ಗಂಗೆಯಿಂದ ಜನಜೀವನ ಸಮೃದ್ಧಿ

ತುಮಕೂರು:


ಭಾರತೀಯ ಪರಂಪರೆಯ ಪಂಚಮಹಾಭೂತಗಳಲ್ಲಿ ಒಂದಾದ ನೀರಿಗೆ ವಿಶೇಷ ಸ್ಥಾನ ನೀಡಿದೆ. ಗಂಗಾ ತೀರ್ಥ ಮನುಷ್ಯನ ಮೈ-ಮನಗಳ ಕೊಳೆಯನ್ನು ತೊಳೆದು ಶುದ್ಧೀಕರಿಸುವ ಅಮೃತವಾಹಿನಿ. ‘ಗಂಗೆ’ ಭಾರತೀಯ ಸಾಂಸ್ಕøತಿಕ, ಆಧ್ಯಾತ್ಮಿಕ ಹಾಗೂ ಸಾಮಾಜಿಕ ಬದುಕಿನ ಕೇಂದ್ರ. ಗಂಗೆಗೆ ಜನರ ಜೀವನವನ್ನು ಸಮೃದ್ಧಗೋಳಿಸುವ ಶಕ್ತಿಯಿದೆ ಎಂದು ತುಮಕೂರು ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ವೀರೇಶಾನಂದ ಸರಸ್ವತಿ ಅಭಿಪ್ರಾಯಪಟ್ಟರು.

ತುಮಕೂರು ರಾಮಕೃಷ್ಣ-ವಿವೇಕಾನಂದ ಆಶ್ರಮದ ವತಿಯಿಂದ ಅಮಾನಿಕೆರೆಯಲ್ಲಿ ಆಯೋಜಿಸಿದ್ದ ‘ಗಂಗಾ ಪೂಜೆ’ ಹಾಗೂ ಗಂಗೆಗೆ ಬಾಗಿನ ಅರ್ಪಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದಕ್ಷಿಣೇಶ್ವರದ ಗಂಗಾ ತೀರದಲ್ಲಿ ತಮ್ಮ ಸಾಧನಾ ಜೀವನವನ್ನು ನಡೆಸಿದ ಶ್ರೀರಾಮಕೃಷ್ಣ ಪರಮಹಂಸರು ಹಾಗೂ ಜಗನ್ಮಾತೆ ಶ್ರೀಶಾರದಾದೇವಿಯವರು ಪ್ರತಿ ತಿಂಗಳು ಗಂಗಾಪೂಜೆಯನ್ನು ತಪ್ಪದೆ ನೆರವೇರಿಸಿಕೊಂಡು ಬರುತ್ತಿದ್ದರು. ಈಗಲೂ ರಾಮಕೃಷ್ಣ-ವಿವೇಕಾನಂದ ಆಶ್ರಮಗಳು ಈ ಸಂಪ್ರದಾಯವನ್ನು ಮುಂದುವರೆಸುತ್ತಾ ಬಂದಿದೆ ಎಂದು ಹೇಳಿದರು.

ಆಶ್ರಮದ ಸ್ವಾಮಿ ಧೀರಾನಂದಜೀ ಮಾತನಾಡಿ, ಜಗತ್ತಿನ ಬಹುತೇಕ ನಾಗರಿಕತೆಗಳು ಹುಟ್ಟಿ ಪ್ರವರ್ಧಮಾನಕ್ಕೆ ಬಂದದ್ದು, ನದಿಗಳ ದಡಗಳಲ್ಲಿಯೇ ಸುಮಾರು 25 ವರ್ಷಗಳ ನಂತರ ಅಮಾನಿಕೆರೆಯು ಸಂಪೂರ್ಣ ತುಂಬಿ ಕೋಡಿ ಒಡೆದಿರುವ ದೃಶ್ಯ ಅವಿಸ್ಮರಣೀಯ. ಗಂಗಾಮಾತೆಯು ಜನಜೀವನವನ್ನು ಸಮೃದ್ಧಗೊಳಿಸಿ ಅವರುಗಳಿಗೆ ಸುಖ, ಶಾಂತಿ ಮತ್ತು ನೆಮ್ಮದಿಯನ್ನು ದಯಪಾಲಿಸುವುದರಿಂದ ಅವಳನ್ನು ಪೂಜಿಸಿ ತನ್ಮೂಲಕ ಕೃತಜ್ಞತೆಯನ್ನು ಅರ್ಪಿಸುವುದು ಪ್ರತಿಯೊಬ್ಬರ ಆದ್ಯಕರ್ತವ್ಯ ಎಂದರು.

ಆಶ್ರಮದ ಸ್ವಾಮಿ ಪರಮಾನಂದಜೀ ಮಾತನಾಡಿ, ನೀರಿಗೆ ಖಾಯಿಲೆಗಳನ್ನು ಗುಣಪಡಿಸುವ, ಮನಶುದ್ಧಿಯನ್ನು ಪರಿಣಾಮಕಾರಿಯಾಗಿ ಮಾಡುವ ವಿಶೇಷ ಶಕ್ತಿಯಿದೆ. ಮನುಷ್ಯನ ಭಾವನೆಗಳಿಗೆ ತಕ್ಕಂತೆ ನೀರು ಕೂಡ ಪ್ರತಿಸ್ಪಂದಿಸುತ್ತದೆ ಎಂದು ಆಧುನಿಕ ವಿಜ್ಞಾನವು ಇತ್ತೀಚೆಗೆ ಕಂಡು ಕೊಂಡಿದೆ. ಆದ್ದರಿಂದಲೇ ನೀರನ್ನು ಮಲಿನಗೊಳಿಸದೇ ಅದರ ಪಾವಿತ್ರ್ಯವನ್ನು ಕಾಪಾಡುವ ಹೊಣೆ ನಮ್ಮೆಲ್ಲರ ಮೇಲಿದೆ ಎಂದು ತಿಳಿಸಿದರು.

ಕೋಟೆ ಆಂಜನೇಯ ಸ್ವಾಮಿ ಪಂಚಮುಖಿ ಗಣಪತಿ ದೇವಸ್ಥಾನದ ಅರ್ಚಕರಾದ ಪ್ರಸನ್ನಾಚಾರ್ ಗಂಗಾ ಪೂಜೆಯನ್ನು ನೆರವೇರಿಸಿಕೊಟ್ಟರು. ಯತಿತ್ರಯರ ನೇತೃತ್ವದಲ್ಲಿ ಹಾಗೂ ನೂರಾರು ಭಕ್ತರ ಸಮ್ಮುಖದಲ್ಲಿ ಗಂಗೆಗೆ ಬಾಗಿನವನ್ನು ಅರ್ಪಿಸಲಾಯಿತು.
ಈ ಸಂದರ್ಭದಲ್ಲಿ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಕಾರ್ಯದರ್ಶಿ ರಮಾನಂದ ಹೆಬ್ಬಾರ್, ಜಂಟಿ ಕಾರ್ಯದರ್ಶಿ ಎನ್‍ಕೃಷ್ಣಮೂರ್ತಿ, ಶಿಕ್ಷಣ ತಜ್ಞ ವಿದ್ಯಾಶಂಕರ್ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link