊದಲಿಗೆ ಟೊಯೊಟಾ ಫಾರ್ಚುನರ್ ಕಾರನ್ನು ನೀಡಲು ಉದ್ದೇಶಿಸಿದ್ದರು. ಅಲ್ಲದೆ, ಇದಕ್ಕಾಗಿ ಶಾಸಕರು ಕೈಲಾದಷ್ಟು ಆರ್ಥಿಕ ನೆರವು ನೀಡುವಂತೆ ಮನವಿ ಮಾಡಿದ್ದರು.
ಆದರೆ, ಫಾರ್ಚೂನರ್ ಪಡೆಯಲು ಒಪ್ಪದ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಅವರು, ಇನ್ನೋವಾ ಕ್ರಿಸ್ಟಾ ಸಾಕು ಎಂದಿದ್ದರು. ಫಾರ್ಚುನರ್‍ನ ನಿರ್ವಹಣೆಗೆ ಹೆಚ್ಚು ವೆಚ್ಚವಾಗಲಿದೆ ಎಂದು ಹೇಳಿದ್ದರು. ಹೀಗಾಗಿ ಇನ್ನೋವಾ ಕ್ರಿಸ್ಟಾ ಕಾರನ್ನು ಒದಗಿಸಲಾಗಿದೆ.
ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷರಿಗೆ ಪಕ್ಷದಿಂದಲೇ ಕಾರಿನ ವ್ಯವಸ್ಥೆ ಮಾಡಲಾಗಿದೆ. ಆದರೆ ಜೆಡಿಎಸ್‍ನಲ್ಲಿ ಈ ರೀತಿಯ ಪರಿಪಾಠ ಇರಲಿಲ್ಲ. ಹೀಗಾಗಿ ಈವರೆಗೆ ಯಾರಿಗೂ ಕಾರು ಕೊಟ್ಟಿರಲಿಲ್ಲ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ